ಕೊರೊನವೈರಸ್ ಭೀತಿಯ ಕಾರಣದಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ – 2020) ಅನ್ನು ಪ್ರೇಕ್ಷಕರಿಲ್ಲದೇ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಈ ನಡುವೆ ಏಪ್ರಿಲ್ 15 ರವರೆಗೆ ರಾಜತಾಂತ್ರಿಕ ಮತ್ತು ಉದ್ಯೋಗದಂತಹ ಕೆಲವು ವಿಭಾಗಗಳನ್ನು ಹೊರತುಪಡಿಸಿ ಅಸ್ತಿತ್ವದಲ್ಲಿರುವ ಎಲ್ಲಾ ವಿದೇಶಿ ವೀಸಾಗಳನ್ನು ನಿಷೇಧಿಸುವುದಾಗಿ ಸರ್ಕಾರ ಘೋಷಿಸುತ್ತಿದೆ. ಹಾಗಾಗಿ ಐಪಿಲ್‌ಗೆ ದೊಡ್ಡ ಸಂಕಷ್ಟ ಈ ಬಾರಿ ಎದುರಾಗಿದೆ.
ಕೊರೊನವೈರಸ್ ಹರಡುತ್ತಿರುವ ಕಾರಣ ದೊಡ್ಡ ದೊಡ್ಡ ಸಭೆ, ಜನಸಂದಣಿಗಳನ್ನು ನಿರ್ಭಂದಿಸಬೇಕಾಗಿದೆ. ಹಾಗಾಗಿ ಈ ಬಾರಿ ಪ್ರೇಕ್ಷಕರಿಲ್ಲದೇ ಐಪಿಎಲ್ ನಡೆಸಲು ಚರ್ಚೆ ನಡೆಸಲಾಗುತ್ತಿದೆ. ನೇರ ಪ್ರಸಾರ ಮಾತ್ರ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ.
ಐಪಿಎಲ್ ಆಡಳಿತ ಮಂಡಳಿಯು ಮಾರ್ಚ್ 14 ರಂದು ಸಭೆ ಸೇರಿ ಪಂದ್ಯಾವಳಿಯ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಭಾರತಕ್ಕೆ ವೀಸಾ ಅಮಾನತುಗೊಳಿಸಿರುವ ಕಾರಣ ಏಪ್ರಿಲ್ 15 ರವರೆಗೆ ವಿದೇಶಿ ಆಟಗಾರರಿಗೆ ಪಂದ್ಯಾವಳಿಯಲ್ಲಿ ಆಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.
ಐಪಿಎಲ್ 2020 ಮಾರ್ಚ್ 29 ರಂದು ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎದುರಿಸಲಿದೆ.


