ಪಶ್ಚಿಮ ಬಂಗಾಳ ಚುನಾವಣಾ ರ್‍ಯಾಲಿ, ರೋಡ್ ಶೋ ಮತ್ತು ಸಾರ್ವಜನಿಕ ಸಭೆಗಳಲ್ಲಿ 500 ಕ್ಕೂ ಹೆಚ್ಚು ಜನರು ಸೇರುವಂತಿಲ್ಲ ಎಂದು ಚುನಾವಣಾ ಆಯೋಗ ಘೋಷಿಸಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಚಾರದ ಸಮಯದಲ್ಲಿ ಕೊರೊನಾ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂದು ಆಯೋಗ ತಿಳಿಸಿದೆ.
ಎಂಟು ಹಂತಗಳಲ್ಲಿ ನಡೆಯುತ್ತಿರುವ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಈಗಾಗಲೇ 6 ಹಂತಗಳ ಮತದಾನ ಮುಗಿದಿದ್ದು ಇನ್ನು 2 ಹಂತಗಳು ಬಾಕಿ ಇವೆ. ಈಗಾಗಲೇ ರ್‍ಯಾಲಿ, ಸಭೆಗಳಿಗೆ ನೀಡಲಾಗಿರುವ ಅನುಮತಿಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
ಕೊರೊನಾ ಎರಡನೇ ಅಲೆಯಲ್ಲಿ ರಾಜಕೀಯ ಪಕ್ಷಗಳು ಸೂಕ್ತವಾದ ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಲು, ಕ್ರಮ ಕೈಗೊಳ್ಳಲು ಕಲ್ಕತ್ತಾ ಹೈಕೋರ್ಟ್ ಆಯೋಗಕ್ಕೆ ಸೂಚನೆ ನೀಡಿದ ಬೆನ್ನಲೆ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: ‘ಎರಡೇಟು ತಿನ್ನುತ್ತಿ’; ಆಕ್ಸಿಜನ್ ಸಿಲಿಂಡರ್ ಕೇಳಿದ ವ್ಯಕ್ತಿಗೆ ಬೆದರಿಸಿದ ಕೇಂದ್ರ ಸಚಿವ!
ಚುನಾವಣಾ ರ್‍ಯಾಲಿ, ರೋಶೋಗಳಲ್ಲಿ 500 ಜನರಿಗೆ ಮಾತ್ರ ಅನುಮತಿ ನೀಡಲಾಗುವುದು. ರಾಜ್ಯದ ಜನರು ಇಂದಿಗೂ ಮುಕ್ತವಾಗಿ ಓಡಾಡುತ್ತಿರುವುದರಿಂದ ನಾವು ಪ್ರಚಾರವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಅಭ್ಯರ್ಥಿಗಳು ಮತ್ತು ಪಕ್ಷಗಳು ಕೊರೊನಾ ನಿಯಮಾವಳಿಗಳನ್ನು ಅನುಸರಿಸಲು ನಿರಾಕರಿಸುತ್ತಿರುವುದರಿಂದ ಆಯೋಗವು ದುಃಖಿತವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಭಿರ್‌ಬೂಮ್ ಜಿಲ್ಲೆಯಲ್ಲಿ ಕೊರೊನಾ ನಿಯಮ ಉಲ್ಲಂಘನೆಗಾಗಿ ಎನ್‌ಡಿಎಂಎ ಕಾಯ್ದೆಯ ಸೆಕ್ಷನ್ 51 (ಬಿ) ಅಡಿಯಲ್ಲಿ 13 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ ಬಿಜೆಪಿ ಮತ್ತು ಟಿಎಂಸಿ ವಿರುದ್ಧ ತಲಾ ಎರಡು ಪ್ರಕರಣ ಮತ್ತು ಕಾಂಗ್ರೆಸ್ ಮತ್ತು ಸಿಪಿಎಂ ವಿರುದ್ಧ ತಲಾ ಒಂದು ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ಆಯೋಗದ ಆದೇಶದ ನಂತರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಎಲ್ಲಾ ಚುನಾವಣಾ ಸಭೆಗಳನ್ನು ರದ್ದುಗೊಳಿಸಿದ್ದಾರೆ.
ಪಶ್ಚಿಮ ಬಂಗಾಳವು 24 ಗಂಟೆಗಳಲ್ಲಿ 11,948 ಹೊಸ ಪ್ರಕರಣಗಳನ್ನು ದಾಖಲಿಸಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 68,798ಕ್ಕೆ ಏರಿಕೆಯಾಗಿದೆ.ಕಳೆದ 24 ಗಂಟೆಗಳಲ್ಲಿ 56 ಸಾವುಗಳೂ ಸಂಭವಿಸಿವೆ ಎಂದು ರಾಜ್ಯ ಸರ್ಕಾರ ತನ್ನ ದೈನಂದಿನ ಕೊರೊನಾ ಬುಲೆಟಿನ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: ’ಇದು ನನ್ನ ಕೊನೆಯ ಸಂದೇಶ’ ಎಂದಿದ್ದ ವೈದ್ಯೆ ಕೊರೊನಾಗೆ ಬಲಿ


