ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ, ತಮಿಳುನಾಡು ಮತ್ತು ಕೇರಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 252 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದೆ.
ತೃಣಮೂಲ ಕಾಂಗ್ರೆಸ್ ಆಡಳಿತದ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪ್ರಚಾರಕ್ಕಾಗಿ 252 ಕೋಟಿ ರೂಪಾಯಿಯ ಸುಮಾರು 60 ಪ್ರತಿಶತವನ್ನು ಬಳಸಲಾಗಿದೆ. ಆದರೆ ಅಲ್ಲಿ ಬಿಜೆಪಿ ಸೋಲು ಅನುಭವಿಸಿದೆ.
ಪಂಚರಾಜ್ಯ ಚುನಾವಣೆ ಮಾಡಿರುವ ಚುನಾವಣಾ ವೆಚ್ಚದ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಇದರ ಪ್ರಕಾರ ಬಿಜೆಪಿ 252,02,71,753 ರೂಪಾಯಿ ಖರ್ಚು ಮಾಡಿದ್ದು, 43.81 ಕೋಟಿ ರೂ. ಅಸ್ಸಾಂ ಚುನಾವಣೆಗೆ ಮತ್ತು 4.79 ಕೋಟಿ ರೂಪಾಯಿ ಪುದುಚೇರಿ ವಿಧಾನಸಭಾ ಚುನಾವಣೆಗೆ ಬಳಸಲಾಗಿದೆ.
ಇದನ್ನೂ ಓದಿ: ತಮಿಳುನಾಡು ಮಳೆ: 14 ಕ್ಕೆ ಏರಿದ ಸಾವು; ಯುವಕನನ್ನು ಹೆಗಲ ಮೇಲೆ ಹೊತ್ತು ರಕ್ಷಣೆಗೆ ನಿಂತ ಮಹಿಳಾ ಇನ್ಸ್‌ಪೆಕ್ಟರ್
ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತನ್ನ ಕಟ್ಟಾ ಎದುರಾಳಿ ಎಐಎಡಿಎಂಕೆಯಿಂದ ಅಧಿಕಾರವನ್ನು ಕಸಿದುಕೊಂಡಿದೆ. ಚುನಾವಣೆಯಲ್ಲಿ ಕೇವಲ ಶೇ.2.6ರಷ್ಟು ಮತಗಳನ್ನು ಪಡೆದ ಬಿಜೆಪಿ ತನ್ನ ಪ್ರಚಾರಕ್ಕಾಗಿ 22.97 ಕೋಟಿ ರೂಪಾಯಿ ಖರ್ಚು ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವಿರುದ್ಧದ ಪ್ರಚಾರದಲ್ಲಿ ಬಿಜೆಪಿ ಸಂಪೂರ್ಣವಾಗಿ ತೊಡಗಿಸಿಕೊಂಡಿತ್ತು. ಟಿಎಂಸಿಯನ್ನು ಸೋಲಿಸಲು ಹರಸಾಹಸ ಮಾಡಿದ್ದ ಬಿಜೆಪಿ ಟಿಎಂಸಿಯ ಪ್ರಮುಖ ನಾಯಕರನ್ನು ತನ್ನೆಡೆಗೆ ಸೆಳೆದುಕೊಂಡಿತ್ತು. ಈ ರಾಜ್ಯದಲ್ಲಿ ಚುನಾವಣೆಗಾಗಿ 151 ಕೋಟಿ ರೂಪಾಯಿ ಖರ್ಚು ಮಾಡಿದೆ.
ಕೇರಳದಲ್ಲಿ ಎಲ್‌ಡಿಎಫ್ ಅಧಿಕಾರ ಉಳಿಸಿಕೊಂಡಿದ್ದು, ಬಿಜೆಪಿ 29.24 ಕೋಟಿ ರೂ. ಖರ್ಚು ಮಾಡಿದೆ.
ಇದನ್ನೂ ಓದಿ: ಕರ್ನಾಟಕ ಬಿಜೆಪಿ ನಾಯಕತ್ವದಲ್ಲಿ ಬದಲಾವಣೆ ಇಲ್ಲ: ಅರುಣ್ ಸಿಂಗ್ ಸ್ಪಷ್ಟನೆ


