HomeUncategorizedಬಿಡದಿಯ ಹಕ್ಕಿಪಿಕ್ಕಿ ಬಾಲಕಿ ಸಾವು ಪ್ರಕರಣ: ರೈಲು ಡಿಕ್ಕಿ ಎಂದ ಪೊಲೀಸ್ ತನಿಖೆ, ಮರುತನಿಖೆಗೆ ಆಗ್ರಹ

ಬಿಡದಿಯ ಹಕ್ಕಿಪಿಕ್ಕಿ ಬಾಲಕಿ ಸಾವು ಪ್ರಕರಣ: ರೈಲು ಡಿಕ್ಕಿ ಎಂದ ಪೊಲೀಸ್ ತನಿಖೆ, ಮರುತನಿಖೆಗೆ ಆಗ್ರಹ

- Advertisement -
- Advertisement -

ಬೆಂಗಳೂರು: ಬಿಡದಿ ಬಳಿಯ ಭದ್ರಾಪುರದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಇದೇ ಮೇ 12ರಂದು ರೈಲು ಹಳಿಯ ಬಳಿ ಶವವಾಗಿ ಪತ್ತೆಯಾಗಿದ್ದ 14 ವರ್ಷದ ಬಾಲಕಿಯ ಪ್ರಕರಣವು ‘ಅತ್ಯಾಚಾರ-ಕೊಲೆ’ ಎಂದು ರಾಜ್ಯಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ರೈಲು ಡಿಕ್ಕಿಯಿಂದ ಸಂಭವಿಸಿದೆ ಎಂದು ಘೋಷಿಸಿದೆ. ಈ ಕುರಿತು ಹಲವು ಅನುಮಾನಗಳನ್ನು ವ್ಯಕ್ತಪಡಿಸಿ ಬಾಲಕಿಯ ಸಾವಿನ ಕುರಿತು ಸರ್ಕಾರ ಮತ್ತು ಪೊಲೀಸ್‌ ವ್ಯವಸ್ಥೆಗೆ ಒಂದು ಬಹಿರಂಗ ಪತ್ರ ಬರೆದಿರುವ ‘ನಾವೆದ್ದು ನಿಲ್ಲದಿದ್ದರೆ- ಕರ್ನಾಟಕ’ವು ಸ್ವತಂತ್ರ ಮರುತನಿಖೆಗೆ ಆಗ್ರಹಿಸಿದೆ.

ಬಾಲಕಿಯ ಸಾವು ಸಂಭವಿಸಿದ್ದು ಹೇಗೆ? ರೈಲ್ವೇ ಅಪಘಾತದಿಂದಲೋ ಅಥವಾ ಕ್ರೂರ ಹಿಂಸೆಯಿಂದಲೋ? ಎಂದು ‘ನಾವೆದ್ದು ನಿಲ್ಲದಿದ್ದರೆ’ ವೇದಿಕೆಯಿಂದ ಪತ್ರಿಕಾ ಹೇಳಿಕೆ ನೀಡಿರುವ ಮಲ್ಲಿಗೆ ಸಿರಿಮನೆಯವರು, ಘಟನೆಯ ಸಂಬಂಧ ಮಾತು ಬಾರದ ಮತ್ತು ಕಿವಿ ಕೇಳದ ಅಕ್ಕಿಪಿಕ್ಕಿ ಸಮುದಾಯದ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲಾಗಿದೆ ಎಂದು ಪೋಷಕರೇ ಈ ಹಿಂದೆ ಆರೋಪಿಸಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಇದು ಸಾಕಷ್ಟು ಅನುಮಾನಕ್ಕೀಡು ಮಾಡಿದೆ. ನಾವು ಬಾಲಕಿಯ ಸಾವಿನ ಕುರಿತು ನ್ಯಾಯಕ್ಕಾಗಿ ಮರುತನಿಖೆಗೆ ಆಗ್ರಹಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬಾಲಕಿಯು ಶವವಾಗಿ ಪತ್ತೆಯಾಗಿದ್ದಾಗ ಸ್ಥಳೀಯ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಹಲವು ಕಥೆಗಳು ಹರಿದಾಡಿದ್ದವು. ಮೇಲ್ನೋಟಕ್ಕೆ ಎಲ್ಲ ಸಂಗತಿಗಳೂ ಈ ಸಾವಿನ ಹಿಂದೆ ಆತಂಕ ಹುಟ್ಟಿಸುವಂತಹ ವಿಚಾರಗಳಿವೆ ಎಂದು ಸೂಚಿಸುತ್ತಿದ್ದವು. ಅವಳು ಹಿಂದಿನ ಸಂಜೆಯಿಂದ ಕಾಣೆಯಾಗಿದ್ದಳು ಎಂಬ ಅಂಶದಿಂದ ಹಿಡಿದು ಆಕೆಯ ದೇಹವು ಪತ್ತೆಯಾದ ನಿರ್ಜನ ಸ್ಥಳ, ಆಕೆಯ ಬಟ್ಟೆಗಳ ಹರಿದ ಸ್ಥಿತಿ, ಗಂಭೀರವಾದ ಏಟು ಬಿದ್ದಿದ್ದ ತಲೆ, ಮುರಿದ ಕಾಲು ಮತ್ತು ಬೆನ್ನು ಸೇರಿದಂತೆ ಆಕೆಯ ದೇಹದ ಮೇಲಿನ ಗಂಭೀರ ಗಾಯಗಳ ಗುರುತುಗಳವರೆಗೆ ಅನೇಕ ವಿಷಯಗಳು ಮೊದಲ ದಿನವೇ ಕುಟುಂಬದ ಸದಸ್ಯರ ಹೇಳಿಕೆಗಳಲ್ಲಿ ಕೇಳಬಂದವು. ಹಾಗೆಯೇ ಅಪರಿಚಿತ ಕಾರೊಂದು ದೇಹ ಸಿಕ್ಕಿದ ಸ್ಥಳದ ಸಮೀಪದವರೆಗೆ ಬಂದು ಹಿಂತಿರುಗಿ ಹೋಗಿದ್ದಕ್ಕೆ ಸಿಸಿಟಿವಿ ಫೂಟೇಜ್‌ ಇದೆ ಎಂಬ ಮಾಧ್ಯಮವೊಂದರ ಪತ್ರಿಕಾ ವರದಿಯವರೆಗೆ ಎಲ್ಲವೂ ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತಿದ್ದವು. ಪೊಲೀಸರೇ ಆರಂಭದಲ್ಲಿ ಇದು ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣ ಎಂದು ಪರಿಗಣಿಸಿ, ವಿಚಾರಣೆಗಾಗಿ ಕೆಲವರನ್ನು ಠಾಣೆಗೆ ಕರೆಸಿದ್ದರು. ಡಿ.ಕೆ.ಶಿವಕುಮಾರ್ ಅವರಂತಹ ಹಲವರ ಭೇಟಿ ನೀಡಿ ಹೆಣ್ಣುಮಗುವಿನ ಸಾವಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು. ಈಗ ನೋಡಿದರೆ
ರಾಮನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಇದು ರೈಲ್ವೇ ಅಪಘಾತ ಎಂದು ಘೋಷಿಸಿದ್ದಾರೆ. ಈ ಇಡೀ ಪ್ರಕ್ರಿಯೆ ಮತ್ತು ಪ್ರಕರಣವನ್ನು ನಿಭಾಯಿಸಿದ ರೀತಿ ನಮ್ಮಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯು, ಉತ್ತರಗಳನ್ನು ಒದಗಿಸುವುದಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿರುವುದರಿಂದ, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಣಾಯಕ ಕಾಳಜಿಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ. ವೇದಿಕೆಯಾಗಿ ನಾವು
ಹಲವಾರು ಸದಸ್ಯರು ಭದ್ರಾಪುರ ಹಕ್ಕಿ ಪಿಕ್ಕಿ ಕಾಲೋನಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ ಮತ್ತು ತನಿಖೆ ಸಂಪೂರ್ಣವಾಗಿ ಮತ್ತು ಪಾರದರ್ಶಕವಾಗಿ ನಡೆಯುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರನ್ನು ಭೇಟಿಯಾಗಿದ್ದೇವೆ. ನಮ್ಮಲ್ಲಿ ಕೆಲವರು ಈ ಸಮುದಾಯದೊಂದಿಗೆ ಅವರ ಮೂಲಭೂತ ಹಕ್ಕುಗಳು ಮತ್ತು ಘನತೆಗೆ ಸಂಬಂಧಿಸಿದ ವಿಷಯಗಳ ಮೇಲೆ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದು, ಸಮುದಾಯದ ಮುಂದಾಳುಗಳಿಗೆ ಪರಿಚಿತರಾಗಿದ್ದೇವೆ. ನಮ್ಮ ತಂಡವು ಹಲವು ವಿಚಾರಗಳನ್ನು ಕೆದಕಿದಾಗ ಆರಂಭಿಕ ಹಂತದಿಂದಲೇ ಪೊಲೀಸ್ ತನಿಖೆಗಳು ನಡೆಯುತ್ತಿರುವ ರೀತಿಯಲ್ಲಿ ಸಮಸ್ಯೆಗಳಿವೆ ಎಂದು ನಾವು ಕಂಡುಕೊಂಡೆವು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಾಧ್ಯಮ ವರದಿಗಳು ಮತ್ತು ನಮ್ಮದೇ ಅವಲೋಕನಗಳಿಂದ ಸ್ಪಷ್ಟವಾದಂತೆ, ದೇಹವು ಪತ್ತೆಯಾದ ಸ್ಥಳವನ್ನು ಅಪರಾಧ ಸ್ಥಳವೆಂದು ಪರಿಗಣಿಸಿ, ಹೊರಗಿನವರು ಪ್ರವೇಶಿಸದಂತೆ ಸಂಚಾರವನ್ನು ನಿರ್ಬಂಧಿಸಲಾಗಿರಲಿಲ್ಲ. ಯಾವುದೇ ಅಡೆತಡೆಗಳಿಲ್ಲದೆ ಸಾರ್ವಜನಿಕರಿಗೆ ಆ ಪ್ರದೇಶದಲ್ಲಿ ಓಡಾಡಲು ಅವಕಾಶ ನೀಡಲಾಯಿತು, ಇದು ಯಾವುದೇ ಸ್ಥಳದ ಸಾಕ್ಷ್ಯವನ್ನು ತಿರುಚುವ ಅಥವಾ ಹಸ್ತಕ್ಷೇಪ ಮಾಡುವ ಸಾಧ್ಯತೆಗೆ ಕಾರಣವಾಗುವಂತಿತ್ತು.
ಅದಲ್ಲದೆ, ನಿರ್ಜನವಾಗಿದ್ದ ಆ ಪ್ರದೇಶ, ಪಕ್ಕದಲ್ಲಿದ್ದ ರೈಲ್ವೇ ಹಳಿ, ಇಂತಹ ಅಪಾಯಕರ ಪರಿಸರದಲ್ಲಿ ಈ ಹಿಂದೆ ನಡೆದಿರುವ ಅನೇಕ ಹೆಣ್ಣುಮಕ್ಕಳ ಅಸಹಜ ಸಾವುಗಳು ಅಥವಾ ಕೊಲೆಗಳು, ಇಂತಹ ಘಟನೆಗಳ ಸಂಧರ್ಭಗಳಲ್ಲಿ ಬಲಿಯಾದ ಹೆಣ್ಣುಮಕ್ಕಳು ಅಲೆಮಾರಿ, ಭಿಕ್ಷುಕ, ಬುದ್ಧಿಮಾಂದ್ಯ ಕಡುಬಡತನದ ಹಿನ್ನೆಲೆಯವರಾಗಿದ್ದಾಗ, ಅವು ಕಣ್ಣಿಗೂ ಕಾಣದೆ ಮರೆಯಾಗುವುದು- ಇವೇ ಮೊದಲಾದ ಕಾರಣಗಳಿಂದಾಗಿ ನಾವು ಸ್ವತಂತ್ರ ಮರುತನಿಖೆಗೆ ಒತ್ತಾಯಿಸುತ್ತೇವೆ ಎಂದು ವೇದಿಕೆಯು ಹೇಳಿದೆ.

ಇಷ್ಟು ಸೂಕ್ಷ್ಮವಾದ ವಿಚಾರದಲ್ಲಿ ವಹಿಸಬೇಕಾದಷ್ಟು ಎಚ್ಚರಿಕೆ ವಹಿಸದಿರುವುದು ಹಲವು ಅನಗತ್ಯ ಬೆಳವಣಿಗೆಗಳಿಗೆ ಕಾರಣವಾಯಿತು. ಪಾರದರ್ಶಕವಾಗಿ ಮತ್ತು ನಾಗರೀಕ ವಿಧಾನಗಳಲ್ಲಿ ಬಂದವರೊಂದಿಗೆ ಸಂವಾದ ನಡೆಸಿ ಆತಂಕಕ್ಕೆ ಕಾರಣವಿಲ್ಲದಂತೆ ಸಮಗ್ರ ಮಾಹಿತಿ ನೀಡುವ ಯಾವ ಪ್ರಯತ್ನವನ್ನೂ ಸ್ಥಳೀಯ ಪೊಲೀಸ್‌ ವ್ಯವಸ್ಥೆ ಮಾಡಿಲ್ಲ. ಘಟನೆಯ ಕುರಿತು ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಮತ್ತು ಭರವಸೆ ದೊರೆಯದ ಸನ್ನಿವೇಶದಲ್ಲಿ, ಇನ್ನೂ ಹೆಚ್ಚಿನ ಆತಂಕ ಈ ವಿಚಾರದಲ್ಲಿ ಸಮಾಜದಲ್ಲಿ ಉಂಟಾಯಿತು. ಇದರಿಂದಾಗಿ ಕೆಲವು ಸಾಮಾಜಿಕ ಜಾಲತಾಣಿಗರು ತಮ್ಮ ಊಹೆಗೆ ತಕ್ಕಂತೆ ಸುದ್ದಿಗಳನ್ನು ಹರಿಬಿಡುವುದಕ್ಕೂ ಆಸ್ಪದವಾಯಿತು. ನೇರವಾಗಿ ಪೊಲೀಸರಿಂದಲೇ ಒತ್ತಾಸೆ ದೊರೆಯದಿದ್ದುದೇ ಈ ಮರು ತನಿಖೆ ಒತ್ತಾಯಿಸುತ್ತಿರುವುದಕ್ಕೆ ಕಾರಣವೆಂದು ಮಲ್ಲಿಗೆಯವರು ತಿಳಿಸಿದ್ದಾರೆ.

ಬಾಲಕಿಗೆ ನಿಜವಾಗಿಯೂ ರೈಲು ಡಿಕ್ಕಿ ಹೊಡೆದಿದ್ದರೆ, ಜಾನುವಾರುಗಳಿಗೆ ಡಿಕ್ಕಿ ಹೊಡೆದರೂ ಸಹ ಕೂಡಲೇ ರೈಲು ಚಾಲಕರು ಸಲ್ಲಿಸುವ ಘಟನೆ/ಅಪಘಾತ ವರದಿ ಇದೆಯೇ? ಇಂತಹ ಘಟನೆಗಳ ನಂತರ ಆರ್‌ಪಿಎಫ್‌ನಿಂದ ನಡೆಯುವ ಆರಂಭಿಕ ತನಿಖೆ ಏಕೆ ನಡೆಸಲಾಗಿಲ್ಲ? ಅವರು ಹಂಚಿಕೊಂಡ ಆ ದೃಶ್ಯಾವಳಿಗಳ ಸತ್ಯಾಸತ್ಯತೆ ಏನು – ವಿಧಿವಿಜ್ಞಾನ ಪರೀಕ್ಷೆಯ ಪ್ರಕ್ರಿಯೆಯ ಮೂಲಕ ಅದನ್ನು ಪರಿಶೀಲಿಸಲಾಗಿದೆಯೇ? ಯಾವ ಹಂತದಲ್ಲಿ ಮತ್ತು ಏಕೆ ಈ ದೃಶ್ಯಾವಳಿಗಳನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು? ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ಸ್ಥಳೀಯ ಪೊಲೀಸರು ತನಿಖೆ ನಡೆಸಿದರು, ಆರ್‌ಪಿಎಫ್ ಅಲ್ಲ ಎಂದು ಸ್ಪಷ್ಟಪಡಿಸಿದರು. ಏಕೆಂದರೆ ಘಟನೆಯ ಬಗ್ಗೆ ಸುದ್ದಿ ಹರಡಿ ಅಷ್ಟರಲ್ಲಾಗಲೇ ಕೊಲೆ ಮತ್ತು ಲೈಂಗಿಕ ದೌರ್ಜನ್ಯ ಎಂದು ಸಾಮಾಜಿಕ ಮಾಧ್ಯಮ ವರದಿಗಳು ಬಂದಿದ್ದರಿಂದ ಅದಕ್ಕೆ ಪ್ರತಿಕ್ರಿಯೆಯಾಗಿ ತಾವು ಹಾಗೆ ಮಾಡಿದ್ದೇವೆ ಎಂದು ಹೇಳಿದರು. ಅಂದರೆ ಇದು ಸಾಮಾಜಿಕ ಅಭಿಪ್ರಾಯಕ್ಕೆ ಪ್ರತಿಕ್ರಿಯೆಯೇ ಹೊರತು ಅವರು ಸ್ವತಃ ಮನವರಿಕೆ ಮಾಡಿಕೊಂಡಿದ್ದಲ್ಲ. ಈ ಆತುರದ ಪ್ರತಿಕ್ರಿಯೆಯ ಬದಲಿಗೆ, ಅವರು ಆಪಾದಿತ ಅಪರಾಧವೆಂದು ತನಿಖೆ ಮಾಡುವ ಮೊದಲು ರೈಲ್ವೆ ಪೊಲೀಸರು ಅಪಘಾತದ ತಮ್ಮ ತನಿಖೆಯನ್ನು ಮುಕ್ತಾಯಗೊಳಿಸಲು ಕಾಯುತ್ತಿದ್ದೇವೆ ಎಂದು ಏಕೆ ಹೇಳಬಾರದಿತ್ತು? ಎಂದು ವೇದಿಕೆಯು ಪ್ರಶ್ನಿಸಿದೆ.

ಮೊದಲ ಎಫ್‌ಐಆರ್‌ ಮೇ 11ರ ಮಧ್ಯರಾತ್ರಿ 1:00 ಗಂಟೆಗೆ ತಾಯಿ ಮತ್ತು ಕುಟುಂಬದವರು ಬಿಡದಿ ಪೊಲೀಸ್‌ ಠಾಣೆಗೆ ಹೋಗಿ ಮಗಳು ಕಾಣುತ್ತಿಲ್ಲ ಎಂದಾಗಲೇ ದಾಖಲಾಗಬೇಕಿತ್ತು, ಅದನ್ನು ಮಾಡದಿರುವುದು ನೋಡಿದರೆ, ಕಿವಿ ಕೇಳದ ಮಾತನಾಡಲು ಬಾರದ ಹದಿಹರೆಯದ ಹೆಣ್ಣುಮಗುವೊಂದು ಕಾಣೆಯಾಗಿದೆ ಎಂಬ ವಿಚಾರವನ್ನು ತುರ್ತು ಆದ್ಯತೆಯಲ್ಲಿ ಪರಿಗಣಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಆ ನಂತರ, 12ರ ಬೆಳಿಗ್ಗೆ ದಾಖಲಿಸಿದ ಎಫ್‌ಐಆರ್‌ನಲ್ಲೂ ಕೂಡಾ ಮಗಳು ಅಸಹಜವಾಗಿ ಸಾವನ್ನಪ್ಪಿದ್ದಾಳೆ ಮತ್ತು ಸಾವಿನ ಬಗ್ಗೆ ಶಂಕೆ ಇದೆ ಎಂದು ತಾಯಿ ಹೇಳಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಮುಖ ವಿವರಗಳಿಲ್ಲ. ಹಿಂದಿನ ಸಂಜೆಯಿಂದ ಅವಳು ಕಾಣೆಯಾಗಿದ್ದಳು, ರಾತ್ರಿ ಕುಟುಂಬದವರು ಠಾಣೆಗೆ ಹೋಗಿದ್ದರು, ಬೆಳಿಗ್ಗೆ ದೇಹವು ಪತ್ತೆಯಾದ ಸ್ಥಿತಿ, ಹರಿದ ಬಟ್ಟೆಗಳು, ದೇಹದ ಮೇಲೆ ಕಂಡ ಗಾಯದ ಗುರುತುಗಳು ಇತ್ಯಾದಿ ವಿವರಗಳನ್ನು ಉಲ್ಲೇಖಿಸಲಾಗಿಲ್ಲ. ಇಂತಹ ಲೋಪಗಳು ಏಕೆ ಸಂಭವಿಸಿದವು? ಇದಕ್ಕೆ ಹೊಣೆಗಾರರು ಯಾರು? ನಂತರದಲ್ಲಾದರೂ ಈ ಎಲ್ಲಾ ಅಂಶಗಳನ್ನು ಹೆಚ್ಚುವರಿ ಹೇಳಿಕೆಯಲ್ಲಿ ಅಥವಾ ಹೊಸ ಎಫ್‌ಐಆರ್‌ನಲ್ಲಿ ಕುಟುಂಬದವರು ಮತ್ತು ಕಣ್ಣಸಾಕ್ಷಿಗಳು ಹೇಳಿದಂತೆ ಸೇರಿಸಲಾಗಿದೆಯೇ? ಆದ್ದರಿಂದ, ನೊಂದ ಕುಟುಂಬಕ್ಕೆ ಅಲೆಮಾರಿ ಆದಿವಾಸಿಗಳೆಂಬ ಮಾನದಂಡದ ಅಡಿಯಲ್ಲಿ ಪರಿಹಾರ ನೀಡಿದ ನಂತರವಾದರೂ ಪೊಲೀಸರು ತಕ್ಷಣವೇ ಈ ಹೆಚ್ಚುವರಿ ಆರೋಪಗಳನ್ನು ಸಹ ದಾಖಲಿಸಿರಬೇಕಿತ್ತು ಎಂದು ಹೇಳಿಕೆಯಲ್ಲಿ ಮಲ್ಲಿಗೆಯವರು ಪ್ರಶ್ನಿಸಿದ್ದಾರೆ.

ದೇಹವು ಕಂಡುಬಂದ ಸ್ಥಿತಿಯ ಬಗ್ಗೆ ಕುಟುಂಬ ಮತ್ತು ಸಾರ್ವಜನಿಕರು ಆರಂಭದಲ್ಲೇ ಸ್ಪಷ್ಟವಾದ ಹೇಳಿಕೆಗಳನ್ನು ನೀಡಿದ್ದಾರೆ. ಕಚ್ಚಿದ ಗುರುತುಗಳು, ಸಿಗರೇಟ್ ಸುಟ್ಟ ಗುರುತುಗಳು ಸೇರಿದಂತೆ ಕಂಡುಬಂದ ವಿವಿಧ ರೀತಿಯ ಗಾಯಗಳ ಬಗ್ಗೆ ಕಣ್ಣು ಸಾಕ್ಷಿಗಳ ವರದಿಗಳನ್ನು ಹಲವು ವಿಡಿಯೋಗಳಲ್ಲಿ ಗಮನಿಸಬಹುದು. ವಾಸ್ತವವಾಗಿ, ಎಲ್ಲಾ ಛಾಯಾಚಿತ್ರಗಳಲ್ಲಿ ಅವಳ ಖಾಸಗಿ ಭಾಗಗಳು ಭಾಗಶಃ ಬಹಿರಂಗಗೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ, ಅವಳ ಹರಿದ ಶಾರ್ಟ್ಸ್‌ನೊಂದಿಗೆ ಅವಳ ದೇಹದ ಮೇಲಿನ ಅರ್ಧಭಾಗವನ್ನು ಮುಚ್ಚುವ ಟಿ-ಶರ್ಟ್‌ಗೆ ಪಿನ್ ಹಾಕಲಾಗಿತ್ತು. ಇದನ್ನು ಮರಣೋತ್ತರ ಪರೀಕ್ಷಾ ವರದಿ ಸಂಪೂರ್ಣವಾಗಿ ಪರಿಗಣಿಸಿದೆಯೇ? ಆದರೆ ಈ ವರದಿ ಇದ್ಯಾವುದನ್ನೂ ಉಲ್ಲೇಖಿಸುವುದಿಲ್ಲ. ಪೊಲೀಸರ ತರ್ಕದಲ್ಲಿ ದೇಹದ ಮೇಲಿರುವ ಗಾಯಗಳು ಮತ್ತು ಗಾಯದ ಗುರುತುಗಳು ಇನ್ನೂ ವಿವರಿಸಲ್ಪಟ್ಟಿಲ್ಲ, ಹಾಗೆಯೇ ಬಟ್ಟೆಗಳು ಅಸ್ತವ್ಯಸ್ತವಾಗಿ ಕಂಡುಬಂದ ದೇಹದ ಸ್ಥಿತಿಗೂ ಕೂಡಾ ಕಾರಣವೇನೆಂಬುದನ್ನು ಹೇಳಿಲ್ಲ. ಇದಕ್ಕೆ ಆಳವಾದ ತನಿಖೆ ಅಗತ್ಯವಿದೆ. ಅಥವಾ ಪೊಲೀಸರು ಈಗಾಗಲೇ ತನಿಖೆ ನಡೆಸಿದ್ದರೆ, ತನಿಖಾಧಿಕಾರಿ ಮತ್ತು ಸ್ಥಳ ಮಹಜರು ನಡೆಸಿದ ಇತರರು ಈ ಬಗ್ಗೆ ಏನು ಹೇಳುತ್ತಾರೆ? ಆ ಮಾಹಿತಿಯನ್ನು ಸಾರ್ವಜನಿಕರ ಕಾಳಜಿಗಳನ್ನು ಪರಿಹರಿಸುವಂತೆ ನೀಡಬೇಕಲ್ಲವೇ? ಎಂದು ಅವರು ಹೇಳಿಕೆ ನೀಡಿದ್ದಾರೆ.

ಪ್ರಕರಣದಲ್ಲಿ ಎಫ್‌ಎಸ್‌ಎಲ್ ವರದಿಯನ್ನು ಒಂದು ವಾರದೊಳಗೆ ಬಿಡುಗಡೆ ಮಾಡಲಾಗಿದೆ, ಇದು ಪ್ರಕ್ರಿಯೆಯನ್ನು ಆತುರವಾಗಿ ಮತ್ತು ಅವಸರದಿಂದ ಪ್ರಾರಂಭಿಸಲಾಗಿದೆಯೇ ಎಂಬ ಕಳವಳವನ್ನು ಹೆಚ್ಚಿಸುತ್ತದೆ. ಅತ್ಯಾಚಾರ ನಡೆದಿಲ್ಲ ಎಂದು ಹೇಳುವ ಎಫ್‌ಎಸ್‌ಎಲ್ ವರದಿಯನ್ನು ಮರಣೋತ್ತರ ಪರೀಕ್ಷಾ ವರದಿಯೊಂದಿಗೆ ಓದದೆ ಕೂಡಲೇ ಬಿಡುಗಡೆ ಮಾಡಿರುವುದು ಅಸ್ವಾಭಾವಿಕ ಎನಿಸಲು ಅವಕಾಶವಿದೆ, ಈ ಅವಸರ ಏಕೆ? ಎಫ್‌ಎಸ್‌ಎಲ್ ವರದಿಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆಯೇ? ಪಿಎಂ ವರದಿಗೆ ಮುಂಚಿತವಾಗಿ ಎಫ್‌ಎಸ್‌ಎಲ್ ವರದಿಯನ್ನು ಪಡೆಯಲು ಮತ್ತು ಅದನ್ನಾಧರಿಸಿ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಲು ಪೊಲೀಸರನ್ನು ಪ್ರೇರೇಪಿಸಿದ ಸಂದರ್ಭಗಳು ಯಾವುವು? ಎಂದು ಹೇಳಿಕೆಯಲ್ಲಿ ಪ್ರಶ್ನಿಸಲಾಗಿದೆ.

ಪೊಲೀಸರು ಸಾರ್ವಜನಿಕರು ಮತ್ತು ಸಂಸ್ಥೆಗಳನ್ನು ನಡೆಸಿಕೊಳ್ಳುವಾಗ ಹೆಚ್ಚು ಗೌರವಾನ್ವಿತ ಮತ್ತು ಪ್ರಜಾತಾಂತ್ರಿಕ ವಿಧಾನವನ್ನು ಏಕೆ ಅಳವಡಿಸಲಿಲ್ಲ? ಈ ಘಟನೆಯ ಬಗ್ಗೆ ಆತಂಕ, ಕಾಳಜಿಯಿಂದ ಮಾಹಿತಿ ಪಡೆಯಲು ಬಂದ ಸಂಘ-ಸಂಸ್ಥೆಗಳೊಂದಿಗೆ ಅಗೌರವದಿಂದ ನಡೆದುಕೊಳ್ಳಲಾಗಿದೆ, ಕೆಲವರಿಗೆ ನೀಡಲಾದ ಕಿರುಕುಳ ಅಸಹನೀಯವಾಗಿದೆ. ಪೊಲೀಸರು ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಅಗತ್ಯ ಮಾಹಿತಿಯನ್ನು ಕುಟುಂಬ ಮತ್ತು ಸಾರ್ವಜನಿಕರಿಗೆ ಮುಕ್ತ ಮತ್ತು ಪಾರದರ್ಶಕ ರೀತಿಯಲ್ಲಿ ಲಭ್ಯವಾಗುವಂತೆ ಮಾಡಬೇಕಲ್ಲವೇ?. ಹಾಗೆಯೇ, ಬೇಜವಾಬ್ದಾರಿ ಮಾಧ್ಯಮ ವರದಿಗಾರಿಕೆಯನ್ನು ನಿಗ್ರಹಿಸುವ ಹೆಸರಿನಲ್ಲಿ, ಪೊಲೀಸರು ಸಮುದಾಯದ ಮೇಲೆ ನಿರ್ಬಂಧ ಹೇರಿ, ಸಂಬಂಧಪಟ್ಟ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸೇರಿದಂತೆ ಸಾಮಾನ್ಯ ಸಾರ್ವಜನಿಕರೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ ಎಂದು ನಮಗೆ ತಿಳಿದುಬಂದಿದೆ. ಈ ಎಲ್ಲಾ ಲೋಪದೋಷಗಳು ಆಳವಾದ ದೋಷಪೂರಿತ ಮತ್ತು ಅಪಾರದರ್ಶಕ ತನಿಖೆಯನ್ನು ಸೂಚಿಸುತ್ತವೆ. ಈ ಎಲ್ಲ ಹಿನ್ನೆಲೆಯಲ್ಲಿ ಈ ಇಡೀ ಪ್ರಕರಣದ ಸಂಪೂರ್ಣ ಸ್ವತಂತ್ರ ಮರುತನಿಖೆಯನ್ನು ನಾವು ಆಗ್ರಹಿಸುತ್ತಿದ್ದೇವೆ. ಉನ್ನತ ಪೊಲೀಸ್‌ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರದ ಗೃಹ ಇಲಾಖೆ ಇದನ್ನು ಕೂಡಲೇ ಪರಿಗಣಿಸಿ ಸ್ವತಂತ್ರ ಮರುತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ‘ನಾವೆದ್ದು ನಿಲ್ಲದಿದ್ದರೆ’ ವೇದಿಕೆ ತಿಳಿಸಿದೆ.

ಮೂಕ-ಕಿವಿ ಕೇಳದ ಅಕ್ಕಿಪಿಕ್ಕಿ ಸಮುದಾಯದ ಬಾಲಕಿ ಅಪಹರಿಸಿ ಕೊಲೆ; ಪೋಷಕರಿಂದ ಅತ್ಯಾಚಾರ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...