ಒಂದು ಕಾಲದಲ್ಲಿ ತಾನು ಹೊಂದಿದ್ದ ಅಪಾರವಾದ ವೃಕ್ಷ ಸಂಪತ್ತಿನ ಕಾರಣಕ್ಕೆ ಉದ್ಯಾನ ನಗರಿ ಎಂದು ಜಗತ್ತಿನಾದ್ಯಂತ ಪ್ರಸಿದ್ಧವಾದ ಬೆಂಗಳೂರು ನಗರ, ಕಾಲದ ಓಟದಲ್ಲಿ, ಅಭಿವೃದ್ಧಿಯ ವೇಗಕ್ಕೆ ಸಿಕ್ಕಿ ತನ್ನ ಆ ಹಸಿರು ಚಹರೆಯನ್ನು ಕಳೆದುಕೊಂಡಿದ್ದು, ಕೇವಲ 20 ವರ್ಷ ಹಿಂದಿನಿಂದ ಬೆಂಗಳೂರಿನಲ್ಲಿ ಬದುಕುತ್ತಿರುವವರಿಗೂ ತಿಳಿದ ವಿಷಯವೇ. ಅಭಿವೃದ್ಧಿ ಕಲ್ಪನೆಗಳ ಪರ-ವಿರೋಧ ಟೀಕೆಗಳು ಏನೇ ಇರಲಿ, ನಗರ ಅಭಿವೃದ್ಧಿಯ ಜೊತೆಗೆ ಸುಸ್ಥಿರ ಪರಿಸರವನ್ನು ಕಾಯ್ದುಕೊಂಡು ನಗರವನ್ನು ವಿಸ್ತರಿಸುವ ಕನಸನ್ನು ಆಧುನಿಕ ಜಗತ್ತಿನ ಆಡಳಿತ ಅಧಿಕಾರಿಗಳು-ರಾಜಕಾರಣಿಗಳು-ಸರ್ಕಾರಗಳು ಕಾಣಲಿಲ್ಲ ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ ಎಂಬುದು ದುಃಖದ ವಿಷಯ. ಈ ಎಲ್ಲ ಬಿಕ್ಕಟ್ಟುಗಳನ್ನು ನೀಗಿಕೊಂಡು, ಕಾಲನ ಜವರಾಯನನ್ನು ಎದುರಿಸಿಕೊಂಡು, ಇಂದಿಗೂ ಬೆಂಗಳೂರಿನ ಇತಿಹಾಸದ, ಸೌಂದರ್ಯದ, ಬಹುತ್ವದ, ಕಾಸ್ಮೋಪಾಲಿಟನ್ ಸ್ವರೂಪದ ಕಥೆ ಹೇಳಲು ಉಳಿದುಕೊಂಡಿರುವ ಪಾರಂಪರಿಕ ತಾಣ ಲಾಲ್‌ಭಾಗ್. ತಮ್ಮ ವೈಯಕ್ತಿಕ ನೆನಪುಗಳಿಂದ ಲಾಲ್‌ಭಾಗ್ ಬಗ್ಗೆ ಸುರೇಶ್ ಜಯರಾಮ್ ಅವರು ಪುಸ್ತಕವೊಂದನ್ನು ರಚಿಸಿದ್ದು, ಅದು ಹಲವು ಅಧ್ಯಾಯಗಳಲ್ಲಿ ಈ ಹೂದೋಟದ ಇತಿಹಾಸದ ಜೊತೆಜೊತೆಗೇ ಬೆಂಗಳೂರಿನ ಕಥೆಯನ್ನು ತನ್ನ ಒಡಲಲ್ಲಿ ಸೇರಿಸಿಕೊಂಡಿದೆ.

ಲಾಲ್‌ಭಾಗ್ ನೋಡದ ಬೆಂಗಳೂರಿಗರು ಅಥವಾ ಬೆಂಗಳೂರಿಗೆ ಬರುವ ಪ್ರವಾಸಿಗರು ವಿರಳ. ಬಿಲಿಯನ್ ವರ್ಷಗಳ ಹಿಂದಿನ ಕಲ್ಲು ಗುಡ್ಡದ ಮೇಲಿನ ಕಾವಲು ಗೋಪುರದ ಬಳಿ ಕುಳಿತು, ಬುತ್ತಿ ಕಟ್ಟಿಕೊಂಡು ತಂದ ತಿಂಡಿಯನ್ನು ಮಕ್ಕಳ ಜೊತೆಗೆ ಸವಿಯುವ ಚಿತ್ರಣ ಅಚ್ಚಳಿಯದೆ ನೆನಪಿನಲ್ಲಿ ಉಳಿಯುವಂತಾದ್ದು. ವಿವಿಧ ಜಾತಿ ಸಮುದಾಯಗಳ, ಧಾರ್ಮಿಕ ಸಮುದಾಯಗಳ ಜನ ತಮ್ಮದಾಗಿಸಿಕೊಂಡಿರುವ ಈ ಹೂದೋಟ, ಸೆಗ್ರಿಗೇಟೆಡ್ ವಸತಿ ಸಮುದಾಯಗಳ ಕಾಲದಲ್ಲಿ, ಅತೀ ಅಗತ್ಯವಿರುವ ಬಹುತ್ವದ, ಸೌಹಾರ್ದತೆಯ, ಸಾಮಾಜೀಕರಣದ ಕಥೆಯನ್ನೂ ಹೇಳುತ್ತದೆ. ಆ ನಿಟ್ಟಿನಲ್ಲಿ ಸಸ್ಯಕುಲದ ಹಲವು ಪ್ರಭೇದಗಳ ಮರ ಗಿಡಗಳನ್ನು ಹೊಂದಿರುವ ಕಾರಣಕ್ಕೂ ತಾನು ಸೆಳೆಯುವ ಜನರ ವೈವಿಧ್ಯತೆಯ ಕಾರಣಕ್ಕೂ ಲಾಲ್‌ಭಾಗ್ ಕವಿವಾಣಿಯಂತೆ ’ಸರ್ವ ಜನಾಂಗದ ಶಾಂತಿಯ ತೋಟ – ರಸಿಕರ ಕಂಗಳ ಸೆಳೆಯುವ ನೋಟ’. ಜೊತೆಗೆ ಈ ತೋಟ ಬೆಂಗಳೂರಿನ ಪ್ರಾಗೈತಿಕ ಇತಿಹಾಸವನ್ನೂ ನೆನಪಿಸುತ್ತದೆ. ಸುರೇಶ್ ಜಯರಾಮ್ ಅವರ ಪುಸ್ತಕ ’ಬ್ಯಾಂಗಲೋರ್‍ಸ್ ಲಾಲ್‌ಭಾಗ್ – ಎ ಕ್ರಾನಿಕಲ್ ಆಫ್ ದ ಗಾರ್ಡನ್ ಅಂಡ್ ಸಿಟಿ’ ಆರಂಭವಾಗುವುದು ಕೂಡ ಲಾಲ್‌ಭಾಗ್‌ನಲ್ಲಿರುವ ಈ ಐತಿಹಾಸಿಕ ಕಾವಲು ಗೋಪರದ ಬಗೆಗಿನ ಚರ್ಚೆಯಿಂದಲೇ. ಬೆಂಗಳೂರು ನಗರ ನಿರ್ಮಾತೃ ಎಂದು ಗುರುತಿಸಲಾಗಿರುವ ನಾಡಪ್ರಭು ಕೆಂಪೇಗೌಡ ಅವರು ನಿರ್ಮಿಸಿದ ಕೋಟೆ ಮತ್ತು ಕಾವಲು ಗೋಪುರಗಳ ಬಗ್ಗೆ ಬರೆಯುತ್ತಾ, ಕೆಂಪೇಗೌಡರ ಕಾಲದಲ್ಲಿ ತೋಟಗಳು, ದೇವರ ಕಾಡುಗಳು ಮತ್ತು ಗುಂಡುತೋಪುಗಳೇ ಮುಂದೆ ನಿರ್ಮಿಸಲಾದ ಲಾಲ್‌ಭಾಗ್‌ಗೆ ಬೀಜ ಎಂಬುದನ್ನು ಲೇಖಕರು ಗುರುತಿಸುತ್ತಾರೆ.

ಸುರೇಶ್ ಜಯರಾಮ್ ಅವರ ಈ ಪುಸ್ತಕ ಬೆಂಗಳೂರಿನ ಬಗೆಗೆ ಬಂದಿರುವ ವಿಶಿಷ್ಟ ಪುಸ್ತಕಗಳ ಸಾಲಿನಲ್ಲಿ ನಿಲ್ಲುತ್ತದೆ. ವೈಯಕ್ತಿಕ ನೆನಪಗಳ ಜೊತೆಗೆ ಬೆಸೆದುಕೊಂಡ ನಗರದ ಮತ್ತು ಉದ್ಯಾನದ ಇತಿಹಾಸ ಸೇರಿದಂತೆ ಹಲವು ಸಂಗತಿಗಳ ಪಠ್ಯದ ಜೊತೆಗೆ, ಅಪರೂಪದ ಫೋಟೋಗಳು, ಪೇಂಟಿಂಗ್‌ಗಳು, ಇಲ್ಲಸ್ಟ್ರೇಶನ್‌ಗಳು, ಹಳೆಯ ಪೋಸ್ಟ್‌ಕಾರ್ಡ್‌ಗಳ, ಭೂಪಟಗಳ ಚಿತ್ರಗಳನ್ನು ಒಳಗೊಂಡು, ಕಣ್ಮನ ಸೆಳೆಯುವ ವಿನ್ಯಾಸ ಕೂಡ ವಿಶೇಷ ಮೆರಗು ನೀಡಿದೆ. ಉದಾಹರಣೆಗೆ ಪುಟ 16-17ರಲ್ಲಿ ಮುದ್ರಣಗೊಂಡಿರುವ 1790-92ರ ನಡುವೆ ಬಿಡಿಸಲಾಗಿರುವ ಬೆಂಗಳೂರು ಕೋಟೆಯ ಒಂದು ವರ್ಣಚಿತ್ರ ಮಾತುಗಳು ಚಿತ್ರಿಸಬಹುದಾದದ್ದಕಿಂತ ದೊಡ್ಡದಾದ-ವಿಶಾಲವಾದ ಕಥೆಯನ್ನು ಹೇಳುತ್ತದೆ.

ನಂತರ ಲಾಲ್‌ಭಾಗ್‌ಅನ್ನು ಬಹಳ ಮುತುವರ್ಜಿಯಿಂದ ಅಭಿವೃದ್ಧಿಗೊಳಿಸಿದ್ದು ಹೈದರ್ ಅಲಿ (1722-1782) ಮತ್ತು ಟಿಪ್ಪು ಸುಲ್ತಾನರ (1780-1856) ಆಳ್ವಿಕೆಯ ಸಮಯದಲ್ಲಿ. ಹೈದರಾಲಿ ಶ್ರೀರಂಗಪಟ್ಟಣ, ಮಳವಳ್ಳಿ ಮತ್ತು ಬೆಂಗಳೂರಿನಲ್ಲಿ ಮೂರು ವೈಯಕ್ತಿಕ ಹೂ ತೋಟಗಳನ್ನು ನಿರ್ಮಿಸಿದ್ದು ಇತಿಹಾಸ. ಸಿರಾದ ಬಳಿ ಇದ್ದ (ಈಗ ಅಳಿದಿದೆ) ಮೊಘಲ್ ಶೈಲಿಯ ತೋಟದಿಂದ ಸ್ಪೂರ್ತಿಗೊಂಡು ಕೆಂಪೇಗೌಡ ಗೋಪುರದ ಹತ್ತಿರವೇ 40 ಎಕರೆ ಜಾಗವನ್ನು ಗುರುತಿಸಿ ಈ ಜೈವಿಕ ಸಸ್ಯ ಉದ್ಯಾನವನಕ್ಕೆ ಅಡಿಪಾಯ ಹಾಗಿದ್ದು ಹೈದರ್ ಅಲಿ. ಪುಟ 36ರಲ್ಲಿರುವ 1791ರಲ್ಲಿ ರಚಿಸಲಾಗಿರುವ ರಾಬರ್ಟ್ ಹೈಡ್ ಕೋಲೆಬ್ರೂಕ್ ಅವರ ವಾಟರ್‌ಕಲರ್-ಪೆನ್-ಇಂಕ್ ಚಿತ್ರ ಆ ಕಾಲದ ತೋಟದ ಭವ್ಯತೆಯನ್ನು ನಮಗೆ ಸೂಚಿಸುತ್ತದೆ.

ನಂತರ ಟಿಪ್ಪು ಸುಲ್ತಾನದ ಕಾಲದಲ್ಲಿ ಆದ ಸಸ್ಯ ರಾಯಭಾರದ ಕಥೆ ಕೂಡ ಆಸಕ್ತಿದಾಯಕ. ಟಿಪ್ಪು ಮತ್ತು ಫ್ರೆಂಚ್ ರಾಯಭಾರತ್ವದ ಕಥೆಯಲ್ಲಿ ಬಂದು ಹೋಗುವ ಮೊಹಮದ್ ದೆರ್ವಿಶ್ ಖಾನ್ ಅವರ ಕಥೆ, ಅವರ ಆಸಕ್ತಿದಾಯಕ ವರ್ಣಚಿತ್ರ, ರಾಯಭಾರ ಕೆಲಸವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕೆ ಸೋತಿದ್ದಕ್ಕೆ ಮರಣದಂಡನೆಗೆ ಗುರಿಯಾದ ಕಥೆ ಎಲ್ಲವೂ ಹಾದುಹೋಗುತ್ತವೆ. ಟಿಪ್ಪು ತನ್ನ ಸಮಯಾವಧಿಯಲ್ಲಿ ಬೇರೆ ದೇಶಗಳ ಹೂದೋಟಗಳಿಂದ ತರಿಸಿ ಪರಿಚಯಿಸಿದ ಹೂವು ಹಣ್ಣುಗಳ ಕಥೆ, ಟಿಪ್ಪುವಿನ ಸಸ್ಯಪ್ರೀತಿಯ ಬಗ್ಗೆ ದಂತಕತೆಗಳು, ತಿಪ್ಪಾಜಿಯವರ ಚಿತ್ರಗಳು ಹೀಗೆ ಆಸಕ್ತಿದಾಯಕ ಸಂಗತಿಗಳ ಆಗರವನ್ನೇ ಕಟ್ಟಿಕೊಡಲಾಗಿದೆ. ಟಿಪ್ಪು ಕಾಲದಲ್ಲಿ ಪರದೇಶದಿಂದ ಪರಿಚಯಿಸಿದ ಚಕ್ಕೋತಾ ಹಣ್ಣು ಮತ್ತು ರೇಶ್ಮೆ ಕೃಷಿಯನ್ನು ಮರೆಯಲು ಸಾಧ್ಯವೇ?

ನಂತರ ಬ್ರಿಟಿಷರು ಟಿಪ್ಪುವಿನಿಂದ ಮೈಸೂರನ್ನು ಗೆದ್ದುಕೊಂಡ ಮೇಲೆ ಲಾಲ್‌ಭಾಗ್‌ಅನ್ನು ಇನ್ನಷ್ಟು ವಿಶಾಲಗೊಳಿಸಿದ್ದು, ಅದಕ್ಕೆ ಬ್ರಿಟಿಷ್ ವಿನ್ಯಾಸದ ಸ್ವರೂಪ ಬಂದಿದ್ದು, ಮೈಸೂರು ಮಹರಾಜರ ಆಡಳಿತಕ್ಕೆ ಒಳಪಟ್ಟ ಮೇಲೆ ಮೈಸೂರು ದಿವಾನರ ವಿಶನ್‌ನಲ್ಲಿ ಈ ತೋಟ ಅಭಿವೃದ್ಧಿಗೊಂಡ ಬಗೆ ಹೀಗೆ ಇಡೀ ಮೈಸೂರಿನ ಇತಿಹಾಸವನ್ನೂ ಲಾಲ್‌ಭಾಗ್ ತನ್ನ ಒಡಲಲ್ಲಿ ಇರಿಸಿಕೊಂಡಿದೆ. ಬ್ರಿಟಿಷ್ ಮತ್ತು ಮೈಸೂರು ಮಹರಾಜರ ಆಡಳಿತದಲ್ಲಿ ಲಾಲ್‌ಭಾಗ್ ಅಭಿವೃದ್ಧಿಗೆ ವಿಶೇಷವಾಗಿ ಶ್ರಮಿಸಿದ ಜಾನ್ ಕ್ಯಾಮರನ್, ಜಿ ಎಚ್ ಕ್ರುಂಬಿಗಲ್, ಎಚ್ ಸಿ ಜವರಾಯ ಮತ್ತು ಡಾ. ಎಂ ಎಚ್ ಮರಿಗೌಡರ ಸೇವೆಯನ್ನು ವಿಶೇಷವಾಗಿ ನೆನೆಯಲಾಗಿದೆ.

ಲಾಲ್‌ಭಾಗ್‌ನಲ್ಲಿರುವ ವಿಶೇಷ ಸ್ಮಾರಕಗಳು (ಗ್ಲಾಸ್ ಹೌಸ್, ವಾದ್ಯ ಬಾರಿಸುವ ಗೋಪುರದ ರೀತಿಯ ತಾಣ ಮುಂತಾದವು), ಈಗ ಅಳಿದು ಹೋಗಿರುವ ವಿಶೇಷ ನೆನಪುಗಳು (ಪ್ರಾಣಿ ಸಂಗ್ರಹಾಲಯ ತರದವು) ಎಲ್ಲವೂ ವಿಶೇಷ ಚಿತ್ರಗಳೊಂದಿಗೆ ನಮ್ಮ ನೆನಪುಗಳನ್ನು ಮತ್ತೆ ಕೆರಳಿಸುತ್ತವೆ. ಟೀಪಾರ್ಟಿಗೆ ಬಳಸುತ್ತಿದ್ದ ಗ್ಲಾಸ್‌ಹೌಸ್, ನಂತರ ಅಲ್ಲೇ 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಗಲು ನಡೆದ ಸಭೆ, ಅದರಿಂದ ಹುಟ್ಟಿದ ಕಾಂಗ್ರೆಸ್ ಕಡಲೆಬೀಜದ ಹೆಸರು- ಇಂತಹ ಕಚಗುಳಿ ಇಡುವ ಸಂಗತಿಗಳು ಕೂಡ ಸೇರಿಕೊಂಡು ಓದನ್ನು ಆಪ್ತವಾಗಿಸುತ್ತದೆ. ಸಸ್ಯಶಾಸ್ತ್ರ ಅಧ್ಯಯನಕ್ಕಾಗಿ ಮಾಡುತ್ತಿದ್ದ ಪೇಂಟಿಂಗ್ ಬಗೆಗಿನ ವಿಶೇಷ ಅಧ್ಯಾಯದಲ್ಲಿ ಗಿಡ ಮರಗಳ ಮೂಲಗಳು ಮತ್ತು ವಿಶೇಷತೆಗಳ ಜೊತೆಗೆ ಅವಗಳ ವರ್ಣಚಿತ್ರಗಳು ಸಸ್ಯಸಂಕುಲದ ಬಗ್ಗೆ ವಿಶೇಷ ಆಸಕ್ತಿಯನ್ನು ಮೂಡಿಸುತ್ತವೆ. ಆಫ್ರಿಕಾದ ಬಾವ್‌ಬಾಬ್ ಮರ, ಆಸ್ಟ್ರೇಲಿಯಾದಿಂದ ಬಂದ ಯೂಕಲಿಪ್ಟಸ್ ತಳಿ (ನೀಲಗಿರಿ), ಬೆಂಗಳೂರು ಬದನೆ, ಅತ್ತಿ ಮರದ ಪ್ರಭೇದ, ಸಂಪಿಗೆ ಮರಗಳು ಹೀಗೆ ಪ್ರತಿ ಗಿಡಮರಗಳ ಹಿಂದೆ ವಿಕಸಿತ ಬೆಂಗಳೂರಿನ ಸಂಸ್ಕೃತಿಯೇ ಅಡಗಿರುವ ಕತೆಗಳನ್ನು ಲೇಖಕರು ಚುಟುಕಾಗಿಯೂ ಕುತೂಹಲಕಾರಿಯಾಗಿಯೂ ಕಟ್ಟಿಕೊಡುತ್ತಾರೆ.

ದೇವಕಣಿಗೆಲೆಯ ಬಗ್ಗೆ ಬರೆಯುತ್ತಾ ಮೆಕ್ಸಿಕೋ ಇಂದ ಬಂದ ಈ ತಳಿಯ ಹೂವಿನ ಗಿಡಗಳು ಹೇಗೆ ಜಾತ್ಯಾತೀತವೂ ಮತ್ತು ಪೂಜನೀಯವೂ ಆದ ನಮ್ಮ ಸಂಸ್ಕೃತಿಗೆ ಒಗ್ಗಿಕೊಂಡು, ಪೂಜಾವಿಧಿಗಳಿಗೆ ಈ ಹೂವನ್ನು ಬಳಸಲ್ಪಡುತ್ತಿದೆ ಎನ್ನುವ ಲೇಖಕರ ಮಾತು ಬೆಂಗಳೂರಿನ ಬಹುಸಂಸ್ಕೃತಿಯ, ಕಾಸ್ಮೋಪಾಲಿಟನ್ ಪರಿಸರಕ್ಕೆ ಹಿಡಿದ ಕನ್ನಡಿಯಾಗಿ ಕಾಣಿಸುತ್ತದೆ.

ಪುಸ್ತಕದ ಕೊನೆಯ ಭಾಗದಲ್ಲಿ ಲೇಖಕರು ಈ ಪುಸ್ತಕ ಬರೆಯಲು ತಮ್ಮ ಪೂರ್ವಜರ ಮತ್ತು ತಮ್ಮ ಸಮುದಾಯದ ಇತಿಹಾಸದ ನೆನಪುಗಳ ಕತೆ ಹೇಗೆ ಪ್ರೇರಣೆಯಾಯಿತು ಎಂದು ದಾಖಲಿಸುತ್ತಾ, ಬೆಂಗಳೂರಿನ ತೋಟಗಳಿಗೆ ತಿಗಳ ಸಮುದಾಯ ನೀಡಿರುವ ಕೊಡುಗೆಯನ್ನು ನೆನಪಿಸಿಕೊಳ್ಳುತ್ತಾರೆ. ತಮಿಳು ಮಾತೃಭಾಷೆಯ ಈ ಸಮುದಾಯ ಬೆಂಗಳೂರಿಗೆ ವಲಸೆ ಬಂದ ಹಲವು ಕತೆಗಳಿವೆ. ’ಬ್ಯಾಂಗಲೋರ್ ಥ್ರೂ ಸೆಂಚ್ಯುರಿಸ್’ ಪುಸ್ತಕದ ಲೇಖಕ ಫಜ್ಲುಲ್ ಹಸನ್ ಮತ್ತು ಸುರೇಶ್ ಜಯರಾಮ್ ಅವರು ಕೂಡ ದಾಖಲಿಸುವಂತೆ, ತೋಟಗಾರಿಕೆಯಲ್ಲಿ ನಿಪುಣರಾಗಿದ್ದ ಈ ಸಮುದಾಯದ ಹಲವರನ್ನು ಹೈದರ್ ಅಲಿ ಬೆಂಗಳೂರಿಗೆ ಕರೆತಂದು ಲಾಲ್‌ಭಾಗ್ ನಿರ್ಮಿಸುವುದಕ್ಕೆ ತೊಡಗಿಸಿಕೊಂಡ ಬಗ್ಗೆಯೂ ಉಲ್ಲೇಖಗಳಿವೆ. ಈ ಸಮುದಾಯ ಮುಂದೆ ಹಲವು ತೋಟಗಳನ್ನು ಮತ್ತು ನರ್ಸರಿಗಳನ್ನು ಬೆಳೆಸುವುದಕ್ಕೆ ಕೂಡ ಕಾರಣವಾಯಿತು.

ತಿಗಳ ಸಮುದಾಯ ಮುನ್ನಡೆಸುವ ಕರಗ ಉತ್ಸವ ಬೆಂಗಳೂರಿನ ಸಂಭ್ರಮಗಳಲ್ಲಿ ಒಂದು. ಕರಗದ ಜಾತ್ರೆ, ಲಾಲ್‌ಭಾಗ್ ಮುಂಭಾಗದಲ್ಲಿರುವ 18 ನೇ ಶತಮಾನದ ಸೂಫಿ ಸಂತ ಹಜರತ್ ತೌಕ್ಕಲ್ ಮಸ್ತಾನ್ ಅವರ ದರ್ಗಾ ಎ ಶರೀಫ್ ಮುಂದೆ ನಿಲ್ಲುವ ಸಂಪ್ರದಾಯ ಬೆಂಗಳೂರಿನ ಬಹುತ್ವದ ಕಥನಗಳಲ್ಲಿ ಬಹುಮುಖ್ಯವಾದದ್ದು.

ಬೆಂಗಳೂರಿನ ಬಾಹ್ಯ ಮತ್ತು ಅಂತರಂಗದ ಸೌಂದರ್ಯಗಳಲ್ಲಿ ಪ್ರಮುಖ ಪಾತ್ರವಹಿಸಿರುವ ಲಾಲ್‌ಭಾಗ್ ಕವಿ ಕುವೆಂಪು, ನಿಸಾರ್ ಅಹಮದ್, ಎಚ್ ನರಸಿಂಹಯ್ಯ ಹೀಗೆ ಹಲವು ಸಾರ್ವಜನಿಕ ವ್ಯಕ್ತಿಗಳಿಂದ ಹಿಡಿದು ಜನಸಾಮಾನ್ಯರಿಗೂ ಆಪ್ತವಾದ ತಾಣವಾಗಿತ್ತು ಮತ್ತು ಆಗಿದೆ. ಇಂತಹ ಉದ್ಯಾನದ ಬಗ್ಗೆ ಬರುವ ಯಾವುದೇ ಹೊಸ ಪುಸ್ತಕ ಬೆಂಗಳೂರಿನ ಬಗೆಗಿನ ಇತಿಹಾಸ ಮತ್ತು ವರ್ತಮಾನದ ಸೇತುವೆಯಾಗಿ ನಗರವನ್ನು ನಮ್ಮದಾಗಿಸಿಕೊಳ್ಳುವ ಆಪ್ತತೆಗೆ ಶ್ರಮಿಸುತ್ತಿರುತ್ತವೆ. ಈ ನಿಟ್ಟಿನಲ್ಲಿ ಸುರೇಶ್ ಜಯರಾಮ್ ಅವರ ಹೊಸ ಪುಸ್ತಕ ಬೆಂಗಳೂರಿಗರನ್ನು ಎಕ್ಸೈಟ್ ಮಾಡುವುದರಲ್ಲಿ ಸಂಶಯವಿಲ್ಲ.


ಇದನ್ನೂ ಓದಿ: ಸಂತಸ ಅರಳುವ ಸಮಯ; ಬೆಂಗಳೂರು ಮತ್ತು ಟಬೂಬಿಯಾ ಹೂಗಳ ಸಂಭ್ರಮ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಗುರುಪ್ರಸಾದ್ ಡಿ ಎನ್
+ posts

LEAVE A REPLY

Please enter your comment!
Please enter your name here