ಅನರ್ಹ ಶಾಸಕನಾಗಿ ನಂತರ ಉಪಚುನಾವಣೆಯಲ್ಲಿ ಗೆದ್ದಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಬೆಳಗಾವಿಯಲ್ಲಿ ನಡೆದ ಮರಾಠ ಸಮುದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮರಾಠರನ್ನು ಒಲೈಸುವ ಭರದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರದ್ದು, ಇಲ್ಲಿ ಮರಾಠಿಗರು ನಿಂತರೆ ಮಾತ್ರ ನಾನು ಬೆಂಬಲಿಸುತ್ತೇನೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಹಾಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಲಕ್ಷ್ಮಿ ಹೆಬ್ಬಾಳ್‌ಕರ್ ಪ್ರತಿನಿಧಿಸುತ್ತಿದ್ದಾರೆ. ಅವರನ್ನು ಕಂಡರಾಗದ ರಮೇಶ್ ಜಾರಕಿಹೊಳಿ ವೇದಿಕೆಯಿಂದ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರನ್ನು ಉದ್ದೇಶಿಸಿ ಮಾತನಾಡಿದ ರಮೇಶ್, “ನೀವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಕ್ಕರ್ ಮತ್ತು ಒಂದು ಸಾವಿರ ದುಡ್ಡು ತೆಗೆದುಕೊಂಡು ಓಟಾಕ್ಕಿದ್ದೀರಿ. ಈ ಸಲ ಹಾಗೆ ಮಾಡುವುದಿಲ್ಲ ಅಂದರೆ ಮಾತ್ರ ನಾನು ಈ ಕ್ಷೇತ್ರಕ್ಕೆ ತಲೆಹಾಕುತ್ತೇನೆ. ನಾನೇ ಬೇಕಾದರೆ ನಿಮಗೆ ಕುಕ್ಕರ್ ಮತ್ತು ತಲಾ ಒಂದು ಸಾವಿರ ಕೊಡುತ್ತೇನೆ. ಮರಾಠ ಮುಖಂಡರು ಒಂದಾಗಬೇಕು. ಚುನಾವಣೆಯಲ್ಲಿ ಮರಾಠ ಮುಖಂಡರು ಯಾರೇ ಆದರೂ ಪರವಾಗಿಲ್ಲ ಒಬ್ಬರು ಮಾತ್ರ ಎಲೆಕ್ಷನ್‌ಗೆ ನಿಲ್ಲಬೇಕು. ಸಂಜಯ್ ಅಥವಾ ಇನ್ಯಾರೋ ಒಬ್ಬರು ಮಾತ್ರ ನಿಂತರೆ ನಾನು ಕೆಲಸ ಮಾಡುತ್ತೇನೆ.” ಎಂದಿದ್ದಾರೆ.
ಅದಕ್ಕೂ ಮುಂಚೆ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರದ್ದು, ಇಲ್ಲಿ ಮರಾಠಿಗರು ಗೆಲ್ಲಬೇಕು. ನಾನು ಕಳೆದ ಸಾರಿ ಒಳ್ಳೇಯ ಸಂಸ್ಕೃತಿಯ ಮಗಳು ಎಂದು ಲಕ್ಷ್ಮಿ ಹೆಬ್ಬಾಳಕರ್ ಬೆಂಬಲಿಸಿ ತಪ್ಪು ಮಾಡಿದ್ದೆ. ಈ ಬಾರಿ ಆಕೆಯನ್ನು ಸೋಲಿಸಲು ನೀವೆಲ್ಲಾ ದುಡ್ಡು ಕೊಡಬೇಕು. ನಾನು 5ಕೋಟಿ ಫಂಡ್ ಕೊಡುತ್ತೇನೆ ಎಂದು ಘೋಷಿಸಿದ್ದಾರೆ.
ರಮೇಶ್ ಜಾರಕಿಹೊಳಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಅದರಲ್ಲಿ ಈ ಬಿಜೆಪಿಗರು ಅದನ್ನು ಮರಾಠಿಗರದು ಎನ್ನುವ ಮೂಲಕ ವಿಭಜನೆ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.


