Homeಪುಸ್ತಕ ವಿಮರ್ಶೆಸ್ತ್ರೀವಾದಿ ಅರ್ಥಶಾಸ್ತ್ರಜ್ಞೆಯ ಅತ್ಮಕತೆ "ದಿ ಬ್ರಾಸ್ ನೋಟ್‌ಬುಕ್"

ಸ್ತ್ರೀವಾದಿ ಅರ್ಥಶಾಸ್ತ್ರಜ್ಞೆಯ ಅತ್ಮಕತೆ “ದಿ ಬ್ರಾಸ್ ನೋಟ್‌ಬುಕ್”

- Advertisement -
- Advertisement -

“ಸ್ವಾತಂತ್ರ್ಯ ನಿರ್ಬಂಧಿತ ಜಗತ್ತಿನಲ್ಲಿ ವ್ಯವಹರಿಸುವ ಒಂದೇ ಮಾರ್ಗವೆಂದರೆ, ನಿಮ್ಮ ಅಸ್ತಿತ್ವವೇ ಒಂದು ಪ್ರತಿರೋಧ ಎನ್ನುವಂತೆ ಬದುಕುವುದು” ಎನ್ನುವ ಅಲ್ಬರ್ಟ್ ಕಮುವಿನ ಮಾತಿನಂತೆ, ಸಾಂಪ್ರದಾಯಿಕ ಕುಟುಂಬವೊಂದರಲ್ಲಿ ಹುಟ್ಟಿದ ಹುಡುಗಿಯೊಬ್ಬಳು ಆಧುನಿಕ ಮತ್ತು ಪ್ರಗತಿಪರ ಆಲೋಚನೆಗಳನ್ನು ರೂಢಿಸಿಕೊಂಡು ಪುರುಷಪ್ರಧಾನ ಜಾಗತಿಕ ವ್ಯವಸ್ಥೆಯಲ್ಲಿ ಸ್ವಪ್ರಯತ್ನದಿಂದಲೇ ಉನ್ನತ ಶಿಕ್ಷಣ ಪಡೆದು, ಬಡತನ ಹಾಗೂ ಮಹಿಳಾ ಅಸಮಾನತೆಯ ಅಲೆಗಳ ಆಳದ ಒಳಸುಳುಹುಗಳನ್ನು ಸಂಶೋಧನಾಧ್ಯಯನಗಳ ಮೂಲಕ ಪ್ರಸ್ತುತಪಡಿಸುತ್ತಲೇ ಸಮಾನ ಅಭಿವೃದ್ಧಿಯ ಸಾಧ್ಯತೆಗಳನ್ನು ತೋರಿಸಿಕೊಟ್ಟ ಅರ್ಥಶಾಸ್ತ್ರಜ್ಞೆ ದೇವಕಿ ಜೈನ್. ಅವರ ಸಂಕ್ಷಿಪ್ತ ಜೀವನಗಾಥೆ, ಅವರ ಆತ್ಮಕಥನ ಪುಸ್ತಕ “ದಿ ಬ್ರಾಸ್ ನೋಟ್‌ಬುಕ್”ನಲ್ಲಿ ದಾಖಲಾಗಿದೆ. ಪ್ರಸ್ತುತ ಬದುಕಿನ ವಿದ್ಯಮಾನಗಳಿಗೆ ಅಂಜಿಯೋ, ನಾಚಿಯೋ ಬದುಕಿನ ಉದ್ದಗಲಕ್ಕೆ ಘಟಿಸಿದ ಘಟನೆಗಳಲ್ಲಿ ಜನ ಮೆಚ್ಚಬಹುದಾದಂತವುಗಳನ್ನಷ್ಟೇ ಆಯ್ದು ಆತ್ಮಕಥನವನ್ನಾಗಿಸುವ ಇವತ್ತಿನ ಸಂದರ್ಭದಲ್ಲಿ ಯಾವ ನಿರ್ಭಿಡೆಯೂ ಇಲ್ಲದೆ, ಯಾರ ಮುಲಾಜು-ಮುಜುಗರಗಳಿಗೂ ಸೊಪ್ಪು ಹಾಕದೆ ಸತ್ಯಸಂಗತಿಗಳನ್ನು ಸರಳ, ಸುಂದರ ಮತ್ತು ಸಂಕ್ಷಿಪ್ತವಾಗಿ ಚಿತ್ರಿಸಿರುವ ಕೃತಿ ಇದಾಗಿದೆ.

1933ರಲ್ಲಿ ಜನಿಸಿದ ಇವರ ಸುಮಾರು ಅರವತ್ತು ದಶಕಗಳ ಶಿಕ್ಷಣ, ಸಂಶೋಧನೆ, ವೃತ್ತಿ, ಕೌಟುಂಬಿಕ ಜೀವನ ಮತ್ತು ದೇಶ-ವಿದೇಶಗಳ ಜಾಗತಿಕ ಸಂಸ್ಥೆಗಳೊಂದಿಗಿನ ಸಕ್ರಿಯ ನಂಟು, ಅಭಿವೃದ್ಧಿ ಅರ್ಥಶಾಸ್ತ್ರ ಇತಿಹಾಸದ ವಿವಿಧ ಮಜಲುಗಳನ್ನು ಈ ಕೃತಿ ಬಿಚ್ಚಿಡುತ್ತದೆ. ಬಡತನ ಮತ್ತು ಮಹಿಳಾ ಅಸಮಾನತೆಗೆ ಸಂಬಂಧಿಸಿದಂತೆ ನೂರಾರು ದೇಶಗಳನ್ನು ಸುತ್ತಿ ಗಳಿಸಿದ ಅನುಭವ, ಅಧ್ಯಯನ ಮತ್ತು ಅರ್ಥಶಾಸ್ತ್ರಜ್ಞರುಗಳೊಂದಿಗಿನ
ಸಂಪರ್ಕ-ಸಂವಾದಗಳು ಹಾಗೂ ಸಂಘಟನಾ ಶಕ್ತಿ ಅದೆಷ್ಟು ಗಾಢವಾಗಿತ್ತು ಎನ್ನುವುದಕ್ಕೆ ಇವರ ಪ್ರಯತ್ನದ ಫಲವಾಗಿ, ಭಾರತ ಸರ್ಕಾರದ ಯೋಜನಾ ಆಯೋಗ ತನ್ನ ಆರನೇ ಪಂಚವಾರ್ಷಿಕ ಯೋಜನೆಯಲ್ಲಿ ಮಹಿಳಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅಧ್ಯಾಯವೊಂದನ್ನು ಸೇರಿಸಿದ್ದೇ ಸಾಕ್ಷಿ. ಈ ನಿಟ್ಟಿನಲ್ಲಿ ತಮ್ಮ ಅಧ್ಯಯನ ತಂಡದೊಂದಿಗೆ ಅಸ್ಸಾಂ ರಾಜ್ಯದ ಟೀ ತೋಟಗಳಿಂದ ಹಿಡಿದು, ದಕ್ಷಿಣದ ಕರಾವಳಿ ಪ್ರದೇಶದ ಮೀನುಗಾರರ ಮತ್ತು ಮಹಿಳಾ ಕಾರ್ಮಿಕರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನಡೆಸಿದ ಅಧ್ಯಯನ ಮತ್ತು ಸೂಚಿಸಿದ ಸಲಹೆಗಳು ಎಲ್ಲ ಕಾಲಕ್ಕೂ ಸಲ್ಲುವಂತಹವು. ದೆಹಲಿ, ಗುಜರಾತ್, ರಾಜಸ್ಥಾನ, ಪಂಜಾಬ್ ರಾಜ್ಯಗಳು ಒಳಗೊಂಡಂತೆ ಮಹಿಳೆಯರು ಉತ್ಪಾದಿಸುವ ಕರಕುಶಲ ವಸ್ತುಗಳು ಮತ್ತು ಬುಡಕಟ್ಟು ಮಹಿಳೆಯರು ಕಾಡುಗಳಿಂದ ಸಂಗ್ರಹಿಸುವ ಉತ್ಪನ್ನಗಳಿಗೆ ಶ್ರಮಕ್ಕೆ ತಕ್ಕ ಬೆಲೆಯನ್ನು ನಿಗದಿಪಡಿಸುವಲ್ಲಿ ಇವರು ನಡೆಸಿದ ಅಧ್ಯಯನ ಮತ್ತು ಹೋರಾಟಗಳು ಮಹಿಳಾ ಸಂಘಟನೆಗಳಿಗೆ ಚೈತನ್ಯ ತುಂಬುವಂತಹವು.

ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯಲ್ಲಿ ಸರ್ಕಾರಗಳ ಹಸ್ತಕ್ಷೇಪವಿಲ್ಲದಿರುವಾಗ ಪುರುಷಪ್ರಧಾನ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ, ಮಹಿಳೆಯರು ನಿರ್ವಹಿಸುವ ಕೆಲಸಗಳನ್ನು, ಉತ್ಪಾದಿಸುವ ವಸ್ತುಗಳನ್ನು ಹೇಗೆ ಅಪಮೌಲ್ಯಗೊಳಿಸಿ ಬೆಲೆಕಟ್ಟುತ್ತಿತ್ತು ಎನ್ನುವುದನ್ನು ಸಂಗ್ರಹಿತ ಅಂಕಿ-ಸಂಖ್ಯೆಗಳನ್ನು ಆಧರಿಸಿ
ಮನದಟ್ಟುಮಾಡಿಕೊಡುವುದರ ಜೊತೆಗೆ, ಅವರಿಗೆ ನ್ಯಾಯ ಸಿಗುವವರೆಗೂ ವಿರಮಿಸದೆ ನಡೆಸುವ ನಿರಂತರ ಪ್ರಯತ್ನ ಅವರದ್ದಾಗಿತ್ತು. ಸಮಗ್ರವಾಗಿ, ವಿಸ್ತೃತವಾಗಿ ವಿವರಿಸಲ್ಪಡಬಹುದಾದ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕೇವಲ ಒಂದೆರಡು ವಾಕ್ಯಗಳಲ್ಲಿಯೇ ಮನಸ್ಸಿಗೆ ತಟ್ಟುವಂತೆ ವಿವರಿಸುವ ಭಾಷಾ ಕೌಶಲ್ಯ ಇಲ್ಲಿದೆ. ಆಳ ಅಧ್ಯಯನ ಮತ್ತು ಗಾಢ ಅನಭವಗಳಿದ್ದು, ಸಂವಹಿಸುವ ತುಡಿತ ಗಟ್ಟಿಯಾಗಿದ್ದಲ್ಲಿ ಭಾಷೆ ಅದೆಷ್ಟು ಚೆನ್ನಾಗಿ ಮೂಡಿಬರಬಹುದೆನ್ನುವುದಕ್ಕೆ ಇದೊಂದು ಸೂಕ್ತ ಉದಾಹರಣೆ. ಓದುತ್ತಾ ಹೋದಂತೆ ಅದು ಗಾಂಧೀಜಿಯವರ ಆತ್ಮಕಥೆಯ ಭಾಷಾ ಸೌಂದರ್ಯವನ್ನು ನೆನಪಿಗೆ ತಂದರೆ ಅತಿಶಯೋಕ್ತಿಯಲ್ಲ.

ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಲಯಗಳಲ್ಲಿನ ಮಹಿಳಾ ಶೋಷಣೆಯ ವಿವಿಧ ಮುಖಗಳನ್ನು ಗುರುತಿಸುವ ಅವರ ಆಧ್ಯಯನಗಳಿಗೆ ಪ್ರೇರಣೆ ಅವರು ಬಾಲ್ಯ, ಯೌವ್ವನ ಮತ್ತು ಮಧ್ಯಾವಸ್ಥೆಗಳಲ್ಲಿ ಕಂಡುಂಡ ಅನುಭವಗಳೇ ಆಗಿರುವುದನ್ನು ಕೃತಿಯ ಉದ್ದಕ್ಕೂ ಕಾಣಬಹುದು. ಮೊದಲ ಋತುಸ್ರಾವದ ಸಂದರ್ಭ ಮೊದಲಾಗಿ, ಕೌಟುಂಬಿಕ ಪರಿಸರದಲ್ಲಿ ಆಚರಿಸುವ ವಿವಿಧ ಅರ್ಥರಹಿತ ಆಚರಣೆಗಳನ್ನು ಮೌನವಾಗಿ ಪ್ರತಿಭಟಸುತ್ತಾ, ಉಪೇಕ್ಷಿಸುತ್ತಾ ಮಹಿಳಾಶೋಷಣೆಯ ಹಲವು ಅಸ್ತ್ರ-ಆಯಾಮಗಳನ್ನು ವಿರೋಧಿಸುತ್ತ ಬಂದವರು ಅವರು. ನಿತ್ಯ ಜೀವನದ ಎಲ್ಲ ಸ್ತರಗಳಲ್ಲಿ ವಿದ್ಯೆ-ಬುದ್ಧಿಗಳು ಅದೆಷ್ಟೇ ಇರಲಿ, ಸ್ಥಾನ-ಮಾನ ಏನೇ ಇರಲಿ, ಉಡುವ ಬಟ್ಟೆ ಯಾವುದೇ ಇರಲಿ ಮಹಿಳೆಯರು ಕೆಲಸ ನಿರ್ವಹಿಸುವ ಪ್ರತಿ ವಾತಾವರಣದಲ್ಲೂ ಕೆಲವು ಲಂಪಟ ಪುರುಷರಿಂದ ಅನುಭವಿಸುವ ಉಪಟಳ ಅವುಗಳನ್ನು ಅನಭವಿಸಿದವರಿಗಷ್ಟೇ ಗೊತ್ತು. ಅಂಥ ಕಿರುಕುಳಗಳಿಂದ ಅವರನ್ನು ರಕ್ಷಿಸಲು ಇರಬೇಕಾದ ವಿಶೇಷ ಸೌಲಭ್ಯಗಳು, ಕಾನೂನು ನೆರವು, ಅವನ್ನು ಜಾರಿಮಾಡಬಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯು ಯಾವುದೇ ದೇಶಕ್ಕೆ ಇವತ್ತಿಗೂ ಅಗತ್ಯವಾಗಿವೆ.

ಭಾರತೀಯ ಮಹಿಳೆಯರ ಕುರಿತಂತೆ ಅಧ್ಯಯನ ಮಾಡುವ, ಬರೆಯುವ ಮೊದಲ ಅವಕಾಶ ಒದಗಿಬಂದಾಗ ಅವರಿಗೆ ಅನಿಸಿದ್ದು, ಇದುವರೆವಿಗೂ ಯಾವುದನ್ನು ಸನಾತನ ಸಂಸ್ಕೃತಿ ಎಂದು ವೈಭವೀಕರಿಸಿದ್ದೇವೋ, ’ಪಂಚಕನ್ಯೆಯರು’ ಎಂದು ಪ್ರಾತಃಸ್ಮರಣೆ ಮಾಡುತ್ತಿದ್ದ ಅಹಲ್ಯ, ತಾರಾ, ಸೀತಾ, ಮಂಡೋದರಿ ಮತ್ತು ದ್ರೌಪದಿಯರ ಜಾಗದಲ್ಲಿ ಅಮ್ರಪಾಲಿ, ಗಾರ್ಗಿ, ತಮಿಳು ಕವಯತ್ರಿ ಅವೈಯರ್ ಮೊದಲಾದವರನ್ನು ಸ್ಮರಿಸಬೇಕು ಎನ್ನುವ ಅವರ ಆಲೋಚನೆ. ಅದೇ ನೆಲೆಯಲ್ಲಿ ಮುನ್ನಡೆದ ಅವರ ಅಧ್ಯಯನ, ಕ್ಷೇತ್ರಕಾರ್ಯ ಮತ್ತು ಹೋರಾಟಗಳು ಅಭಿವೃದ್ಧಿಯ ಹಾದಿಯಲ್ಲಿ ಮಹಿಳಾ ಸಮಾನತೆಗೆ ಬಾಗಿಲು ತೆರೆಸುವಂತಾಯಿತು. ದೇಶದ ರಾಷ್ಟ್ರೀಯ ವರಮಾನ ಲೆಕ್ಕಾಚಾರ ಹಾಕುವಾಗ ಮಹಿಳೆಯರು ನಿರ್ವಹಿಸುವ ಕೌಟುಂಬಿಕ ಕೆಲಸಗಳ ಹಣಮೌಲ್ಯವನ್ನೂ ಕೂಡಿಸಬೇಕು ಎನ್ನುವ ಅವರ ಧ್ವನಿ ಜಾಗತಿಕ ಮಹತ್ವ ಪಡೆಯಿತು. ಸ್ವತಂತ್ರಪೂರ್ವ ಭಾರತದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ವರಮಾನವನ್ನು ಲೆಕ್ಕ ಹಾಕಿದವರು ಭಾರತದ ’ದಿ ಗ್ರ್ಯಾಂಡ್ ಓಲ್ಡ್ ಮ್ಯಾನ್’ ಎಂದು ಕರೆಯಲ್ಪಟ್ಟ ದಾದಾಬಾಯಿ ನವರೋಜಿ ಅವರು. ತದನಂತರ ಇದೇ ಜಿಡಿಪಿಯಲ್ಲಿ ಮಹಿಳೆಯರ ಕೌಟುಂಬಿಕ ಹಣದಮೌಲ್ಯವನ್ನು ಸೇರಿಸಬೇಕು, ಇಲ್ಲವಾದಲ್ಲಿ ಅದು ಅಪೂರ್ಣ ಎಂದು ಪ್ರತಿಪಾದಿಸಿದ್ದು ದೇವಕಿ ಜೈನ್ ಅವರು.

ವಿಶ್ವಸಂಸ್ಥೆ, ಯುನೆಸ್ಕೋ, ವಿಶ್ವ ಆಹಾರ ಮತ್ತು ಕೃಷಿ ಸಂಘಟನೆ ಒಳಗೊಂಡಂತೆ ಹಲವು ಜಾಗತಿಕ ಸಂಸ್ಥೆಗಳ ಅಧ್ಯಯನ ತಂಡದ ಸದಸ್ಯೆಯಾಗಿ ಕೆಲಸ ನಿರ್ವಹಿಸಿದ ಅನುಭವಗಳು ಮತ್ತು ನೀಡಿದ ವರದಿಗಳು ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಮಾರ್ಗೋಪಾಯಗಳಾಗಿವೆ. “ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ ನಷ್ಟಸಾಧ್ಯತೆಗಳನ್ನು ಹೊತ್ತೇ ಬರುತ್ತವೆ. ಸ್ವಾತಂತ್ರ್ಯ ಬಯಸುವ ಮಹಿಳೆ ಸಂಕಷ್ಟಗಳಿಗೆ ಧೃತಿಗೆಡಬಾರದು. ತಾಳ್ಮೆಯಿಂದ ನಿಧಾನವಾಗಿ ಲಭ್ಯವಿರುವ ಸೌಲಭ್ಯ-ಸಂಪನ್ಮೂಲಗಳನ್ನು ಬಳಸಿಕೊಂಡು ಹಂತಹಂತವಾಗಿ ಬದುಕನ್ನು ಕಟ್ಟಿಕೊಳ್ಳಬೇಕು. ಅಸಮಾನತೆಯನ್ನು ಸಹಿಸಿಕೊಳ್ಳುವುದೇ ಬಡತನಕ್ಕೆ ಕಾರಣ. ಮಹಿಳಾ ಅಸಮಾನತೆ ಧರ್ಮಾತೀತವಾಗಿದೆ. ಅದರಲ್ಲೂ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಕುಟುಂಬಗಳಲ್ಲಿ ಇನ್ನೂ ಹೆಚ್ಚಿದೆ” ಎನ್ನುವ ಅವರ ಮಾತುಗಳಿಗೆ ಅವರು ಆಕ್ಸ್‌ಫರ್ಡ್‌ನ ರಸ್ಕಿನ್ ಕಾಲೇಜಿನಲ್ಲಿ ಓದುವಾಗ ಅನುಭವಿಸಿದ ಆರ್ಥಿಕ ಸಂಕಷ್ಟಗಳು, ಅವುಗಳನ್ನು ಧೈರ್ಯದಿಂದ ನಿಭಾಯಿಸಿಕೊಂಡ ರೀತಿ ಮತ್ತು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶ-ವಿದೇಶಗಳನ್ನು ಸುತ್ತಿ ಗಳಿಸಿದ ಜ್ಞಾನಾನುಭವಗಳು ಕಾರಣವಾಗಿವೆ. ಜೊತೆಗೆ, ಮೂರು ಜನ ವಿದ್ವಾಂಸರುಗಳೊಳಗೂಡಿ ಆಕ್ಸ್‌ಫರ್ಡ್‌ನಿಂದ ಹೊರಟು ಇಂಗ್ಲಿಷ್ ಕಡಲ್ಗಾಲುವೆಯನ್ನು ಕ್ರ್ಯೂಸ್‌ನಲ್ಲಿ ದಾಟಿ, ಲ್ಯಾಂಡ್‌ರೋವರ್ ವಾಹನದಲ್ಲಿ ವಿವಿಧ ದೇಶಗಳನ್ನು ಸುತ್ತಿ ಅಲ್ಲಿನ ಬಡತನ, ಮಹಿಳೆಯರ ಸ್ಥಿತಿಗತಿಯನ್ನು ಕಂಡ ಅನುಭವಗಳು ಮಹಿಳಾ ಅಭಿವೃದ್ದಿಯ ಬಗೆಗಿನ ಅವರ ಒಳನೋಟಗಳಿಗೆ ಬೆಳಕಾಗಿವೆ. ಇದನ್ನು ಇನ್ನಷ್ಟು ಬಲಪಡಿಸಿದ್ದು, ಜೀವನದುದ್ದಕ್ಕೂ ಸಿಕ್ಕ ಹಲವು ವಿಷಯ ಶಾಸ್ತ್ರಜ್ಞರು, ತತ್ವಜ್ಞಾನಿಗಳು, ರಾಷ್ಟ್ರನಾಯಕರು ಮತ್ತು ಸಮಾಜಸೇವಾಕರ್ತರುಗಳೊಂದಿಗಿನ ಒಡನಾಟದಿಂದಾಗಿ. ವಿನೋಬಾ ಭಾವೆ, ರಾಮಮನೋಹರ ಲೋಹಿಯಾ, ಮಧುಲಿಮಯೆ, ಫಿಡಲ್ ಕ್ಯಾಸ್ಟ್ರೋ, ನೆಲ್ಸನ್ ಮಂಡೇಲಾ, ಅಮರ್ತ್ಯ ಸೆನ್, ಕೆ.ಎನ್. ರಾಜಾ, ರೊಮಿಲಾ ಥಾಪರ್, ಗ್ಲೋರಿಯಾ ಸ್ಟೀನಿಮ್ ಮೊದಲಾದವರೊಂದಿಗಿನ ನಿಕಟ ಸಂಪರ್ಕ-ಸಂವಾದಗಳು ಜಾತ್ಯತೀತ ಮತ್ತು ಸಮಾಜವಾದಿ ನೆಲೆಯಲ್ಲಿನ ಇವರ ಕ್ರಿಯಾಶೀಲತೆಗೆ ಶಕ್ತಿ ತುಂಬಿದ್ದನ್ನು ಕಥನದಲ್ಲಿ ಸವಿವರವಾಗಿಸಿದ್ದಾರೆ. ಹಾಗೆಯೇ, ಇವರ ವೈವಾಹಿಕ ಜೀವನಕ್ಕೆ ಜೋಡಿಯಾದವರು ಇನ್ನೊಬ್ಬ ಖ್ಯಾತ ಅರ್ಥಶಾಸ್ತ್ರಜ್ಞ, ಆಡಳಿತಗಾರ, ರಾಜಕೀಯ ಚಿಂತಕ ಮತ್ತು ಸಹಕಾರಿ ಚಳವಳಿಯ ಮುಂದಾಳು-ಲಕ್ಷ್ಮಿ ಜೈನ್ ಅರ್ಥಾತ್ ಎಲ್.ಸಿ. ಜೈನ್. ಕಂಬಳಿ ಉದ್ಯಮ ಕುರಿತ ಅವರ ಸಂಶೋಧನೆಗೆ ಪ್ರೇರಕರಾದವರು ಅವರು. ಸಂಶೋಧನಾ ಪ್ರಬಂಧವನ್ನು ಓದಿ, ಮೆಚ್ಚಿ ಅದನ್ನು ಪ್ರಕಟಿಸುವಂತೆ ತಿಳಿಸಿ, ಮುನ್ನುಡಿ ಬರೆದುಕೊಟ್ಟು ಅದರ ಶೀರ್ಷಿಕೆಯನ್ನು, ’ದಿ ಇಂಪ್ಯಾಕ್ಟ್ ಆಫ್ ಗ್ಲೋಬಲೈಸೇಷನ್ ಆನ್ ರೂರಲ್ ಸೆಕ್ಟರ್’ ಎಂದು ಸಲಹೆ ಮಾಡಿದವರು. ಇವರು ಯೋಜನಾ ಆಯೋಗದ ಸದಸ್ಯರಾಗಿದ್ದುದು, ನೆಲ್ಸನ್ ಮಂಡೇಲಾ ಅವರು ದಕ್ಷಿಣ ಆಫ್ರಿಕಾದ ಆಧ್ಯಕ್ಷರಾಗಿದ್ದಾಗ ಭಾರತದ ಹೈಕಮಿಷನರ್ ಅಗಿದ್ದುದು, ದೇವಕಿಯವರಿಗೆ ಹಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಅನುಕೂಲವಾಯಿತು.

ಕೊನೆಯದಾಗಿ, ಈ ಇಬ್ಬರು ತಜ್ಞರ ಜೋಡಿ ಆಧ್ಯಯಾನುಭವಗಳನ್ನು ಸರ್ಕಾರಗಳು ಹೆಚ್ಚಿನದಾಗಿ ಬಳಸಿಕೊಳ್ಳಲಿಲ್ಲ ಎನ್ನುವ ಕೊರಗು ಯಾವತ್ತೂ ಇದೆ. ಹಾಗೆ ನೋಡಿದರೆ ಈ ಹಿಂದೆ ಏನು, ಇವತ್ತಿಗೂ ಕೂಡ ಈ ದೇಶದಲ್ಲಿ ಅಭಿವೃದ್ಧಿಗೆ ಅಗತ್ಯವಾದ ಬೌದ್ಧಿಕ ಆಸ್ತಿ ಸಾಕಷ್ಟಿದೆ. ಎಷ್ಟೋ ಉಪಯುಕ್ತ ಸಂಶೋಧನಾ ಸಲಹೆಗಳು, ಶಿಫಾರಸ್ಸುಗಳು ಶೈತ್ಯಾಗಾರದಲ್ಲಿ ಕೊಳೆಯುತ್ತಿವೆ. ಪ್ರಚಾರ, ಓಲೈಕೆ ಮತ್ತು ಜನಪ್ರಿಯತೆಗಳಿಂದ ಸದಾ ದೂರವಿರುವ, ಕವಿ ಹೃದಯದ ದೇವಕಿ ಜೈನ್ ಅವರಿಗೆ 2006ರ ಭಾರತ ಸರ್ಕಾರದ ’ಪದ್ಮಭೂಷಣ’ ಗೌರವ ಸಂದಿದೆ ನಿಜ. ಆದರೆ ಅವರ ಅಧ್ಯಯನ, ಅನುಭವಗಳ ಫಲಿತಗಳನ್ನು ಯಾವ ಸರ್ಕಾರಗಳೂ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಿಲ್ಲ. ಹೌದು, ಸಂಪತ್ತು, ಅಧಿಕಾರ, ಸ್ಥಾನ-ಮಾನಗಳಿಗೆ ನಿರಂತರ ನಡೆಯುವ ಪೈಪೋಟಿಯಲ್ಲಿ, ಸ್ವಾಭಿಮಾನ ಮರೆತು ಸ್ವಹಿತಾಸಕ್ತಿಗಾಗಿ ಏನು ಬೇಕಾದರೂ ಮಾಡುವ, ಜೋಳದ ಪಾಳಿಗೆ ಜೋಲುವ ತಜ್ಞರಿರುವಾಗ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವುದೊಂದನ್ನೇ ಬದುಕಿನ ಧ್ಯೇಯವಾಗಿಸಿಕೊಂಡವರನ್ನು ಕೇಳುವವರಾರು?

ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ

ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
ವಿಶ್ರಾಂತ ಪ್ರ್ರಾಂಶುಪಾಲರು, ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು. ಆರ್ಥಿಕ ಮತ್ತು ಶೈಕ್ಷಣಿಕ ಚಿಂತಕರು. ಚಿತ್ರದುರ್ಗ ಮೂಲದವರು.


ಇದನ್ನೂ ಓದಿ: ಸ್ವಾತಂತ್ರ್ಯ ಮತ್ತು ನಿರ್ಬಂಧಗಳ ಸಂಗಮದಲ್ಲಿ ಬೆಳದುಬಂದ ”ಒಡನಾಡಿ ಸಬಿಹಾ”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ದೇಶ ತೊರೆಯುವುದನ್ನು ಪ್ರಧಾನಿ ಮೋದಿ ತಡೆದಿಲ್ಲ: ಪ್ರಿಯಾಂಕಾ ಗಾಂಧಿ

0
ಹಾಸನ ಜೆಡಿಎಸ್ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಭಾರತ ತೊರೆಯುವುದನ್ನು ಪ್ರಧಾನಿ ನರೇಂದ್ರ ಮೋದಿ ತಡೆದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ಬುಧವಾರ ಅಸ್ಸಾಂನ...