ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷಗಳ ಮುಖಂಡರೊಂದಿಗಿನ ಒಂದು ವಾರದ ಸಮಾಲೋಚನೆಗಾಗಿ ಜುಲೈ 25 ರಂದು ದೆಹಲಿಗೆ ಆಗಮಿಸುತ್ತಿದ್ದಾರೆ. ಈ ಸಮಯದಲ್ಲಿ ಬಂಗಾಳದ ಪ್ರತಿಪಕ್ಷ ನಾಯಕ ಸುವೆಂದು ಅಧಿಕಾರಿ ನೇತೃತ್ವದ ಬಿಜೆಪಿ ಶಾಸಕರು, ರಾಜ್ಯದಲ್ಲಿ ಅರಾಜಕತೆ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟಿಸಲು ಸಜ್ಜಾಗುತ್ತಿದ್ದಾರೆ.
ಜುಲೈ 25 ರಿಂದ ಒಂದು ವಾರದವರೆಗೆ ದೆಹಲಿಗೆ ಭೇಟಿ ನೀಡುವುದಾಗಿ ಮಮತಾ ಗುರುವಾರ ಪ್ರಕಟಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ವಿರೋಧಿ ಒಕ್ಕೂಟವನ್ನು ಕಟ್ಟಲು ಅವರು ತಯಾರಾಗುತ್ತಿದ್ದಾರೆ. ಇದೇ ವೇಳೆ ಬಿಜೆಪಿ ಶಾಸಕರು ದೆಹಲಿಯಲ್ಲಿ ಟಿಎಂಸಿ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ಇದನ್ನೂ ಓದಿ: ಬಂಗಾಳ ಚುನಾವಣೋತ್ತರ ಹಿಂಸಾಚಾರ: ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ ಮಾನವ ಹಕ್ಕುಗಳ ಆಯೋಗ
“ರಾಜ್ಯದಲ್ಲಿನ ಅರಾಜಕತೆಯನ್ನು ಬಹಿರಂಗಪಡಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವರದಿಯ ಅಸ್ತ್ರದೊಂದಿಗೆ ನಮ್ಮ ಪಕ್ಷದ ಬಂಗಾಳದ ಚುನಾಯಿತ ಶಾಸಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ನಾವು ಸಾಮಾನ್ಯ ಜನರ ದುಃಸ್ಥಿತಿಯನ್ನು ಎತ್ತಿ ತೋರಿಸುತ್ತೇವೆ. ಬಂಗಾಳದಲ್ಲಿ ಕಾನೂನಿನ ನಿಯಮದ ಬದಲು ಆಡಳಿತಗಾರರ ಕಾನೂನು ಎಂದು ಆಯೋಗ ಹೇಳಿದೆ. ನಮ್ಮ ಪ್ರತಿಭಟನೆಯು ಆಯೋಗದ ಈ ವರದಿಯನ್ನಿಟ್ಟು ನಡೆಯುತ್ತದೆ” ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಮುಖ್ಯಮಂತ್ರಿ ತನ್ನ ಭೇಟಿಯನ್ನು ಘೋಷಿಸಿದ ಒಂದು ದಿನದ ನಂತರ, ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಶುಕ್ರವಾರ ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ. “ರಾಜ್ಯದ ಮುಖ್ಯಮಂತ್ರಿಯಾಗಿ ಮಮತಾ ಅವರು ತಮ್ಮ ಪಕ್ಷದ ಕಾರ್ಯಕರ್ತರು ನಡೆಸಿದ ಹಿಂಸಾಚಾರದಿಂದ ತನ್ನ ಜನರನ್ನು ರಕ್ಷಿಸುವಲ್ಲಿ ವಿಫಲರಾಗಿರುವುದನ್ನು ನಾವು ಚಿತ್ರಿಸಲಿದ್ದೇವೆ” ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಈ ಮಧ್ಯೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೂಡ ತನಗೆ ಒದಗಿ ಬರುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ನಿರ್ಧರಿಸಿದೆ. ಪಕ್ಷಕ್ಕೆ ಹೊಸದಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ದೆಹಲಿಗೆ ಭೇಟಿ ನೀಡಲಿದ್ದು, ಇಂಧನ ಬೆಲೆ ಏರಿಕೆ ಕುರಿತು ಒಕ್ಕೂಟ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ವಿಧಾನ ಪರಿಷತ್ ರಚಿಸುವ ನಿರ್ಣಯ ಅಂಗೀಕಾರ, ಬಿಜೆಪಿ ತಂತ್ರಕ್ಕೆ ಟಿಎಂಸಿ ಪ್ರತಿತಂತ್ರವೇ?


