ತಮ್ಮ ಮನೆಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಕೇಳಿದ ಹಳ್ಳಿಯ ಗ್ರಾಮಸ್ಥರೊಬ್ಬರಿಗೆ, ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದಾಗಿ ಪ್ರಮಾಣ ಮಾಡುವಂತೆ ಬಿಜೆಪಿ ಶಾಸಕರೊಬ್ಬರು ಕೇಳಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಶಹಜಹಾನ್‌ಪುರದ ಕತ್ರಾ ಅಸೆಂಬ್ಲಿ ಕ್ಷೇತ್ರದ ಬಿಜೆಪಿ ಶಾಸಕ ವೀರ್ ವಿಕ್ರಮ್ ಸಿಂಗ್ (ಪ್ರಿನ್ಸ್), ಹಳ್ಳಿಯೊಂದರಲ್ಲಿ ಮರ ನೆಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡುತ್ತಿದ್ದ ಸಮಯದಲ್ಲಿ ಅಲ್ಲಿದ್ದ ಗ್ರಾಮಸ್ಥರೊಬ್ಬರು ತಮ್ಮ ಮನೆಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಕೋರಿದ್ದಾರೆ. ಆಗ, ಶಾಸಕ ವೀರ್ ವಿಕ್ರಮ್ ಸಿಂಗ್, ನೀವು ಬಿಜೆಪಿ ಪಕ್ಷಕ್ಕೆ ಮತ ಹಾಕಿದ್ದೆ ಎಂದು ಪ್ರಮಾಣ ಮಾಡಿ ಎಂದು ಕೇಳಿದ್ದಾರೆ. ಸೋಮವಾರ ಈ ವಿಡಿಯೊ ವೈರಲ್ ಆಗಿದೆ.
“ಗಂಗಾ ನದಿಯ ಕಡೆಗೆ ಮುಖ ಮಾಡಿ ಅಥವಾ ನಿಮ್ಮ ಮಗನ ಮೂಲಕ ಪ್ರಮಾಣ ಮಾಡಿ, ನೀವು ಬಿಜೆಪಿಗೆ ಮತ ಹಾಕಿದ್ದೀರಿ ಎಂದು ಹೇಳಿ. ಆಗ, ನಾನು ನಿಮ್ಮ ಮನೆಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುತ್ತೇನೆ. ನೀವು ಏನನ್ನಾದರೂ ಕೊಟ್ಟ ವ್ಯಕ್ತಿಯಿಂದ ಮಾತ್ರ ಏನನ್ನಾದರೂ ನಿರೀಕ್ಷಿಸಲು ಸಾಧ್ಯ” ಎಂದಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಭಾರಿ ಮಳೆ, ಸಿಡಿಲಿಗೆ ಮಕ್ಕಳು , ಮಹಿಳೆಯರು ಸೇರಿ 40 ಮಂದಿ ಬಲಿ
ತಾನು ಕೇವಲ ಮನವಿ ಮಾಡುತ್ತಿದ್ದೇನೆ ಎಂದು ಗ್ರಾಮಸ್ಥ ಹೇಳುತ್ತಿದ್ದಂತೆ, ಬಿಜೆಪಿ ಶಾಸಕ, “ನೀವು ಮತ ನೀಡಿರುವ ವ್ಯಕ್ತಿಗೆ ಮನವಿ ಮಾಡಿ. ನೀವು ನನಗೆ ನಿಮ್ಮ ಮತ ನೀಡಿದ್ದರೆ, ನನ್ನನ್ನು ಪ್ರಶ್ನಿಸುವ ಹಕ್ಕು ನಿಮಗೆ ಇರುತ್ತದೆ. ನನ್ನನ್ನು ಯಾಮಾರಿಸಲು ಪ್ರಯತ್ನಿಸಬೇಡಿ. ನನ್ನ ತಂದೆ ನಾಲ್ಕು ಬಾರಿ ಶಾಸಕರಾಗಿದ್ದಾರೆ. ನಾನು ಕೂಡ ಒಬ್ಬ ಶಾಸಕ” ಎಂದು ಹೇಳಿದ್ದಾರೆ.
“ಪ್ರತಿ ಬೂತ್‌ನಲ್ಲಿ ನಾನು ಎಷ್ಟು ಮತಗಳನ್ನು ಪಡೆದಿದ್ದೇನೆ ಎಂಬುದು ನನಗೆ ತಿಳಿದಿಲ್ಲ ಎಂದು ನೀವು ಅಂದುಕೊಂಡಿದ್ದೀರಾ…?, ನೀವು ನನಗೆ ಮತ ಹಾಕಿದ್ದರೇ, ನಾನು ನಿಮ್ಮ ಮನೆಗೆ ದೀಪಗಳನ್ನು ಅಳವಡಿಸದಿದ್ದರೇ ನೀವು ದೂರು ನೀಡಬಹುದಿತ್ತು” ಎಂದು ಶಾಸಕರು ವೀಡಿಯೊದಲ್ಲಿ ಹೇಳಿದ್ದಾರೆ.
ಬಿಜೆಪಿ ಶಾಸಕ ವೀರ್ ವಿಕ್ರಮ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಎಸ್‌ಪಿ ಶಾಸಕ ರಾಜೇಶ್ ಯಾದವ್, “ಚುನಾವಣೆಯಲ್ಲಿ ಜಯಗಳಿಸಿದ ನಂತರ ಒಬ್ಬ ಶಾಸಕರು ಎಲ್ಲರ ಪ್ರತಿನಿಧಿಯಾಗಿರುತ್ತಾರೆ. ಅವರಿಗೆ ಯಾರು ಮತ ಹಾಕಿದ್ದಾರೆ, ಯಾರು ಮತ ಚಲಾಯಿಸಲಿಲ್ಲ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಮತ ರಾಜಕಾರಣದಲ್ಲಿ ಪಾಲ್ಗೊಳ್ಳುವುದು ಮತ್ತು ಜನರು ಪ್ರಮಾಣ ಮಾಡಬೇಕೆಂದು ಕೇಳಿಕೊಳ್ಳುವುದು ಶಾಸಕರಾದವರಿಗೆ ಸರಿಹೊಂದುವುದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಜನಸಂಖ್ಯಾ ಮಸೂದೆ: ‘ಒನ್-ಚೈಲ್ಡ್’ ನೀತಿಯನ್ನು ತೆಗೆದು ಹಾಕುವಂತೆ ವಿಹೆಚ್‌ಪಿ ಒತ್ತಾಯ


