Homeಮುಖಪುಟಕನ್ನಡ ಏಕೀಕರಣದಿಂದಲೂ ಕನ್ನಡ ಭಾಷೆಯ ಏಳ್ಗೆಗಾಗಿ, ಬಸವ ತತ್ವಕ್ಕಾಗಿ ಶ್ರಮಿಸುತ್ತಿರುವ ಭಾಲ್ಕಿ ಮಠ

ಕನ್ನಡ ಏಕೀಕರಣದಿಂದಲೂ ಕನ್ನಡ ಭಾಷೆಯ ಏಳ್ಗೆಗಾಗಿ, ಬಸವ ತತ್ವಕ್ಕಾಗಿ ಶ್ರಮಿಸುತ್ತಿರುವ ಭಾಲ್ಕಿ ಮಠ

ಕನ್ನಡ ಶಾಲೆ ಮುಚ್ಚಿ, ಇಲ್ಲದಿದ್ದರೇ ಶಿಕ್ಷೆ ಅನುಭವಿಸಿ ಎಂಬ ನಿಜಾಮರ ಆದೇಶಕ್ಕೆ ಜಗ್ಗದ ಶ್ರೀಗಳು ಶಾಲೆಯ ಮುಂದೆ ಉರ್ದು ಶಾಲೆ ಎಂಬ ನಾಮಫಲಕ ಹಾಕಿ, ಒಳಗಡೆ ಕನ್ನಡ ಪಾಠ ನಡೆಸುತ್ತಿದ್ದರು!

- Advertisement -
- Advertisement -

ಹೈದರಾಬಾದ್ ಕರ್ನಾಟಕ ಎಂದೇ ಹೆಚ್ಚು ಜನಪ್ರಿಯಾವಾಗಿರುವ ಪ್ರದೇಶದ ಜಿಲ್ಲೆಯಾದ ಬೀದರ್‌ನ ಭಾಲ್ಕಿಯ ಹಿರೇಮಠ ಸಂಸ್ಥಾನ ಹಲವು ವಿಶೇಷಗಳನ್ನೊಳಗೊಂಡ ಶರಣ ಮಠ. ನಿಜಾಮರ ಆಳ್ವಿಕೆಯಲ್ಲಿ ಉರ್ದು ಪ್ರಭಾವ ಹೆಚ್ಚಿದ್ದ ಹಾಗೂ ಕನ್ನಡಕ್ಕಿಂತಲೂ ಮರಾಠಿ ಪ್ರಭಾವ ಹೆಚ್ಚಿದ್ದ ಸಮಯದಲ್ಲಿ, ಅಲ್ಲಿ ಕನ್ನಡ ಮಾತೃಭಾಷೆಯಾಗಿದ್ದ ಜನರ ನುಡಿಯಲ್ಲೇ ಮಕ್ಕಳ ಶಿಕ್ಷಣಕ್ಕಾಗಿ ಕಂಕಣತೊಟ್ಟು, ಹಲವು ಸಮಸ್ಯೆಗಳ ನಡುವೆಯೇ ಹೋರಾಟಗಳನ್ನು ಮಾಡಿ, ಕನ್ನಡ ಶಾಲೆಗಳನ್ನು ಸ್ಥಾಪಿಸಿ ಯಶಸ್ವಿಗೊಳಿಸಿದ ಈ ಮಠದ ಮತ್ತು ಮಠದ ಸಂಸ್ಥಾಪಕರಾದ ಚನ್ನಬಸವ ಪಟ್ಟದೇವರು ಶ್ರೀಗಳ ಕೆಲಸ ಸ್ಮರಣೀಯವಾದದ್ದು.


ಅಷ್ಟೇ ಅಲ್ಲದೆ ಬಸವ ಮತ್ತು ಶರಣ ಚಳವಳಿಯ ಪ್ರಸಾರಕ್ಕೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಅವಿರತವಾಗಿ ದುಡಿಯುತ್ತಿರುವ ಮಠ ಇದು.

2020ನೇ ಸಾಲಿನ ಕನ್ನಡ ರಾಜ್ಯೋತ್ಸದ ಸಂದರ್ಭದಲ್ಲಿ ಭಾಲ್ಕಿ ಮಠದ ವಿಶೇಷತೆಗಳನ್ನು ನೆನೆಯಲು ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ, ಬಸವಕಲ್ಯಾಣದ ಅನುಭವಮಂಟಪದ ಹಾಲಿ ಅಧ್ಯಕ್ಷರಾಗಿರುವ ಶ್ರೀ ಡಾ. ಬಸವಲಿಂಗ ಪಟ್ಟದೇವರು ಅವರನ್ನು ರಾಜೇಶ್ವರ ಜುಬರೆ (ಸಾಹಿತಿಗಳು, ಹಿರೇಮಠ ಸಂಸ್ಥಾನ ಭಾಲ್ಕಿ) ಸಂದರ್ಶನ ಮಾಡಿದ್ದಾರೆ.

1. ಕನ್ನಡ ಭಾಷೆಯ ಉಳಿವು ಎಂದರೆ ಅದೊಂದು ಸಾಂಸ್ಕೃತಿಕ, ರಾಜಕೀಯ ಹೋರಾಟವೆಂದೇ ಪರಿಗಣಿಸಲಾಗುತ್ತದೆ. ಭಾಲ್ಕಿಯ ಹಿರೇಮಠ ಸಂಸ್ಥಾನ ಕನ್ನಡದ ಉಳಿವಿಗೆ ಪಣ ತೊಟ್ಟಿದ್ದು ವಿಶೇಷ. ಇದಕ್ಕೆ ಪ್ರೇರಣೆ ಏನಿರಬಹುದೆಂದು ನಿಮಗೆ ಅನ್ನಿಸುತ್ತದೆ..?

ಭಾಲ್ಕಿಯ ಹಿರೇಮಠ ಸಂಸ್ಥಾನ ಕನ್ನಡ ಉಳಿವಿಗಾಗಿ ಸತತ ಪರಿಶ್ರಮ ನಡೆಸುತ್ತಿದೆ. ಬೀದರ್ ಜಿಲ್ಲೆಯಲ್ಲಿ ನಿಜಾಮರ ಆಳ್ವಿಕೆ ಸಮಯದಲ್ಲಿ ಶುರುವಾದ ಈ ಕಾರ್ಯ ಇಂದಿಗೂ ನಡೆಯತ್ತಲೇ ಇದೆ. ಈ ಭಾಗದಲ್ಲಿ ರಾಜ್ಯ ಭಾಷೆಯಾಗಿ ಇದ್ದಿದ್ದು ಕೂಡ ಉರ್ದು.

ಇದರ ಜೊತೆ ಜೊತೆಗೆ ಮರಾಠಿ ಭಾಷೆಯ ಪ್ರಭಾವ ಬೇರೆ. ಈ ಭಾಗದಲ್ಲಿ ಕನ್ನಡಕ್ಕೆ ಯಾವುದೇ ನೆಲೆ ಇಲ್ಲದಂತೆ ಆಗಿತ್ತು. ಅಂಗಡಿಗಳಲ್ಲಿ, ಲೆಕ್ಕಪತ್ರ ವ್ಯವಹಾರಗಳಲ್ಲಿ ಕೇವಲ ಮರಾಠಿ ಬಳಸಲಾಗುತ್ತಿತ್ತು.
ಇಂತಹ ಸಂದರ್ಭದಲ್ಲಿ 1924ರಲ್ಲಿ ಭಾಲ್ಕಿ ಮಠದಲ್ಲಿ ಚನ್ನಬಸವ ಪಟ್ಟದೇವರು ಪಟ್ಟಾಧೀಶರಾದರು. ಜಿಲ್ಲೆಯ ಸ್ಥಿತಿಯನ್ನು ಗಮನಿಸಿ, ಅಧ್ಯಯನ ಮಾಡಿದ ಸ್ವಾಮಿಗಳು ಕನ್ನಡ ಶಾಲೆಯನ್ನು ತೆರೆಯುವ ಸಾಹಸಕ್ಕೆ ಕೈಹಾಕಿದರು. ಆದರೆ ಅದು ಸುಲಭದ ಮಾತಾಗಿರಲಿಲ್ಲ.

ಸ್ವಾಮಿಗಳ ಮೂಲ ಆಶಯ ವಚನ ಚಳವಳಿ. ಬಸವ ತತ್ವವನ್ನು ಉಳಿಸುವುದು, ಬೆಳೆಸುವುದು ಆಗಿತ್ತು. ಆದರೆ ವಚನ ಸಾಹಿತ್ಯವಿರುವುದು ಕನ್ನಡದಲ್ಲಿ ಹಾಗಾಗಿ ಕನ್ನಡದ ಉಳಿವಿಗೆ ಪಣ ತೊಟ್ಟರು. ವಚನ ಸಂಸ್ಕೃತಿ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ವಚನ ಸಂಸ್ಕೃತಿ ಬೆಳೆದರೆ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ಈ ಹಿನ್ನಲೆಯಲ್ಲಿ ಕನ್ನಡವನ್ನು ಬೆಳೆಸುವ ಗುರಿ ಹೊಂದಿದ್ದರು.

2. ವಚನ ಪರಂಪರೆಯು ಸಂಸ್ಕೃತ ಮತ್ತು ಶಿಷ್ಟ ಭಾಷೆಯ ಯಾಜಮಾನ್ಯ ತಿರಸ್ಕರಿಸಿ, ಆಡು ಮಾತಿನಲ್ಲೇ ಜೀವನ ತತ್ವಗಳನ್ನು ಹಂಚಿಕೊಂಡಿದ್ದು ನಮ್ಮ ಮುಂದಿದೆ. ಅದನ್ನೂ ಕನ್ನಡದ ಚಳವಳಿ ಎನ್ನಬಹುದೇನೊ. ಈ ಹಿನ್ನೆಲೆಯಲ್ಲಿ ಹಿರೇಮಠದ ಪೀಠಾಧಿಪತಿಗಳಾಗಿದ್ದ ಚನ್ನಬಸವ ಪಟ್ಟದೇವರು ಅವರನ್ನು ನೆನಪಿಸಿಕೊಳ್ಳಲೇಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಅವರ ಕನ್ನಡ ಹೋರಾಟ ಒಂದು ವಿಶೇಷ ಅಧ್ಯಾಯ. ಅವರ ಕನ್ನಡ ಹೋರಾಟದ ಬಗ್ಗೆ ಹೇಳಿ.

ಹೌದು, ಉತ್ತರ ಕರ್ನಾಟಕ ಭಾಗದಲ್ಲಿ ಚನ್ನಬಸವ ಪಟ್ಟದೇವರ ಹೋರಾಟ ಒಂದು ವಿಶೇಷ ಅಧ್ಯಾಯ. ಕನ್ನಡ ಶಾಲೆಗಳನ್ನು ತೆರೆಯವ ನಿರ್ಧಾರ ಮಾಡಿದ ಶ್ರೀಗಳ ಕೆಲಸ ಸುಲಭದ್ದಾಗಿರಲಿಲ್ಲ. ನಿಜಾಮರ ಆಳ್ವಿಕೆಯಲ್ಲಿದ್ದ ಭಾಗದಲ್ಲಿ ಎಲ್ಲರ ಕಣ್ಣು ತಪ್ಪಿಸಿ ಕೆಲಸ ಮಾಡಬೇಕಿತ್ತು. ಹಾಗಾಗಿ 1936ರಲ್ಲಿ ಮೋರ್ಗಿ ಎಂಬ ಗ್ರಾಮದಲ್ಲಿ (ಇಂದು ತೆಲಂಗಾಣದಲ್ಲಿದೆ) ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಎಂಬ ಕನ್ನಡ ಶಿಕ್ಷಣ ಶಾಲೆಯನ್ನು ಸ್ಥಾಪಿಸಿದರು.
ಶಾಲೆ ಪ್ರಾರಂಭಿಸಿದರು ನಿಜ. ಆದರೆ ಶಾಲೆಗಳಿಗೆ ಮಕ್ಕಳು ಬರುತ್ತಿರಲಿಲ್ಲ. ಊಟ-ವಸತಿ ನೀಡುತ್ತೇವೆ ಎಂದರೂ, ಕನ್ನಡ ಕಲಿತು ಏನ್ನು ಲಾಭ ಎಂದು ಪೋಷಕರು ಕೇಳುತ್ತಿದ್ದರು. ಕನ್ನಡ ಕಲಿತರೆ ಕೆಲಸ ಸಿಗುವುದೇ? ಉರ್ದು, ಮರಾಠಿ ಕಲಿತವರಿಗೆ ಮಾತ್ರ ಕೆಲಸ ಸಿಗುತ್ತದೆ ಎನ್ನುತ್ತಿದ್ದರು. ಆದರೆ ಛಲ ಬಿಡದ ಅವರು ಜಿಲ್ಲೆಯಾದ್ಯಂತ ತಿರುಗಿ 50 ಮಕ್ಕಳನ್ನು ಶಾಲೆಗೆ ಕರೆತಂದರು.

ಕನ್ನಡ ಕಲಿಯುವವರು ಪಂಚಾಂಗ ಹೇಳುವವರು ಎಂಬ ನಂಬಿಕೆ ಮಠದ ಭಕ್ತಾದಿಗಳಲ್ಲಿ ಇತ್ತು. ಆದರೆ ಇವರದು ಅಚಲ ವಿಶ್ವಾಸ. ಕನ್ನಡಕ್ಕೆ ಮುಂದೊಂದು ದಿನ ಬೆಲೆ ಬರುತ್ತದೆ, ನಿಮ್ಮ ಮಕ್ಕಳಿಗೆ ಕನ್ನಡ ಕಲಿಸಿ ಎಂದು ಹೇಳುತ್ತಿದ್ದರು. ಆದರೆ 100 ಮಕ್ಕಳಲ್ಲಿ ಐದಾರು ಮಕ್ಕಳನ್ನು ಮಾತ್ರ ಪೋಷಕರು ಶಾಲೆಗೆ ಕಳುಹಿಸುತ್ತಿದ್ದರು.

ಶಾಲೆಯಲ್ಲಿ ಕಲಿಯಲು ಬಂದವರಿಗೆ ಊಟದ ವ್ಯವಸ್ಥೆ ಕೂಡ ಕಷ್ಟದ ಕೆಲಸವಾಗಿತ್ತು. ಬೀದರ್ ಜಿಲ್ಲೆ ಅಂದು ಕಡುಬಡತನದ ಜಿಲ್ಲೆ ಆಗಿತ್ತು. ಅಂತಹ ಕಾಲದಲ್ಲಿ ಕನ್ನಡ ಉಳಿಸಿ ಬೆಳೆಸಲು, ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಮುಷ್ಠಿ ಫಂಡ್ ಎಂಬ ಅಭಿಯಾನ ಆರಂಭಿಸಿದರು.

ಅಂದಿನ ಕಾಲದಲ್ಲಿ ಜೋಳ ಬೀಸಲು ಯಂತ್ರಗಳಿರಲಿಲ್ಲ. ಹಳ್ಳಿಗಳಲ್ಲಿ ಅಲ್ಲಲ್ಲಿ ಬೀಸುವ ಕಲ್ಲುಗಳು ಇರುತ್ತಿದ್ದವು. ಸ್ವಾಮಿಗಳು ಬೀಸುವಕಲ್ಲು ಇರುವ ಜಾಗಗಳಲ್ಲಿ ಕಲ್ಲಿನ ಮೇಲೆ ಜೋಳಿಗೆ ನೇತುಹಾಕುತ್ತಿದ್ದರು. ಜೋಳ ಬೀಸಲು ಬರುತ್ತಿದ್ದ ಹೆಣ್ಣುಮಕ್ಕಳು ತಾವು ಜೋಳ ಬೀಸುವ ಮುನ್ನ ಒಂದು ಹಿಡಿ ಜೋಳವನ್ನು ಜೋಳಿಗೆಗೆ ಹಾಕುತ್ತಿದ್ದರು. ಅದನ್ನು ವಾರದ ಬಳಿಕ ಸಂಗ್ರಹಿಸಿ ಮಕ್ಕಳ ಆಹಾರಕ್ಕಾಗಿ ಬಳಸುತ್ತಿದ್ದರು. ಇದೇ ಮುಷ್ಠಿ ಫಂಡ್.
ಶಾಲೆ ಇದ್ದ ಸ್ಥಳದಲ್ಲಿ ನೀರಿನ ಸಮಸ್ಯೆ ಹೆಚ್ಚಾದ ಕಾರಣ ಶಾಲೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಿದರು.

ಮುಷ್ಠಿ ಫಂಡ್ ಜೊತೆಗೆ ಪ್ರತಿ ಮನೆಯೂ ವರ್ಷಕ್ಕೆ 2 ರೂ ನೀಡುವಂತೆ ಮಾಡಿದ್ದರು. ಇದರಿಂದ ಶಿಕ್ಷಕರಿಗೆ ಸಂಬಳ, ಮಕ್ಕಳ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳಲಾಗುತ್ತಿತ್ತು. ಜೊತೆಗೆ ಪ್ರತಿ ಹಬ್ಬದಲ್ಲೂ ಅಂಗಡಿಗಳಲ್ಲಿ ವಂತಿಕೆ ಪಡೆದು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರು. ಕನ್ನಡ ಶಾಲೆ ಉಳಿವಿಗೆ ದೇಣಿಗೆ ಸಂಗ್ರಹಿಸಲು, ಹಳ್ಳಿಗಳು, ಪಟ್ಟಣಗಳು ಎಂಬುದನ್ನು ನೋಡದೇ, ಹಗಲು-ರಾತ್ರಿ ಸಂಚರಿಸಿ ಕೆಲಸ ಮಾಡುತ್ತಿದ್ದರು.

ಕನ್ನಡ ಶಾಲೆಯ ಬಗ್ಗೆ ತಿಳಿದ ನಿಜಾಮರ ಸರ್ಕಾರ ಶಾಲೆ ಮುಚ್ಚಿಸಲು ಬೆದರಿಕೆ ಹಾಕಿತು. ಕನ್ನಡ ಶಾಲೆ ಮುಚ್ಚಿ ಇಲ್ಲದಿದ್ದರೇ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುತ್ತದೆ ಎಂಬ ಆದೇಶ ಬಂತು. ಇದಕ್ಕೂ ಜಗ್ಗದ ಶ್ರೀಗಳು ಶಾಲೆಯ ಮುಂದೆ ಉರ್ದು ಶಾಲೆ ಎಂಬ ನಾಮಫಲಕ ಹಾಕಿ, ಒಳಗಡೆ ಕನ್ನಡ ಪಾಠ ನಡೆಸುತ್ತಿದ್ದರು.

ಕನ್ನಡ ಶಾಲೆ ಕಟ್ಟಲು ಆಗ ಸರ್ಕಾರದಿಂದ ಯಾವ ಸೌಲಭ್ಯಗಳೂ ಇರಲಿಲ್ಲ. ಕಾಯಕ ಜೀವಿ ಆಗಿದ್ದ ಶ್ರೀಗಳೇ ಮುಂದೆ ನಿಂತು ಶಾಲೆಯ ಕೆಲಸಗಳನ್ನು ಮಾಡುತ್ತಿದ್ದರು. ಮರಳು ಸೋಸುವುದು, ಗೋಡೆಗಳಿಗೆ ನೀರು ಹಾಕುವುದು ಹೀಗೆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ಇದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ಗಮನಿಸಿದ್ದರು.

3. ಕನ್ನಡ ಭಾಷಿಕರನ್ನು ಒಂದೆಡೆಗೆ ತಂದಿದ್ದು ಏಕೀಕರಣ. ಈ ಹೋರಾಟದಲ್ಲಿ ಚನ್ನಬಸವ ಪಟ್ಟದೇವರು ಶ್ರೀಗಳ ಹೋರಾಟ ಬಹಳ ದೊಡ್ಡ ಪಾತ್ರ ನಿರ್ವಹಿಸಿದೆ. ಈ ಬಗ್ಗೆ ನೀವು ಗಮನಿಸಿದ ಸಂಗತಿಗಳನ್ನು ಮೆಲುಕು ಹಾಕಬಹುದೆ?

ಇಂದಿನ ನಮ್ಮ ಬೀದರ್ ಜಿಲ್ಲೆ ಕರ್ನಾಟಕದಲ್ಲಿ ಉಳಿಯಲು ಕಾರಣ ಶ್ರೀಗಳು. ಕನ್ನಡ ಏಕೀಕರಣ ಸಮಿತಿಯಲ್ಲಿ ಕೆಲಸ ಮಾಡಿದ್ದಾರೆ.

ಒಮ್ಮೆ ಬೀದರ್ ಜಿಲ್ಲೆಯ ಕಮಲನಗರದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅಂದೇ ಕೆಲವು ಮರಾಠಿಗರ ಮುಖಂಡರು ಕೂಡ ಗುಪ್ತವಾಗಿ ಬೃಹತ್ ಮರಾಠ ರ‍್ಯಾಲಿ ಆಯೋಜಿಸಿದ್ದರು. ಕನ್ನಡ ಏಕೀಕರಣ ಸಭೆಯಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಕನ್ನಡಿಗರ ಮೇಲೆ 500-600 ಸಂಖ್ಯೆಯಲ್ಲಿ ಬಂದ ಮರಾಠಿಗರು ಹಲ್ಲೆ ಮಾಡಿದರು. ಕನ್ನಡಪರ ಹೋರಾಟಗಾರರು ಓಡಿದರೂ ಬಿಡದೇ, ಹೊಲಗಳಲ್ಲಿ ಓಡಾಡಿಸಿ ಹಲ್ಲೆ ಮಾಡಿದ್ದರು. ಅಂಥ ಸಂದರ್ಭದಲ್ಲಿ ಗುರುಗಳು ತಕ್ಷಣ ಕನ್ನಡಿಗರ ನೆರವಿಗಾಗಿ ಕಮಲನಗರಕ್ಕೆ ಹೋದರು. ಅವರುಗಳ ಜೊತೆಯೇ ಇದ್ದು ಆರೈಕೆ ಮಾಡಿದರು.

ಒಮ್ಮೆ ಬೀದರ್‌ನ ಪ್ರಮುಖರಾದ ಪ್ರಭುರಾವ್ ಕಂಬ್ಳಿವಾಲೆ ಕನ್ನಡ ಏಕೀಕರಣದ ಬಗ್ಗೆ ನೂರಾರು ಮಂದಿಯನ್ನು ಕರೆದಿದ್ದ ಸಭೆಗೆ ಶ್ರೀಗಳು ಒಬ್ಬರೇ ಹೋಗಿದ್ದರಂತೆ. ಜಯದೇವಿ ತಾಯಿ ಲಿಗಾಡೆ ಅವರ ಎಲ್ಲಾ ಸಭೆಗಳಲ್ಲೂ ಇವರು ಮುಂಚೂಣಿಯಲ್ಲಿದ್ದರು.

4. ಇದೀಗ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲೂ ಬಸವ ತತ್ವಗಳನ್ನು ಪ್ರಸಾರ ಮಾಡುತ್ತಾ ತಾತ್ವಿಕ ವಿಸ್ತರಣೆ ನಡೆಸುತ್ತಿದ್ದೀರಿ. ಅದಕ್ಕೆ ಪ್ರತಿಕ್ರಿಯೆ ಹೇಗಿದೆ?

ಮಹಾರಾಷ್ಟ್ರದಲ್ಲಿ ಬಸವ ತತ್ವದ, ವಚನ ಸಾಹಿತ್ಯದ ಹಂಬಲವಿದೆ. ಹೀಗಾಗಿ ನಾವು ಅವರ ಭಾಷೆಗಳಲ್ಲೇ ವಚನಗಳನ್ನು, ಬಸವ ತತ್ವಗಳ ಕನ್ನಡ ಪುಸ್ತಕಗಳನ್ನು ಭಾಷಾಂತರ ಮಾಡಿದ್ದೇವೆ. ಅದು ಯಶಸ್ವಿಯಾಗಿದೆ. ಮಹಾರಾಷ್ಟ್ರದಲ್ಲಿ ಲಿಂಗಾಯತ ಚಳುವಳಿ ನಡೆಯುತ್ತಿದೆ. ಲಿಂಗಾಯತ ಸ್ವತಂತ್ರಧರ್ಮ ಎಂಬ ಚಳುವಳಿ ಇದಾಗಿದೆ. ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಬಸವ ತತ್ವದಿಂದ.

ತೆಲಂಗಾಣ ಜಿಲ್ಲೆಯಲ್ಲಿ ಬಸವ ತತ್ವವನ್ನು, ವಚನ ಸಾಹಿತ್ಯವನ್ನು ಪಸರಿಸುವ ಕೆಲಸವಾಗಬೇಕಿದೆ. ಅಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿದ್ದೇವೆ. ಕೆಲಸ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ವಚನ ಸಾಹಿತ್ಯದ ಬಗ್ಗೆ ತಿಳುವಳಿಕೆ ಇರುವ ಕಾರಣ, ಜೊತೆಗೆ ಮರಾಠಿ ಭಾಷೆ ಕೂಡ ಇಲ್ಲಿಗೆ ಹತ್ತಿರವಾದ ಕಾರಣ ಅಲ್ಲಿ ಬಸವ ತತ್ವ ಪಸರಿಸಲು ಸಾಧ್ಯವಾಗಿದೆ.

ಅಕ್ಷರ ರೂಪ: ಮಮತ.ಎಂ


ಇದನ್ನೂ ಓದಿ: ಲಿಂಗಾಯತ ಚಳವಳಿ : ಕೇವಲ ರಾಜಕಾರಣವಾಗಿತ್ತೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...