ಜೆಡಿಎಸ್ ನಾಯಕರು ಕೊಡವಿಕೊಂಡು ಎದ್ದು ನಿಂತಿದ್ದಾರೆ. ಕಳೆದ ಎರಡು ದಿನಗಳಿಂದ ಪಕ್ಷದ ಹಾಲಿ ಶಾಸಕರು, ಮಾಜಿ ಶಾಸಕರು ಶಿರಾ ಉಪಚುನಾವಣೆಯ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರವಾಗಿ ಬಿರುಸಿನ ಮತಯಾಚನೆ ಮಾಡುತ್ತಿದ್ದಾರೆ. ಹೋಬಳಿ ಕೇಂದ್ರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜೆಡಿಎಸ್ ಸಾಧನೆಗಳನ್ನು, ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಲೋಪಗಳನ್ನು ಜನರಿಗೆ ಮುಟ್ಟಿಸುವ ಕೆಲಸದಲ್ಲಿ ಜೆಡಿಎಸ್ ನಾಯಕರು ನಿರತರಾಗಿದ್ದಾರೆ. ಜೆಡಿಎಸ್ ಸಮಾವೇಶಗಳಲ್ಲಿ ಸಾವಿರಾರು ಮಂದಿ ಸೇರುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಪೈಪೋಟಿ ನೀಡುತ್ತ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಾಗುತ್ತಿದೆ.
ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರು ಅಕ್ಟೋಬರ್ 22ರಂದು ಶಿರಾ ತಾಲೂಕಿನ ಬರಗೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಕೆಲವರಿಂದ ಜೆಡಿಎಸ್ ಮುಗಿಸುವ ಮಾತುಗಳನ್ನು ಕೇಳುತ್ತಿದ್ದೇನೆ. ಕೆ.ಆರ್.ಪೇಟೆಯಲ್ಲಿ ಆದ ಗತಿಯೇ ಇಲ್ಲೂ ಆಗುತ್ತದೆ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ. ಇದನ್ನು ನಾನು ಗಮನಿಸುತ್ತಿದ್ದೇನೆ. ಅಂತಹ ಆಟ ಶಿರಾ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂಬುದು ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ಶಿರಾ ಉಪಚುನಾವಣೆ: ಮೂಲ VS ವಲಸೆ ಬಿಜೆಪಿಗರ ನಡುವೆ ಬಿರುಕು! ಯಾರ ಕೈಹಿಡಿಯಲಿದ್ದಾನೆ ಮತದಾರ
ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಪಕ್ಷದ ಸಂಘಟನೆಗೆ ಹೋರಾಡುತ್ತೇನೆ. ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವವರು ಯುದ್ದಕ್ಕೆ ಬರಲಿ. ನಾನೂ ನೋಡಿಯೇ ಬಿಡುತ್ತೇನೆ. ಯಾವುದೇ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯಲಿ. ನಾನು ಅವರೊಂದಿಗೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ನನ್ನ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ ಖುಷಿ ಇದೆ. ಸಾವಿರಾರು ಕೋಟಿ ಸಾಲ ಮನ್ನ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿದ್ದೇನೆ. ಈ ಯೋಜನೆಯಲ್ಲಿ ಶಿರಾ ತಾಲೂಕಿನ ರೈತರೂ ಕೂಡ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.
ಜೆಡಿಎಸ್ ನಲ್ಲಿ ಬೆಳೆದು ನಂತರ ಬೇರೆ ಪಕ್ಷಗಳಿಗೆ ಹೋಗುವವರೂ ಇದ್ದಾರೆ. ಅಂಥವರ ಬಗ್ಗೆ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದರು. ಶಾಸಕ ದಿವಂಗತ ಬಿ.ಸತ್ಯನಾರಾಯಣ ಸಜ್ಜನರು. ಅವರ ಪತ್ನಿ ಅಮ್ಮಾಜಮ್ಮ ಕಣಕ್ಕೆ ಇಳಿದಿದ್ದಾರೆ. ಕಾರ್ಯಕರ್ತರು ಅವರನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಶಿರಾ: ಹಣದ ಹೊಳೆ! ನೆಲೆ ಕಾಣುವುದೇ ಕಮಲ, ಬಲಗೊಳ್ಳುವುದೇ ತೆನೆ, ಒಲವು ಗಳಿಸುವುದೇ ಹಸ್ತ?


