“ಭಾರತ ಮಾತೆ ಎಂದರೆ ಯಾರು? ಭಾರತ ಮಾತೆಗೆ ಜಯವಾಗಲಿ ಎಂದರೆ, ಯಾರಿಗೆ ಜಯವಾಗಲಿ ಎಂದರ್ಥ?” ಈ ಪ್ರಶ್ನೆಗಳನ್ನು ಜನಸಮುದಾಯಕ್ಕೆ ಕೇಳಿದ್ದು ಮತ್ತು ಅವರಿಂದ ಬಂದ ಪ್ರತಿಕ್ರಿಯೆಗಳನ್ನು ಆಧರಿಸಿ ವಿವರಣೆ ನೀಡಿದ್ದು, ಬ್ರಿಟಿಷರ ಆಳ್ವಿಕೆಯ ವಿರುದ್ಧ ರಾಷ್ಟ್ರೀಯ ಚಳವಳಿಯ ಮೂಲಕ ಸ್ವತಂತ್ರ ಭಾರತದ ಕನಸನ್ನು ಸಾಕಾರಗೊಳಸುವ ಸಲುವಾಗಿ, ಜನರನ್ನು ಸಂಘಟಿಸುವ ಅವಿರತ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದ ಮುಂಚೂಣಿಯ ನಾಯಕರುಗಳಲ್ಲಿ ಒಬ್ಬರಾದ ಪಂಡಿತ್ ಜವಾಹರ್ ಲಾಲ್ ನೆಹರುರವರು. 1936ರಲ್ಲಿ ರಾಯಬರೇಲಿಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದಕ್ಕೆ ಅವರು ಆಗಮಿಸುತ್ತಿದ್ದಂತೆ, ಅಲ್ಲಿ ನೆರೆದ ಜನಸಮುದಾಯ ಒಕ್ಕೊರಲಿನಿಂದ, ’ಭಾರತ್ ಮಾತಾ ಕಿ ಜೈ’, ಎಂದು ಘೋಷಣೆ ಕೂಗುತ್ತಿದ್ದಾಗ ವೇದಿಕೆ ಏರಿ ಮಾತು ಆರಂಭಿಸಿದ ಅವರು, “ನೀವು ಭಾರತ್ ಮಾತಾ ಕಿ ಜೈ, ಎಂದು ಜೈಕಾರ ಹಾಕುತ್ತಿದ್ದೀರಿ, ಅದರೆ ಭಾರತ ಮಾತೆ ಎಂದರೆ ಯಾರು? ಜಯವಾಗಲಿ ಎಂದರೆ
ಯಾರಿಗೆ ಜಯವಾಗಲಿ, ಹೇಳಿ ನೋಡೋಣ”, ಎಂದು ಕೇಳಿದ ಪ್ರಶ್ನೆಗೆ ಇಡೀ ಸಭೆ ಸ್ತಬ್ಧವಾಗುತ್ತದೆ. ಕೊನೆಗೆ, ಜಾಟ್ ರೈತನೊಬ್ಬ, “ಭಾರತ ಮಾತೆ ಎಂದರೆ ಭೂಮಿ”, ಎಂದು ಗಟ್ಟಿಯಾಗಿ ಕೂಗುತ್ತಾನೆ. ಅದನ್ನೇ ಆಧರಿಸಿ ಮುಂದುವರೆದ ನೆಹರೂರವರು, “ಹೌದು ನಿಜ. ಭಾರತ ಮಾತೆ ಯಾರೆಂದರೆ, ನಮ್ಮದೇ ದೇಶದ ಉದ್ದಗಲಕ್ಕೂ ಹಬ್ಬಿರುವ ಗಿರಿಕಂದರಗಳು, ಪರ್ವತ ಶ್ರೇಣಿಗಳು, ನದಿ-ಹಳ್ಳಗಳು, ಅರಣ್ಯಗಳು, ಬಯಲುಗಳು ಮತ್ತು ಹೊಲ-ಗದ್ದೆಗಳು. ಅಂತಿಮವಾಗಿ, ಇಲ್ಲಿನ ಕೋಟ್ಯಂತರ ಸಂಖ್ಯೆಯ ಜನಸಮುದಾಯಗಳು ಮತ್ತು ಆ ಸಮುದಾಯಗಳೊಂದಿಗೆ ಶತಮಾನಗಳಿಂದ ಸಾಗಿ ಬಂದಿರುವ ಜನಸಂಸ್ಕೃತಿ. ಅದು ನೀವುಗಳೇ. ಜಯವಾಗಲಿ ಎಂದರೆ, ಅದು ನಿಮಗೆ ಜಯವಾಗಲಿ ಎಂದೇ ಅರ್ಥ, ಎಂದು ಎದೆಯುಬ್ಬಿ ಹೇಳಿದ ಅವರ ಮಾತುಗಳು, ಜನರ ಕಣ್ಣುಗಳಲ್ಲಿ ಹೊಸ ಹೊಳಹಿನ ಆನಂದದ ಬೆಳಕನ್ನು ಮಿಂಚಿಸುತ್ತವೆ. ನಿಜ, ಭಾರತಮಾತೆ ಎಂದರೆ ಇವತ್ತಿಗೂ ಕೂಡ, ಬರೀ ಪುರಾಣ ಕಲ್ಪಿತ ಶಕ್ತಿದೇವತೆ ಅಥವಾ ಸಾಂಕೇತಿಕ ಮೂರ್ತಚಿತ್ರವಷ್ಟೇ ಆಗಿರದೆ, ನಿರ್ದಿಷ್ಟ ಭೌಗೋಳಿಕ ಪ್ರದೇಶದ ಸಮಗ್ರ ನೈಸರ್ಗಿಕ ಪರಿಸರ, ಜನಸಮುದಾಯ ಮತ್ತು ಪ್ರಾಚೀನ ಹಾಗೂ ವರ್ತಮಾನದ ಒಟ್ಟು ಸಂಸ್ಕೃತಿಯನ್ನೊಳಗೊಂಡ ರಾಷ್ಟ್ರೀಯ ಪ್ರಜ್ಞೆಯಾಗಿರುತ್ತದೆ.
ಭಾರತದ ಸ್ವಾತಂತ್ರದ ಸಂದರ್ಭದಲ್ಲಿ ಮೊಳಗುತ್ತಿದ್ದ, ’ಭಾರತ್ ಮಾತಾ ಕಿ ಜೈ’, ಎನ್ನುವ ಬ್ರಿಟಿಷರ ವಿರುದ್ಧದ ಒಕ್ಕೊರಲ ಘೋಷಣೆ, ಸ್ವಾತಂತ್ರ್ಯದ ನಂತರದ ಏಳು ದಶಕಗಳು ಕಳೆದು, ನಮ್ಮದೇ ಸಂವಿಧಾನ ಹೊಂದಿ, ನಾವೇ ಆಡಳಿತ ನಡೆಸುವ ಇಂದಿನ ಸಂದರ್ಭದಲ್ಲಿ, ಈ ಉದ್ಘೋಷ ಮತ್ತೊಮ್ಮೆ ಗಟ್ಟಿಯಾಗಿ ಕೇಳಿಬರುತ್ತಿದೆ. ಸತ್ಯ ಎಂದರೆ, ಆ ಧ್ವನಿಯಲ್ಲಿ ಆವತ್ತಿನ ಭಾವನಾತ್ಮಕ ಗಟ್ಟಿತನವಿಲ್ಲ. ಇಡೀ ಸಮೂಹ, ಸನ್ನಿ ಹಿಡಿದಂತೆ ಪ್ರತಿಕ್ರಿಯಿಸುವ ಉತ್ಸಾಹವಿಲ್ಲ. ಬದಲಾಗಿ, ಕೆರಳುವಿಕೆಯ ಒಡಕುಗಳು ಕೇಳಿಬರುತ್ತಿವೆ. ಯಾಕೆ ಹೀಗೆ? ಸ್ವಾತಂತ್ರ್ಯ ಚಳವಳಿಯ ಸಂದರ್ಭದ ಸ್ಥಿತಿ ಇಂದು ಮತ್ತೆ ನಿರ್ಮಾಣವಾಗುತ್ತಿದೆಯೇ? ಧರ್ಮ ಮೂಲದ ವಿಚ್ಛಿದ್ರಕಾರಿ ಕೋಮುವಾದಿ ಶಕ್ತಿಗಳು ಮತ್ತೆ ತಲೆ ಎತ್ತುತ್ತಿವೆಯೇ? ಅಸಮಾನತೆಯನ್ನು ಸೃಷ್ಟಿಸಿ ಸ್ವಾತಂತ್ರ್ಯವನ್ನು ದಮನಿಸುವ ಬಂಡವಾಳಶಾಹಿ ಶಕ್ತಿಗಳು ಮರುಹುಟ್ಟು ಪಡೆಯುತ್ತಿವೆಯೇ? ಕೋಮುವಾದಿ ಶಕ್ತಿಗಳು ಮತ್ತು ಬಂಡವಾಳಶಾಹಿ ಶಕ್ತಿಗಳ ನಡುವೆ ಅನಪೇಕ್ಷಿತ ಅಪವಿತ್ರ ಮೈತ್ರಿ ಏರ್ಪಡುತ್ತಿದೆಯೇ? ಅಂಥ ಮೈತ್ರಿ ಎಂದರೆ, ಅದು ಸ್ವಾರ್ಥ ಮತ್ತು ಶೋಷಣೆಗಾಗಿ ಕೈಜೋಡಿಸುವುದೇ ಆಗಿದೆ. ಇದು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ದುರ್ಬಲರಾದವರ ಮೇಲೆ ಸವಾರಿಮಾಡಲು ಮಾಡಿಕೊಳ್ಳುವ ತಯಾರಿ ಅಷ್ಟೆ.

ಸ್ವಾತಂತ್ರ್ಯಾನಂತರದ ಕಳೆದ ಏಳು ದಶಕಗಳಲ್ಲಿ ನ್ಯಾಯ, ಸ್ವತಂತ್ರ, ಸಮಾನತೆ ಮತ್ತು ಸಹೋದರತ್ವಗಳ ನೆಲೆಗಟ್ಟಿನಲ್ಲಿ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನಗಳು ಮಂದಗತಿಯಲ್ಲಾದರೂ ಸಾಗಿ, ಅಭಿವೃದ್ಧಿಯ ನೆಲೆಯಲ್ಲಿ ಒಂದು ಒಪ್ಪಿತ ಹಂತವನ್ನು ತಲುಪುತ್ತಿರುವಾಗ, ಹಿನ್ನಡೆಗೆ ಜಾರಬಹುದಾದ ಘಟನಾವಳಿಗಳು ರಾಷ್ಟ್ರೀಯತೆಯ ಹೆಸರಿನಲ್ಲಿ ಮರುನಿರ್ಮಾಣವಾಗತ್ತಿರುವಂತೆ ಕಾಣುತ್ತಿವೆ. ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳು ಸಖ್ಯ ಬೆಳೆಸಿಕೊಂಡು ರಾಷ್ಟ್ರೀಯ ಸಮಗ್ರತೆಗೆ ಮತ್ತು ಅಭಿವೃದ್ಧಿಗೆ ಧಕ್ಕೆ ತರುವಂತಹ ಬೆಳವಣಿಗೆಗಳು ನಿಜಕ್ಕೂ ಆತಂಕಕಾರಿಯಾಗಿವೆ. ಯಾವುದೇ ದೇಶದ ಇತಿಹಾಸ ತೆಗೆದುಕೊಂಡರೂ, ಯಾವಯಾವ ಕಾಲಘಟ್ಟಗಳಲ್ಲಿ ಅಲ್ಲಿ ಬಂಡವಾಳಶಾಹಿ ಮತ್ತು ಕೋಮುವಾದಿ ಶಕ್ತಿಗಳ ನಡುವೆ ಸಖ್ಯ ಬೆಳೆದಿದೆಯೋ, ಆವಾಗಲೆಲ್ಲ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿದಿರುವುದು ಮತ್ತು ಬಹುಸಂಖ್ಯಾತ ವರ್ಗ ಶೋಷಣೆಯಿಂದ ನಲುಗಿರುವುದು ಸತ್ಯ.
ಇಂಥ ಸತ್ಯ ನಮ್ಮ ಕಣ್ಮುಂದೆ ಇರುವಾಗ, ’ಭಾರತ್ ಮಾತಾ ಕಿ ಜೈ’, ಎನ್ನುವ ಧ್ವನಿಯಲ್ಲಿ ಯಾವಾಗಲಾದರೂ ಒಡಕು ಬಂದಲ್ಲಿ, ಅದರತ್ತ ಗಂಭೀರವಾಗಿ ಯೋಚಿಸಲೇಬೇಕು. ಇಂಥ ಒಡಕಿಗೆ ಕಾರಣವಾಗುವವರನ್ನು ಗುರುತಿಸಿ ಸರಿದಾರಿಗೆ ತರುವ ಪ್ರಯತ್ನಗಳನ್ನು ಮಾಡಬೇಕೇ ಹೊರತು, ಅವರನ್ನು ಇನ್ನಷ್ಟು ಪ್ರಚೋದನೆಗೆ ಒಳಗೊಳಿಸಬಾರದು. ಎಲ್ಲ ಧರ್ಮಗಳೊಳಗಿನ ಸೌಮ್ಯವಾದಿಗಳು ಮತ್ತು ಸಂವಿಧಾನ ನಿಷ್ಠ ರಾಜಕೀಯ ಪಕ್ಷಗಳ ಪಕ್ವ ಧುರೀಣರು ಒಗ್ಗೂಡಿ ಬೃಹತ್ ಬಂಡವಾಳದ ಮಾಲಿಕತ್ವ ಹೊಂದಿರುವ ಕೆಲವೇ ಕೆಲವು ಗುಂಪುಗಳಿಂದ ಶೋಷಣೆಗೆ ಒಳಗಾಗುವ ಸಾಧ್ಯತೆ ಇರುವ ರೈತರನ್ನು, ಕಾರ್ಮಿಕರನ್ನು ಮತ್ತು ಸಾಮಜಿಕವಾಗಿ ಕೆಳಸ್ತರದಲ್ಲಿರುವ ಜನಸಾಮಾನ್ಯರನ್ನು ರಕ್ಷಿಸಲು ಮುಂದಾಗಬೇಕು. ಹಾಗೆ ನೋಡಿದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡದ್ದು ಇದೇ ಸಾಮಾನ್ಯ ವರ್ಗವೇ ಹೊರತು, ಕೋಮುವಾದಿ ಮತ್ತು ಬಂಡವಾಳಶಾಹಿ ಶಕ್ತಿಗಳಲ್ಲ. ಇನ್ನೂ ಮುಂದುವರೆದು ಹೇಳಬೇಕೆಂದರೆ, ಈ ಎರಡೂ ಶಕ್ತಿಗಳು ಬ್ರಿಟಿಷರೊಂದಿಗೆ ತಮ್ಮ ಸವಲತ್ತುಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಕೈಜೋಡಿಸಿದ್ದರು. ದೇಶ ವಿಭಜನೆಗೊಂಡದ್ದೂ ಕೂಡ ಇದೇ ಶಕ್ತಿಗಳಿಂದ. ಸ್ವಾತಂತ್ರ್ಯ ಚಳವಳಿಯ ನಾಯಕತ್ವವನ್ನು ವಹಿಸಿದ್ದ ಮಹಾತ್ಮಾ ಗಾಂಧಿ ಮತ್ತು ಜವಾಹರ್ ಲಾಲ್ ನೆಹರುರವರಂಥ ಮುಖಂಡರುಗಳನ್ನು ಇಂದು ಒಪ್ಪಿತವಲ್ಲದ ರೀತಿಯಲ್ಲಿ ಬಿಂಬಿಸುತ್ತಿರುವುದೂ ಸಹ ಇದೇ ಜನ. ಅದೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಈ ಧೋರಣೆ ಇಲ್ಲದಿರುವುದಕ್ಕೆ ಕಾರಣ, ಅವರ ಪರವಾಗಿ ನಿಂತಿರುವ ದಲಿತ ಸಮುದಾಯದ ಗಟ್ಟಿತನ. ಅಂಬೇಡ್ಕರ್‌ರವರನ್ನು ನೇರವಾಗಿ ಖಂಡಿಸಲು ಸಾಧ್ಯವಾಗದ ಕಾರಣಕ್ಕೆ, ಅವರು ರೂಪಿಸಿರುವ ಸಂವಿಧಾನದ ಚೌಕಟ್ಟುಗಳನ್ನು ಸಡಿಲಿಸುವ ಪರೋಕ್ಷ ಕೆಲಸಕ್ಕೆ ಮುಂದಾಗುತ್ತಿರುವ ಸದ್ಯದ ವಿದ್ಯಮಾನಗಳಿಗೆ ಕೂಡ ಸಾಕ್ಷಿಯಾಗುತ್ತಿದ್ದೇವೆ.
ಇದಾಗದಂತೆ ತಡೆಯಲು ಇರುವ ಮುಖ್ಯ ಮಾರ್ಗವೆಂದರೆ, ’ಭಾರತ್ ಮಾತಾಕಿ ಜೈ’ ಎನ್ನುವ ಧ್ವನಿ ಕ್ಲೀಷೆಯಾಗದಂತೆ, ಅದು ಹುಟ್ಟಿದ ಸಂದರ್ಭವನ್ನು ನೆನೆದು, ಪ್ರಾಮುಖ್ಯತೆಯನ್ನು ಅರುಹಿ, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಒಳಗೊಳ್ಳುವಿಕೆಯನ್ನು ಸಾಧಿಸಿ, ಸಾಂವಿಧಾನಿಕ ಬದ್ಧತೆಯನ್ನು ಪ್ರದರ್ಶಿಸುವ ಎದೆಯಾಳದ ಧ್ವನಿಯನ್ನು ಗಟ್ಟಿಯಾಗಿಸಬೇಕಿದೆ. ಬೃಹತ್ ರಾಷ್ಟ್ರೀಯ ಚಳವಳಿಯೊಂದರ ಫಲಿತಗಳಾಗಿ ರೂಢಿಗೊಂಡ ಶಬ್ದ, ನುಡಿಗಟ್ಟು ಮತ್ತು ಘೋಷಣೆಗಳು ವರ್ತಮಾನದಲ್ಲಿ ವ್ಯತಿರಿಕ್ತವಾಗಿ
ಬಳಕೆಯಾಗದಂತೆ, ಅವುಗಳ ನಿಜಾರ್ಥಗಳನ್ನು ಚಾರಿತ್ರಿಕ ಸಂಗತಿಳೊಂದಿಗೆ ಯಾವ ಪೂರ್ವಗ್ರಹಿಕೆಗಳಿಲ್ಲದಂತೆ ನಿದರ್ಶಿಸಿಕೊಳ್ಳುತ್ತಾ, ಜನಮಾನಸಕ್ಕೆಮುಟ್ಟಿಸುವ ಕೆಲಸ, ಆಯಾ ಸಂದರ್ಭದ ವಿದ್ವಾಂಸರ, ಚಿಂತಕರ, ಸಾಹಿತಿಗಳ ಮತ್ತು ರಾಜಕೀಯ ನೇತಾರರ ಸಾಮಾಜಿಕ ಹೊಣೆಗಾರಿಕೆಯಾಗಿರುತ್ತದೆ.
ಅಂಥದ್ದೊಂದು ಹೊಣೆಗಾರಿಕೆಯ ಅಭಿವ್ಯಕ್ತಿಯಾಗಿ ಪ್ರಕಟವಾಗಿರುವ ಇತ್ತೀಚಿನ ಕೃತಿ ಎಂದರೆ, ಇಂಗ್ಲಿಷ್ ಮೂಲದ, “ಹೂ ಈಸ್ ಭಾರತ್ ಮಾತಾ?”. ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಕೇಂದ್ರ ಲೋಕಸೇವಾ ಆಯೋಗದ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ ವಿದ್ವಾಂಸರೂ, ಸಂಶೋಧಕರೂ ಮತ್ತು ಸಾಹಿತಿಗಳೂ ಆದ ಪುರುಷೋತ್ತಮ ಅಗರವಾಲ್ ಅವರು ಈ ಕೃತಿಯ ಸಂಪಾದಕರು. ನಮ್ಮ ನಡುವಿನ ಚಿಂತಕರೂ, ಸಾಹಿತಿಗಳೂ ಮತ್ತು ರಾಜಕೀಯ ವಿಶ್ಲೇಷಕರೂ ಆಗಿರುವ ಪ್ರೊ. ಕೆ. ಈ. ರಾಧಾಕೃಷ್ಣರವರು ಇದನ್ನು ಅತ್ಯಂತ ಸರಳ, ಸ್ಪಷ್ಟ, ನೇರ ಮತ್ತು ಮೂಲ ಕೃತಿಯ ಅಭಿವ್ಯಕ್ತಿಗಳಿಗೆ ಧಕ್ಕೆಯಾಗದಂತೆ ಬಹು ಎಚ್ಚರಿಕೆಯಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಮೂರು ದಶಕಗಳ ಕಾಲ ಭಾರತದ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯ ನಾಯಕರಲ್ಲಿ ಒಬ್ಬರಾಗಿ, ತದನಂತರ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ, ಹದಿನೇಳು ವರ್ಷಗಳ ಕಾಲ ಸ್ವಾತಂತ್ರ್ಯೋತ್ತರ ಪ್ರಗತಿಯ ದಿಕ್ಕು ದಿಶೆಗಳನ್ನು ಪ್ರಜಾಪ್ರಭುತ್ವದ ಗಟ್ಟಿ ನೆಲೆಯಲ್ಲಿ ಆಲೋಚಿಸಿ, ಜನಮತದೊಂದಿಗೆ ಸ್ವೀಕರಿಸಿ, ಜಾರಿಗೊಳಿಸಿದ ನೆಹರೂರವರ ಕೃತಿಗಳನ್ನು, ಭಾಷಣಗಳನ್ನು ಮತ್ತು ಲೇಖನಗಳನ್ನು ಸಮಗ್ರವಾಗಿ ನೋಡಿ, ಆಯ್ದು ಸಂಪಾದಿಸಿದ ಲೇಖನಗಳ ಕೃತಿ ಇದಾಗಿದೆ. ಹೆಚ್ಚಿನ ಲೇಖನಗಳು ಅವರ, ’ಜೀವನಚರಿತೆ’, ’ಡಿಸ್ಕವರಿ ಅಫ್ ಇಂಡಿಯಾ’, ’ಗ್ಲಿಂಪ್ಸಸ್ ಅಫ್ ವರ್ಲ್ಡ್ ಹಿಸ್ಟರಿ’ ಮತ್ತು ವಿವಿಧ ಸಂದರ್ಭಗಳಲ್ಲಿ ಬರೆದ ಪತ್ರಗಳ ಸಂಕಲನಗಳಾಗಿದ್ದು, ಕೊನೆಯಲ್ಲಿ ನೆಹರೂ ಅವರ ಬಗ್ಗೆ ಅವರ ಸಮಕಾಲೀನರಾದ ಮಹಾತ್ಮಾಗಾಂಧಿ, ಭಗತ್ ಸಿಂಗ್, ಸರ್ದಾರ್ ಪಟೇಲ್, ಮೌಲಾನಾ ಆಜಾದ್, ಅರುಣಾ ಅಸಫ್ ಆಲಿ, ಶೇಕ್ ಅಬ್ದುಲ್ಲಾ, ರಾಧಾರಿ ಸಿಂಘ್ ದಿನಕರ್, ಆಲಿ ಸರ್ದಾರ್ ಜಫ್ತಿ, ಬಲದೇವ್ ಸಿಂಗ್, ಮಾರ್ಟಿನ್ ಲೂಥರ್‌ಕಿಂಗ್(ಜೂ.), ರಿಚರ್ಡ್ ಅಟೆನ್‌ಬರೋ, ಲಿ ಕುವಾನ್‌ಯೂ, ಅಟಲ್ ಬಿಹಾರಿ ವಾಜಪೇಯಿ ಮುಂತಾದವರು ಆಡಿದ ಬರೆದ ಮಾತುಗಳಿವೆ. ಇವತ್ತಿನ ಸಂದರ್ಭದ ಸ್ಥಿತಿಗತಿಗಳನ್ನು, ಘಟನಾವಳಿಗಳನ್ನು ಮತ್ತು ಪ್ರಭುತ್ವದ ಆಡಳಿತಾತ್ಮಕ ಧೋರಣೆಯನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಚಿಕಿತ್ಸಕ ದೃಷ್ಟಿಯಿಂದ ಸಂಪಾದಿಸಿದ ಕೃತಿ ಇದಾಗಿದ್ದು, ನಮ್ಮ ಪ್ರಸ್ತುತ ಆಲೋಚನೆಗಳಲ್ಲಿ ವಿವೇಚನೆಯನ್ನು ಪುನರ್‌ಸ್ಥಾಪಿಸುವ ಒಳನೋಟಗಳನ್ನು ಕೊಡುವಂತಹುದಾಗಿದೆ.

ಸಂಪಾದಕರ ಮತ್ತು ಅನುವಾದಕರ ಆರಂಭಿಕ ಸುದೀರ್ಘ ಪ್ರಸ್ತಾವನೆಗಳು ಪುಸ್ತಕದಲ್ಲಿ ಸಂಕಲನಗೊಂಡಿರುವ ಲೇಖನಗಳ ಪ್ರವೇಶಿಕೆಗೆ ಅಗತ್ಯ ಮಾರ್ಗದರ್ಶಿಗಳಾಗಿವೆ. ಮೊದಲ ಭಾಗದಲ್ಲಿ ಆರು ಅಧ್ಯಾಯಗಳಿದ್ದು, ಕ್ರಮವಾಗಿ ’ಭಾರತ-ಚಿಂತನೆ ಮತ್ತು ನಿರ್ಮಾಣ’, ’ಭಾರತದ ಇತಿಹಾಸ ಮತ್ತು ಮಹಾನ್ ಚೇತನಗಳು’, ’ನವ ಭಾರತ ನಿರ್ಮಾಣ’, ’ರಾಷ್ಟ್ರೀಯ ಆಂದೋಲನ’, ಧರ್ಮ ಮತ್ತು ಆಧ್ಯಾತ್ಮ,
’ಸಂಸ್ಕೃತಿ, ಸಾಹಿತ್ಯ ಮತ್ತು ಇತಿಹಾಸ’ ಶೀರ್ಷಿಕೆಗಳನ್ನೊಳಗೊಂಡಿವೆ. 590 ಪುಟಗಳ ಈ ಸಂಕಲನದಲ್ಲಿ ನೆಹರೂರವರನ್ನು ಅತ್ಯಂತ ಪ್ರಾಮಾಣಿಕ ನೆಲೆಯಲ್ಲಿ, ವಸ್ತುನಿಷ್ಠವಾಗಿ, ಸತ್ಯಕ್ಕೆ ಚ್ಯುತಿಬಾರದಂತೆ ಪರಿಚಯಿಸುವ ಲೇಖನಗಳಿವೆ. ವರ್ತಮಾನದ ಸಂದರ್ಭದಲ್ಲಿ ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಗೆ ಎಲ್ಲಿಯೂ ಅಪಾಯವಾಗದಂತೆ, ಚಾರಿತ್ರಿಕ ಅನುಭವಗಳ ಹಿನ್ನೆಲೆಯಲ್ಲಿ, ತುರ್ತಾಗಿ ಅನುಸರಿಸಬೇಕಾಗಿರುವ ಅಭಿವೃದ್ಧಿ ಹಾದಿಗೆ ಸ್ಪಷ್ಟ ಒಳನೋಟಗಳಿವೆ. ಭಾರತದ ಸಮಗ್ರ ಅಭಿವೃದ್ಧಿ ಕುರಿತಂತೆ ನೆಹರೂರವರ ನವ ಭಾರತ ನಿರ್ಮಾಣದ ಕನಸುಗಳು; ಬಡತನ ಮತ್ತು ನಿರುದ್ಯೋಗ ನಿರ್ಮೂಲನೆಗಾಗಿ ಕೃಷಿ, ಕೈಗಾರಿಕೆ ಮತ್ತಿತರ ವಲಯಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಪಂಚವಾರ್ಷಿಕ ಯೋಜನೆಗಳು; ವಿಜ್ಞಾನ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿ, ಭದ್ರತೆ ಮತ್ತು ವಿದೇಶಾಂಗ ನೀತಿ; ಪ್ರಬುದ್ಧ ನೆಲೆಯ ರಾಷ್ಟ್ರೀಯತೆಯ ನಿರ್ಮಾಣ, ಮೊದಲಾದುವುಗಳನ್ನು ಸಂಕ್ಷಿಪ್ತವಾಗಿ
ಅರ್ಥಮಾಡಿಕೊಳ್ಳಲು ಇದೊಂದು ಉಪಯುಕ್ತ ಕೃತಿ.
ಕೃತಿಯಲ್ಲಿನ ಲೇಖನಗಳ ಪ್ರಸ್ತುತತೆ ಮತ್ತು ಓದುವ ಆಸಕ್ತಿಯ ಪ್ರೇರಣೆಗೆಂದು ನೆಹರುರವರ ಬರವಣಿಗೆಯ ಕೆಲವೊಂದು ಸಾಲುಗಳನ್ನು ನೋಡುವುದಾದರೆ, – “1. ಹಿಂದೂ, ಮುಸ್ಲಿಂ, ಸಿಖ್ ಮತ್ತಿತರ ಧಾರ್ಮಿಕ ಗುಂಪುಗಳ ಸೈದ್ಧಾಂತಿಕ ಸಮನ್ವಯದಿಂದ ಮಾತ್ರ ರಾಷ್ಟ್ರೀಯತೆ ನಿರ್ಮಾಣವಾಗುತ್ತದೆ ಎಂದು ನಾನು ನಂಬಿರುತ್ತೇನೆ. ಎಲ್ಲ ವಿಷಯಗಳನ್ನು ತನ್ನೊಳಗಿಟ್ಟುಕೊಳ್ಳುವುದೇ ರಾಷ್ಟ್ರೀಯ ದೃಷ್ಟಿಕೋನ ಎಂದರ್ಥ.
2. ರಾಷ್ಟ್ರೀಯತೆ ಕೆಳವರ್ಗದಿಂದ ಉಂಟಾಗುತ್ತದೆ. ಮೇಲ್ವರ್ಗದವರಿಗೆ ತಮ್ಮ ಸವಲತ್ತುಗಳನ್ನು ಕಾಪಾಡಿಕೊಳ್ಳಲು ಬ್ರಿಟಿಷ್ ಆಡಳಿತ ಬೇಕಿದೆ. 3. ಹಿಂದೂ, ಮುಸ್ಲಿಂ ಎರಡೂ ಧರ್ಮಗಳಲ್ಲಿನ ಮೇಲ್ವರ್ಗದವರು ಅವರೊಳಗಿನ ಗುಂಪುಗಳ ಪರವಾಗಿರುವುದಾಗಿ ನಟಿಸುತ್ತಿರುತ್ತಾರೆ. 4. ಪ್ರತಿ ಕೋಮುವಾದಿ ಸಂಘಟನೆ ಅದರೊಳಗಿನ ಜನಸಾಮಾನ್ಯರ ನಿರುದ್ಯೋಗ, ಬಡತನ ಮುಂತಾದುವುಗಳ ಬಗ್ಗೆ ಹೇಳುವದೇ ಇಲ್ಲ. 5. ನ್ಯಾಯ ಮತ್ತು ಶಕ್ತಿ ಪ್ರಯೋಗಗಳ ಮಧ್ಯೆ ವಿಚ್ಛೇದನ ಉಂಟಾಗಬಾರದು. 6. ರಾಷ್ಟ್ರೀಯ ಭಾವನೆ ಎಂದರೆ, ಒಟ್ಟು ಜನರ ಸಮಗ್ರ ಸಾಧನೆ, ಸಂಸ್ಕೃತಿ ಮತ್ತು ಅನುಭವಗಳ ಸಾಮೂಹಿಕ ನೆನಪು. 7. ತುಳಿತಕ್ಕೊಳಗಾದ ಸಮುದಾಯಗಳ ಪರವಾದ ಯಾವುದೇ ಬಗೆಗಿನ ತ್ಯಾಗ ದೊಡ್ಡದಲ್ಲ. 8. ಅತ್ಯಂತ ತಳ ಸಮುದಾಯದವರಿಗೆ ಸ್ವಾತಂತ್ರ್ಯ ಸಿಕ್ಕಿದೆಯೇ ಎನ್ನುವುದರ ಮೇಲೆ ನಿಜವಾದ ಪ್ರಜಾಪ್ರಭುತ್ವ ಸಮರ್ಥಿಸಲ್ಪಡುತ್ತದೆ. ಎಲ್ಲ ಆಯಾಮಗಳ ಅಸಮಾನತೆ ಅದರ ಶತ್ರು. 9. ನಾವು ನಮ್ಮ ಓದಿನಲ್ಲಿ, ಜ್ಞಾನದಲ್ಲಿ ಮತ್ತು ಅನುಭವದಲ್ಲಿ ನಿರಂತರ ಬೆಳೆಯಬೇಕು. 10. ಜೀವನಕ್ಕೆ ಬೆಲೆ ತರುವುದು ಪ್ರಯತ್ನಶೀಲತೆಯೆ ಹೊರತು ಸರಕಾರದ ಸವಲತ್ತುಗಳ ಮೇಲಿನ ನಿರಂತರ ಅವಲಂಬನೆಯಲ್ಲ. 11. ಸಮಾಜದಲ್ಲಿ ಶ್ರೇಣೇಕೃತ ವರ್ಗಗಳಿರುವ ಕಾರಣ ಅವು ಪರಸ್ಪರ ಸಂಘರ್ಷದಲ್ಲಿ ತೊಡಗಿವೆ. ಇಂಥ ಸಂಘರ್ಷಗಳನ್ನು ತೀವ್ರಗೊಳಿಸಬೇಕೇ, ಪರಿಹರಿಸಬೇಕೇ ಅಥವಾ ವಿಸರ್ಜಿಸಬೇಕೇ ಎನ್ನುವ ಪ್ರಶ್ನೆ ಬಂದಾಗ ಪರಿಹರಿಸಬೇಕೆನ್ನುವುದು ನನ್ನ ಅಭಿಮತ. ಹಾಗೆ ಪರಿಹರಿಸುವ ಮಾರ್ಗ ಸಂಘರ್ಷ ಅಥವಾ ಹಿಂಸಾ ಮಾರ್ಗವಾಗಿರಬಾರದು. ಗಾಂಧೀಜಿಯವರು ಹೇಳಿದಂತೆ, ಅನುಸರಿಸುವ ಮಾರ್ಗಗಳು ಗುರಿಗಳನ್ನು ಸಮರ್ಥಿಸುವುದಿಲ್ಲ 12. ಶೋಷಕರು ಮತ್ತು ಶೋಷಣೆಗೆ ಒಳಗಾದವರ ಹಿತಾಸಕ್ತಿಗಳು ಎಂದೂ ಒಂದಾಗಲು ಸಾಧ್ಯವಿಲ್ಲ. ಹೀಗಾಗಿ ಬ್ರಿಟಿಷರು ತಮ್ಮ ಆಡಳಿತ ವಿಸ್ತರಣೆಗಾಗಿ ಮತ್ತು ಉಳಿವಿಕೆಗಾಗಿ ಊಳಿಗಮಾನ್ಯ ವ್ಯವಸ್ಥೆ ಮೇಲೆ ಅವಲಂಬಿತರಾದರು. 13. ಈಗಿನ ಸ್ಥಿತಿಯ ಉತ್ಪಾದನಾ ವ್ಯವಸ್ಥೆಯಲ್ಲಿ ಶ್ರೀಮಂತರ ಇರುವಿಕೆಯ ಅಗತ್ಯವಿಲ್ಲ. ಪ್ರಜಾಸತ್ತಾತ್ಮಕ ಆಶಯದ ಪ್ರಗತಿಯದಾರಿಗೆ ಅವರು ಅಡ್ಡಬರುತ್ತಿರುತ್ತಾರೆ.
ಈ ಮೇಲಿನ ಅನಿಸಿಕೆಗಳನ್ನು ಗಮನಿಸಿದರೆ, ಅವು ಏಳು ದಶಕಗಳ ಹಿಂದೆ ಬರೆದವು ಎನ್ನಿಸದೆ ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಒಟ್ಟನಲ್ಲಿ, “ಅಚ್ಛೇದಿನ್” ಎಂದರೆ ನೆಮ್ಮದಿಯ ಭಾರತ ಎಂದೇ ಆಗಬೇಕಿದೆ. “ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್”, ಎನ್ನುವುದು ಘೋಷಣೆಯಾಗಿ ಉಳಿಯಬಾರದು. ರಾಷ್ಟ್ರೀಯತೆ ಎಂದರೆ ಸರ್ವೋದಯದ ಮೇಲೆ ಅರಳಿದ ಸುಂದರ ಪುಷ್ಪಗಳ ಪರಿಮಳವಾಗಬೇಕೇ ಹೊರತು, ಚುಚ್ಚುವ ಮುಳ್ಳುಗಳಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತದಲ್ಲಿ ಬಹುಮತ ತನ್ನ ಆಶಯಗಳನ್ನು ಹೇರುವುದು ಅಸಹಜವೇನಲ್ಲ. ಆದರೆ, ಅದು ಸಮಷ್ಠಿ ಬದುಕಿಗೆ ಕಂಟಕವಾಗಬಾರದು. ಇಂಥ ಆಶಯಗಳನ್ನು ಪುನರ್ ಸ್ಥಾಪಿಸುವ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಅಗತ್ಯವಾದ ಮಾಹಿತಿ ಮತ್ತು ಪ್ರೇರಣೆಗಳನ್ನು ನೀಡುವ ಪುಸ್ತಕ ಇದಾಗಿದ್ದು, ಪ್ರಜ್ಞಾಪೂರಕವಾಗಿ ಮರೆಯಲೆತ್ನಿಸುತ್ತಿರುವ ಅಥವಾ ತಿರುಚಲ್ಪಡುತ್ತಿರುವ ನೆಹರುರವರ ಚಿಂತನೆಗಳನ್ನು ಮತ್ತೆ ಮುಖ್ಯವಾಹಿನಿಯತ್ತ ತರಲು ಮಾಡಿರುವ ಸಂಪಾದಕರ ಮತ್ತು ಅನುವಾದಕರ ಪ್ರಯತ್ನ ಪ್ರಶಂಸನೀಯವಾದುದು.

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ
ವಿಶ್ರಾಂತ ಪ್ರಾಂಶುಪಾಲರು ಮತ್ತು ಆರ್ಥಿಕ-ಶೈಕ್ಷಣಿಕ ಚಿಂತಕರು. ಜಾಗತೀಕರಣ ಮತ್ತು ಭಾರತದ ಅಭಿವೃದ್ಧಿ ಕುರಿತ ’ಬೋಧಿವೃಕ್ಷದ ಕೆಳಗೆ’, ’ಬೆಳಗಿನಬೆರಗು’, ಮತ್ತಿತರ ಕೃತಿಗಳು ಪ್ರಮುಖ ಪ್ರಕಟಣೆಗಳಾಗಿವೆ. ಚಿತ್ರದುರ್ಗ ಮೂಲದವರು.
ಇದನ್ನೂ ಓದಿ: “ಕೇಳುವಿರೇನು ನೀವು ನಾ ಹುಚ್ಚನಾದದ್ದು ಹೇಗೆಂದು?”- ಖಲೀಲ್ ಗಿಬ್ರಾನ್


