ಹೊಸ ತಲೆಮಾರು ತನ್ನದೇ ರೀತಿಯಲ್ಲಿ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿದೆ. ವಿಶೇಷವೆಂದರೆ ಸಮಕಾಲೀನ ಸಾಮಾಜಿಕ ಬಿಕ್ಕಟ್ಟುಗಳೇ ಕೃತಿಗಳ ವಸ್ತುಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರಾವಳಿ ಸೀಮೆಯವರಾದ ಸುಶಾಂತ್ ಕೋಟ್ಯಾನ್ ಅವರ ’ದೀಪವಿರದ ದಾರಿಯಲ್ಲಿ’ ಕಾದಂಬರಿಯು ಪುರುಷ ಸಲಿಂಗರತಿಯನ್ನು ಪ್ರಧಾನ ಭೂಮಿಕೆಯನ್ನಾಗಿ ರೂಪಿಸಿಕೊಂಡಿದೆ.
ಈ ಕಾದಂಬರಿಯು ಯಕ್ಷಗಾನದ ಸ್ತ್ರೀವೇಷಧಾರಿಗಳಾದ ಸುಕೇಶ, ರಘುಪತಿ ಹಾಗೂ ಸಂಜೀವ-ಇವರ ಲೈಂಗಿಕ ಜೀವನದ ಕತೆಯನ್ನು ನವಿರಾದ ಭಾಷಿಕ ಧಾಟಿಯಲ್ಲಿ ನಿರೂಪಿಸುತ್ತದೆ. ಇದರೊಳಗೆ ಇನ್ನೂ ಹಲವರ ಕತೆಗಳು ಕೂಡ ಸೇರಿಕೊಳ್ಳುತ್ತವೆ. ಕಾದಂಬರಿಯ ತುಂಬ ಆವರಿಸಿಕೊಂಡಿರುವ ಸುಕೇಶನೇ ಇದರ ಕಥಾ ನಾಯಕ; ಈತ ತನ್ನೊಳಗಿನ ಹೆಣ್ಣು ಜೀವವನ್ನು ಪೋಷಿಸಿಕೊಳ್ಳುತ್ತಾನೆ; ಗಂಡು ದೇಹದೊಳಗಿರುವ ಹೆಣ್ಣನ್ನು ಪ್ರೀತಿಸುವ ಗಂಡಿಗಾಗಿ ಹಂಬಲಿಸುತ್ತಾನೆ. ಈ ನಿಟ್ಟಿನಲ್ಲಿ ಸುಕೇಶನಲ್ಲಿ ಅಂತಸ್ಥವಾಗಿರುವ ಹೆಣ್ಣಿನ ಆಸೆ, ಆಕಾಂಕ್ಷೆ, ಆಯ್ಕೆ ಹಾಗೂ ನಿರಾಕರಣೆಗಳೇ ಈ ಕಾದಂಬರಿಯ ಕಥನವನ್ನು ಮುನ್ನಡೆಸಿಕೊಂಡು ಹೋಗುತ್ತವೆ. ಕಾದಂಬರಿಯು ಇವುಗಳ ಪರಿಣಾಮಗಳನ್ನು ಒಂದು ಸೂತ್ರಬದ್ಧ ಚೌಕಟ್ಟಿನಲ್ಲಿ ಆಪ್ತವಾದ ಶೈಲಿಯಲ್ಲಿ ಓದುಗರಿಗೆ ದಾಟಿಸುವುದರಲ್ಲಿ ಸಫಲವಾಗಿದೆ.
ಕೆಲವು ವರ್ಷಗಳ ಹಿಂದೆಯಷ್ಟೇ ಸರ್ವೋಚ್ಚ ನ್ಯಾಯಾಲಯವು ಸಲಿಂಗಪ್ರೇಮ ಅಪರಾಧ ಅಲ್ಲ ಎಂದು ತೀರ್ಪು ನೀಡಿತು. ಅದರೂ ಇದಕ್ಕೆ ಸಾಮಾಜಿಕ ಮಾನ್ಯತೆಯಾಗಲಿ, ಒಪ್ಪಿಗೆಯಾಗಲಿ ವ್ಯಾಪಕವಾಗಿಲ್ಲ. ನಮ್ಮದು ಅತಿ ಮಡಿವಂತಿಕೆಯ ಸಮಾಜವಾಗಿ ಇನ್ನೂ ಮುಂದುವರೆದಿದೆ. ಆದರೆ ಪುರುಷನಿಗೆ ವಿವಾಹೇತರ ಲೈಂಗಿಕ ಸಂಬಂಧವು ಸಂಭ್ರಮಿಸುವ ಪ್ರತಿಷ್ಠೆಯಾಗಿರುತ್ತದೆ. ಇದೇ ಸಂಗತಿಯು ಹೆಣ್ಣಿಗೆ ಅವಮಾನ, ನಿಂದನೆ, ಅಪಹಾಸ್ಯ ಮತ್ತು ನಿಷೇಧಗಳನ್ನು ತಂದೊಡ್ಡುತ್ತವೆ. ಈ ಹಿನ್ನೆಲೆಯಲ್ಲಿ ಕಾದಂಬರಿಯ ಪಾತ್ರಗಳಾದ ರವೀಂದ್ರ, ಆಕಾಶ್ ಹಾಗೂ ಅನೇಕ ಪುರುಷರು ನೈತಿಕತೆಯಿಲ್ಲದೆ ಲಜ್ಜಾಹೀನರಾಗಿ ನಡೆದುಕೊಳ್ಳುತ್ತಾರೆ. ರಘುಪತಿಯ ಹೆಂಡತಿ ಪರಪುರುಷನೊಂದಿಗೆ ಹೋಗುವುದನ್ನು ಕಾದಂಬರಿಯು ಓಡಿಹೋದವಳೆಂದು ಜರೆಯುತ್ತದೆ. ಇಂತಹ ಲಿಂಗತ್ವ ಆಧಾರಿತ ತಾರತಮ್ಯದ ಬಗ್ಗೆ ಕಾದಂಬರಿಯ ನಿರೂಪಕ ತಟಸ್ಥನಾಗಿದ್ದಾನೆ.

ಜೈವಿಕವಾಗಿ ಗಂಡಾಗಿರುವ ಎಷ್ಟೋ ಜನ ಹೆಣ್ಣಾಗಲು ಇಚ್ಛಿಸುವುದನ್ನು ಅಸಹಜವಾಗಿ ಕಾಣುವ ಭಾವ ಇಲ್ಲಿ ಬಹುತೇಕರಿಗೆ ನೆಲೆಯೂರಿದೆ. ಸಾಮಾಜಿಕವಾಗಿಯೂ ಇದು ಅಸ್ವಾಭಾವಿಕ ಮತ್ತು ಅನೈಸರ್ಗಿಕವೆಂಬ ನಂಬಿಕೆ ಇಲ್ಲಿ ದೊಡ್ಡದಾಗಿ ಬೆಳೆದಿದೆ. ಕಾದಂಬರಿಯು ಮೇಲ್ನೋಟಕ್ಕೆ ಇಂತಹ ಮನಸ್ಥಿತಿಯನ್ನು ಪ್ರಶ್ನಿಸುತ್ತಿರುವಂತೆ ತೋರುತ್ತದೆ. ಗಂಡಸರ ಲೈಂಗಿಕ ವಿಕೃತಿಗಳನ್ನು ತೆರೆದು ತೋರಿಸುತ್ತದೆ. ಅವರಿಗೆ ಸಾಮಾಜಿಕವಾಗಿ ದೊರಕಿರುವ ಇಂತಹ ಸ್ವಾತಂತ್ರ್ಯದ ಬಗ್ಗೆ ದೂಷಿಸುತ್ತದೆ. ಸುದರ್ಶನ, ಸುಕೇಶನಿಗೆ ಕೆಲಸ ಕೊಡಿಸುವುದಾಗಿ ಹೇಳಿ ಲೈಂಗಿಕವಾಗಿ ಪೀಡಿಸುವುದನ್ನು ಹಾಗೂ ರವೀಂದ್ರ ತನ್ನ ಹೆಂಡತಿ ತವರಿಗೆ ಹೋದಾಗ ಪುನಃ ಸುಕೇಶನಿಗೆ ಗಂಟು ಬೀಳುವ ಸನ್ನಿವೇಶಗಳನ್ನು ಈ ನೆಲೆಯಿಂದ ಗಮನಿಸಬಹುದು. ಆದರೆ ಲೈಂಗಿಕವಾಗಿ ಸ್ವೇಚ್ಛಾಚಾರವನ್ನು ಅನುಭವಿಸುವ ಗಂಡಿನ ಬಗ್ಗೆ ಕಾದಂಬರಿ ಖಚಿತ ನಿಲುವುಗಳನ್ನು ವ್ಯಕ್ತಪಡಿಸುವುದಿಲ್ಲ. ಅದು ವ್ಯಕ್ತಿಗತ ನೆಲೆಗಷ್ಟೇ ಸೀಮಿತವಾಗುತ್ತದೆ.
ಯಾವ ಅಂಶಗಳು ಈ ಕಾದಂಬರಿಯ ಶಕ್ತಿಯಾಗಿದೆಯೋ ಅವುಗಳೇ ಅದರ ದುರ್ಬಲ ಸಂಗತಿಯಾಗಿದೆ. ಕಾದಂಬರಿಯ ಕೇಂದ್ರ ಭಿತ್ತಿಯಲ್ಲಿರುವ ಸುಕೇಶನ ಪಾತ್ರವು ಗಟ್ಟಿಯಾಗಿ ಮೂಡಿಬರಲಿಲ್ಲ. ಇದಕ್ಕೆ ಕಾರಣವೆಂದರೆ ಈತ ತನ್ನ ಪ್ರತಿಯೊಂದು ಸಮಸ್ಯೆಗಳಿಗೂ ಬೇರೆಯವರಲ್ಲಿ ಸಾಂತ್ವನ ಪಡೆಯಲು ಬಯಸುತ್ತಾನೆ. ಕಾದಂಬರಿಯು ಹಲವು ಕಡೆಯಲ್ಲಿ ಸುಕೇಶನನ್ನು ’ಗಂಡು ದೇಹದೊಳಗಿನ ಹೆಣ್ಣು ಮನಸ್ಸು’ ಎಂದು ವರ್ಣಿಸುತ್ತದೆ. ಸುಕೇಶ ತಾನು ಇಷ್ಟಪಡುವ ರವೀಂದ್ರ ಬೇರೆ ಹುಡುಗಿಯನ್ನು ಮದುವೆಯಾಗುವ ಸಂದರ್ಭದಲ್ಲಿಯು ತನಗೆ ಆಸರೆಯಾಗಿ ಇರಬೇಕೆಂದು ಕೇಳುತ್ತಾನೆ; ನಂತರದಲ್ಲಿ ವಿಧುರನಾಗಿರುವ ಆಕಾಶನ ಹೆಂಡತಿಯ ಸ್ಥಾನವನ್ನು ತುಂಬುವ ದೈನಸ್ಥಿತಿಗೆ ಇಳಿಯಬೇಕಾಗುತ್ತದೆ. ಹೀಗಾಗಿ ಕಾದಂಬರಿಯಲ್ಲಿ ಹೆಣ್ಣೆಂದರೆ ಎಂದಿಗೂ ಗಂಡಿನ ಅಧೀನವಾಗಿಯೇ ಇರುವಂತೆ ಚಿತ್ರಿಸಿದ್ದು ಯಥಾಸ್ಥಿತಿವಾದದ ಸಮರ್ಥನೆಯೇ ಆಗಿದೆ. ಕೊನೆಯ ಭಾಗದಲ್ಲಿ ಬರುವ ಸುಕೇಶನ ಅಸಹಾಯಕತೆ ಮತ್ತು ಗೋಳಾಟವು ಕಾದಂಬರಿಯಲ್ಲಿ ಬರಿ ರೋದನವಾಗಿ ಕೇಳಿಸುವಂತಾಗಿದೆ.
’ದೀಪವಿರದ ದಾರಿಯಲ್ಲಿ’ ಕಾದಂಬರಿಯಲ್ಲಿ ಸುಕೇಶ, ಸಂಜೀವ, ರಘುಪತಿ-ಇವರೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಗಂಡಸರ ಲೈಂಗಿಕ ತೃಷೆಗೆ ಬಲಿಪಶುಗಳೇ ಆಗಿದ್ದಾರೆ. ಲಿಂಗ ಪರಿವರ್ತಿಸಿಕೊಂಡಿರುವ ಸುನಂದಾ ಮತ್ತು ಮಂದಾಕಿನಿಯಂತಹವರ ಬದುಕು ಇನ್ನೂ ಹೀನಾಯವಾಗುತ್ತದೆ. ಇವರ ಬಾಳು ಬರಿ ಕತ್ತಲಿನಿಂದಲೇ ತುಂಬಿರುತ್ತದೆ ಎಂಬ ನೇತ್ಯಾತ್ಮಕ ನಿಟ್ಟಿನಿಂದಲೇ ಕಾದಂಬರಿಯನ್ನು ಹೆಣೆಯಲಾಗಿದೆ. ಕಾದಂಬರಿಯ ಶೀರ್ಷಿಕೆಯು ಕೂಡ ಅದನ್ನೇ ಧ್ವನಿಸುತ್ತದೆ. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಕಾದಂಬರಿಯು ಯಾವ ಧೋರಣೆಗಳನ್ನು ಹೊಂದಿದೆ ಎನ್ನುವುದು ಸ್ಪಷ್ಟವಾಗುವುದಿಲ್ಲ. ಆದರೆ ಸಲಿಂಗಪ್ರೇಮದ ವ್ಯಕ್ತಿಗಳ ಅಸ್ಮಿತೆಗೆ ಸಾಮಾಜಿಕ ಒಪ್ಪಿಗೆ ಇಲ್ಲದಿರುವುದನ್ನು ಕಾದಂಬರಿಯು ತೀವ್ರ ಅನುಕಂಪದ ದೃಷ್ಟಿಕೋನದಿಂದಲೇ ನೋಡುತ್ತದೆ.
ನಮ್ಮ ಕಾಲದಲ್ಲಿ ಸಲಿಂಗಪ್ರೇಮದಂತಹ ಸೂಕ್ಷ್ಮ ಮತ್ತು ಸಂಕೀರ್ಣ ವಿಷಯವನ್ನು ಒಂದು ಕಾದಂಬರಿಯಾಗಿ ಬರೆದಿರುವುದು ಮುಖ್ಯ ಸಂಗತಿಯಾಗಿದೆ. ಈ ಕಾದಂಬರಿಯು ಸರಳ ಮತ್ತು ನೇರವಾದ ಕಥನ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಆದರೆ ಸಲಿಂಗಪ್ರೇಮದ ಸಂಕೀರ್ಣ ನೆಲೆಗಳನ್ನು ಶೋಧಿಸಲು ಇಲ್ಲಿ ಲೇಖಕರಿಗೆ ಸಾಧ್ಯವಾಗಿಲ್ಲ. ಆದರೂ ಭಾಷೆಯ ಹೊಸತನ, ನಿರೂಪಣೆಯ ಭಾವತೀವ್ರತೆಯಿಂದ ಕಾದಂಬರಿಯು ಆಪ್ತಭಾವವನ್ನು ಮೂಡಿಸುತ್ತದೆ.

ಡಾ. ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ
ಇದನ್ನೂ ಓದಿ: ಪುಸ್ತಕ ವಿಮರ್ಶೆ; ಯಾರು ಭಾರತ ಮಾತೆ?


