Homeಮುಖಪುಟಚುನಾವಣಾ ಸಮೀಕ್ಷೆಗಳೆಂಬ ಏಜೆಂಟ್‌ಗಳು; ಮತದಾರರನ್ನು ಸುಲಭವಾಗಿ ದಾರಿ ತಪ್ಪಿಸುತ್ತವೆ!

ಚುನಾವಣಾ ಸಮೀಕ್ಷೆಗಳೆಂಬ ಏಜೆಂಟ್‌ಗಳು; ಮತದಾರರನ್ನು ಸುಲಭವಾಗಿ ದಾರಿ ತಪ್ಪಿಸುತ್ತವೆ!

- Advertisement -
- Advertisement -

ಮುಂದಿನ ತಿಂಗಳು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳು 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯನ್ನು ನೀಡುತ್ತವೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ದೇಶದ ಚಿತ್ತ ಉತ್ತರ ಪ್ರದೇಶದ ಚುನಾವಣೆಯತ್ತ ನೆಟ್ಟಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಲವಾರು ಸಚಿವ-ಶಾಸಕರು ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನು ಸೇರುತ್ತಿದ್ದಾರೆ. ಅಲ್ಲದೆ, ಸಿಎಂ ಯೋಗಿ ಆದಿತ್ಯನಾಥ್‌ ಅವರ ವರ್ಚಸ್ಸು ಕುಸಿದಿದ್ದು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಹೀಗಾಗಿ, ಬಿಜೆಪಿ ಸೋಲು ಕಾಣುವ ಸಂಭವವನ್ನು ಅರಿತಿರುವ ಬಿಜೆಪಿ ಹೈಕಮಾಂಡ್‌, ಬಿಜೆಪಿ ಪ್ರಚಾರದಲ್ಲಿ ಯೋಗಿ ಅವರನ್ನು ಒಂದು ನಿರ್ದಿಷ್ಟ ಪ್ರದೇಶಕಷ್ಟೇ ಸೀಮಿತಗೊಳಿಸಿ, ಮೋದಿ ಅವರನ್ನು ರಾಜ್ಯಾದ್ಯಂತ ಪ್ರಚಾರಕ್ಕೆ ಇಳಿಸಲು ಚಿಂತಿಸುತ್ತಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಚುನಾವಣೆ; ಮುಗ್ಗರಿಸುತ್ತಿರುವ ಮೋದಿ-ಯೋಗಿ ಜೋಡಿ

ಇದೇ ವೇಳೆ, ಉತ್ತರ ಪ್ರದೇಶವೂ ಸೇರಿದಂತೆ ಐದು ರಾಜ್ಯಗಳ ಚುನಾವಣೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬೀಳುತ್ತಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇಂತಹ ಸಮೀಕ್ಷೆಗಳನ್ನು ಅಲ್ಲಗಳೆದಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್, “ಚುನಾವಣಾ ಪೂರ್ವ ಸಮೀಕ್ಷೆಗಳು – ಅಭಿಪ್ರಾಯ ಸಂಗ್ರಹಗಳಲ್ಲ. ಅವು ಅಫೀಮು ಸಮೀಕ್ಷೆಗಳು. ಇವು ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುತ್ತವೆ. ಬಿಜೆಪಿ ಪರವಾದ ಅಪೀಮನ್ನು ತುಂಬಿದ್ದು, ಜನರನ್ನು ದಾರಿ ತಪ್ಪಿಸುತ್ತವೆ. ಸಮೀಕ್ಷೆಗಳನ್ನು ನಿಷೇಧಿಸಬೇಕು” ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಾತ್ರವಲ್ಲದೆ, ಸಮಾಜವಾದಿ ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಸಮೀಕ್ಷೆಗಳು ಬಿಜೆಪಿ ಪರ ಪ್ರಚಾರಕ್ಕಾಗಿ ಬಳಕೆಯಾಗುತ್ತಿವೆ. ಇವು ಬಿಜೆಪಿ ಮತದಾರರ ಮೇಲೆ ಪ್ರಭಾವ ಬೀರಲು ಮಾರುವೇಷದಲ್ಲಿ ತಂತ್ರಗಳು. ಇದು ಚುನಾವಣಾ ಆಯೋಗದ ‘ಮಾದರಿ ನೀತಿ ಸಂಹಿತೆ’ಯ ಉಲ್ಲಂಘನೆಯಾಗಿದೆ. ಹೀಗಾಗಿ, ಟಿವಿ ಚಾನೆಲ್‌ಗಳು ನಡೆಸುವ ಸಮೀಕ್ಷೆಗಳನ್ನು ನಿಷೇಧಿಸಬೇಕು ಎಂದು ಕೇಳಿಕೊಂಡಿದೆ.

ಚುನಾವಣಾ ಸಮೀಕ್ಷೆಗಳ ವಿರುದ್ದ ಸಮಾಜವಾದಿ ಪಕ್ಷವು ಮಾಡುತ್ತಿರುವ ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳೂ ಇವೆ.

ಮತದಾರರ ಒಲವನ್ನು ಪಕ್ಷಗಳತ್ತ ಸೆಳೆಯಲು ಜಾಹೀರಾತುಗಳು, ಆಶ್ವಾಸನೆಗಳು, ಪ್ರಣಾಳಿಕೆಗಳು ಹೇಗೆ ಕೆಲಸ ಮಾಡುತ್ತವೆಯೋ, ಅದೇ ರೀತಿಯಲ್ಲಿ ಸಮೀಕ್ಷೆಗಳು ಕೂಡ ಯಾವುದಾದರೂ ಒಂದು ಪಕ್ಷದ ಪರವಾಗಿ ಮತದಾರರ ಮೇಲೆ ಪರಿಣಾಮವನ್ನು ಬೀರುತ್ತವೆ. ಯಾವುದೋ ಒಂದು ಪಕ್ಷ ಈ ಬಾರಿ ಅಧಿಕಾರಕ್ಕೇರುತ್ತದೆ ಎಂದು ಟಿವಿ-ಪತ್ರಿಕೆಗಳಲ್ಲಿ ಪದೇ-ಪದೇ ಪ್ರಸಾರವಾದರೆ, ವೀಕ್ಷಕರ ಆಲೋಚನೆಗಳ ಮೇಲೆ ಅವು ಪರಿಣಾಮ ಬೀರುತ್ತವೆ. ಇದು, ಸುದ್ದಿವಾಹಿನಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಪಕ್ಷದ ಮೇಲೆ ಮತದಾರರ ಒಲವನ್ನು ಕೇಂದ್ರೀಕರಿಸುತ್ತದೆ. ಅಲ್ಲದಿದ್ದರೂ, ಈ ಪಕ್ಷ ಗೆಲ್ಲುತ್ತದೆ ಎಂದು ಪದೇ-ಪದೇ ಹೇಳಲಾಗುತ್ತಿದೆ. ಅದೇ ಪಕ್ಷಕ್ಕೆ ಮತ ಹಾಕಿಬಿಡುವ ಎಂಬ ಮನಸ್ಥಿತಿಯನ್ನಾದರೂ ಈ ಸಮೀಕ್ಷೆಗಳು ಜನರಲ್ಲಿ ಹುಟ್ಟಿಸುತ್ತವೆ.

ಇದನ್ನೂ ಓದಿ: ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ವಿಚಿತ್ರ ಮುನ್ಸೂಚನೆ: ಭಾಗ 1

ಇದಕ್ಕೆ ಉದಾಹರಣೆ ಎಂಬಂತೆ, ಕಳೆದ (2019ರ) ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ವಿರುದ್ದ ಆಡಳಿತ ವಿರೋಧಿ ಅಲೆ ಎಂಬುದು ಸ್ಪಷ್ಟವಾಗಿತ್ತು. ಆದರೆ, ಪುಲ್ವಾಮ ದಾಳಿಯ ನಂತರ, ಘಟನೆಯ ಸುತ್ತಲಿನ ಬೆಳವಣಿಗಳಿಗೆ ಸಂಬಂಧಿಸಿದಂತೆ ಸುದ್ದಿ ವಾಹಿನಿಗಳು ಪ್ರಧಾನ ಮೋದಿ ಅವರನ್ನು ಬಿಂಬಿಸಿದ ರೀತಿಯು ಜನರಲ್ಲಿ ಮತ್ತೆ ಬಿಜೆಪಿ ಪರವಾದ ಒಲವನ್ನು ಹುಟ್ಟುಹಾಕಿತು.

ಅದೇ ರೀತಿಯಲ್ಲಿ ಮಂಡ್ಯ ಕ್ಷೇತ್ರದತ್ತ ಇಂಡಿಯಾವೇ ನೋಡುತ್ತಿವೆ ಎಂಬ ರೀತಿಯಲ್ಲಿ ಕನ್ನಡದ ಸುದ್ದಿವಾಹಿನಿಗಳು ಪ್ರತಿ ದಿನ ಸುದ್ದಿಗಳನ್ನು ಪ್ರಸಾರ ಮಾಡಿದವು. ಇವುಗಳಲ್ಲಿ ಬಹುತೇಕ ಸುದ್ದಿಗಳು ಜೆಡಿಎಸ್‌ ವಿರುದ್ದವೂ ಇದ್ದವು, ಮಾತ್ರವಲ್ಲದೆ, ಸುಮಲತಾ ಪರವಾಗಿ ವಿಭಿನ್ನ ರೀತಿಯಲ್ಲಿ ಸುದ್ದಿಗಳನ್ನೂ ಪ್ರಸಾರ ಮಾಡಲಾಗಿತ್ತು. ಇದೆಲ್ಲದರ ಪರಿಣಾಮವಾಗಿ ಸುಮಲತಾ ಅವರು ನಿರಾಯಾಸವಾಗಿ ಗೆಲುವು ಸಾಧಿಸಿದರು.

ಅದೇ ಚುನಾವಣೆಯಲ್ಲಿ ದೇಶಾದ್ಯಂತ ಮತ ಚಲಾಯಿಸಿದ ಪ್ರತಿ 100 ಭಾರತೀಯರಲ್ಲಿ ಕೇವಲ 35 ಜನರು ಮಾತ್ರ ಬದ್ಧ ಮತದಾರರಾದ್ದರು. ಅವರು ಪ್ರಚಾರ ಪ್ರಾರಂಭವಾಗುವ ಮೊದಲೇ ಯಾವ ಪಕ್ಷಕ್ಕೆ ಮತ ಹಾಕಬೇಕೆಂದು ನಿರ್ಧರಿಸಿದ್ದರು. ಉಳಿದ 65 ಮತದಾರರು ಚುನಾವಣೆಯ ದಿನದ ಹಿಂದಿನ ಕೆಲವು ದಿನಗಳು ಅಥವಾ ವಾರಗಳಲ್ಲಿ ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿದರು ಎಂದು ಲೋಕನೀತಿ ರಾಷ್ಟ್ರೀಯ ಚುನಾವಣಾ ಅಧ್ಯಯನದಲ್ಲಿ ಪ್ರಕಟವಾದ ಪ್ರಾಯೋಗಿಕ ಸಂಶೋಧನೆ ವರದಿ ಹೇಳುತ್ತದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಉಪ ಮುಖ್ಯಮಂತ್ರಿಗೆ ಘೇರಾವ್ ಹಾಕಿ, ಸ್ವ ಕ್ಷೇತ್ರದಿಂದ ವಾಪಸ್ ಕಳುಹಿಸಿದ ಮಹಿಳೆಯರು

ಈ ದೊಡ್ಡ ಸಂಖ್ಯೆಯ ಮತದಾರರು ಕೊನೆಯ ಕ್ಷಣದಲ್ಲಿ ಯಾರಿಗೆ ಮತ ಹಾಕಬೇಕೆಂದು ಚುನಾವಣಾ ಅಲೆ ಯಾರ ಪರವಾಗಿ ಎಂಬುದನ್ನು ಗಮನಿಸಿ ನಿರ್ಧರಿಸುತ್ತಾರೆ. ಆ 65% ಮತದಾರರಲ್ಲಿ 30% ಮತಾದಾರರು ತಾವು ಮತಹಾಕುವ ಅಭ್ಯರ್ಥಿಯೇ ಗೆಲ್ಲಬೇಕು ಎಂದು ಬಯಸುತ್ತಾರೆ. ಅವರು, ಯಾರು ಗೆಲ್ಲುತ್ತಾರೆ ಎಂದು ಪದೇ-ಪದೇ ಹೇಳಲಾಗುತ್ತಿರುತ್ತದೆಯೇ ಅವರಿಗೆ ಮತಹಾಕುತ್ತಾರೆ. ನೇರವಾಗಿ ಹೇಳುವುದಾರೆ ಆ 30% ಮತದಾರರು ಸಂಭವನೀಯ ವಿಜೇತರಿಗೆ ಮತ ಹಾಕುತ್ತಾರೆ ಎಂದು ಅದೇ ವರದಿ ಹೇಳುತ್ತದೆ.

ಯುಪಿಯಂತಹ ಕಡಿಮೆ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಹೆಚ್ಚಿನ ಮತದಾರರು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಸಂಭವನೀಯ ವಿಜೇತರ ಕಡೆಗೆ ಒಲವು ತೋರುತ್ತಾರೆ. ಇಂತಹ ವಿದ್ಯಾಮಾನವನ್ನು ರಾಜಕೀಯ ವಿಜ್ಞಾನದಲ್ಲಿ ‘ಬ್ಯಾಂಡ್‌ವ್ಯಾಗನ್ ಎಫೆಕ್ಟ್’ ಎಂದು ಕರೆಯಲಾಗುತ್ತದೆ.

ಬಂಗೇರ್‌ಮೌನಂತಹ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಸ್ಥಳೀಯ ನೆಟ್‌ವರ್ಕ್‌ಗಳು, ಮತಗಟ್ಟೆ ಮಟ್ಟದ ಮತದಾನ ದತ್ತಾಂಶ ಹಾಗೂ ಚುನಾವಣಾ ಪೂರ್ವ ಸಮೀಕ್ಷೆಗಳ ಸಹಾಯದಿಂದ ಯಾವ ಮನೆಗಳು ತಮಗೆ ಮತ ಹಾಕಿಲ್ಲ ಎಂಬುದನ್ನು ಗುರುತಿಸುವುದು ಸುಲಭವಾಗುತ್ತದೆ. ಇದು, ವಿಜೇತ ಜನಪ್ರತಿನಿಧಿಗಳು ಮತ್ತು ಮತದಾರರ ನಡುವೆ ‘ಕ್ಲೈಂಟೆಲಿಸಂ’ (ತಮಗೆ ಮತಹಾಕಿದವರಿಗಷ್ಟೇ ಕೆಲಸ ಮಾಡಿಕೊಡುವುದು) ಸೃಷ್ಟಿಯಾಗುತ್ತದೆ. ಇದರಿಂದಾಗಿ, ಬಡವರು ಸಂಭಾವ್ಯ ವಿಜೇತರಿಗೆ ಮತ ಚಲಾಯಿಸದೇ ಇರುವುದು ಬಹಳ ಕಷ್ಟಕರವಾದ ಸಂಧಿಗ್ದತೆಯನ್ನು ಉಂಟುಮಾಡುತ್ತದೆ. ಹೀಗಾಗಿ, ಮತದಾರರು ಗೆಲ್ಲುವ ಸಾಧ್ಯತೆಯಿದೆ ಎಂದು ಭಾವಿಸುವವರಿಗೆ ಮತ ಚಲಾಯಿಸುತ್ತಾರೆ.

ಈ ಬ್ಯಾಂಡ್‌ವ್ಯಾಗನ್ ಪರಿಣಾಮ ಮತ್ತು ಚುನಾವಣಾ ಪೂರ್ವ ಸಮೀಕ್ಷೆಗಳು ‘ಸಂಭವನೀಯ’ ವಿಜೇತರನ್ನು ಚುನಾವಣೆಯಲ್ಲಿ ನಿಜವಾದ ವಿಜೇತರನ್ನಾಗಿ ಮಾಡುತ್ತದೆ.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಕಾಂಗ್ರೆಸ್‌ನಿಂದ ಟಿಕೆಟ್

ಒಂದು ಹಾಲ್‌ನಲ್ಲಿ ಕುಳಿತು ಸಜ್ಜುಗೊಳಿಸಿದ ಅಥವಾ ತಪ್ಪು ಅಭಿಪ್ರಾಯಗಳನ್ನು ಒಳಗೊಂಡ ಸಮೀಕ್ಷೆಗಳು ರಾಜಕೀಯದೊಂದಿಗೆ ರಾಜಿ ಮಾಡಿಕೊಂಡ ಮಾಧ್ಯಮಗಳಲ್ಲಿ ವೈಜ್ಞಾನಿಕ ಅಧ್ಯಯನದಂತೆ ಪ್ರಸಾರವಾಗುತ್ತವೆ. ಇವು ಪ್ರತಿ ಕ್ಷೇತ್ರದ ಮತದಾರರ ದೊಡ್ಡ ವರ್ಗದ ಮೇಲೆ ಪ್ರಭಾವ ಬೀರುವ ಅಸ್ತ್ರಗಳಾಗಿರುತ್ತವೆ. ಈ ಸಮೀಕ್ಷೆಗಳು ‘ವಸ್ತುನಿಷ್ಠತೆ’ಯಿಂದ ಕೂಡಿವೆ ಎಂಬ ಹೊದಿಕೆಯನ್ನು ಹೊಂದಿರುವುದರಿಂದ ಮತದಾರರು ಇದನ್ನು ನಂಬುತ್ತಾರೆ ಮತ್ತು ಸುಲಭವಾಗಿ ದಾರಿ ತಪ್ಪುತ್ತಾರೆ.

ಭಾರತೀಯ ಮಾಧ್ಯಮಗಳಲ್ಲಿ ಪ್ರಕಟವಾದ ಹೆಚ್ಚಿನ ಸಮೀಕ್ಷೆಗಳು ನಕಲಿ ಮತ್ತು ಸಂಶಯಾಸ್ಪದವಾಗಿವೆ. ಈ ಸಮೀಕ್ಷೆಗಳು ಅಂತಿಮವಾಗಿ ಗೆಲ್ಲುವವರ ಭವಿಷ್ಯವಾಣಿಗಳಲ್ಲಿ ಸರಿಯಾಗಿರಬಹುದು. ಆದರೆ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿದೆ ಎಂದು ಅರ್ಥವಲ್ಲ.

ಮಾಧ್ಯಮಗಳು ಸಮೀಕ್ಷೆಗಳನ್ನು ಪ್ರಕಟಿಸಿದಾಗ, ಈ ಸಮೀಕ್ಷೆಗಳನ್ನು ನಡೆಸಲು ಎಷ್ಟು ವೆಚ್ಚವಾಯಿತು ಮತ್ತು ಅಷ್ಟು ಮೊತ್ತವನ್ನು ಪಾವತಿಸಿದವರು ಯಾರು ಎಂದು ಪ್ರಶ್ನಿಸುವುದು ಬಹಳ ಮಖ್ಯ. ಒಂದು ರಾಜ್ಯದಲ್ಲಿ ಸಮೀಕ್ಷೆಗಳನ್ನು ನಡೆಸಲು ಕೋಟಿ ರೂ.ಗಳಿಗೂ ಮೀರಿ ವೆಚ್ಚವಾಗುತ್ತದೆ. 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಸಮೀಕ್ಷೆಗೆ ಕನಿಷ್ಟ 7 ಕೋಟಿ ರೂ. ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಟಿಆರ್‌ಪಿ ಗೀಳಿನಲ್ಲಿರುವ ಯಾವುದೇ ಮಾಧ್ಯಮ ಸಂಸ್ಥೆಗಳು ಅಥವಾ ಯಾವುದೇ ಸಮೀಕ್ಷಾ ಏಜೆನ್ಸಿ ಈ ಸಮೀಕ್ಷೆಗಳನ್ನು ನಡೆಸಲು ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸುವುದಿಲ್ಲ ಎಂಬುದು ಸ್ಪಷ್ಟ. ಹೀಗಿದ್ದಮೇಲೆ, ಮಾಧ್ಯಮಗಳು ಈ ಸಮೀಕ್ಷೆಗಳನ್ನು ನಡೆಸಲು ಹಣ ಪಾವತಿಸಿದವರು ಯಾರು? ಇದರರ್ಥ ಯಾವುದೋ ಸಂಸ್ಥೆ ಇವರಿಗೆ ಹಣವನ್ನು ಭರಿಸಿದೆ ಮತ್ತು ಅವರು ಕಠಿಣ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿಲ್ಲ ಎಂದು ಅರಿಯಬುಹುದು.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಸಚಿವ ಸ್ಥಾನ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿಯ ಸ್ವಾಮಿ ಪ್ರಸಾದ್ ಮೌರ್ಯ

ಭಾರತೀಯ ದೂರದರ್ಶನ ಮಾಧ್ಯಮವು ಪ್ರಕಟಿಸಿದ ಪ್ರತಿಯೊಂದು ಸಮೀಕ್ಷೆಯು ಸಂಶಯಾಸ್ಪದವಾಗಿದೆ. ಆದರೆ, ಕೆಲವು ಚುನಾವಣೆಗಳಲ್ಲಿ ಸಮೀಕ್ಷೆಗಳು ಹೇಳಿದ ರೀತಿಯಲ್ಲೇ ಫಲಿತಾಂಶವೂ ಇರುತ್ತದೆ. ಹಾಗೆಂದ ಮಾತ್ರಕ್ಕೆ ಸಮೀಕ್ಷಗಳ ವಿಶ್ವಾಸಾರ್ಹತೆ ಅಥವಾ ದೃಢತೆಯ ಪುರಾವೆಯಲ್ಲ. ಏಕೆಂದರೆ, ಕೆಟ್ಟುಹೋದ ಗಡಿಯಾರವೂ ಕೂಡ ದಿನಕ್ಕೆ ಎರಡು ಬಾರಿ ಸರಿಯಾದ ಸಮಯವನ್ನು ತೋರಿಸುತ್ತದೆ.

ಹೀಗಾಗಿ, ಸಮೀಕ್ಷೆಗಳು ಭಾರತೀಯ ಮತದಾರರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಬದಲಿಗೆ, ಅವು ಮತದಾರರ ಮತದಾನದ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ಚುನಾವಣಾ ಸಮೀಕ್ಷೆಗಳನ್ನು ಮತ್ತು ಅವುಗಳ ಪ್ರಸಾರವನ್ನು ನಿಷೇಧಿಸುವಂತೆ ಸಮಾಜವಾದಿ ಪಕ್ಷವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಸಮೀಕ್ಷೆಗಳು ಸಮಾಜವಾದಿ ಪಕ್ಷದ ಪರವಾಗಿಲ್ಲ ಎಂಬ ಕಾರಣಕ್ಕೂ ಅಖಿಲೇಶ್‌‌ ಯಾದವ್ ಅವರು ಸಮೀಕ್ಷೆಗಳನ್ನು ನಿಷೇಧಿಸಬೇಕು ಎಂದು ಹೇಳುತ್ತಿರಬಹುದು. ಆದರೆ, ನಾಗರೀಕರಾಗಿ ನಾವು, ಮೇಲಿನ ಎಲ್ಲಾ ಅಂಶಗಳ ಕಾರಣಕ್ಕಾಗಿಯೂ ಸಮೀಕ್ಷೆಗಳನ್ನು ವಿರೋಧಿಸಬೇಕಾಗುತ್ತದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಪೊಲೀಸರರು ಅತ್ಯಂತ ಪ್ರಾಮಾಣಿಕರು, ಹಣ ತೆಗೆದುಕೊಂಡರೆ ಕೆಲಸ ಮಾಡುತ್ತಾರೆ ಎಂದು ಲಂಚಕ್ಕೆ ಉತ್ತೇಜಿಸಿದ್ದ ಪೊಲೀಸ್ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...