ಬೆಂಗಳೂರಿನಲ್ಲಿ ರಸ್ತೆ ಅಪಘಾತಕ್ಕೀಡಾಗಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ ನಟ ಸಂಚಾರಿ ವಿಜಯ್ (38) ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಿನಿಮಾ ನಟರು, ರಂಗಭೂಮಿ ಕಲಾವಿದರು, ಗಣ್ಯರು ಸೇರಿದಂತೆ ಸಾರ್ವಜನಿಕರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ನಟ ವಿಜಯ್ ಅವರ ಕುಟುಂಬ ಸದಸ್ಯರು, ಸ್ನೇಹಿತರು, ಸಿನಿಮಾ ರಂಗದ ಕಲಾವಿದರು, ನಿರ್ದೇಶಕರು, ರಂಗಕಲಾ ತಂಡಗಳು, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು, ರಾಜಕಾರಣಿಗಳು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.
ನಟ ಶಿವರಾಜ್‌ಕುಮಾರ್, ಡಾಲಿ ಧನಂಜಯ್, ರಂಗಾಯಣ ರಘು, ಸತೀಶ್ ನಿನಾಸಂ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಕಲಾವಿದರು, ಅಕೈ ಪದ್ಮಶಾಲಿ ಸೇರಿದಂತೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು, ಜೆಡಿಎಸ್ ಮುಖಂಡ ವೈವಿಎಸ್ ದತ್ತ, ಸಂಚಾರಿ ಕಲಾ ತಂಡ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ನಟ ಸಂಚಾರಿ ವಿಜಯ್ ತಮ್ಮ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ನಟ ವಿಜಯ್ ಅವರು ರಾಷ್ಟ್ರ ಪ್ರಶಸ್ತಿ ವಿಜೇತರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನಡೆಯಬೇಕೆಂದು ಜೆಡಿಎಸ್ ಮುಖಂಡ ವೈವಿಎಸ್ ದತ್ತ ಅವರು ಒತ್ತಾಯಿಸಿದ್ದಾರೆ.
ಶನಿವಾರದಿಂದ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆ ಸ್ವಗ್ರಾಮ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಂಚನಹಳ್ಳಿಯಲ್ಲಿ ವೇಳೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಸಂಜೆ ವೇಳೆಗೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಜೀವ ಬೆದರಿಕೆಯಿದೆ ಎಂದು ಪೊಲೀಸರಿಗೆ ತಿಳಿಸಿದ್ದ ಪತ್ರಕರ್ತ ಸಾವು: ಅಪಘಾತ ಎಂದ ಪೊಲೀಸರು!


