ದೇಶದಲ್ಲಿ ಹೊಸ ಸ್ವರೂಪದ ಕೊರೊನಾ ಆತಂಕ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಕೂಡ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಫೆಬ್ರವರಿಯಲ್ಲಿ ನಡೆಸಲಾಗುತ್ತದೆ ಎಂದು ಹೇಳಿದ್ದ CBSE ಬೋರ್ಡ್ ಎಕ್ಸಾಂಗಳನ್ನು ಮುಂದೂಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಲ್ ನಿಶಾಂಕ್, ಈಗಿನ ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಸಲು ನಿರ್ಧರಿಸಲಾಗಿದ್ದ, ಸಿಬಿಎಸ್‌ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ ಎಂದಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡಿ ನಂತರ ಪರೀಕ್ಷೆಗಳನ್ನು ಯಾವಾಗ ನಡೆಸಲಾಗುತ್ತದೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೊಸ ಕೊರೊನಾ ಆತಂಕ: ಲಂಡನ್‌ನಿಂದ ಬಂದಿದ್ದ 6 ಮಂದಿಗೆ ಕೊರೊನಾ ಸೋಂಕು
ಈ ತಿಂಗಳ ಆರಂಭದಲ್ಲಿ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (CBSE) 2021 ರಲ್ಲಿ ಬೋರ್ಡ್ ಪರೀಕ್ಷೆಗಳನ್ನು ಲಿಖಿತ ಕ್ರಮದಲ್ಲಿ ನಡೆಸಲಾಗುವುದು. ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸುವುದಿಲ್ಲ ಎಂದು ಘೋಷಿಸಿತ್ತು.
ಬ್ರಿಟನ್‌ನಲ್ಲಿ ಹೊಸ ಸ್ಪರೂಪದ ಕೊರೊನಾ ಕಾಣಿಸಿಕೊಂಡಿರುವ ಹಿನ್ನೆಲೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ. ಈಗಾಗಲೇ ಲಂಡನ್‌ನಿಂದ ಬಂದಿರುವ 6 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅದು ಹೊಸ ಸ್ವರೂಪದ ಕೊರೊನಾ ವೈರಸ್ ಹೌದೋ ಅಲ್ಲವೋ ಎಂಬುದು ಸ್ಪಷ್ಟವಾಗಬೇಕಿದೆ.
ಕೇಂದ್ರ ಸರ್ಕಾರವು ಬ್ರಿಟನ್‌ನಿಂದ ಬರುವ ಪ್ರಯಾಣಿಕರಿಗಾಗಿ ಹೊಸ ಕೊರೊನಾ ಮಾರ್ಗಸೂಚಿಯನ್ನು ಪ್ರಕಟಣೆ ಮಾಡಿದ್ದು, ರಾಜ್ಯ ಸರ್ಕಾರಗಳಿಗೆ ಅವುಗಳನ್ನು ಪಾಲಿಸಲು ಆದೇಶಿಸಲಾಗಿದೆ.
ಇದನ್ನೂ ಓದಿ: ಲಂಚ ಪಡೆದು ಸ್ಟಿಂಗ್ ಆಪರೇಷನ್‌ನಲ್ಲಿ ಸಿಕ್ಕಿಬಿದ್ದವರು ಬಿಜೆಪಿ ಸೇರ್ಪಡೆ: ಧೃವ್ ರಾಠೀ ಟ್ವೀಟ್ ವೈರಲ್


