Homeಅಂಕಣಗಳುದೇಹವೊಂದೇ ಎಲ್ಲವೂ ಅಲ್ಲ v

ದೇಹವೊಂದೇ ಎಲ್ಲವೂ ಅಲ್ಲ v

- Advertisement -
- Advertisement -

ಡಾ.ವಿನಯಾ ಒಕ್ಕುಂದ |

ಗೋಕರ್ಣದ ಕಲ್ಪನಾ ಟಾಕೀಸು ವರ್ಷದಲ್ಲಿ ಮೂರು ತಿಂಗಳು ಚಾಲೂ ಇದ್ದರೆ ಅದೇ ಸ್ವರ್ಗ ಎಂದುಕೊಂಡ ದಿನಗಳವು. ಸುತ್ತಲ ಹಳ್ಳಿಗೆ ಎಡವಿ ಬಿದ್ದರೆ ಸಿಗುವ ಪೇಟೆ ಗೋಕರ್ಣವೇ. ವರ್ಷಕ್ಕೊಮ್ಮೆ ಮಂಕಾಳಮ್ಮನ ಗುಡಿ ಪ್ರಸಾದ ಕೈಗೆ ಬಿದ್ದರೆ ಅಲ್ಲಿಗೆ, ನಾವು ನಮ್ಮ ಹಳ್ಳಿಯ ಜಂಬೂದ್ವೀಪದಿಂದ ಹೊರಲೋಕಕ್ಕೆ ಸಂಪರ್ಕ ಇಟ್ಟುಕೊಂಡಿದ್ದಕ್ಕೆ ಸಾಕ್ಷಿ. ಹೆಣ್ಣುಮಕ್ಕಳು, ಫಾರೆನ್ನರ್ಸ್ ಬರುವ ಬೀಚುಗಳಿಗೆ ಹೋಗುವುದು ಎಂದರೆ, ಮನೆ ಹೊಸ್ತಿಲು ದಾಟುವಾಗ ತಮ್ಮ ಶ್ರಾದ್ಧದ ಅನ್ನ ತಾವೇ ಇಕ್ಕಿ ಹೋಗಬೇಕು ಅಷ್ಟೇ. ಹಾಗಂತ ಇದು ಕಳೆದ ಶತಮಾನದ ಆರಂಭದ ಕಥೆಯೇನಲ್ಲ. ಹೆಂಗಸರು ಶಿಕ್ಷಣ ಉದ್ಯೋಗಗಳಿಗೆ ದೊಡ್ಡ ಮಟ್ಟದಲ್ಲಿ ಸೇರ್ಪಡೆಯಾಗಿ, ಸಾಮಾಜಿಕ ಬದುಕಿನಲ್ಲಿ ಮನ್ವಂತರ ಸಂಭವಿಸಿದ ನಂತರದ್ದು, ಕರಾವಳಿ ಜಿಲ್ಲೆಯಲ್ಲಂತೂ ಹೆಣ್ಣುಮಗಳಿಗೆ ಡಿಗ್ರಿವರೆಗಾದರೂ ಓದಿಸುವುದು ಘನಸ್ತಿಕೆ ಎಂದು ತಿಳಿದ ದಿನಮಾನವದು. ಹಾಗಿರುವಾಗ, ಗೋಕರ್ಣದ ಟಾಕೀಸಿಗೆ ಮುಖಹಾಕದೆ ಬದುಕಲಾದೀತೆ? ಮನೆ, ಊರು ಹೇಗೆ ಹೇಗೆ ಹೆಣ್ಣುಮಕ್ಕಳನ್ನು ಬಿಗಿದಿಡುತ್ತಿತ್ತೋ ಹಾಗೆ ಹಾಗೆ ಆ ಬಿಗಿತದ ಗಂಟು ಸಡಲಿಸಿಕೊಳ್ಳಲು ಅವರು ಸಾಹಸಯಾತ್ರೆಯಲ್ಲಿ ಪರಿಣತರಾಗುತ್ತಿದ್ದರು. ನಮ್ಮ ಬ್ಯಾಗುಗಳಲ್ಲಿ ಚೂಪು ಟಾಚಣಗಳು ವರ್ಷದ ಮುನ್ನೂರೈವತ್ತು ದಿನವೂ ಕೈಯಲ್ಲಿ ಅಂಬ್ರೆಲಾ ಕೊಡೆಗಳು ಏನು ಚೆಂದಕಿರುತ್ತಿದ್ದವೇ? ಬಸ್ ಪ್ರಯಾಣವನ್ನು ಸಲೀಸುಗೊಳಿಸಿದ, ಟಾಕೀಸಿನ ಕತ್ತಲಲ್ಲೂ ಕೂತು ಸಿನಿಮಾ ನೋಡುವ ಧೈರ್ಯಕೊಟ್ಟ ಆಪ್ತಮಿತ್ರಗಣಗಳಲ್ಲವೇ ಅವು? ಶಿವರಾತ್ರಿಯ ನಾಟಕ ನೋಡಲು ಸಕುಟುಂಬ ಪರಿವಾರ ಸಮೇತ ಹೋಗುವುದು ಅನಿವಾರ್ಯವಾಗಿತ್ತು. ಬೆಳತನಾ ನಡೆವ ಯಕ್ಷಗಾನಗಳಿಗಂತೂ ಮನೇಲಿರೋವು ದೆವ್ವಗಳು ಮಾತ್ರ ಅಂತಾಗಿತ್ತು. ಆದರೆ ಅದ್ಯಾಕೋ ಸಿನಿಮಾ ಟಾಕೀಸಿಗೆ ಮಾತ್ರ ಗೆಳತಿಯರೊಡನಾಟ ಮಾತ್ರ ಸರಿಯೆನಿಸಿತ್ತು. ಆದರೇನು? ಹೆಣ್ಣುಮಕ್ಕಳಿಗೆ ಸರಿಯೆನಿಸಿದ್ದನ್ನು ಒಪ್ಪಲು ಅದೇನು ಸಂವಿಧಾನವೇ? ಅಂತೂ ನಂನಮ್ಮ ಮನೆಗಳಲ್ಲಿ ಸಿನಿಮಾ ವೀಕ್ಷಣೆಗೆ ಒಪ್ಪಿ, ನಾವು ಮೂರ್ನಾಲ್ಕು ಹುಡುಗಿಯರು ಕಲ್ಪನಾ ಟಾಕೀಸಿನ ಮೆಟ್ಟಲು ಹತ್ತುವುದರಲ್ಲಿ ಅದೆಷ್ಟು ಅವಸ್ಥಾಂತರಗಳು? ಊರಿಗೆ ಮಧ್ಯಾಹ್ನ ಬರುವ ಬಸ್ಸಿಗೆ ಹೀಗೆ ಶಾಲೆ ಕಲಿವ ಹುಡುಗಿಯರು ಹತ್ತಿದರು ಅಂದರೆ, ‘ಇದೆ, ತಂಗಿ ಎಲ್ಲಿಗ್ರೆ. ಸಿನೇಮಕೆ ಹೋತರೇನೇ?’ ಎಂದು ಯಾರಾದರೂ ಕೇಳುವುದೇ. ಪ್ರಶ್ನೆ ಬಸ್ಸಿನೊಳಗಿಂದ ತೂರಿ ಬಂದರೂ ಬಂತೇ. ಆಹಾ, ಅದೆಷ್ಟು ಅದ್ಭುತವಾಗಿ ಗುಂಪಿನ ಮುಖಂಡೆಯಾಗಿದ್ದವಳಿಂದ ಪ್ರತ್ಯುತ್ತರ! ‘ಇಲ್ಲಪ್ಪ, ನಾವ ನೋಟ್ಸ್ ಝರಾಕ್ಸ್ ಮಾಡ್ಸಕಂಡ ಬರ್ತೇವೆ’ ಅಂತಲೋ, ‘ಇದ್ಕ ಹುಷಾರಿಲ್ಲ. ಮಲ್ಲಣ್ಣ ಡಾಕ್ಟರ ಹತ್ರ ಇಂಜಕ್ಷನ್’ ಅಂತಲೋ, ಪಟಾಪಟ್ ಹೇಳಿಯಾಗಿರುತ್ತಿತ್ತು. ಕೇಳಿದವರಿಗೂ ಈ ಒಡಕು ರೀಲು ರೂಢಿಯಾಗಿರುತ್ತಿತ್ತೋ ಏನೋ? ನಾವು ಸಿನಿಮಾಕ್ಕೆ ಹೋಗವವರಲ್ಲ ಎಂದ ಮೇಲೂ ಆ ಹಿರಿಯ ಇನ್ಯಾರೊಂದಿಗೋ, ಯಾರೂ ಇರದಿದ್ದರೆ ಬಸ್ಸಿನ ಕಂಡಕ್ಟರನೊಂದಿಗೋ, ಸಿನಿಮಾ ನೋಡಿ ಕೆಟ್ಟವರ ಬಗ್ಗೆ ಪುರಾಣ ಶುರುಮಾಡಿ ಆಗಿರುತ್ತಿತ್ತು. ಇಷ್ಟೆಲ್ಲ ಆಗಿ, ಮೇಲಿನ ಸ್ಟಾಪಿನಲ್ಲಿ ಇಳಿದರೆ ಸಿನಿಮಾಕ್ಕೆ ಅಂತ ಅನುಮಾನ ಬಂದೀತೇನೋ ಅಂದು, ಕೆಳಗೆ ರಥಬೀದಿಯ ಬಸ್‍ಸ್ಟಾಪಿಗೇ ಇಳಿದು, ಅವಸರದ ಓಡು ನಡಿಗೆಯಲ್ಲಿ ಏರಿ ಏರಿ ಬಂದರೆ. . . ಊರಿಗೆ ಬಂದ ರಿಕ್ಷಾದಲ್ಲಿ ಕೂಗಿದ ಸಿನಿಮಾ ಹೆಸರೇ ಒಂದು; ಇಲ್ಲಿ ರಾರಾಜಿಸುತ್ತಿರುವುದೇ ಒಂದು-ಎಂಬಂತಾಗಿರುತ್ತಿತ್ತು. ಮಗಳನ್ನು ನೋಡಿ ಬಾ ಅಂದರೆ ಅವ್ವನನ್ನು ನೋಡಿ ಬಂದ ಮಳ್ಳನ ಹಾಗೆ ಪೆಕರು ಪೆಕರಾಗಿ ಟಾಕೀಸಿನೊಳಗೆ ನುಸುಳಿಕೊಂಡಿದ್ದೂ ಇದೆ. ಈ ಪರಿಷೆ ನಡೆಯುತ್ತಿದ್ದುದು ವರ್ಷಕ್ಕೆ ಒಂದೆರಡು ಬಾರಿ ಮಾತ್ರ.
ಇಂತಹ ಒಮ್ಮೆ- ಸಿನಿಮಾದ ಹೆಸರು ಮರೆತಿದೆ. ಅನಂತನಾಗ ಮತ್ತು ಗಾಯತ್ರಿ ಅಭಿನಯ. ಹೆಂಡತಿಗೆ ಸ್ಟೌವ್ ಬಸ್ರ್ಟ್ ಆಗಿಯೇನೋ ಮುಖದ ಒಂದು ಭಾಗ ಸುಟ್ಟು ಹೋಗಿರುತ್ತದೆ. ಅವರ ದಾಂಪತ್ಯದಲ್ಲಿ ಉಂಟಾದ ತಳಮಳವನ್ನು, ಹೆಂಡತಿಯೆಂಬ ಪ್ರೀತಿಯಿದ್ದರೂ ಪ್ರೇಮಿಸಲಾಗದವನ ಸ್ಥಿತಿಯ ತಾಪ ದಣೇ ಈಗ ನಾನು ಆ ಸಿನಿಮಾ ನೋಡಿದೆನೆಂಬಷ್ಟು ಗಾಢವಾಗಿ ನನ್ನ ಪ್ರಜ್ಞೆಯಲ್ಲಿ ಸೇರಿಹೋಗಿದೆ. ಸಿನಿಮಾದ ಒಟ್ಟೂ ಸಂದೇಶವೇನಿತ್ತೋ ನೆನಪಿಲ್ಲ. ಆದರೆ, ಹೆಣ್ಣಿನ ದೇಹ ಸೌಂದರ್ಯ ಹಾಳಾದರೆ, ಅವಳು ಬದುಕುವ ಹಕ್ಕನ್ನೂ ಕಳೆದುಕೊಳ್ಳುತ್ತಾಳೆ. ಕಳೆದುಕೊಳ್ಳಬೇಕು-ಅದು ಮೌಲ್ಯ ಎಂಬಂತಹ ಪಾಠವನ್ನು ಉನ್ನತೀಕರಿಸಿದ ಸಿನಿಮಾಗಳ ಕಾಲ ಅದು. ಅದಕ್ಕೆ ಪೂರಕ ಪಠ್ಯವೆಂಬಂತೆ ಬಂಡಿಹಬ್ಬ, ಜಾತ್ರೆ, ಹಬ್ಬಗಳಲ್ಲಿ ಒಟ್ಟುಗೂಡುವ ಮನೆಗಳಲ್ಲಿ ದೂರದೂರುಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ನೌಕರಿ ಮಾಡಿಕೊಂಡು ಸುಖವಾಗಿದ್ದಾರೆಂದು ಮೇಲ್ನೋಟಕ್ಕೆ ಕಾಣುವ ಸಂಸಾರಗಳ ಒಡಕು ಬಿಂಬಗಳು ಹೆಣ್ಣುಮಕ್ಕಳ ಪಿಸುಮಾತು-ಕಂಬನಿಗಳಲ್ಲಿ. . ಫಳಫಳಿಸುತ್ತಿತ್ತು. ಹೆಣ್ಣಿನ ಚೆಲುವಿಕೆಯ ಏಕರೂಪೀ ಸಂಹಿತೆ ಅದಾಗಲೇ ಚಾಲ್ತಿಗೆ ಬಂದ ದಿನಗಳವು. ಕುಮಟೆಗೆ ಹೋಗಿದ್ದ ನನ್ನ ಅಪ್ಪ ‘ಫೆರ್ ಆಂಡ್ ಲವ್ಲೀ’ಯನ್ನು ತಂದುಕೊಟ್ಟಿದ್ದ. ‘ತಕಾ, ಇದನ್ನರಾ ಹಚ್ಕಾ’ ಎಂದಿದ್ದ. ಆ ಮಾತಿನ ಅರ್ಥ ಆಗಂತೂ ಗೊತ್ತಾಗಿರಲಿಲ್ಲ. ಬಹುಶಃ ಟಿ.ವಿ. ಮನೆಯೊಳಗೆ ಬಂದು ಕೂತಿರದಿದ್ದರೆ, ರಾಮಾಯಣ-ಮಹಾಭಾರತ ಸೀರಿಯಲ್ಲುಗಳನ್ನು ಮಿಂದು ಮಡಿಯುಟ್ಟು ಕೂತು ನೋಡುತ್ತಿದ್ದ ಜನರಿಗೆ, ತರಹೇವಾರಿ ಜಾಹೀರಾತಿನ ಪಾಠ ಸಿಗದಿದ್ದರೆ. . . ನಮ್ಮಂತಹ ಹೆಣ್ಣುಮಕ್ಕಳ ಕೈಗೆ ಫೇರ್ ಆಂಡ್ ಲವ್ಲಿಯೂ ಸಿಗುತ್ತಿರಲಿಲ್ಲವೇನೋ, ಫೇರ್ ಮತ್ತು ಲವ್ಲಿಯ ಸರಿಯಾದ ಅರ್ಥ ಆಗುವ ಹೊತ್ತಿಗೆ ನಾವು ಬಳಸಿ ಬಿಸಾಕಿದ ಟ್ಯೂಬ್‍ಗಳು ಈ ಭೂಮಿಯ ಗರ್ಭವನ್ನು ಅದೆಷ್ಟು ನೋಯಿಸಿರಬಹುದು ಎನಿಸುತ್ತಿದೆ.
ಯಾಕೆ ಇದೆಲ್ಲ ನೆನಪಾಗುತ್ತಿದೆಯೆಂದರೆ- ಭಾರತೀಯ ಸಿನಿಮಾ ರಂಗದಲ್ಲಿ ಹೆಣ್ಣಿನ ವ್ಯಕ್ತಿತ್ವವನ್ನು ತಥಾಕಥಿತ ಪಿತೃತ್ವವು ರೂಪಿಸಿಟ್ಟ ದೇಹಸೌಂದರ್ಯದಾಚೆ ವಿಸ್ತರಿಸಿದ ಎರಡು ಸಂಗತಿಗಳು ಇತ್ತೀಚೆಗೆ ನಡೆದಿವೆ. ದೀಪಿಕಾ ಪಡುಕೋಣೆ ‘ಚಪಾಕ್’ ಸಿನಿಮಾದ ನಾಯಕಿಯಾಗಿ, ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ಥೆಯ ಹೋರಾಟದ ಬದುಕನ್ನು ಸಾಬೀತುಪಡಿಸುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಸಿನಿಮಾ ಇದು. ದೀಪಿಕಾ ಅವರ ಬಗ್ಗೆ ಅಭಿಮಾನ ಮೂಡಲು ಕಾರಣಗಳಿವೆ- ದೀಪಿಕಾ ಈಗ ನಟನೆಯ ಮತ್ತು ವೈವಾಹಿಕ ಬದುಕಿನ ವಸಂತದಲ್ಲಿದ್ದಾರೆ. ಕಲಾವಿದೆಯಾಗಿ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳಲೇಬೇಕಾದ ಅಗತ್ಯವೇನೂ ಅವರಿಗಿಲ್ಲ. ಎರಡೆರಡು ಬಾರಿ ಫಿಲ್ಮಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರು. ಚಪಾಕ್ ಚಿತ್ರದ ಪಾತ್ರ ನಿರ್ವಹಣೆಯಲ್ಲಿ, ಗಂಡಸಿನ ವಿಕೃತ ಮನಸ್ಸಿಗೆ ದೇಹವನ್ನು ಕುರೂಪವಾಗಿಸಿಕೊಂಡು ಬದುಕಬೇಕಾದ ಹೆಣ್ಣಿನ ತಲ್ಲಣದ ಕಂಪನಗಳನ್ನು ಸ್ಪರ್ಶಿಸಬೇಕಿದೆ. ಚಪಾಕ್ ಚಿತ್ರ ಲಕ್ಷ್ಮಿ ಅಗರವಾಲ್ ಎಂಬ ಸಂತ್ರಸ್ತೆಯ ಬದುಕಿನ ಕಥೆ ಎಂದು ಹೇಳಲಾಗುತ್ತಿದೆ. 15 ವರ್ಷದ ಎಳೆಯ ಸುಂದರಿ, ಆ್ಯಸಿಡ್ ಹಲ್ಲೆಯಿಂದ ವಿಕಾರಗೊಂಡು ಯಾತನೆ, ಹಿಂಸೆಗಳಿಂದ ತತ್ತರಿಸುತ್ತಾಳೆ. ಗೌರವಾನ್ವಿತ ಬಾಳಿಗಾಗಿ ಆ ನಂತರವೂ ಪ್ರಯತ್ನಿಸುತ್ತಾಳೆ. ವಿಕಾರ ರೂಪಕ್ಕೆ ಕಾಲಿಟ್ಟಲೆಲ್ಲಾ ಸೋಲು, ಆದರೆ ಧೃತಿಗೆಡದೆ ಆ್ಯಸಿಡ್ ಸಂತ್ರಸ್ತೆಯರಿಗಾಗಿ ನಿರಂತರ ಹೋರಾಡಿ – ಆ್ಯಸಿಡ್ ಸುಲಭ ಸಾಧ್ಯ ಲಭ್ಯವಾಗದ ಹಾಗೆ ಮಾಡುವ ಕಾನೂನು ತರುವಲ್ಲಿ ಯಶಸ್ವಿಯಾಗುತ್ತಾರೆ. 2013ರಲ್ಲಿ ನಮ್ಮ ದೇಶದಲ್ಲಿದು ಕಾನೂನಾಯಿತು. ಈ ಲಕ್ಷ್ಮಿ ಅಗರವಾಲ್ 2014ರಲ್ಲಿ ಅಮೇರಿಕಾದಿಂದ ‘‘International Woman of Courage’’ ಪ್ರಶಸ್ತಿ ಪಡೆದರು. ಪತಿ ಅಲೋಕ್ ದೀಕ್ಷಿತ್, ಮಗು ಪಿಹೂ ಜೊತೆ ಬಾಳುತ್ತಿದ್ದಾರೆ. ಲಕ್ಷ್ಮೀ ಅಗರವಾಲ್ ಎನ್‍ಜಿಓ ನಡೆಸುತ್ತಿದ್ದಾರೆ. ಲಕ್ಷ್ಮೀ ಬಾಳು- ಚೆಲುವಿನ ಮಾಪನ ದೇಹಸಂಬಂಧಿಯೋ, ವ್ಯಕ್ತಿತ್ವ ಸಂಬಂಧಿಯೋ ಎಂಬ ತಾತ್ವಿಕತೆಯನ್ನು ಮುಂದಿಟ್ಟಿದೆ. ಇದನ್ನು ಕಲಾತ್ಮಕವಾಗಿ ಜನಮಾನಸಕ್ಕೆ ತಲುಪಿಸುವ ಕೆಲಸವನ್ನು ಚಪಾಕ್ ಮಾಡಬಲ್ಲದು. ಹೆಣ್ಣಿನ ದೇಹವನ್ನೇ ಬಂಡವಾಳವಾಗಿಸಿಕೊಂಡು ಅದನ್ನೇ ಪ್ರತಿಪಾದಿಸುತ್ತ ಬಂದ ಸಿನಿಮಾರಂಗಕ್ಕೆ ಮಾತ್ರ ಮುರಿವ ಶಕ್ತಿಯಿದೆ. ಈ ಕಾರಣಕ್ಕೆ ದೀಪಿಕಾ ಪಡುಕೋಣೆ ಮತ್ತು ಮೇಘನಾ ಗುಲ್ಜಾರ ಅಭಿನಂದನಾರ್ಹರು.
ಸಾಯಿಪಲ್ಲವಿ ಎಂಬ ನಟಿಯ ದಿಟ್ಟ ನಿರ್ಧಾರವೊಂದು, ಹೆಣ್ಣಿನ ಅಸಲಿತನವನ್ನು ದೇಹಕ್ಕೆ ಲಗತ್ತಿಸುವ ರಾಜಕಾರಣವನ್ನು ತಳ್ಳಿಹಾಕಿದೆ. ಜಾಹೀರ ನಾಮೆ ಸ್ವತಃ ವೈದ್ಯೆಯಾಗಿರುವ, ಮೇಕಪ್‍ನ್ನು ನಿರಾಕರಿಸಿ ಅಭಿನಯಿಸುವ ಈ ಚೆಲುವೆ, ಕಾಸ್ಮೆಟಿಕ್ ಕಂಪನಿಯೊಂದರ 2 ಕೋಟಿ ರೂಪಾಯಿಯ ಜಾಹೀರಾತು ಆಫರ್‍ನ್ನು ತಿರಸ್ಕರಿಸಿದ್ದಾರೆ. ಹೆಣ್ಣೆಂದರೆ ತಮ್ಮ ಪ್ರೊಡಕ್ಟ್‍ಗಳ ಪ್ರಯೋಗ ಭೂಮಿ ಎಂಬ ಬಂಡವಾಳಶಾಹಿ ಅಹಂನ್ನು, ಹೆಣ್ಣೆಂದರೆ ದೇಹ ಸೌಂದರ್ಯ ಎಂಬ ಪಿತೃತ್ವದ ತಪ್ಪನ್ನು ಏಕಕಾಲದಲ್ಲಿ ವಿರೋಧಿಸಿದ ತೀರ್ಮಾನವಿದು. ಹೆಣ್ಣು ಎಂದರೆ ದೇಹ,ಆದೇಹ ಸಂರಕ್ಷಣೆ ಮತ್ತು ಆಕರ್ಷಣೆಯನ್ನು ಕಾಪಾಡುವುದು ಮಾರ್ಕೆಟ್ಟಿನ ಸೌಂದರ್ಯವರ್ಧಕಗಳ ಜವಾಬ್ದಾರಿ ಎಂಬ ಸಾಮಾಜಿಕ ಫೋಬಿಯಾದ ಕಾಲವನ್ನು ಒಂದಿಷ್ಟಾದರೂ ತಡೆಯಲು ಈ ಮಾತು ಸಹಾಯಕವಾದೀತೇನೋ.
ಈಗ ನಮ್ಮ ಗೋಕರ್ಣದ ಕಲ್ಪನಾ ಟಾಕೀಸು ನಡೆಯುತ್ತಿಲ್ಲ. ಅದೀಗ ಯಾವುದೋ ಗೋಡೌನ್ ಆಗಿದೆ. ನಮ್ಮ ಹಾಗೆ, ಆದರೆ ಏನೆಲ್ಲ ರಾದ್ಧಾಂತಗಳ ಮೂಲಕ ಸಿನಿಮಾ ನೋಡುವ ಗರಜು ನಮ್ಮ ಮಕ್ಕಳಿಗಿಲ್ಲ. ಅವರೀಗ ಸ್ವತಂತ್ರರು. ಯಾರ ಒಪ್ಪಿಗೆಯ ಹಂಗಿಲ್ಲದೆ, ಏನೆಲ್ಲವನ್ನೂ ತಮ್ಮ ಪ್ರಜ್ಞೆಗೆ ತಂದುಕೊಳ್ಳಬಲ್ಲವರು. ಅವರಿಗೆ ಚಪಾಕ್‍ನಂತಹ ಸಿನಿಮಾಗಳು, ಇಂತಹ ನಿರ್ಣಯಗಳು ಬದುಕನ್ನು ನೋಡುವ ಹೊಸ ಕಣ್ಣೋಟವನ್ನು ಕೊಡಲಿ. ಹೆಣ್ಣುಗಳು ಭಯ ಅಪಮಾನಗಳಿಂದ ಕುಗ್ಗುವುದು ನಿಲ್ಲಲಿ. ಗಂಡುಮಕ್ಕಳಿಗೆ ಹೆಣ್ಣೆಂದರೆ ದೇಹವಲ್ಲ ಎಂಬ ತಿಳಿವು ಸಿಗಲಿ. ಸಿನಿಮಾ ನಮ್ಮ ಭಾವವಲಯವನ್ನು ಮೀಟುವುದಕ್ಕೆ ಯಶಸ್ವಿಯಾದಷ್ಟು ಬೇರೆ ಯಾವ ಮಾಧ್ಯಮವೂ ಯಶಸ್ವಿಯಾಗದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...