ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ಜನವಿರೋಧಿ ನೀತಿಗಳು, ಇಂಧನ ಬೆಲೆ ಹೆಚ್ಚಳ ಹಾಗೂ ಇದರ ಪರಿಣಾಮವಾಗಿ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಸೈಕಲ್ ಜಾಥಾ ನಡೆಸಲಾಯಿತು. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಸೈಕಲ್ ಜಾಥಾ ನಡೆಯಿತು.
ವಿಧಾನ ಮಂಡಲ ಅಧಿವೇಶನ ಆರಂಭದ ದಿನದಂದು ಎತ್ತಿನಗಾಡಿ ಚಲೋ ಪ್ರತಿಭಟನೆ ನಡೆಸಿ ಒಕ್ಕೂಟ ಸರ್ಕಾರದ ನೀತಿಗಳನ್ನು ಖಂಡಿಸಲಾಗಿತ್ತು. ಈ ಹಿಂದೆ ರಾಜ್ಯಾದ್ಯಂತ ಸೈಕಲ್ ಜಾಥಾ, 100 ನಾಟೌಟ್ ನಂತಹ ಕಾರ್ಯಕ್ರಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿತ್ತು.
“ಸರ್ಕಾರದ ಈ ಜನವಿರೋಧಿ ನೀತಿ ವಿರೋಧಿಸಿ ನಾವಿಂದು ಈ ಪ್ರತಿಭಟನೆ ಮಾಡಿದ್ದೇವೆ. ಜನರ ಪರ ಧ್ವನಿ ಎತ್ತಲು ನಾವು ಮೊನ್ನೆ ಎತ್ತಿನ ಗಾಡಿಯಲ್ಲಿ ಸದನಕ್ಕೆ ಆಗಮಿಸಿದ್ದೆವು. ಇಂದು ಸೈಕಲ್ ಮೂಲಕ ಆಗಮಿಸಿದ್ದೇವೆ. ಸರ್ಕಾರ ಬೆಲೆ ಇಳಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯಲಿದೆ. ಜನರು ಕೂಡ ಈ ಕೆಟ್ಟ ಸರ್ಕಾರ ಕಿತ್ತೊಗೆಯಲು ಸಜ್ಜಾಗಬೇಕು ಎಂದು ಕರೆ ನೀಡುತ್ತೇನೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ’ಎತ್ತಿನಗಾಡಿ ಚಲೋ’ ಪ್ರತಿಭಟನೆ
“ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇರುವಾಗ ಅದರ ಲಾಭ ಮಾತ್ರ ಜನಸಾಮಾನ್ಯರಿಗೆ ಸಿಗುವಂತೆ ಮಾಡಿಲ್ಲ. ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ, ಡೀಸೆಲ್ 94 ಆಗಿದೆ, ಅಡುಗೆ ಅನಿಲ 880 ರೂ. ಆಗಿದೆ. ಇದರಿಂದ ಇತರೆ ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಪೆಟ್ರೋಲ್ ಬೆಲೆಯಲ್ಲಿ 25 ರೂ. ಡೀಸೆಲ್ ಬೆಲೆಯಲ್ಲಿ 20 ರೂ. ಹಾಗೂ ಅಡುಗೆ ಅನಿಲದ ಬೆಲೆ 150 ರೂ. ಕಡಿಮೆ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ” ಎಂದಿದ್ದಾರೆ.
ಕೇಂದ್ರ ಸರ್ಕಾರದ ನಿರಂತರ ಇಂಧನ ಬೆಲೆ ಹೆಚ್ಚಳ ಹಾಗೂ ತತ್ಪರಿಣಾಮವಾಗಿ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಇಂದು ನಡೆದ ಸೈಕಲ್ ಜಾಥಾದಲ್ಲಿ ಭಾಗವಹಿಸಿದೆ. pic.twitter.com/qC90eslyp0
— Siddaramaiah (@siddaramaiah) September 20, 2021
ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯರಾದ ಯು.ಬಿ. ವೆಂಕಟೇಶ್, ಗೋವಿಂದರಾಜು ಸೇರಿದಂತೆ ಮಾಜಿ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಜಾಥಾದಲ್ಲಿ ಭಾಗವಹಿಸಿದ್ದರು.

“ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದ ಇಂಧನತೈಲಗಳ ಮೇಲಿನ ತೆರಿಗೆ ಪೆಟ್ರೋಲ್ -₹ 9.21, ಡೀಸೆಲ್ – ₹ 3.45 ಇತ್ತು. ಮೋದಿಯವರ ದರೋಡೆ ಸರ್ಕಾರದಲ್ಲಿ ಪೆಟ್ರೋಲ್ – ₹ 32.90, ಡೀಸೆಲ್ -₹ 31.80 ಇದೆ. ಸುಮಾರು 300% ತೆರಿಗೆ ಏರಿಸಿ ಜನರ ಸುಲಿಯನ್ನು ದರೋಡೆ ಎನ್ನದೆ ಇನ್ನೇನು ಹೇಳಬೇಕು? ದೋಚಿದ ಈ ಹಣ ಎಲ್ಲಿ ಹೋಗುತ್ತಿದೆ ಎಂದು ಬಿಜೆಪಿ ಹೇಳಬೇಕು” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಗೂಂಡಾರಾಜ್ ಆಗುತ್ತಿದೆ- ಕಾಂಗ್ರೆಸ್ ಆರೋಪ


