ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಪಡೆಯುವ ಚುನಾವಣಾ ಬಾಂಡ್ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಬೃಹತ್ ಕಾರ್ಪೋರೇಟ್ ಕಂಪನಿಗಳಿಂದ ಬಿಜೆಪಿ ಪಡೆದಿರುವ ವಿವಿಧ ಚುನಾವಣಾ ಬಾಂಡ್ ವಿಷಯವನ್ನು ಗೌಪ್ಯವಾಗಿಟ್ಟಿರುವ ವಿಷಯ ಪ್ರಸ್ತಾಪಿಸಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಪಕ್ಷಗಳು ಕೋಲಾಹಲ ಸೃಷ್ಟಿಸಿವೆ. ಚುನಾವಣಾ ಬಾಂಡ್ ಪಡೆಯುವಲ್ಲಿ ದೊಡ್ಡ ಹಗರಣ ನಡೆದಿದೆ. ಬಿಜೆಪಿ ಚುನಾವಣಾ ಬಾಂಡ್ ಗಳ ಮೂಲಕ ಹಣ ಪಡೆದು ಭ್ರಷ್ಟಾಚಾರವನ್ನು ಅಧಿಕೃತಗೊಳಿಸಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.
‘ದಿ ವೈರ್’ ಮತ್ತು ‘ನ್ಯಾಷನಲ್ ಹೆರಾಲ್ಡ್’ ಆನ್ ಲೈನ್ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟಗೊಂಡಿದೆ. 2014-15ನೇ ಸಾಲಿನಲ್ಲಿ ಬಿಜೆಪಿ ಹಣಕಾಸು ನಿರ್ವಹಣೆ ವೇಳೆ ಯಾವ ಯಾವ ಕಂಪನಿಗಳಿಂದ ಚುನಾವಣಾ ಬಾಂಡ್ ಗಳನ್ನು ಸ್ವೀಕರಿಸಿದೆ ಮತ್ತು ಚುನಾವಣಾ ಆಯೋಗಕ್ಕೆ ನೀಡಿದ್ದ ಮಾಹಿತಿ ಏನಿತ್ತು ಎಂಬುದನ್ನು ಬಹಿರಂಗಪಡಿಸಿವೆ.
ಭಯೋತ್ಪಾದನೆಗೆ ಹಣ ವರ್ಗಾವಣೆ ಮಾಡಿರುವ ಆರೋಪ ಎದುರಿಸುತ್ತಿರುವ ಕಂಪನಿಯಿಂದಲೂ ಬಿಜೆಪಿ, ಚುನಾವಣಾ ಬಾಂಡ್ ಹೆಸರಿನಲ್ಲಿ 10 ಕೋಟಿ ರೂಪಾಯಿ ದೇಣಿಗೆ ಪಡೆದುಕೊಂಡಿದೆ. ಇದೀಗ ಪ್ರಮುಖ ವಿವಾದದಕ್ಕೆ ಕಾರಣವಾಗಿದೆ. ಒಂದು ಕಂಪನಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಪಕ್ಷಕ್ಕೆ ದೇಣಿಗೆ ನೀಡಿರುವುದು ಇದೇ ಮೊದಲು. ಬಿಜೆಪಿಗೆ 10 ಕೋಟಿ ರೂಪಾಯಿ ದೇಣಿಗೆ ನೀಡಿರುವ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಭಯೋತ್ಪಾದಕರೊಂದಿಗೆ ಕಂಪನಿ ನಂಟು ಹೊಂದಿರುವ ಸಂಗತಿಯನ್ನು ಇಡಿ ಬಹಿರಂಗಪಡಿಸಿದೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ 743 ಕೋಟಿ ಪಾರ್ಟಿ ಫಂಡ್ ಪಡೆದ ಬಿಜೆಪಿ: ಇತರ ಪಕ್ಷಗಳಿಗಿಂತ ಮೂರು ಪಟ್ಟು ಹೆಚ್ಚು!
ಆರ್.ಕೆ.ಡಬ್ಲ್ಯೂಡೆವಲಪರ್ ಲಿಮಿಟೆಡ್, ಕಂಪನಿ 2014-15ರಲ್ಲಿ ಬಿಜೆಪಿಗೆ 10 ಕೋಟಿ ರೂ. ನೀಡಿದೆ. ಇದೇ ಆರ್.ಕೆ.ಡಬ್ಲ್ಯು ಕಂಪನಿ ಈಗ ಭಯೋತ್ಪಾದಕರೊಂದಿಗೆ ನಂಟು ಹೊಂದಿದೆ ಎಂದು ತನಿಖೆ ನಡೆಸುತ್ತಿರುವ ಇಡಿ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಹೊರಹಾಕಿದೆ. ಆರ್.ಕೆ.ಡಬ್ಲ್ಯು ಕಂಪನಿ ಭಯೋತ್ಪಾದಕರ ನಿಧಿಗೆ ಹಣ ವರ್ಗಾಯಿಸಿದೆ ಎಂಬ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದೆ.
2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಿರುವಾಗಲೇ ಗುರುತಿಸಲಾಗದ ರಾಜಕೀಯ ಪಕ್ಷಕ್ಕೆ ಅಥವಾ ಪಕ್ಷಗಳಿಗೆ ಅವಧಿ ಮುಗಿದ ಚುನಾವಣಾ ಬಾಂಡ್ ಗಳನ್ನು ಪಡೆಯಲು ಹಣಕಾಸು ಇಲಾಖೆ ಬಾಗಿಲು ತೆರೆದಿದೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಆರ್.ಕೆ.ಡಬ್ಲ್ಯುಡೆವಲಪರ್ ಲಿ. ಕಂಪನಿಯು 1993ರ ಮುಂಬೈ ಬಾಂಬ್ ಸ್ಫೋಟದ ಆರೋಪಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಸಹಾಯಕ ಇಕ್ಬಾಲ್ ಮೆನನ್ ಅಲಿಯಾಸ್ ಇಕ್ಬಾಲ್ ಮಿರ್ಚಿಯೊಂದಿಗೆ ವಹಿವಾಟು ನಡೆಸಿದೆ. ಅಲ್ಲದೇ ಇಕ್ಬಾಲ್ ಮಿರ್ಚಿಯ ಆಸ್ತಿಗಳನ್ನು ಖರೀದಿಸಿರುವ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಮುಂದುವರೆಸಿದೆ.
ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಆರೋಪ ಹೊತ್ತಿರುವ ಇಕ್ಬಾಲ್ ಮಿರ್ಚಿಯಿಂದ ಎನ್.ಸಿ.ಪಿ ನಾಯಕ ಪ್ರಫುಲ್ ಪಟೇಲ್ ಪತ್ನಿ ಆಸ್ತಿ ಖರೀದಿಸಿರುವ ಕುರಿತು ಗೃಹ ಸಚಿವ ಅಮಿತ್ ಶಾ ಆರೋಪ ಮಾಡಿದ ಒಂದು ವಾರದಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.
ಆರ್.ಕೆ.ಡಬ್ಲ್ಯೂ ಕಂಪನಿ ಅತಿ ಹೆಚ್ಚು ದೇಣಿಗೆ ನೀಡಿದ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬಿಜೆಪಿ ಕಂಪನಿಯಿಂದ ಹಲವು ಬಾರಿ ಚುನಾವಣಾ ಬಾಂಡ್ ಗಳನ್ನು ಪಡೆದ ಪಕ್ಷವಾಗಿ ಹೊರ ಹೊಮ್ಮಿದೆ. ಭಯೋತ್ಪಾದಕರೊಂದಿಗೆ ಹಣಕಾಸು ವಹಿವಾಟು ನಡೆಸಿರುವ ಆರೋಪ ಹೊತ್ತಿರುವ ಕಂಪನಿ ವಿರುದ್ಧ ತನಿಖೆ ನಡೆಯುತ್ತಿರುವಾಗಲೇ, ಅದೇ ಕಂಪನಿಯಿಂದ ಬಿಜೆಪಿ ಚುನಾವಣಾ ಬಾಂಡ್ ಪಡೆದಿದ್ದು, ದೊಡ್ಡ ಹಗರಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಆರ್.ಕೆ.ಡಬ್ಲ್ಯೂ ಡೆವೆಲಪರ್ ಲಿ. ಕಂಪನಿಯ ಮಾಜಿ ನಿರ್ದೇಶಕ ರಂಜಿತ್ ಬಿಂದ್ರಾ ಭೂಗತ ಜಗತ್ತಿನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಹಿನ್ನೆಲೆ ಬಂಧಿಸಲಾಗಿದೆ. ಇದೇ ವೇಳೆ ಆರ್.ಕೆ.ಡಬ್ಲ್ಯೂ ಕಂಪನಿ ಇಕ್ಬಾಲ್ ಮಿರ್ಚಿ ಆಸ್ತಿಯನ್ನು ಮಾರಾಟ ಮಾಡಿದ್ದು, ಇದಕ್ಕಾಗಿ ಬಿಂದ್ರಾ 30 ಕೋಟಿ ರೂಪಾಯಿ ಕಮಿಷನ್ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಇಕ್ಬಾಲ್ ಮಿರ್ಚಿ ಆಸ್ತಿಯನ್ನು ಸನ್ ಬ್ಲಿಂಕ್ ರಿಯಲ್ ಎಸ್ಟೇಟ್ ಖರೀದಿಸಿದೆ ಎಂದು ಇಡಿ ಆರೋಪಿಸಿದೆ. ಬಿಜೆಪಿ ಚುನಾವಣಾ ಆಯೋಗದಲ್ಲಿ ಘೋಷಿಸಿಕೊಂಡಿರುವಂತೆ ಸ್ಕಿಲ್ ರಿಯಲ್ ಟರ್ ಪ್ರೈ. ಲಿಮಿಟೆಡ್ ನಿಂದ 2 ಕೋಟಿ ರೂಪಾಯಿ ಪಡೆದಿರುವುದಾಗಿ ಹೇಳಿದೆ. ಇದು ಸನ್ ಬ್ಲಿಂಕ್ ಕಂಪನಿಯ ಸೋದರ ಕಂಪನಿಯಾಗಿದೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಇಂಟರೆಸ್ಟಿಂಗ್ ವಿಷಯ ಅಂದರೆ ಇಕ್ಬಾಲ್ ಮಿರ್ಚಿ ವಿಷಯ ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರಸ್ತಾಪವಾಗಿತ್ತು. ಮಿರ್ಚಿ ಮತ್ತು ಸನ್ ಬ್ಲಿಂಕ್ ಮಿಲೇನಿಯಂ ಡೆವಲಪರ್ಸ್ ನಡುವೆ ಆಸ್ತಿ ವಹಿವಾಟು ನಡೆದಿದೆ ಎಂದು ಆರೋಪಿಸಿರುವ ಹಿನ್ನೆಲೆ ಇಡಿ ತನಿಖೆಯನ್ನು ತೀವ್ರಗೊಳಿಸಿದೆ.


