ಬೆಲ್ ಹುಕ್ಸ್ ಅಮೆರಿಕದ ಲೇಖಕಿ, ಪ್ರಾಧ್ಯಾಪಕಿ, ಸ್ತ್ರೀವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ಇವರ ಬರೆವಣಿಗೆಯು ಜನಾಂಗ, ಬಂಡವಾಳಶಾಹಿ, ಲಿಂಗ ವಿಭಜನೆಯನ್ನು ಒಳಗೊಂಡ ಚಿಂತನೆಯಿಂದ ಕೂಡಿರುವಂತದ್ದು. ಅಮೆರಿಕದಲ್ಲಿ ಶೋಷಿತ ಕಪ್ಪು ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡಿದವರು. ಇವರ ’ಫೆಮಿನಿಸ್ಟ್ ಥಿಯರಿ: ಫ್ರಂ ಮಾರ್ಜಿನ್ ಟು ಸೆಂಟರ್’ ಎಂಬ ಪುಸ್ತಕವನ್ನು ಹೆಚ್.ಎಸ್. ಶ್ರೀಮತಿಯವರು ’ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ’ ಎಂದು ಕನ್ನಡಕ್ಕೆ ತಂದಿದ್ದಾರೆ. “ಇದನ್ನು ಕೇವಲ ಸಾಂಪ್ರದಾಯಿಕವಾಗಿ ಅನುವಾದಿಸದೆ ಅಲ್ಲಲ್ಲಿ ವಿಸ್ತರಣೆ, ಸಂಗ್ರಹ ಮಾಡಿರುವುದಾಗಿ” ಹೇಳಿಕೊಂಡಿದ್ದಾರೆ. ಇದಕ್ಕೆ ’ಕನ್ನಡದ ಓದು’ ಎಂದು ಕರೆದಿದ್ದಾರೆ. ಹೀಗಾಗಿ ಇದು ವಿಸ್ತೃತವಾಗಿ ಕನ್ನಡ ವೈಚಾರಿಕ ಓದಿಗೆ ತೆರೆದುಕೊಳ್ಳುತ್ತದೆ.

ಸಮಾಜದಲ್ಲಿ ಚಾಲ್ತಿಯಲ್ಲಿರುವ ಲೈಂಗಿಕ ರಾಜಕಾರಣದ ಪ್ರಮುಖ ವಿಷಯಗಳ ಪರಿಶೀಲನೆ, ಲೈಂಗಿಕತೆಯ ಗಡಿಗಳ ಅನ್ವೇಷಣೆ, ಸ್ತ್ರೀವಾದಿ ಸಿದ್ಧಾಂತ ವಿಸ್ತರಿಸಿಕೊಳ್ಳಬೇಕಾದ ಅಗತ್ಯತೆಯನ್ನು ಹಲವು ಒಳನೋಟಗಳ ಮೂಲಕ ಈ ಕೃತಿ ಚರ್ಚಿಸುತ್ತದೆ. ಸಮಕಾಲೀನ ಸ್ತ್ರೀವಾದಿ ಚಳವಳಿಯು ದಮನಿತ ಕಪ್ಪು ಮಹಿಳೆಯರನ್ನು ಅಂಚಿನಿಂದ ಮುಖ್ಯವಾಹಿನಿಗೆ ತರಬೇಕಾಗಿದೆ. ಅದರ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡುವುದು ಮುಖ್ಯ ಉದ್ದೇಶವಾಗಬೇಕು. ಸಮಕಾಲೀನ ಸ್ತ್ರೀವಾದವು ಬಿಳಿಯರಲ್ಲದ ಅಂದರೆ ಕಪ್ಪುವರ್ಣೀಯರ ಹಾಗೂ ಮಧ್ಯಮವರ್ಗದ ಅನುಭವವನ್ನು ಪರಿಗಣಿಸದೇ ರೂಪುಗೊಂಡಿದೆ. ಭೂಮಿಯ ಜೊತೆ ಅನನ್ಯ ಸಂಬಂಧವನ್ನು ಹೊಂದಿರುವ ಕಪ್ಪು ಮಹಿಳೆಯರು ದಿನನಿತ್ಯದ ಬದುಕಿನಲ್ಲಿ ತಾರತಮ್ಯ, ಶೋಷಣೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ ಅದಕ್ಕೆ ಪ್ರತಿಯಾಗಿ ಅವರು ಯಾರಿಗೂ ಈ ಬಗೆಯ ಭೇದಭಾವಗಳನ್ನು ತೋರಿಸುವುದಿಲ್ಲ. ಸ್ತ್ರೀವಾದಿ ಚಳವಳಿ ಈ ದಮನಿತ ಸಮುದಾಯದ ಪರವಾಗಿ ಕೆಲಸ ಮಾಡಬೇಕಿತ್ತು. ಅದು ಕೇವಲ ಶ್ರೀಮಂತ ಬಿಳಿಯ ಹೆಂಗಸರ ಪಾಲಾಗಿದೆ. ಹಾಗಾಗಿ ಬೆಲ್ ಹುಕ್ಸ್ ಅವರು ಸ್ತ್ರೀವಾದಿ ಚಳವಳಿಯನ್ನು ಸತ್ವಯುತವಾಗಿ ಕಟ್ಟುವ ಆಕಾಂಕ್ಷೆಯಿಂದ, ವಿಮೋಚನೆಯ ಆದರ್ಶದಲ್ಲಿ ಅಂತಹ ಚಳವಳಿಗೆ ಒತ್ತು ಕೊಡುವುದು ಅತ್ಯಂತ ಮೌಲಿಕವಾದ ಕೆಲಸವೆಂದು ತೀರ್ಮಾನಿಸುತ್ತಾರೆ.

PC : The New School

ಸ್ತ್ರೀವಾದದ ಬಗ್ಗೆ ಈಗಾಗಲೇ ಜಾರಿಯಲ್ಲಿರುವ ಹಾಗೂ ಸಾರ್ವತ್ರಿಕವಾಗಿ ಸ್ವೀಕಾರಾರ್ಹವಾಗಿರುವ ವ್ಯಾಖ್ಯಾನಗಳು ಬೇರೆಬೇರೆಯಾಗಿರುವುದರಿಂದ ಅವುಗಳನ್ನು ನಿರ್ಣಯಿಸುವುದು ಕಷ್ಟಕರವಾಗಿದೆ. ಇದರಿಂದ ಸ್ತ್ರೀವಾದವನ್ನು ಪೂರ್ಣಪ್ರಮಾಣದಲ್ಲಿ ಸಾಧಿಸಲು ಸ್ತ್ರೀವಾದಿಗಳು ಇನ್ನಿಲ್ಲದ ಪರಿಪಾಟಲನ್ನು ಪಡುತ್ತಿದ್ದಾರೆ. ವಾಸ್ತವದಲ್ಲಿ ಎಲ್ಲಾ ಸ್ತ್ರೀವಾದಿಗಳ ಗುರಿ ಲೈಂಗಿಕ ದಬ್ಬಾಳಿಕೆಯ ನಿರ್ಮೂಲನೆಯಾಗಬೇಕು ಎಂದಾಗಬೇಕು. ಇದು ಎಲ್ಲಾ ವಯಸ್ಸಿನ ಪುರುಷರು ಹಾಗೂ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಬೆಲ್ ಹುಕ್ಸ್‌ರವರ ಈ ಬಗೆಯ ಚಿಂತನೆಗಳು ಜಗತ್ತಿನ ಎಲ್ಲಾ ಸಂಸ್ಕೃತಿಗಳಿಗೂ ಅನ್ವಯಿಸುವುದರಿಂದ ಇದರ ಬಗ್ಗೆ ಗಂಭೀರ ಚಿಂತನೆಯಾಗಬೇಕಿದೆ.

ಸಾಂಸ್ಕೃತಿಕ ದಬ್ಬಾಳಿಕೆಯು ಕಟ್ಟಿರುವ ಹುಸಿ ಪರಿಕಲ್ಪನೆಯಾದ “ನಾವೆಲ್ಲರೂ ಸಂತ್ರಸ್ತರೇ, ಅದಕ್ಕೆ ಪುರುಷನೇ ಕಾರಣ” ಎಂಬ ಸುಳ್ಳು ಭ್ರಮೆಗಳಿಂದ ಸ್ತ್ರೀವಾದಿಗಳು ಹೊರಬರಬೇಕಾಗಿದೆ. ಲೈಂಗಿಕತಾವಾದಿ ದಮನಗಳನ್ನು ಕೊನೆಗಾಣಿಸುವ ಸ್ತ್ರೀವಾದ ಮುಂಚೂಣಿಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ರಾಜಕೀಯ ಅಧಿಕಾರ ಸಿಗಬೇಕು ಎಂಬ ಅಪೇಕ್ಷೆ, ಸಮಾಜದಲ್ಲಿ ಮಹಿಳೆಯರ ಬಗೆಗಿನ ಪೂರ್ವಾಗ್ರಹಗಳನ್ನು ದುರ್ಬಲಗೊಳಿಸುತ್ತದೆ. ಅದರಲ್ಲೂ ಒಬ್ಬ ಮಹಿಳೆ ತನ್ನ ಹಾದಿಯನ್ನು ತಾನೇ ನಿರ್ಧರಿಸುವ ಸ್ವಾತಂತ್ರ್ಯವಿರಬೇಕು. ಅಲ್ಲಿ ಪುರುಷ ಕೇಂದ್ರಿತ ಅಧಿಕಾರ ರಾಜಕಾರಣ ಕಾಣಿಸಬಾರದು ಎಂದು ಈ ಕೃತಿಯು ಸೂಕ್ಷ್ಮವಾಗಿ ಹೇಳುತ್ತದೆ.

ಸ್ತ್ರೀವಾದಿ ಚಳವಳಿ ದೃಷ್ಟಿಕೋನಗಳು ಕೆಲವೊಮ್ಮೆ ಪುರುಷರ ಮೇಲಿನ ವಿರೋಧಾಭಾಸದ ಸ್ವರೂಪವನ್ನು ಪರಿಶೋಧಿಸುತ್ತವೆ-ಅವರು ಶತ್ರುಗಳು, ಮಿತ್ರರು, ಅವರನ್ನು ಸಾರ್ವತ್ರಿಕವಾಗಿ ದೂರ ಇಡಬೇಕು ಎಂಬ ಆಲೋಚನೆಗಳನ್ನು ಪುನರ್ ಪರಿಶೀಲಿಸಬೇಕಾದ ಅಗತ್ಯತೆಯನ್ನು ಸಾರುತ್ತದೆ. ಏಕೆಂದರೆ ಮಹಿಳೆಯರಂತೆ ಪುರುಷರು ಲಿಂಗಭೇದಭಾವದಿಂದ ಅನೇಕ ರೀತಿಯಲ್ಲಿ ಬಲಿಯಾಗುತ್ತಾರೆ ಎಂಬ ಸತ್ಯವನ್ನು ಬೆಲ್ ಹುಕ್ಸ್ ಅವರು ತಿಳಿಸಿಕೊಡುತ್ತಾರೆ. ಸ್ತ್ರೀವಾದಿ ಚಳುವಳಿಗಳು ಪುರುಷರು ಮತ್ತು ಮಹಿಳೆಯರ ಜೀವನವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಈ ಚಳವಳಿಗಳು ರೂಪುಗೊಂಡಿರುವುದು ಪುರುಷರೊಂದಿಗಿನ ಸಮಾನತೆ ಸಾಧಿಸುವುದಕ್ಕೆ ಮಾತ್ರ ಎಂಬ ಮಿತಿಯನ್ನು ಮೀರಬೇಕಿದೆ.

ಸಮಕಾಲೀನ ಜೀವನದಲ್ಲಿ ಸ್ತ್ರೀವಾದಿ ಸಿದ್ಧಾಂತದ ಪರಿಶೋಧನೆ, ಬೆಳವಣಿಗೆ, ಅದನ್ನು ಅನುಷ್ಠಾನಕ್ಕೆ ತರುವ ವಿಧಾನಗಳನ್ನು ಈ ಕೃತಿಯು ಅನ್ವೇಷಿಸುತ್ತದೆ. ಅಧಿಕಾರದ ಮೌಲ್ಯವನ್ನು ಮರು ವ್ಯಾಖ್ಯಾನಿಸುವುದು, ಕಪ್ಪು ಮಹಿಳೆಯರಿಗೆ ಸರಿಯಾದ ಶಿಕ್ಷಣವನ್ನು ನೀಡುವುದು, ಲಿಂಗಾಧಾರಿತ ಹಿಂಸೆಯನ್ನು ಕೊನೆಗೊಳಿಸುವುದು, ಸ್ತ್ರೀ-ಪುರುಷರಿಬ್ಬರೂ ಸಮಾನವಾಗಿ ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ನಿರ್ವಹಿಸುವುದರ ಮೂಲಕ ಮಕ್ಕಳ ಪೋಷಣೆಗೆ ಸಂಬಂಧಿಸಿದಂತೆ ಹೊಸ ವಿಧಾನಗಳನ್ನು ವಿಕಸಿಸುವುದು, ಸಮಾಜದಲ್ಲಿ ಈಗಾಗಲೇ ಹೆಚ್ಚು ಮಾನ್ಯತೆಯನ್ನು ಪಡೆದುಕೊಂಡಿರುವ ಒತ್ತಾಯದ ಭಿನ್ನಲಿಂಗೀ ಲೈಂಗಿಕತಾವಾದವನ್ನು ಕಡ್ಡಾಯಗೊಳಿಸದೆ, ಲೈಂಗಿಕತಾ ಆಯ್ಕೆಗಳು ಸಂಪೂರ್ಣವಾಗಿ ವ್ಯಕ್ತಿ ಸಂಬಂಧಿತ, ಅಂದರೆ ದ್ವಿಲಿಂಗಿ, ಸಲಿಂಗಿ, ಭಿನ್ನಲಿಂಗಿ, ಮುಂತಾಗಿ ಯಾವುದೇ ಬಗೆಯ ಲೈಂಗಿಕ ಸಂಬಂಧದ ಸ್ವಾತಂತ್ರ್ಯವನ್ನು ಕೊಟ್ಟು ಲೈಂಗಿಕ ಗಡಿಗಳನ್ನು ದಾಟುವುದು- ಈ ಬಗೆಯ ಹೊಸ ಆಲೋಚನೆಗಳ ಮೂಲಕ ಬೆಲ್ ಹುಕ್ಸ್ ಅವರು ಸ್ತ್ರೀವಾದಿ ಸಿದ್ಧಾಂತವನ್ನು ವಿಸ್ತರಿಸುವ ಬಗೆಯನ್ನು ತಿಳಿಸಿಕೊಡುತ್ತಾರೆ.

ಸಮಾಜದಲ್ಲಿ ರೂಪಾಂತರವು ಒಂದು ಸಹಜ ಪ್ರಕ್ರಿಯೆ ಎಂದು ಸೂಚಿಸಿ, ಇಲ್ಲಿ ಚರ್ಚಿಸಿರುವ ಎಲ್ಲ ಮೌಲ್ಯಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಈ ಕೃತಿಯ ಕೊನೆಯಲ್ಲಿ ಮಾಡಲಾಗಿದೆ. ವಾಸ್ತವದಲ್ಲಿ ಎಲ್ಲ ಪುರುಷರು, ಮಹಿಳೆಯರು, ಸಂಪ್ರದಾಯವಾದಿಗಳು, ಉದಾರವಾದಿಗಳು, ಶೈಕ್ಷಣಿಕ ಚಿಂತಕರು ಒಂದಲ್ಲಾ ಒಂದು ರೀತಿಯಲ್ಲಿ ಬಂಡವಾಳಶಾಹಿ, ಸಾಮ್ರಾಜ್ಯಶಾಹಿ, ಸೆಕ್ಸಿಸ್ಟ್ ಸಮಾಜದ ಶೋಷಣೆಯ ನಿಯಮಗಳ ಪ್ರಕಾರ ಬದುಕಿದ್ದಾರೆ. ಎಲ್ಲರೂ ಮೊದಲು ಇದನ್ನು ಒಪ್ಪಿಕೊಂಡು ಈ ಪರಿಸ್ಥಿತಿಗೆ ಕಾರಣವಾದ ನಂಬಿಕೆ, ವ್ಯವಸ್ಥೆಗಳನ್ನು ಬದಲಿಸಲು ಕೆಲಸ ಮಾಡಬೇಕಿದೆ. ಆಗ ಮಾತ್ರ ಪ್ರಯೋಜನಕಾರಿಯಾದ ಸ್ತ್ರೀವಾದಿ ಚಳುವಳಿ ರೂಪುಗೊಳ್ಳುತ್ತದೆ ಹಾಗೂ ಮಹಿಳೆಯರಿಗೆ ಅಧಿಕಾರ ಸಿಗಬಹುದಾದ ಎಲ್ಲಾ ಸಾಧ್ಯತೆಗಳು ತೆರೆದುಕೊಳ್ಳುವಂತೆ ಮಾಡುತ್ತದೆ ಎಂದು ಬೆಲ್ ಹುಕ್ಸ್ ಅವರು ಬಲವಾಗಿ ವಾದಿಸುತ್ತಾರೆ.

ಸ್ತ್ರೀವಾದಿ ಚಳವಳಿಯು ಮಹಿಳೆಯರ ಬಡತನದ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದರೆ ವಿಭಿನ್ನ ಸಾಂಸ್ಕೃತಿಕ ನೆಲೆಗಟ್ಟಿನ ಕುಲ ಸಮುದಾಯಗಳನ್ನು ಒಂದು ಮಾಡಬಹುದಿತ್ತು. ಸ್ತ್ರೀವಾದಿಗಳಿಂದ ಆಲಕ್ಷಿಸಲ್ಪಟ್ಟ ಬಡ ಕಪ್ಪು ಮಹಿಳೆಯರು ಶೋಷಣೆ, ದಬ್ಬಾಳಿಕೆಗೆ ಒಳಗಾಗಿದ್ದರೂ ಕೂಡ ಸ್ಥಾಪಿತ ಪ್ರಬಲ ಸ್ತ್ರೀವಾದಿ ನಂಬಿಕೆ, ವ್ಯಾಖ್ಯಾನಗಳನ್ನು ತಿರಸ್ಕರಿಸಬಹುದೆಂಬ ಸತ್ಯವನ್ನು ತಿಳಿದುಕೊಳ್ಳಬೇಕು. ಇದು ಅವರ ಮೂಲಭೂತ ವೈಯಕ್ತಿಕ ಶಕ್ತಿ ಎಂದು ಅರಿತುಕೊಳ್ಳಬೇಕಿದೆ. ಆಗ ಸಮಾಜದಲ್ಲಿ ಮುಂದಿನ ತಲೆಮಾರಿಗಾದರೂ ಶೋಷಣೆ, ದಬ್ಬಾಳಿಕೆ ಕಡಿಮೆಯಾಗುವ ಸಾಧ್ಯತೆಗಳಿವೆ. ಅಂದರೆ ದಮನಕ್ಕೆ ಒಳಗಾಗುತ್ತಿದ್ದೇವೆ ಎಂಬ ಪ್ರಜ್ಞೆ ಅವರಲ್ಲಿ ಬಂದರೆ, ಸಹಜವಾಗಿ ವಿಮೋಚನಾ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಲೈಂಗಿಕವಾದಿ ಶೋಷಣೆ ಮತ್ತು ದಮನಗಳನ್ನು ಎದುರಿಸಿ ನಿಲ್ಲಬಹುದು ಎಂಬ ನಂಬಿಕೆ ಮಹಿಳೆಯರಲ್ಲಿ ಮೂಡುವಂತೆ ಮಾಡುವುದು ಸ್ತ್ರೀವಾದದ ಮುಖ್ಯ ಗುರಿಯಾಗಬೇಕು. ಇಂತಹ ಅನೇಕ ಹೊಸ ವಿಚಾರಗಳ ಬಗ್ಗೆ ಬೆಲ್ ಹುಕ್ಸ್ ಅವರು ಈ ಕೃತಿಯಲ್ಲಿ ತಿಳಿಸಿಕೊಡುತ್ತಾರೆ.

ಎಚ್.ಎಸ್ ಶ್ರೀಮತಿ

ಸ್ತ್ರೀಯು ಪುರುಷನಿಗೆ ಹೆದರಿ ಬದುಕುವ ಮನಸ್ಥಿತಿಯಿಂದ ಹೊರಬರಬೇಕಿದೆ. ಶೋಷಣೆ, ದಬ್ಬಾಳಿಕೆ, ಅತ್ಯಾಚಾರಗಳಂತಹ ಪ್ರಕರಣಗಳು ಕಡಿಮೆಯಾಗಬೇಕಾದರೆ ವೇಶ್ಯೆಯರಿಗಿರುವ ಧೈರ್ಯ ಸಾಮಾನ್ಯ ಮಹಿಳೆಗೆ ಬರಬೇಕಿದೆ. ಸ್ತ್ರೀ ಸಮಾನತಾವಾದ ಹೋರಾಟದಲ್ಲಿ ಸ್ತ್ರೀ-ಪುರುಷರಿಬ್ಬರೂ ಸಕ್ರಿಯವಾಗಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಪರಂಪರಾಗತವಾಗಿ ಸಮಾಜವನ್ನು ನೋಡಿಕೊಂಡು ಬಂದ ಬಗೆಯನ್ನು ಬದಲಾಯಿಸಬೇಕಿದೆ. ’ಪುರುಷ ಪ್ರಧಾನ ಸಮಾಜ’ ಎಂಬ ಸ್ಥಾಪಿತ ಭ್ರಮೆಯಿಂದ ಭವಿಷ್ಯದ ಜಗತ್ತು ಹೊರಬರಬೇಕಿದೆ. ಅಷ್ಟೇ ಅಲ್ಲದೇ ಸಮಾಜವನ್ನು ಹೆಣ್ಣುನೋಟದಿಂದ ನೋಡಬೇಕಾದ ಅವಶ್ಯಕತೆ ಇದೆ. ಈ ಕುರಿತಂತೆ ಬೆಲ್‌ಹುಕ್ಸ್ ಅವರು ಈ ಕೃತಿಯಲ್ಲಿ ಚರ್ಚಿಸಿರುವುದು ಸಮಂಜಸವಾಗಿದೆ.

ಒಟ್ಟಿನಲ್ಲಿ ಈ ಕೃತಿಯು ಕಪ್ಪು ಮತ್ತು ಬಿಳಿಸ್ತ್ರೀವಾದಿಗಳ ನಡುವಿನ ಸಂಘರ್ಷವನ್ನು ಬಹಳ ಸೂಕ್ಷ್ಮತೆಯಿಂದ ಹೆಣೆದಿದೆ. ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಪುರುಷ ಹಾಗೂ ಮಹಿಳೆ ಸಮಾನವಾಗಿ ಹಂಚಿಕೊಳ್ಳಬೇಕೆಂದು ಕರೆ ನೀಡಿರುವುದು ಸ್ವೀಕಾರಾರ್ಹ ಸಲಹೆಯಾಗಿದೆ. ಆದರೂ ತಮ್ಮ ಮನೆಯ ದುಡಿಮೆಯಿಂದ ಮುಕ್ತಗೊಂಡ ಬಹುಪಾಲು ಮಹಿಳೆಯರು ವೃತ್ತಿಯಲ್ಲಿ ಬಿಳಿ ಪುರುಷನೊಂದಿಗೆ ಸಮಾನವಾಗಿ ಪ್ರವೇಶವನ್ನು ಪಡೆದುಕೊಂಡರೆ ಮಕ್ಕಳ ಪೋಷಣೆ ಹಾಗೂ ಮನೆಯ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸುವ ಬಗ್ಗೆ ಚರ್ಚಿಸದಿರುವುದು, ಮನೆಗಳಿಲ್ಲದ ಮಹಿಳೆಯರ ದಿನನಿತ್ಯದ ಅಗತ್ಯತೆಯ ಬಗ್ಗೆ ಮೂಡಿರದ ಚರ್ಚೆ- ಹೀಗೆ ಸರಳ ಸಂಗತಿಗಳಾದರೂ ಸಹಜವಾಗಿ ಒಂದಷ್ಟು ಪ್ರಶ್ನೆಗಳು ಹಾಗೆಯೇ ಉಳಿದುಬಿಡುತ್ತವೆ.

ಪಾಶ್ಚಿಮಾತ್ಯ ಸಮಾಜವು ಶೋಷಣೆ, ದಬ್ಬಾಳಿಕೆ, ಅತ್ಯಾಚಾರಗಳನ್ನು ವರ್ಗ, ವರ್ಣದ ಹಿನ್ನೆಲೆಯಲ್ಲಿ ಗಮನಿಸುತ್ತದೆ. ಜಾತಿವ್ಯವಸ್ಥೆಯು ತಾಂಡವವಾಡುತ್ತಿರುವ ನಮ್ಮ ಭಾರತದ ಸಂಸ್ಕೃತಿಯಲ್ಲಿ ಎಲ್ಲವನ್ನು ಜಾತಿ ಹಿನ್ನೆಲೆಯಲ್ಲಿಯೇ ನೋಡಲಾಗುತ್ತದೆ. ಒಪ್ಪಿತ ಚೌಕಟ್ಟನ್ನು ಮೀರಿ ನಮ್ಮ ಸಮಾಜವನ್ನು ಬೇರೆಬೇರೆ ದೃಷ್ಟಿಕೋನಗಳಿಂದ ನೋಡಬೇಕಾದ ಅಗತ್ಯತೆ ಇದೆ. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರ ಶೋಷಣೆ ನಿಲ್ಲಬೇಕಾದರೆ ಪಶ್ಚಿಮದ ವಿಮೋಚನೆಯ ಪರಿಕಲ್ಪನೆ ಅಗತ್ಯವೂ ಇದೆ. ಕನ್ನಡದ ಪ್ರಸಿದ್ಧ ಕವಿ ಸಿದ್ದಯ್ಯ ಪುರಾಣಿಕರ ಕವನದಲ್ಲಿ ಕಪ್ಪು ಮಹಿಳೆಯು “ನಾ ಕರಿಯಳೆಂದು ನೀ ಜರಿಯಬೇಡ, ಬಿಳಿ ಗೆಳತಿ ಗರ್ವದಿಂದ. ಕಪ್ಪಿಗಿಂತ ಬಿಳಿ ಬಣ್ಣ ಹೆಚ್ಚು ಹೇಳ್ಯಾವ ಹಿರಿಮೆಯಿಂದ” ಎಂದು ತನ್ನ ಅಸ್ತಿತ್ವದ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿರುವ ಬಿಳಿ ಮಹಿಳೆಗೆ ನೇರವಾಗಿ ವರ್ಣತಾರತಮ್ಯದ ಬಗ್ಗೆ ಕೇಳುವುದರ ಮೂಲಕ ಸಮಾಜದ ಧೋರಣೆಯನ್ನು ಪ್ರಶ್ನಿಸುತ್ತಾಳೆ. ಆದರೆ ಇದು ಸಾರ್ವತ್ರಿಕವಾದ ಗಟ್ಟಿಧ್ವನಿಯಾಗಬೇಕು. ನಮ್ಮ ಸ್ಥಳೀಯ ಸ್ತ್ರೀವಾದಿ ಚಿಂತನೆಯನ್ನು ವರ್ಣ, ವರ್ಗದ ಹಿನ್ನೆಲೆಯಲ್ಲಿಯೂ ಗಮನಿಸಬೇಕಾದ ಅಗತ್ಯತೆ ಇದೆ. ಹೆಚ್.ಎಸ್.ಶ್ರೀಮತಿಯವರ ಈ ಅನುವಾದಿತ ಕೃತಿ ಕನ್ನಡದಲ್ಲಿ ಸ್ತ್ರೀವಾದವನ್ನು ಬೇರೆ ಆಯಾಮದಲ್ಲಿ ನೋಡುವ ಪರಿಯನ್ನು ಹೇಳಿಕೊಡುತ್ತದೆ ಹಾಗೂ ಮಹಿಳೆ ಶೋಷಣೆ, ದಬ್ಬಾಳಿಕೆಯಿಂದ ಹೊರಬರುವ ವಿಮೋಚನಾ ಮಾರ್ಗವನ್ನು ತಿಳಿಸಿಕೊಡುತ್ತದೆ. ಹಾಗಾಗಿ ನಮ್ಮ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಈ ಬಗೆಯ ಸ್ತ್ರೀವಾದಿ ಚಿಂತನೆಯ ಅವಶ್ಯಕತೆ ಇದೆ.

ಡಾ. ರಿಯಾಜ಼್ ಪಾಷ

ಡಾ. ರಿಯಾಜ಼್ ಪಾಷ
ರಿಯಾಜ಼್ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿ ಪಡೆದಿದ್ದಾರೆ.


ಇದನ್ನೂ ಓದಿ: ದೌರ್ಜನ್ಯವನ್ನು ಕೊನೆಗಾಣಿಸಲು ಸ್ತ್ರೀವಾದೀ ಚಳುವಳಿ “ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ” ಪುಸ್ತಕದ ಅಧ್ಯಾಯವೊಂದರ ಆಯ್ದ ಭಾಗ

ಇದನ್ನೂ ಓದಿ: ಲಾಲ್‌ಬಾಗ್ ವೃತ್ತಾಂತ; ಕಣ್ಮನ ಸೆಳೆಯುವ ಹೂದೋಟದ ಬಗ್ಗೆ ಆಪ್ತ ನೋಟ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಡಾ. ರಿಯಾಜ಼್ ಪಾಷ

LEAVE A REPLY

Please enter your comment!
Please enter your name here