Homeಮುಖಪುಟಕೇಂದ್ರ ಸಚಿವ ಸಂಪುಟ ಸರ್ಜರಿಯ ಬಹಿರಂಗ ಮತ್ತು ಅಂತರಂಗ

ಕೇಂದ್ರ ಸಚಿವ ಸಂಪುಟ ಸರ್ಜರಿಯ ಬಹಿರಂಗ ಮತ್ತು ಅಂತರಂಗ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟಕ್ಕೆ ದೊಡ್ಡದೇ ಸರ್ಜರಿ ಮಾಡಿದ್ದಾರೆ. ಬಹುತೇಕ ವರದಿಗಳು ಹೇಗೆ ಮೋದಿ ‘Perform or Perish’ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆಂದೂ, ಸಂಪುಟ ವಿಸ್ತರಣೆಯು ‘Governance and delivery’ಗೆ ಒತ್ತು ನೀಡುತ್ತದೆಂದೂ, ಮೋದಿ ಮಾಡುವ ಇತರೆ ಎಲ್ಲ ಕೆಲಸಗಳಂತೆಯೇ ಹೇಗೆ ಈ ಸಂಪುಟವು ದೇಶದ ಇತಿಹಾಸದಲ್ಲೇ ಓಬಿಸಿ, ದಲಿತ, ಆದಿವಾಸಿ, ಮಹಿಳೆಯರ ಅತಿ ಹೆಚ್ಚು ಪ್ರಾತಿನಿಧ್ಯ ಇರುವ ಸಂಪುಟವಿದೆಂದೂ, ಸರಾಸರಿ ವಯಸ್ಸಿನಲ್ಲಿ ಅತ್ಯಂತ ಕಿರಿಯ ಸಂಪುಟವೆಂದೂ, ಅತಿ ಹೆಚ್ಚು ವೃತ್ತಿಪರರು ಇರುವ ಸಂಪುಟವೆಂದೂ ನೀವು ಓದೇ ಇರುತ್ತೀರಿ.

ಸರ್ಕಾರವು ಸಂಪುಟ ವಿಸ್ತರಣೆಯ ದಿನ ಎಲ್ಲ ಮಾಧ್ಯಮಗಳಿಗೆ ಅನಧಿಕೃತವಾದ ಒಂದು ಟಿಪ್ಪಣಿಯನ್ನು ನೀಡಿತು. ಇದು ಎಂದಿನ ವಾಡಿಕೆಯೇ, ಹೊಸತೇನೂ ಅಲ್ಲ. ಸಂಪುಟ ವಿಸ್ತರಣೆಯ ಈ ಎಲ್ಲ ‘ವಿಶ್ಲೇಷಣೆ’ಯ ಮೂಲ ಇದೇ ಟಿಪ್ಪಣಿ. ಅಲ್ಲಿಗೆ ಇದು ಸ್ವತಃ ಬಿಜೆಪಿಯದೇ ವಿಶ್ಲೇಷಣೆ. ಅದನ್ನು ನಮ್ಮ ಬಹುತೇಕ ಮಾಧ್ಯಮಗಳು ತಮ್ಮದೇ ವಿಶ್ಲೇಷಣೆ ಎಂಬಂತೆ ವರದಿ ಮಾಡಿ ಇದೇ ವಸ್ತುನಿಷ್ಠ ಸತ್ಯ ಎಂಬಂತೆ ಬಿಂಬಿಸಲು ಹೊರಟಿರುವುದು ಇತ್ತೀಚೆಗೆ ಎನ್.ಎಸ್. ಶಂಕರ್ ಅವರು ಮಾಧ್ಯಮವನ್ನು ’ರಾಜನರ್ತಕಿ’ ಎಂದು ಬಣ್ಣಿಸಿರುವುದಕ್ಕೆ ತಕ್ಕುದಾಗಿಯೇ ಇದೆ. ದಿ ಹಿಂದೂ ಪತ್ರಿಕೆ ಮತ್ತು ಎನ್‌ಡಿಟಿವಿಯಂತಹ ಕೆಲವು ಮುಖ್ಯವಾಹಿನಿ ಮಾಧ್ಯಮಗಳು ಮಾತ್ರ ಈ ವಿಶ್ಲೇಷಣೆಯನ್ನು ಸರ್ಕಾರದ ಮೂಲಗಳಿಗೆ ಆಪಾದಿಸಿ, ಅದರ ಸತ್ಯಾಸತ್ಯತೆಯ ಬಗ್ಗೆ ಚರ್ಚೆ ಕೈಗೆತ್ತಿಕೊಂಡಿತು. ಈ ಅನಧಿಕೃತ ಟಿಪ್ಪಣಿಯಲ್ಲಿ ಮೊದಲ ಬಾರಿಗೆ ನೂತನ ಸಚಿವರ ಜಾತಿ, ಉಪಜಾತಿಗಳ ಪಟ್ಟಿಯನ್ನು ಕೂಡಾ ನಮೂದಿಸಲಾಗಿತ್ತು.

ಈ ಟಿಪ್ಪಣಿಯನ್ನು ಎನ್‌ಡಿಟಿವಿಯ ಸುದ್ದಿವಾಚಕರು ಬಹಿರಂಗವಾಗಿಯೇ ಓದಿ ಅದನ್ನು ಪ್ರಶ್ನಿಸುತ್ತಿದ್ದರು. ದಿ ಹಿಂದೂ ಪತ್ರಿಕೆಯ ಓದುಗರ ಸಂಪಾದಕ ಪನ್ನೀರ್ ಸೆಲ್ವಂಅವರು ತಮ್ಮ ವಾರದ ಅಂಕಣದಲ್ಲಿ, ಆಳುವ ಸರ್ಕಾರಗಳು ಹೇಗೆ ಗೌಪ್ಯತೆಯನ್ನು ಒಂದು ಅಸ್ತ್ರವಾಗಿ ಮಾಡಿಕೊಳ್ಳುತ್ತವೆ ಎಂದು ವಿಶ್ಲೇಷಿಸುತ್ತಾ ಸರ್ಕಾರವು ಸಂಪುಟ ವಿಸ್ತರಣೆಯ ಹಿಂದಿನ ಈ ನೀತಿ-ನಿರೂಪಣೆಗಳನ್ನು ಬಹಿರಂಗವಾಗಿಯೇ ಏಕೆ ಹೇಳಲಿಲ್ಲ, ಅದೇಕೆ ದಿ ಹಿಂದೂ ಪತ್ರಿಕೆಯೂ ಸಹ ’ಸರ್ಕಾರದ ಮೂಲಗಳು ಹೇಳಿದರು’ ಎಂದು ಬರೆಯಬೇಕಾಯಿತು ಎಂದು ಪ್ರಶ್ನಿಸಿದರು. ಹಾಗಾಗಿ ಸಂಪುಟ ಸರ್ಜರಿಯ ಬಗ್ಗೆ ಬಿಜೆಪಿಯದೇ ವಿಶ್ಲೇಷಣೆಯನ್ನು ಮೀರಿ ನಾವು ನೋಡಬೇಕಾಗುತ್ತದೆ. ಅದಕ್ಕೆ ಆಳುವ ಪಕ್ಷ ಹೇಳಿಕೊಂಡಿರುವುದನ್ನು ನಿಕಶಕ್ಕೆ ಒಡ್ಡುವುದು ಸರಳ ಮಾರ್ಗ. ಬಹುಬಾರಿ ಸರ್ಕಾರವು ಹೇಳಿದುದಕ್ಕಿಂತಲೂ ಹೇಳದೇ ಇರುವುದೇ ಎಲ್ಲಕ್ಕಿಂತ ದೊಡ್ಡ ಸುದ್ದಿ ಆಗಿರುತ್ತದೆ. ಅದನ್ನೂ ಒಡೆದು ನೋಡುವ ಅವಶ್ಯಕತೆ ಇದೆ.

1. ಸರ್ಕಾರ ಹೇಳದಿರುವುದು ಈ ಸರ್ಜರಿಯ ಅಸಲಿ ಸುದ್ದಿ. ಪ್ರಧಾನಿ ಮೋದಿ ಕೋವಿಡ್-19ರ ನಿರ್ವಹಣೆಯ ಲೋಪದೋಷಗಳನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಬಹುತೇಕ ಎಲ್ಲ ಪ್ರಮುಖ ಮಂತ್ರಿಗಳ ನಿರ್ಗಮನವು ಇದರತ್ತಲೇ ಬೊಟ್ಟು ಮಾಡುತ್ತಿದೆ. ಕೋವಿಡ್-19ರ ಎರಡನೇ ಅಲೆ ದೇಶದ ಜನರನ್ನು ಇನ್ನಿಲ್ಲದಂತೆ ಕಾಡಿತು, ಸರ್ಕಾರ ಇಲ್ಲವಾಗಿತ್ತು. ಹಾಗಾಗಿ ಸಹಜವಾಗಿಯೇ ಜನರಲ್ಲಿ ಒಂದು ರೀತಿಯ ಆಡಳಿತ ವಿರೋಧಿ ಅಲೆ ಪ್ರಾರಂಭವಾಗಿರುವುದು ನಿಜ. ಇದನ್ನು ಮೋದಿಯೂ ಗಮನಿಸಿದ್ದಾರೆ. ಈ ಆಡಳಿತ ವಿರೋಧಿ ಅಲೆ ಮತ್ತು ಜನರ ಕೋಪ ತಮ್ಮೆಡೆಗೆ ತಿರುಗುವ ಮೊದಲೇ ಸರ್ಕಾರದ ವೈಫಲ್ಯದ ಹೊಣೆಯನ್ನು ಮಂತ್ರಿಗಳ ತಲೆಗೆಕಟ್ಟಿ ಅವರ ಬಲಿ ಪಡೆಯಲಾಗಿದೆ. ಈ ವೈಫಲ್ಯದಲ್ಲಿ ಈ ಮಂತ್ರಿಗಳ ಪಾಲೆಷ್ಟು, ಸ್ವತಃ ಪ್ರಧಾನಿಯ ಹೊಣೆ ಎಷ್ಟು, ತನ್ನನ್ನು ರಕ್ಷಿಸಿಕೊಳ್ಳಲು ಮೋದಿ ಇವರನ್ನು ಬಲಿಪಶು ಮಾಡಿದ್ದಾರಲ್ಲವೇ, ಅಂದರೆ ಹೌದು. ಆದರೆ ವೈಫಲ್ಯವನ್ನು ಒಪ್ಪಿಕೊಂಡಿರುವುದಂತೂ ನಿಜ.

ದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರನ್ನು ತೆಗೆದುಹಾಕಿರುವುದು ಸ್ಪಷ್ಟವಾಗಿ ಇದರ ದ್ಯೋತಕ. ಇನ್ನು ಸರ್ಕಾರದ ಮಾಹಿತಿ ತಂತ್ರಜ್ಞಾನ ಖಾತೆಯನ್ನು ನಿರ್ವಹಿಸುತ್ತಿದ್ದ ರವಿಶಂಕರ ಪ್ರಸಾದ್ ಮತ್ತು ವಾರ್ತಾ ಮತ್ತು ಪ್ರಸಾರಖಾತೆಯನ್ನು ನಿರ್ವಹಿಸುತ್ತಿದ್ದ ಪ್ರಕಾಶ್ ಜಾವ್ಡೇಕರ್ ಅವರ ತಲೆದಂಡ ಹಲವರನ್ನು ಅಚ್ಚರಿಗೀಡುಮಾಡಿದೆ. ಆದರೆ ಅವರ ತಲೆದಂಡವು ಸರ್ಕಾರದ ವಿರುದ್ಧದ ಜನಾಕ್ರೋಶಕ್ಕೆ ಸಂಬಂಧಿಸಿದ್ದೇ ಆಗಿದೆ. ಕಳೆದ ಏಳು ವರ್ಷಗಳ ಮೋದಿ ಆಡಳಿತಾವಧಿಯಲ್ಲಿ ಹಿಂದೆಂದೂ ಇಲ್ಲದಂತೆ ಕೆಲವಾದರೂ ಮಾಧ್ಯಮಗಳು ಸರ್ಕಾರದ ವೈಫಲ್ಯವನ್ನು ಎತ್ತಿತೋರಿಸಿದವು, ಅದರಲ್ಲೂ ಪ್ರಮುಖವಾಗಿ ವಿದೇಶೀ ಮಾಧ್ಯಮಗಳು ಭಾರತವು ಕೋವಿಡ್-19ಅನ್ನು ನಿರ್ವಹಿಸಿದ ರೀತಿಯನ್ನು ಕಟುವಾಗಿ ಟೀಕಿಸಿದವು. ವಿಶ್ವರಂಗದಲ್ಲಿ ಭಾರತ ಮತ್ತು ಮೋದಿಯ ಇಮೇಜಿಗೆ ಧಕ್ಕೆ ಆಗಿದ್ದಂತೂ ಹೌದು. ಇತ್ತ ಕೇಂದ್ರ ಸರ್ಕಾರವು ನೂತನವಾಗಿ ಜಾರಿಗೆ ತಂದ ಐಟಿ ರೂಲ್ಸ್‌ಅನ್ನು ಜಾರಿ ಮಾಡುವಲ್ಲಿ ಟ್ವಿಟರ್‌ಅನ್ನು ಎದುರುಹಾಕಿಕೊಂಡು ಪ್ರಸಾದ್ ಸಂಘರ್ಷಕ್ಕಿಳಿದರು. ಈ ಜಾಲತಾಣಗಳ ನಿಯಂತ್ರಣ ಮೋದಿ ಸರ್ಕಾರದ ಅಜೆಂಡಾ ಸರಿ, ಆದರೆ ಅವುಗಳನ್ನು ಎದುರುಹಾಕಿಕೊಳ್ಳುವುದು ಬುದ್ಧಿವಂತಿಕೆಯಲ್ಲ ಎಂಬ ಸತ್ಯ ಮೋದಿಗೆ ಗೊತ್ತಿದೆ, ಪ್ರಸಾದ್ ಅದನ್ನು ಮನಗಾಣದೇ ಹೋದರು. ಹಾಗಾಗಿ ಈ ಇಬ್ಬರು ಸಚಿವರ ತಲೆದಂಡವಾಯಿತೆನ್ನಿಸುತ್ತೆ.

ಇನ್ನು ಮಾನವ ಸಂಪನ್ಮೂಲ ಸಚಿವ ನಿಶಾಂಕ್ (ರಮೇಶ್ ಪೋಖ್ರಿಯಾಲ್) ಅವರ ತಲೆದಂಡ. ಅವರು ಪರೀಕ್ಷೆಗಳನ್ನು ನಡೆಸಲು ಹಠ ಹಿಡಿದಂತೆ, ವಿದ್ಯಾರ್ಥಿಗಳು ಸರ್ಕಾರದ ಬಗ್ಗೆ ಕೋಪಗೊಂಡಿದ್ದು, ಸಾಮಾಜಿಕ
ಜಾಲತಾಣಗಳಲ್ಲಿ ಕ್ಯಾಂಪೇನ್ ಮಾಡಿದ್ದು, ಕೋರ್ಟ್ ಮೆಟ್ಟಿಲು ಹತ್ತಿದ್ದು ಎಲ್ಲವೂ ನಡೆಯಿತು. ನಿಮಗೆ ನೆನಪಿರಬಹುದು ಮೇ-ಜೂನ್ ತಿಂಗಳಲ್ಲಿ ಆಡಳಿತ ವಿರೋಧಿ ಅಲೆ ಉಚ್ಛ್ರಾಯದಲ್ಲಿದ್ದಾಗ ಹತ್ತನೇ ತರಗತಿಯ ಸಿಬಿಎಸ್‌ಇ ಪರೀಕ್ಷೆ ನಡೆಸಬೇಕೋ ಬೇಡವೋ ಎಂಬ ತೀರ್ಮಾನ ಮೋದಿ ನೇತೃತ್ವದ ಸಭೆ ತೆಗೆದುಕೊಂಡಿತು. ಮೋದಿ ತಾನು ಪರೀಕ್ಷಗಳನ್ನು ರದ್ದು ಮಾಡಿರುವುದಾಗಿ ಘೋಷಿಸಿದರಲ್ಲದೆ, ಮರುದಿನ ಸಿಬಿಎಸ್‌ಇ ವಿದ್ಯಾರ್ಥಿಗಳ ಜೊತೆ ಆನ್‌ಲೈನ್ ಸಂವಾದದಲ್ಲಿ ಭಾಗವಹಿಸಿದರು. ಕೇಂದ್ರೀಯ ವಿದ್ಯಾಲಯಗಳ ವಿದ್ಯಾರ್ಥಿಗಳು ಈ ನಿರ್ಧಾರಕ್ಕೆ ಮೋದಿಗೆ ಧನ್ಯವಾದ ಅರ್ಪಿಸುವ ಟ್ವೀಟ್‌ಗಳನ್ನು ಮಾಡಬೇಕೆಂದು ಸರ್ಕಾರ ಅನಧಿಕೃತ ಫರ್ಮಾನು ಹೊರಡಿಸಿತ್ತು! ಇಂದಿನ ಹತ್ತನೇ ಕ್ಲಾಸು ವಿದ್ಯಾರ್ಥಿಗಳು 2024ರಲ್ಲಿ ಮೊದಲ ಬಾರಿಗೆ ಮತ ಚಲಾಯಿಸುತ್ತಾರೆ ಎಂಬುದನ್ನು ನಿಶಾಂಕ್ ಮನಗಾಣದೇ ಹೋದರು. ಅಲ್ಲಿಗೆ ಈ ಎಲ್ಲ ನಿರ್ಗಮನಗಳು ಮೋದಿ ಆಡಳಿತ ವಿರೋಧಿ ಅಲೆಯನ್ನು ಒಪ್ಪಿ ಅದನ್ನು ಸರಿಪಡಿಸಲು, ಈ ಜನಾಕ್ರೋಶ ತಮ್ಮ ವಿರುದ್ಧ ತಿರುಗದಂತೆ ನೋಡಿಕೊಳ್ಳಲು ತೆಗೆದುಕೊಂಡ ಕ್ರಮಗಳೇ ಆಗಿವೆ.

2. ಬಿಜೆಪಿ ಮತ್ತು ಸರ್ಕಾರವು ಈ ನಿರ್ಗಮನಗಳನ್ನು ‘Perform or Perish’ ಸೂತ್ರಕ್ಕೆ ನಿದರ್ಶನವಾಗಿ ಮುಂದಿಡುತ್ತಿದೆ. ಇದೇ ನಿಜವಾಗಿದ್ದರೆ ಮೊದಲ ತಲೆದಂಡ ಆಗಬೇಕಿದ್ದದ್ದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರದ್ದು. ಆದರೆ ಅದು ಆಗಿಲ್ಲ. ಅಂದರೆ ದೇಶದ ಆರ್ಥಿಕತೆಯ ನಿರ್ವಹಣೆಯಲ್ಲಿ ಸರ್ಕಾರ ಎಡವಿಲ್ಲ ಎಂದು ಅರ್ಥವೇ? ನಿರ್ಮಲಾ ಅವರ ಸ್ಥಾನ ಅಭಾದಿತವಾಗುಳಿದಿರುವುದು ಮೇಲೆ ವಿಶ್ಲೇಷಿಸಿದಂತೆ ಬಹುತೇಕ ನಿರ್ಗಮನಗಳ ಹಿಂದೆ ಇರುವುದು ‘Perception Management’ ಮತ್ತು ಅದರ ರಾಜಕೀಯ ಲೆಕ್ಕಾಚಾರವೇ ಹೊರತು ಆಡಳಿತಾತ್ಮಕ ಕಾರಣಗಳಲ್ಲ ಎಂಬುದನ್ನು ಮತ್ತೆ ಋಜು ಮಾಡುತ್ತದೆ. 2019ರಲ್ಲಿ ಮೋದಿ ಮರಳಿ ಅಧಿಕಾರಕ್ಕೆ ಬಂದ ನಂತರ ಅವರು ಮಂತ್ರಿಗಳ ಜಾಗದಲ್ಲಿ ಹೆಚ್ಚಾಗಿ ಕಾರಕೂನರನ್ನೇ ಅಪೇಕ್ಷಿಸುತ್ತಾರೆನಿಸುತ್ತದೆ. ಎದುರು ಮಾತಾಡುವುದು, ವಾದ ಮಾಡುವುದು ಸಾಧ್ಯವೇಇಲ್ಲ ಬಿಡಿ, ಅವರಿಗೆ ಸಲಹೆ ನೀಡಬಲ್ಲ ಹಿರಿತನ, ಅರ್ಹತೆ ಇರುವ ಎಲ್ಲ ಮಂತ್ರಿಗಳನ್ನೂ ಒಬ್ಬೊಬ್ಬರಂತೆ ಮೋದಿ ಹೊರಹಾಕಿದ್ದಾರೆ.

ಇವತ್ತು ವಾಜಪೇಯಿ ಸಂಪುಟದಲ್ಲೆ ಮಂತ್ರಿಯಾಗಿದ್ದವರು, ಸದ್ಯ ಹಾಲಿ ಮಂತ್ರಿಮಂಡಲದಲ್ಲಿರುವುದು ಇಬ್ಬರೇ  ರಾಜನಾಥ್ ಸಿಂಗ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ. ಇನ್ನೆಲ್ಲರಿಗೂ ಗೇಟ್‌ಪಾಸ್ ನೀಡಿಯಾಗಿದೆ. ಅಲ್ಲಿಗೆ ಈ ಸಂಪುಟ ಸರ್ಜರಿಯೊಂದಿಗೆ ಒಂದು ದೊಡ್ಡ ‘Generation Shift’ ಆಗಿರುವುದೂ ಹೌದು. ಅಂದರೆ ಹೊಸ ತಲೆಮಾರಿನಲ್ಲಿ ಅವರಿಗೆ ಸ್ವಂತ ರಾಜಕೀಯ ಬಲ ಇರುವವರು ಬೇಡ. ಅವರಿಗೆ ಬೇಕಿರುವುದು ಕಾರಕೂನರು. ಮೊನ್ನೆ ನಡೆದ ವಿಸ್ತರಣೆಯಲ್ಲಿ ಇಬ್ಬರು ನಿವೃತ್ತ ಐಎಎಸ್ ಅಧಿಕಾರಿಗಳನ್ನು ಮಂತ್ರಿಗಳನ್ನಾಗಿ ಮಾಡಲಾಗಿದೆ. ಅದರಲ್ಲಿ ಒಬ್ಬರಿಗೆ ರೈಲ್ವೇ, ಮಾಹಿತಿತಂತ್ರಜ್ಞಾನ ಮತ್ತೊಬ್ಬರಿಗೆ ಉಕ್ಕು ಸಚಿವಾಲಯದ ಹೊಣೆ ನೀಡಲಾಗಿದೆ.

ಇನ್ನು ರಾಜ್ಯ ಮಂತ್ರಿಯಾಗಿದ್ದು ಸಂಪುಟ ದರ್ಜೆಗೆ ಬಡ್ತಿ ಪಡೆದವರಲ್ಲೂ ಇಬ್ಬರು ನಿವೃತ್ತ ಅಧಿಕಾರಿಗಳು ಎಂಬುದು ಗಮನಾರ್ಹ. ಮೋದಿ ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ಮಂತ್ರಿವರ್ಯರಿಗಿಂತಲೂ ಅಧಿಕಾರಿಗಳ ಮೂಲಕ ಅಧಿಕಾರವನ್ನು ತಮ್ಮಲ್ಲೇ ಕೇಂದ್ರೀಕರಿಸಿಕೊಂಡು ಆಡಳಿತ ನಡೆಸುವುದು ಅವರ ಶೈಲಿ. ಇದಕ್ಕೆ ಅವರು ಇಂದು ಮಂತ್ರಿಮಂಡಲದಲ್ಲೇ ರಾಜಕೀಯ ನೆಲೆ ಇಲ್ಲದ ಕಾರಕೂನರನ್ನೇ ಹೆಚ್ಚು ತುಂಬಿಸುತ್ತದ್ದಾರೆ. ಈ ದೇಶದ ಸರ್ಕಾರಗಳ ಇತಿಹಾಸದಲ್ಲಿ, ಮೊದಲ ನಾಲ್ಕಾರು ಪ್ರಮುಖ ಖಾತೆಗಳಲ್ಲಿ ಇಬ್ಬರು ಕಾರಕೂನರಿರುವ – ವಿತ್ತ ಸಚಿವೆ ನಿರ್ಮಲಾ, ವಿದೇಶಾಂಗ ಸಚಿವ ಜೈಶಂಕರ್ – ಸರ್ಕಾರವೂ ಇದೇ ಮೊದಲಿರಬೇಕು. ಹಾಗಾಗಿ ನಿರ್ಮಲಾ ಅವರನ್ನು ತೆಗೆಯುವ ಪ್ರಶ್ನೆ ಉದ್ಭವಿಸುವುದೇ ಇಲ್ಲ.

3. ತಾನು ಹೇಳಿದ್ದರ ವಿರುದ್ಧವಾದುದನ್ನು ಮಾಡುತ್ತಾ, ಈ ಹಿಂದೆ ಹೇಳಿದ್ದನ್ನು ಮರೆಸುವುದರಲ್ಲಿ ಮೋದಿ ಸರ್ಕಾರ ನಿಷ್ಣಾತ. ಇದನ್ನು Shifting of Goalpost ಎಂದು ಕರೆಯುತ್ತಾರೆ. ಉದಾಹರಣೆಗೆ ನೋಟು ಅಮಾನ್ಯೀಕರಣವನ್ನು ನೆನಪಿಸಿಕೊಳ್ಳಿ. ಮೊದಲಿಗೆ ಕಪ್ಪು ಹಣ ಬಯಲಿಗೆಳೆಯಲು, ನಂತರ ಟೆರರ್ ಫಂಡಿಂಗ್ ತಡೆಯಲು, ನಂತರ ಡಿಜಿಟಲ್ ಎಕಾನಮಿಯನ್ನು ಉತ್ತೇಜಿಸಲು.. ಹೀಗೆ ಅದರ ಉದ್ದೇಶ ಬದಲಾಗುತ್ತಲೇ ಹೋಯಿತು. 2014ರಲ್ಲಿ ಮೋದಿ ಸರ್ಕಾರ ಅಧಿಕಾರ ಹಿಡಿದಾಗ ’ನ್ಯೂಇಂಡಿಯಾ’ ಪರಿಕಲ್ಪನೆಯನ್ನು ದೇಶದ ಜನರ ಮುಂದಿಟ್ಟಿತು. ಅದರಲ್ಲಿ ’ಕಾಂಗ್ರೆಸ್ಸು, ಸೆಕ್ಯುಲರ್ ಪಕ್ಷಗಳ ಕೆಟ್ಟ ಜಾತಿ ರಾಜಕಾರಣವನ್ನು ಮಾಡುತ್ತಿದ್ದಾರೆ, ಇದು ಎಲೀಟ್‌ಗಳ ವಿರುದ್ಧದ ದಂಗೆ’ ಎಂದೆಲ್ಲಾ ಹೇಳಿ ಅಧಿಕಾರ ಹಿಡಿದವರು ’ಹಾರ್ವರ್ಡ್‌ಗಿಂತಲೂ ಹಾರ್ಡ್‌ವರ್ಕ್ ಮುಖ್ಯ’ ಎಂದು ಹೇಳಿದ್ದರು, ‘Less Government, More Governance’ ಎಂಬ ಘೋಷವಾಕ್ಯದೊಂದಿಗೆ ಮಂತ್ರಿಮಂಡಲದಲ್ಲಿ ಸುಮಾರು ಅರ್ಧ ಸ್ಥಾನಗಳನ್ನು ಖಾಲಿಬಿಟ್ಟಿದ್ದರು. ಇವತ್ತು ಇವೆಲ್ಲವೂ ತಲೆಕೆಳಗಾಗಿದೆ. ಆದರೆ ಬಹುತೇಕ ಮಾಧ್ಯಮಗಳು ಈ ಹಿಂದಿನ ಅವರ ಘೋಷವಾಕ್ಯಗಳನ್ನು ಜನರಿಗೆ ನೆನಪಿಸುತ್ತಲೂ ಇಲ್ಲ.

ಇವತ್ತು ಕೇಂದ್ರ ಮಂತ್ರಿಮಂಡಲದಲ್ಲಿ ಒಟ್ಟು 82 ಜನ ಸಚಿವರಿಗೆ ಅವಕಾಶವಿದೆ. 2014ರ ಮೊದಲ ಅವಧಿಯಲ್ಲಿ ಮೋದಿ ಕೇವಲ 46 ಮಂತ್ರಿಗಳನ್ನಿಟ್ಟುಕೊಂಡು ಕೆಲಸ ಮಾಡಿದರು, 2019ರಲ್ಲಿ 51 ಮಂತ್ರಿಗಳು. ಈಗ ಅದು 79ಕ್ಕೇರಿದೆ. ಭಾರತದಂತಹ ದೊಡ್ಡ, ವೈವಿಧ್ಯಮಯ ದೇಶದ ಆಡಳಿತವನ್ನು ಕೆಲವೇ ಕೆಲವು ಜನರನ್ನಿಟ್ಟುಕೊಂಡು ಪಿಎಂಒ ಇಂದ ನಡೆಸಬಹುದು ಎಂಬ ಭ್ರಮೆಯಿಂದ ಹೊರಬಂದಿದ್ದಾರೆಯೇ ಮೋದಿ? ಅದೇ ನಿಜವಾಗಿದ್ದರೆ ಒಳ್ಳೆಯದು. ಆದರೆ ಖಾತೆ ಹಂಚಿಕೆಯನ್ನು ಗಮನಿಸಿದರೆ ಮತ್ತೆ ಅವರು ನೆಚ್ಚುವ ಕೆಲವು ಕಾರಕೂನರಿಗೆ ಎರಡು-ಮೂರು ಪ್ರಮುಖ ಖಾತೆಗಳನ್ನು ನೀಡಿರುವುದು ನಿರಾಸೆ ತರಿಸದೇ ಇರದು. ಹಾರ್ವರ್ಡ್‌ಗಿಂತಲೂ ಹಾರ್ಡ್‌ವರ್ಕ್ ಮುಖ್ಯ ಎಂದಿದ್ದವರು ಇವತ್ತು ನಮ್ಮ ಸಂಪುಟದಲ್ಲಿ ಅತಿ ಹೆಚ್ಚು ವೃತ್ತಿಪರರು, ಓದಿಕೊಂಡವರೂ ಇದ್ದಾರೆ ಎಂದು ಹೇಳಿಕೊಂಡು ತಿರುಗುತ್ತಿರುವುದು ಸೋಜಿಗ. ಮೋದಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಧ್ಯಮವರ್ಗವು ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಸರ್ಕಾರದ ಆಡಳಿತ ವೈಫಲ್ಯದಿಂದ ಕೊಂಚ ಭ್ರಮನರಸನಗೊಂಡಿದೆ. ಅವರನ್ನು ಸಂತೃಪ್ತಗೊಳಿಸಲು ಈ ಗಿಮಿಕ್ ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟವೇನಲ್ಲ.

ಇನ್ನು ಜಾತಿಯ ಪ್ರಶ್ನೆ. ನಾವು ಜಾತಿರಾಜಕಾರಣ ಮಾಡಲ್ಲ, ಅಖಂಡ ಹಿಂದೂ ವೋಟು ಎಂದು ಹೇಳುತ್ತಿದ್ದವರು ಗಡ್ಡಕ್ಕೆ ಬೆಂಕಿ ಬಿದ್ದಕೂಡಲೇ ಜಾತಿ ಸಮೀಕರಣಕ್ಕಿಳಿದಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಇದು ‘Subaltern Hindutva’ದ ಹೊಸ ಸಮೀಕರಣಗಳು ಗೋಚರಿಸುತ್ತವೆ. ಒಬಿಸಿ, ದಲಿತ, ಆದಿವಾಸಿ ಸಮುದಾಯಗಳಲ್ಲಿ ಇತರೆ ಪಕ್ಷಗಳಿಂದ ನಿರ್ಲಕ್ಷಿತರಾದ ಸಮುದಾಯಗಳಿಂದ ಜನರನ್ನು ಹೆಕ್ಕಿಹೆಕ್ಕಿ ಮಂತ್ರಿ ಮಾಡಲಾಗಿದೆ. ಉತ್ತರ ಪ್ರದೇಶ, ಬಿಹಾರದ ನಾನ್-ಯಾದವ್ ಒಬಿಸಿ, ನಾನ್-ಜಾಥವ್ ದಲಿತರು, ಕರ್ನಾಟಕದ ಮಾದಿಗ ಸಮುದಾಯ, ಬಂಗಾಳದ ಮಟುವಾ ಸಮುದಾಯ ಹೀಗೆ. ಹಿಂದುತ್ವದ ಮುನ್ನಡೆ ಇರುವುದು ಈ ಸಮುದಾಯಗಳಲ್ಲಿ ಎಂಬುದು ಸಂಘ ಪರಿವಾರದ ಬಲವಾದ ನಂಬಿಕೆ. ಅದನ್ನು ಜಾರಿ ಮಾಡಲೆಂದೇ ಈ ಜಾತಿ ಪ್ರಾತಿನಿಧೀಕರಣ ನಡೆದಿದೆ.

ಸೂರ್ಯ ಚಿಂತಾಮಣಿ,
ಯುವ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ


ಇದನ್ನೂ ಓದಿ: ಕೇಂದ್ರ ಸಂಪುಟ: 78 ಸಚಿವರಲ್ಲಿ 33 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ- ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...