ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಕಚ್ಚತೀವು ದ್ವೀಪವನ್ನು ಮರಳಿ ಪಡೆಯಲು ಭಾರತ ಶ್ರಮಿಸುತ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದರು. ಇದರ ಬೆನ್ನಲ್ಲಿ ಶ್ರೀಲಂಕಾ ವಿದೇಶಾಂಗ ಸಚಿವಾಲಯವು ದ್ವೀಪವು ತನ್ನ ನಿಯಂತ್ರಣದಲ್ಲಿದೆ ಎಂದು ಸಮರ್ಥಿಸಿಕೊಂಡಿದೆ, ಆದರೆ ಬಿಜೆಪಿ ಹೇಳುವಂತೆ ಶ್ರೀಲಂಕಾದ ಭಾಗವಾಗಿರುವ ಕಚ್ಚತೀವು ದ್ವೀಪವನ್ನು ಭಾರತಕ್ಕೆ ಪಡೆಯಲು ಸಾಧ್ಯವಿಲ್ಲ ಎನ್ನುವುದು ವಾಸ್ತವವಾಗಿದೆ.
ತಮಿಳುನಾಡು ದಿವಂಗತ ಮುಖ್ಯಮಂತ್ರಿ ಕರುಣಾನಿಧಿ ಅವರ ಒಪ್ಪಿಗೆಯ ಮೇರೆಗೆ ಶ್ರೀಲಂಕಾಕ್ಕೆ ಕಚ್ಚತೀವು ನೀಡಲಾಗಿದೆ. ಈಗ ಬಿಜೆಪಿಯು ಕಚ್ಚತೀವು ವಾಪಸ್ ಪಡೆಯುವಂತೆ ಬಿಜೆಪಿ ವಿದೇಶಾಂಗ ಸಚಿವ ಜೈಶಂಕರ್‌ಗೆ ಪತ್ರ ನೀಡಿದೆ. ಅದನ್ನು ಭಾರತಕ್ಕೆ ವಾಪಸ್ ತರಬೇಕು, ಇದು ನಮ್ಮ ನಿಲುವು. ಕೇಂದ್ರ ಮೀನುಗಾರರ ರಕ್ಷಣೆಗಾಗಿ ಕಚ್ಚತೀವು ಮರಳಿ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಶ್ರೀಲಂಕಾದ ಸಚಿವ ಜೀವನ್ ಥೋಂಡಮನ್ ಅವರು ಕಚ್ಚತೀವು ಬಗ್ಗೆ ಭಾರತ ಅಧಿಕೃತ ಸಂವಹನ ನಡೆಸಿರುವ ಬಗ್ಗೆ ನಿರಾಕರಿಸಿದ್ದಾರೆ, ಕಚ್ಚತೀವು ದ್ವೀಪವು ಶ್ರೀಲಂಕಾದ ಭಾಗವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಶ್ರೀಲಂಕಾಕ್ಕೆ ಸಂಬಂಧಿಸಿದಂತೆ ಕಚ್ಚತೀವು ದ್ವೀಪವು ಶ್ರೀಲಂಕಾದ ನಿಯಂತ್ರಣ ರೇಖೆಯೊಳಗೆ ಬರುತ್ತದೆ. ಇಲ್ಲಿಯವರೆಗೆ ಕಚ್ಚತೀವು ದ್ವೀಪದ ಅಧಿಕಾರವನ್ನು ಹಿಂದಿರುಗಿಸಲು ಭಾರತದಿಂದ ಅಧಿಕೃತ ಸಂವಹನ ನಡೆದಿಲ್ಲ. ಅಂತಹ ಸಂವಹನವಿದ್ದರೆ, ವಿದೇಶಾಂಗ ಸಚಿವಾಲಯ ಅದಕ್ಕೆ ಉತ್ತರ ನೀಡಲಿದೆ ಎಂದು ಜೀವನ್ ಥೋಂಡಮಾನ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದರು. ರಾಷ್ಟ್ರೀಯ ಗಡಿಗಳನ್ನು ಕಾಯ್ದುಕೊಳ್ಳುವ ಕುರಿತು ಜೀವನ್ ತೊಂಡಮಾನ್ ಅವರ ಹೇಳಿಕೆಗಳ ಬೆನ್ನಲ್ಲಿ ಶ್ರೀಲಂಕಾದ ಮತ್ತೋರ್ವ ಸಚಿವರು ಇಚ್ಛೆಯಂತೆ ಇದನ್ನು ಬದಲಾಯಿಸಲಾಗುವುದಿಲ್ಲ ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಕಚ್ಚತೀವು ಶ್ರೀಲಂಕಾದ ನಿಯಂತ್ರಣ ರೇಖೆಯೊಳಗೆ ಔಪಚಾರಿಕವಾಗಿ ಗುರುತಿಸಲ್ಪಟ್ಟಿದೆ. ಗಡಿಯನ್ನು ನಿರ್ಧರಿಸಿದ ನಂತರ ಸರ್ಕಾರದ ಬದಲಾವಣೆಯ ಕಾರಣಕ್ಕಾಗಿ ಯಾರೂ ಕೂಡ ಭೂಭಾಗದ ಬದಲಾವಣೆಗೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಅಣ್ಣಾಮಲೈ ಹೊರತುಪಡಿಸಿ, ಮತ್ತೊಬ್ಬ ಬಿಜೆಪಿ ನಾಯಕ ಕೂಡ ಕಚ್ಚತೀವು ದ್ವೀಪದಲ್ಲಿ ಬಿಜೆಪಿ ನಾಯಕತ್ವ ಪ್ರಮುಖ ಘೋಷಣೆ ಮಾಡಲಿದೆ ಎಂದು ಹೇಳಿದ್ದರು.
ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಉಲ್ಭಣಗೊಂಡ ಈ ವಿವಾದವು ನೆರೆಯ ರಾಷ್ಟ್ರದೊಂದಿಗೆ ಭಾರತದ ಸಂಬಂಧವನ್ನು “ಹಾನಿ”ಗೊಳಿಸುವುದೇ ಎಂಬ ಪ್ರಶ್ನೆ? ಉದ್ಭವಿಸಿದೆ. ಇದಕ್ಕೆ ಮಾಜಿ ರಾಜತಾಂತ್ರಿಕ ಕೆಸಿ ಸಿಂಗ್ ಪ್ರತಿಕ್ರಿಯಿಸಿ ಜೈಶಂಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೈಶಂಕರ್ ಅವರ ಹೇಳಿಕೆ ಭಾರತವು ದೇಶೀಯ ರಾಜಕೀಯದಲ್ಲಿ ಕಚ್ಚತೀವು ವಿಚಾರವನ್ನು ಮುನ್ನೆಲೆಗೆ ತರವುದರಿಂದ ಶ್ರೀಲಂಕಾದೊಂದಿಗಿನ ಭಾರತದ ರಾಜತಾಂತ್ರಿಕ ಸಂಬಂಧವನ್ನು ಹದಗೆಡಿಸುತ್ತದೆ. ಜೈಶಂಕರ್ ಅವರಂತಹ ಅನುಭವಿ ರಾಜಕಾರಣಿ ಈ ರಿತಿ ಪ್ರತಿಕ್ರಿಯಿಸುವುದು ಅವರ ಇಮೇಜ್‌ನ್ನು ಹಾನಿಗೊಳಿಸುತ್ತದೆ. ಇದು ಶ್ರೀಲಂಕಾವನ್ನು ಮಾಲ್ಡೀವ್ಸ್‌ನಂತೆ ಚೀನಾದ ತೆಕ್ಕೆಗೆ ತಳ್ಳಬಹುದು, ಆದರೆ ದಕ್ಷಿಣದಲ್ಲಿ ಬಿಜೆಪಿಗೆ ಸ್ವಲ್ಪ ಲಾಭವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಭಾರತದ ರಾಮೇಶ್ವರಂ ಮತ್ತು ಶ್ರೀಲಂಕಾ ನಡುವಿನ ಪಾಕ್ ಜಲಸಂಧಿಯಲ್ಲಿ 285 ಎಕರೆ ವಿಸ್ತಾರವಾದ ಕಚ್ಚತೀವು ದ್ವೀಪವು ಭಾರತದ ಕರಾವಳಿಯಿಂದ ಸುಮಾರು 33 ಕಿಲೋಮೀಟರ್ ದೂರದಲ್ಲಿದೆ. ಕಚ್ಚತೀವು ಬ್ರಿಟಿಷರ ಕಾಲದಿಂದಲೂ ಭಾರತ ಮತ್ತು ಶ್ರೀಲಂಕಾ ನಡುವೆ ವಿವಾದಿತ ಪ್ರದೇಶವಾಗಿತ್ತು. ಪ್ರಧಾನ ಮಂತ್ರಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು 1974ರ “ಇಂಡೋ-ಶ್ರೀಲಂಕಾದ ಕಡಲ ಒಪ್ಪಂದ”(“Indo-Sri Lankan Maritime Agreement) ಅಡಿಯಲ್ಲಿ ದ್ವೀಪ ರಾಷ್ಟ್ರಕ್ಕೆ ಬಿಟ್ಟುಕೊಡಲು ಒಪ್ಪಿಕೊಂಡಿತು. ಕಚ್ಚತೀವು ಶ್ರೀಲಂಕಾದ ಭಾಗವಾಗಿದೆ.
ಈ ಬಗ್ಗೆ ಅಲಾಡಿ ಗುರುಸ್ವಾಮಿ ಅವರು 2015ರ ಜನವರಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆ ಅರ್ಜಿಗೆ ಅದೇ ಜನವರಿ 27ರಂದು ಉತ್ತರ ನೀಡಿತ್ತು. ಉತ್ತರದಲ್ಲಿ, ‘1974 ಮತ್ತು 1976ರ ಒಪ್ಪಂದಗಳ ಪ್ರಕಾರ ಕಚ್ಚತೀವು ದ್ವೀಪವು ಶ್ರೀಲಂಕಾದ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲಿಯವರೆಗೆ ಆ ದ್ವೀಪವು ಯಾರ ವ್ಯಾಪ್ತಿಗೆ ಸೇರುತ್ತದೆ ಎಂಬುದನ್ನು ಗುರುತಿಸಿರಲೇ ಇಲ್ಲ. ಹೀಗಾಗಿ ಎರಡೂ ದೇಶಗಳ ಮಧ್ಯೆ ಜಲಗಡಿಯನ್ನು ಗುರುತಿಸುವ ಅವಧಿಯಲ್ಲಿ ಭಾರತವು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಅಥವಾ ಸ್ವಾಧೀನಪಡಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವಾಲಯವು ವಿವರಿಸಿತ್ತು. ಜತೆಗೆ ಒಪ್ಪಂದಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಉತ್ತರದೊಂದಿಗೆ ನೀಡಿತ್ತು. ಮೋದಿ ಅವರ ಸರ್ಕಾರದ್ದೇ ಸಚಿವಾಲಯವು ಅಧಿಕೃತವಾಗಿ ನೀಡಿದ್ದ ದಾಖಲೆಗಳ ಪ್ರಕಾರ ಕಚ್ಚತೀವು ದ್ವೀಪವು ಎಂದಿಗೂ ಭಾರತಕ್ಕೆ ಸೇರಿರಲೇ ಇಲ್ಲ ಎನ್ನುವುದು ಬಯಲಾಗುತ್ತದೆ. ಆದ್ದರಿಂದ ಬಿಜೆಪಿಗರು ಈಗ ಹೇಳುವಂತೆ ಕಚ್ಚತೀವು ದ್ವೀಪವನ್ನು ಭಾರತಕ್ಕೆ ಸೇರಿಸುವುದು ಸುಲಭವಲ್ಲ ಎಂದು ಹೇಳಲಾಗಿದೆ.
ಇದನ್ನು ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ: ಎಎಪಿ ನಾಯಕ ಸಂಜಯ್ ಸಿಂಗ್ ಜಾಮೀನು ನೀಡಿದ ಸುಪ್ರೀಂಕೋರ್ಟ್


