Homeಮುಖಪುಟಮಂಡ್ಯ: ನೆತ್ತಿಯ ಮೇಲಿನ ಸೂರಿಗಾಗಿ, ಭೂಮಿಯ ಹಕ್ಕಿಗಾಗಿ ಶ್ರಮಿಕರ ಪಟ್ಟುಬಿಡದ ಹೋರಾಟ

ಮಂಡ್ಯ: ನೆತ್ತಿಯ ಮೇಲಿನ ಸೂರಿಗಾಗಿ, ಭೂಮಿಯ ಹಕ್ಕಿಗಾಗಿ ಶ್ರಮಿಕರ ಪಟ್ಟುಬಿಡದ ಹೋರಾಟ

- Advertisement -
- Advertisement -

ಸರ್ಕಾರದ್ದೇ ನೀತಿಗಳು, ಸರ್ಕಾರದ್ದೇ ಕಾಯ್ದೆಗಳು, ಸರ್ಕಾರದ್ದೇ ಅಧಿಕಾರಿಗಳು. ಜನಸಮುದಾಯಗಳ ಒಳಿತಿಗೆ ಇರಬೇಕಾದ ಕಾಯ್ದೆಗಳನ್ನು ಸರಿಯಾಗಿ ಅನುಷ್ಠಾನ ಮಾಡದಿರುವುದರಿಂದಲೋ, ಅಧಿಕಾರಿಗಳ ನಿರ್ಲಕ್ಷ್ಯದಿಂದಲೋ ಶಿಕ್ಷೆ-ತೊಂದರೆಗಳನ್ನು ಅನುಭವಿಸುವವರು ಬಡವರು, ದಲಿತರು, ಆದಿವಾಸಿಗಳು, ಹಿಂದುಳಿದ ಸಮುದಾಯಗಳು. ಒಂದೇ ಮಾತಿನಲ್ಲಿ ಹೇಳುವುದಾದರೆ ತಳಸಮುದಾಯಗಳು.

ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆಗಳಿಂದಾಗಿ ಮಂಡ್ಯ ನಗರವನ್ನು ಕಟ್ಟಿದ, ಸ್ಲಂ ಜನರು ಎಂದು ಕರೆಯಲ್ಪಡುವ ಶ್ರಮಿಕ ನಗರ ನಿವಾಸಿಗಳು ಹಲವು ವರ್ಷಗಳಿಂದ ಸಮಸ್ಯೆಯ ಸುಳಿಯಿಂದ ಹೊರಬರಲಾಗುತ್ತಿಲ್ಲ. ಮಂಡ್ಯ ನಗರದಲ್ಲಿ 24 ಶ್ರಮಿಕ ನಗರಗಳಿವೆ. ಅಲ್ಲಿ ವಾಸಿಸುವ ನಿವಾಸಿಗಳಿಗೆ ಜಿಲ್ಲಾಡಳಿತವು ಹತ್ತಾರು ಸಮಸ್ಯೆಗಳನ್ನು ಸೃಷ್ಟಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ವಾಸಿಸುವ ಭೂಮಿ ಹಕ್ಕಿನ ಸಮಸ್ಯೆ, ಅವರ ಬದುಕನ್ನು ತಂತಿಯ ಮೇಲಿನ ನಡಿಗೆಯನ್ನಾಗಿಸಿದೆ. ಹೀಗಾಗಿ, ಈ ಜನರು ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ, ಆಡಳಿತದ ಸ್ಪಂದನೆಯಿಲ್ಲದೆ, ಅವರೆಲ್ಲರೂ ಭರವಸೆಯನ್ನೇ ಕಳೆದುಕೊಳ್ಳುವಂತಾಗಿದೆ.

ಮಂಡ್ಯದ ಕಾಳಿಕಾಂಬ ದೇವಾಲಯ ಪಕ್ಕದಲ್ಲಿರುವ ಕಾಳಿಕಾಂಬ ಸ್ಲಂ ಎಂದು ಕರೆಯಲ್ಪಡುವ ಶ್ರಮಿಕ ನಗರದ ಸಮಸ್ಯೆ 2006ರಿಂದಲೂ ಉಪೇಕ್ಷೆಗೆ ಒಳಗಾಗಿದೆ. ಅವರ ಬೇಡಿಕೆಗಳೆಲ್ಲವೂ ನೆನೆಗುದಿಗೆ ಬಿದ್ದಿದೆ. ಅಲ್ಲಿನ ಜನರು, ಜನಪರ ಸಂಘಟನೆಗಳ ನೆರವಿನಿಂದ ನ್ಯಾಯಾಂಗದ ಮೆಟ್ಟಿಲೇರಿ ತಮ್ಮ ಭೂಮಿಯನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಗೆದ್ದು ಬಂದಿದ್ದಾರಾದರೂ, ಅಧಿಕಾರಿಗಳು ಮತ್ತು ಭೂಗಳ್ಳರ ಅಪವಿತ್ರ ಮೈತ್ರಿಯಿಂದಾಗಿ ಇನ್ನೂ ಅವರಿಗೆ ಆ ಭೂಮಿಯ ಹಕ್ಕು ಸಿಗದೇ ಮತ್ತೆ ಕೋರ್ಟ್ ಬಾಗಿಲು ತಟ್ಟುವಂತಾಗಿದೆ.

ಮಂಡ್ಯ ಆರ್‌ಟಿಓ ಮುಂಭಾಗದಲ್ಲಿರುವ ಕಾಳಪ್ಪ ಬಡಾವಣೆ ಪ್ರದೇಶದ ಜನರು 2007ರಿಂದ ಅತೀವ ತೊಂದರೆಯನ್ನು ಎದುರಿಸುತ್ತಲೇ ಇದ್ದಾರೆ. ಅವರನ್ನು 2007ರಲ್ಲಿ ಎತ್ತಂಗಡಿ ಮಾಡಿಸಲು ಯತ್ನಿಸಲಾಗಿತ್ತು. ನೆಲೆ ಕಳೆದುಕೊಂಡರೆ ಬದುಕು ಅತಂತ್ರ ಎಂದರಿತ ಅಲ್ಲಿನ ಜನರ ಸುದೀರ್ಘ ಹೋರಾಟದಿಂದ ಅಲ್ಲಿಯೇ ವಾಸಿಸಲು ಸಾಧ್ಯವಾಗಿದೆ. ಆದರೆ, ಇದುವರೆಗೂ ಅವರಿಗೆ ಭೂಮಿಯ ದಾಖಲೆಗಳ ಸಮಸ್ಯೆಗಳು, ಆಡಳಿತಾತ್ಮಕ ತೊಡಕುಗಳು ಕಾಡುತ್ತಲೇ ಇವೆ.

ಇನ್ನು, ಹೇಗೋ ಸೂರು ಕಟ್ಟಿಕೊಂಡು ತಮ್ಮ ಮನೆಗಳಲ್ಲಿ ವಾಸಿಸುತ್ತಿದ್ದ ಹಾಲಹಳ್ಳಿ ಶ್ರಮಿಕನಗರದ ಜನರಿಗೆ ಹೊಸ ಮನೆಯ ಆಸೆ ಹುಟ್ಟಸಿ ಮನೆ ಖಾಲಿ ಮಾಡಿಸಿ, ಅವರ ಮನೆಗಳನ್ನೆಲ್ಲಾ ಕೆಡವಲಾಗಿದೆ. ಐದಾರು ವರ್ಷಗಳಿಂದ ಹೊಸ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಲೇ ಇದೆ. ಎಳೆದೂ ಎಳೆದೂ ಒಂದಷ್ಟು ಮನೆಗಳು ನಿರ್ಮಾಣಗೊಂಡಿವೆ. ಆದರೆ, ಈಗ ಹೊಸ ತಗಾದೆ ತೆಗೆದು, ತಮ್ಮ ಹಳೆಯ ಮನೆಗಳನ್ನು ಕೆಡವುದಕ್ಕೂ ಮೊದಲು ಆ ಮನೆಗಳಲ್ಲಿ ತಾವೇ ಇದ್ದೆವು ಎಂದು ದಾಖಲೆ ತೋರಿಸಿ ಸಾಬೀತುಪಡಿಸಬೇಕು, ಇಲ್ಲದಿದ್ದರೆ ಹೊಸ ಮನೆ ಇಲ್ಲ ಎಂಬ ಆಷಾಢಭೂತಿತದ ಕ್ರೌರ್ಯವನ್ನು ಜಿಲ್ಲಾಡಳಿತ ತೋರುತ್ತಿದೆ.

ಹೀಗೆ, ಇಂದಿರಾ ಬಡಾವಣೆ, ನ್ಯೂ ತಮಿಳು ಕಾಲೋನಿ, ಗಾಡಿಕಾರ್ಖಾನೆ, ಹೊಸಹಳ್ಳಿ ಗುರುಮಠ, ಸ್ಲಾಟರ್‌ಹೌಸ್ ಶ್ರಮಿಕನಗರಗಳು ಸೇರಿದಂತೆ ಒಂದೊಂದು ಶ್ರಮಿಕ ನಗರಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಇನ್ನೊಂದು, ಮತ್ತೊಂದು-ಮಗದೊಂದು ಎಂಬಂತೆ ಸಮಸ್ಯೆಗಳು ಕಾಡುತ್ತಲೇ ಇವೆ.

ತಮ್ಮ ಸಮಸ್ಯೆಗಳನ್ನು ಬಗೆಹರಿಸಿ, ತಮ್ಮ ಹಕ್ಕುಪತ್ರಗಳನ್ನು ಒದಗಿಸಬೇಕು ಎಂದು ಜಿಲ್ಲಾಡಳಿತದ ಮುಂದೆ ಹಲವು ಪ್ರತಿಭಟನೆಗಳು, ಐದು ವರ್ಷಕ್ಕೊಮ್ಮೆ ಗೆದ್ದು ಬರುವ ಶಾಸಕರು, ಸಂದರಿಗೆ ನೂರಾರು ಮನವಿ ಪತ್ರಗಳನ್ನು ಕೊಟ್ಟು ಸುಸ್ತಾಗಿರುವ ಶ್ರಮಿಕ ನಿವಾಸಿಗಳು ಅಂತಿಮವಾಗಿ ಸುದೀರ್ಘ ಸಂಘರ್ಷಕ್ಕಿಳಿದಿದ್ದಾರೆ.

ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಧೋರಣೆಯ ವಿರುದ್ದ ಕುದಿಯುತ್ತಿದ್ದ ಶ್ರಮಿಕ ನಿವಾಸಿಗಳಿಗೆ ಸ್ಫ್ಪೂರ್ತಿಯಾಗಿ ಕಂಡದ್ದು ದೆಹಲಿ ರೈತ ಹೋರಾಟ. ರೈತರ ಯಶಸ್ವಿ ಹೋರಾಟದ ಸ್ಫ್ಪೂರ್ತಿ ಪಡೆದ ಶ್ರಮಿಕ ನಿವಾಸಿಗಳು, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ನೇತೃತ್ವದಲ್ಲಿ ’ಮಾಡು ಇಲ್ಲವೇ ಮಡಿ’ ಎಂಬ ಧ್ಯೇಯದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂದು ವಾರ ನಿರ್ಣಾಯಕ ಹೋರಾಟಕ್ಕಿಳಿದಿದ್ದರು.

ವಿವಿಧ ಹಕ್ಕೊತ್ತಾಯಗಳನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದ ಶ್ರಮಿಕ ನಿವಾಸಿಗಳು, ಮಂಡ್ಯ ನಗರದಲ್ಲಿರುವ ಶ್ರಮಿಕ ನಗರ ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು, ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ಸ್ಲಂ ಜನರಿಗೆ ನ್ಯಾಯ ಒದಗಿಸಬೇಕು. ಅದಕ್ಕಾಗಿ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಮದ್ದೂರಿನ ಶ್ರಮಿಕ ನಗರ ನಿವಾಸಿಗಳಿಗೆ ವಿವೇಶನ ಒದಗಿಸಬೇಕು, ಶ್ರೀರಂಗಪಟ್ಟಣದ ಮೊಗರಳ್ಳಿ ಮಂಟಿಯಿಂದ ಚನ್ನಹಳ್ಳಿಗೆ ಏಕಾಏಕಿ ಸ್ಥಳಾಂತರಿಸಲ್ಪಟ್ಟ ಹಕ್ಕಿ-ಪಿಕ್ಕಿ ಸಮುದಾಯದ ಜನರಿಗೆ ಭೂಮಿ ಮತ್ತು ವಸತಿ ಹಕ್ಕನ್ನು ನೀಡಬೇಕು. ನಾಗಮಂಗಲ ತಾಲೂಕಿನ ಶಿಕಾರಿಪುರ ಅಲೆಮಾರಿ ಆದಿವಾಸಿಗಳಿಗೆ ಅರಣ್ಯ ಇಲಾಖೆ ಮತ್ತು ಇತರ ಸರ್ಕಾರಿ ಇಲಾಖೆಗಳಿಂದ ಉಂಟಾಗುತ್ತಿರುವ ಭೂಮಿ ಹಕ್ಕಿನ ವಿಚಾರ ಇತ್ಯರ್ಥಪಡಿಸಬೇಕು. ಸರ್ಕಾರವೇ ಹೊರಡಿಸಿದ್ದ ಆದೇಶದಂತೆ ನಗರ ಪ್ರದೇಶಗಳ ಬಡವರಿಗೆ ಅಕ್ರಮ ಸಕ್ರಮದ ಅಡಿಯಲ್ಲಿ ಭೂಮಿ ಸೌಕರ್ಯ ಒದಗಿಸುವ ಸೌಲಭ್ಯದಡಿ 94ಸಿಸಿ ಅರ್ಜಿ ಸಲ್ಲಿಸಿರುವ ಜನರಿಗೆ ಅವರ ಭೂಮಿಯನ್ನು ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿ ಡಿ. 1ರಿಂದ ನಿರಂತರ ಪ್ರತಿಭಟನೆ ನಡೆಸಿದ್ದಾರೆ.

ಆರಂಭದಲ್ಲಿ ಎಂದಿನಂತೆ ನಿರ್ಲಕ್ಷ್ಯ ವಹಿಸಿದ ಜಿಲ್ಲಾಡಳಿತ, ಶ್ರಮಿಕ ನಗರ ನಿವಾಸಿಗಳ ಒಂದು ವಾರದ ನಿರಂತರ ಹೋರಾಟಕ್ಕೆ ಮಣಿದಿದೆ. ಭೂಮಿ ಸಮಸ್ಯೆಗಳ ಪರಿಹಾರಕ್ಕೆ ಉನ್ನತ ಹಂತದ ಸಮಿತಿ ರಚನೆ, ಭೂಮಂಜೂರಾತಿ ಸಮಿತಿಗಳ ರಚನೆ ಮಾಡುವುದಾಗಿ ಒಪ್ಪಿಕೊಂಡಿದೆ. ಮಾತ್ರವಲ್ಲದೆ, ಎಲ್ಲಾ ಹಕ್ಕೊತ್ತಾಯಗಳನ್ನೂ ಈಡೇರಿಸುವ ಭರವಸೆಯನ್ನೂ ನೀಡಿದೆ.

“ಇದು 20 ವರ್ಷಗಳ ಹೋರಾಟದ ಫಲ. ನಮ್ಮ ಹೋರಾಟದ ರೂಪ ಬದಲಾಗಬಹುದೇ ಹೊರತು, ಹೋರಾಟವು ನಿಲ್ಲುವುದಿಲ್ಲ. ಜಿಲ್ಲಾಡಳಿತವು ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವ ಭರವಸೆ ನೀಡಿದೆ. ಹೀಗಾಗಿ, ನಮ್ಮ ನಿರಂತರ ನಿರ್ಣಾಯಕ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಿದ್ದೇವೆ. ಆದಷ್ಟು ಬೇಗ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗದಿದ್ದರೆ, ನಮ್ಮ ಹೋರಾಟ ಮುಂದುವರೆಯುತ್ತದೆ” ಎನ್ನುತ್ತಾರೆ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಸಂಚಾಲಕ ಸಿದ್ದರಾಜು.

“ದಮನಿತರು ಸಂಘಟಿತರಾದರೆ ಅವರ ದನಿಗೆ ಎಷ್ಟು ಗಟ್ಟಿತನ ಬರುತ್ತದೆಂಬುದಕ್ಕೆ ಶ್ರಮಿಕ ನಿವಾಸಿಗಳ ಸಂಘಟನೆ ಸಾಕ್ಷಿ. ಈ ಸಂಘಟನೆಯ ಎಲ್ಲಾ ಹೋರಾಟಗಳಲ್ಲೂ ನಾನು ಪಾಲ್ಗೊಂಡಿದ್ದೇನೆ. ಕಾನೂನು ಎಲ್ಲರಿಗೂ ಒಂದೇ. ನಾವು ಸಾಮಾನ್ಯರು, ಅದರ ಪ್ರಯೋಜನ ಪಡೆಯಬೇಕೆಂದರೆ ನಮ್ಮ ಸಂಘಟಿತ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ಚಿಂತಕರೂ, ಹಿರಿಯ ವಕೀಲರೂ ಆದ ಬಿ.ಟಿ.ವಿಶ್ವನಾಥ್ ಹೇಳಿದ್ದಾರೆ.

“ದುಡಿಯುವ ಜನರ ಶಕ್ತಿಯನ್ನು ಅಧಿಕಾರಿಗಳು ಮತ್ತು ರಾಜಕಾರಣಿಗಳು ಕಡೆಗಣಿಸಬಾರದು. ಆ ರೀತಿ ಕಡೆಗಣಿಸಿದ ದೊಡ್ಡ ರಾಜಕಾರಣಿಗಳ ರಾಜಕೀಯ ಭವಿಷ್ಯವನ್ನೇ ಮೂಲೆಗುಂಪು ಮಾಡಿದ ಇತಿಹಾಸ ಈ
ಜನರಿಗಿದೆ” ಎನ್ನುತ್ತಾರೆ ಹೋರಾಟಗಾರ, ಪತ್ರಕರ್ತ ನಾಗೇಶ್.

ಜಿಲ್ಲಾಡಳಿತ ನೀಡಿರುವ ಭರವಸೆಗಳನ್ನು ಈಡೇರಿಸಿ, ಶ್ರಮಿಕ ನಗರ ನಿವಾಸಿಗಳ ಸಮಸ್ಯೆಗಳನ್ನು ನಿವಾರಿಸುವತ್ತ ಕಾರ್ಯಪ್ರವೃತ್ತರಾಗಬೇಕು ಎಂಬುದು ಈ ನಿರ್ಲಕ್ಷಿತ ಸಮುದಾಯಗಳ ಆಗ್ರಹ.


ಇದನ್ನೂ ಓದಿ: ರಾಜೇಶ್ವರಿ ತೇಜಸ್ವಿ ಸ್ಮರಣೆ; ಜೀವನ ಪ್ರೀತಿಯ ಹುಚ್ಚುತನವನ್ನು ಕಾಣಿಸಿದ ಲೇಖಕಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...