ಈ ಬಾರಿಯ ಬಿಹಾರ ವಿಧಾನಸಭೆ ಚುನಾವಣೆಯು ಮೋದಿ ಸರ್ಕಾರದ ‘ಭ್ರಷ್ಟ’ ಮತ್ತು ‘ಅಸಮರ್ಥ’ ಆಡಳಿತದ ಅಂತ್ಯದ ಆರಂಭ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ (ಸೆ.24) ಹೇಳಿದರು.
ಪಾಟ್ನಾದಲ್ಲಿ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಬಿಹಾರದ ರಾಜಕೀಯ ಸನ್ನಿವೇಶದ ಕುರಿತು ಪ್ರತಿಕ್ರಿಯಿಸಿದ ಖರ್ಗೆ ಅವರು, ಆಡಳಿತಾರೂಢ ಎನ್‌ಡಿಎಯೊಳಗಿನ ಬಿರುಕನ್ನು ಎತ್ತಿ ತೋರಿಸಿದರು. ಆಂತರಿಕ ಕಲಹ ಈಗ ಬಹಿರಂಗವಾಗಿದೆ ಎಂದರು.
ಬಿಜೆಪಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ನೋಡುತ್ತಿದೆ. ಬಿಹಾರದ ಜನರು ಬಿಜೆಪಿಯ ವಿಭಜಕ ಕಾರ್ಯಸೂಚಿಯನ್ನು ತಿರಸ್ಕರಿಸುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬೇಕು, ಧಾರ್ಮಿಕ ಧ್ರುವೀಕರಣವಲ್ಲ ಎಂದು ಖರ್ಗೆ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಖರ್ಗೆ ಅವರು, ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ರಂಗಗಳಲ್ಲಿ ಇವರು ದೇಶವನ್ನು ವಿಫಲಗೊಳಿಸಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ನಾಯಕರನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಭಾರತವು ಅತ್ಯಂತ ಸವಾಲಿನ ಅವಧಿಯನ್ನು ಎದುರಿಸುತ್ತಿದೆ, ರಾಜತಾಂತ್ರಿಕ ತಪ್ಪು ಹೆಜ್ಜೆಗಳು ಮತ್ತು ದೇಶೀಯ ಪ್ರಕ್ಷುಬ್ಧತೆಗಳು ಮೋದಿ ಅವಧಿಯಲ್ಲಿ ‘ಆಡಳಿತದ ಸಂಪೂರ್ಣ ವೈಫಲ್ಯ’ವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಮಸ್ಯೆಗಳು ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ರಾಜತಾಂತ್ರಿಕ ವೈಫಲ್ಯದ ಪರಿಣಾಮವಾಗಿದೆ. ಪ್ರಧಾನಿಯವರು ‘ನನ್ನ ಸ್ನೇಹಿತ’ ಎಂದು ಹೆಮ್ಮೆಪಟ್ಟವರು ಇಂದು ಭಾರತವನ್ನು ಹಲವು ಸಮಸ್ಯೆಗಳಿಗೆ ಸಿಲುಕಿಸುತ್ತಿದ್ದಾರೆ ಎಂದರು.
ಇಂದು, ನಮ್ಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ತಿರುಚುತ್ತಿರುವಾಗ, ಪ್ರಜಾಪ್ರಭುತ್ವದ ತಾಯಿಯಾದ ಬಿಹಾರದಲ್ಲಿ ನಮ್ಮ ವಿಸ್ತೃತ ಸಿಡಬ್ಲ್ಯೂಸಿ ಸಭೆಯನ್ನು ನಡೆಸುವುದು ಮತ್ತು ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ನಮ್ಮ ಪ್ರತಿಜ್ಞೆಯನ್ನು ಪುನರುಚ್ಚರಿಸುವುದು ಅತ್ಯಗತ್ಯ ಎಂದು ಖರ್ಗೆ ಹೇಳಿದರು.
ಪ್ರಜಾಪ್ರಭುತ್ವದ ಅಡಿಪಾಯ ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆಗಳು ಎಂದು ಪ್ರತಿಪಾದಿಸಿದ ಖರ್ಗೆ, ಚುನಾವಣಾ ಆಯೋಗದ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ಬಗ್ಗೆ ಇಂದು ಗಂಭೀರ ಪ್ರಶ್ನೆಗಳು ಎದ್ದಿವೆ ಎಂದರು.
ವಿವಿಧ ರಾಜ್ಯಗಳಲ್ಲಿ ಬಹಿರಂಗಗೊಂಡಿರುವ ಮತಗಳ್ಳತನ ಕುರಿತ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಚುನಾವಣಾ ಆಯೋಗವು ನಮ್ಮಿಂದ ಅಫಿಡವಿಟ್ ಕೇಳುತ್ತಿದೆ ಎಂದು ಖರ್ಗೆ ಕಿಡಿಕಾರಿದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಉಲ್ಲೇಖಿಸಿದ ಖರ್ಗೆ, “ಬಿಹಾರದ ಉದಾಹರಣೆಯನ್ನು ಮುಂದಿಟ್ಟುಕೊಂಡು ಈಗ ದೇಶದಾದ್ಯಂತ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
‘ಮತಗಳ್ಳತನ’ ಎಂದರೆ ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದುರ್ಬಲರು ಮತ್ತು ಬಡವರಿಗೆ ಸೇರಿದ ಪಡಿತರ, ಪಿಂಚಣಿ, ಔಷಧ, ಮಕ್ಕಳ ವಿದ್ಯಾರ್ಥಿವೇತನ ಮತ್ತು ಪರೀಕ್ಷಾ ಶುಲ್ಕದ ಕಳ್ಳತನ ಎಂದು ಖರ್ಗೆ ಹೇಳಿದರು.
‘ಮತದಾರರ ಅಧಿಕಾರ ಯಾತ್ರೆ’ ಬಿಹಾರದ ಜನರಲ್ಲಿ ಜಾಗೃತಿ ಮೂಡಿಸಿದೆ. ಜನರು ರಾಹುಲ್ ಗಾಂಧಿಯವರನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ ಎಂದು ಎಂದರು.
ಹೆಚ್ಚುತ್ತಿರುವ ನಿರುದ್ಯೋಗ, ಸಾಮಾಜಿಕ ಧ್ರುವೀಕರಣ ಮತ್ತು ಸಾಂವಿಧಾನಿಕ ಸಂಸ್ಥೆಗಳ ವ್ಯವಸ್ಥಿತ ದುರ್ಬಲಗೊಳಿಸುವಿಕೆಯ ಬಿಕ್ಕಟ್ಟುಗಳನ್ನು ಎತ್ತಿ ತೋರಿಸಿದ ಖರ್ಗೆಮ, ಮೋದಿ ಸರ್ಕಾರವು ತನ್ನ ರಾಜಕೀಯ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು.
ತೀವ್ರಗೊಂಡ ‘ಲಡಾಖ್ ರಾಜ್ಯತ್ವ’ ಹೋರಾಟ: ಲೇಹ್‌ನಲ್ಲಿ ಬೀದಿಗಿಳಿದ ಯುವಜನತೆ


