ಹೈದ್ರಾಬಾದು-ಮುಂಬಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಸ್ತಾಪುರ ಬಂಗಲಾ ಕ್ರಾಸ್ ಹತ್ತಿರ ಬಲಕ್ಕೆ ತಿರುಗಿ ಸ್ವಲ್ಪ ಮುಂದೆ ಹೋದರೆ ಸಿಗುವುದು ತ್ರಿಪುರಾಂತ. ಮೊದಲಿಗೆ ಸಣ್ಣ ಹಳ್ಳಿ ಆಗಿದ್ದ ಇದು ಈಗ ಬಸವಕಲ್ಯಾಣ ನಗರದ ಬಡಾವಣೆ ಆಗೇದ.
ತ್ರಿಪುರಾಂತದೊಳಗ ಇರೋ ನೀರಿನ ಮೂಲ ಎರಡು. ಒಂದು ಬಂದವರ ಓಣಿ, ಇನ್ನೊಂದು ತ್ರಿಪುರಾಂತ ಕೆರೆ. ಪವಿತ್ರ ಸ್ಥಳದಾಗ ಇರೋ ಕೆರೆ, ಬಾವಿ ಅಥವಾ ನೀರಿನ ಮೂಲಕ್ಕ ಕಲ್ಯಾಣಿ ಅಂತ ಹೆಸರು. ಈ ತ್ರಿಪುರಾಂತದ ಕಲ್ಯಾಣಿಯಿಂದಲೇ ಈ ಊರಿಗೆ ಹೆಸರು ಬಂತು. ಇಂದಿಗೂ ಹಳ್ಳಿ ಮಂದಿ ‘ಎಲ್ಲಿಂದ ಬಂದೀಯೋ?’ ಅಂದ್ರ ‘ನಾ ಕಲ್ಯಾಣಿಯಿಂದ ಬಂದೆ’ ಅಂತಾರ. ಗೈರು ಕನ್ನಡದವರು-ಅಂದ್ರ ತೆಲುಗು, ಮರಾಠಿ, ಉರ್ದು- ಹಿಂದಿ ಮಾತಾಡುವರು ಈ ಊರಿಗೆ ಕಲ್ಯಾಣಿ ಅಂತಲೇ ಕರೀತಾರ.
ಮೊದಲೆಲ್ಲಾ ಸರ್ಕಾರಿ ದಾಖಲೆಯೊಳಗ ಕಲ್ಯಾಣಿ ಅಂತಲೇ ಇತ್ತು. ಅದು ಅರವತ್ತರ ದಶಕದೊಳಗ ಬಸವಕಲ್ಯಾಣ ಅಂತ ಮರುನಾಮಕರಣ ಆತು. ಶರಣರ ವಚನದೊಳಗ ಸಹಿತ ‘ಕಲ್ಯಾಣವೆಂಬೋ’ ಪಟ್ಟಣ ಅಂತ ಈ ಊರಿನ ಹೆಸರು ಹೇಳತಾರ.
ಕಲ್ಯಾಣ ಕ್ರಾಂತಿಯ ಕಾಲದಾಗ 770 ಶರಣರು ಇದ್ದರೂ ಅವರ ಎಲ್ಲರ ವಚನ ಲಭ್ಯ ಇಲ್ಲ. ಈಗ ಲಭ್ಯವಿರುವ 250 ಶರಣರ 21,000 ವಚನಗಳಲ್ಲಿ ಸುಮಾರು 120 ಕಡೆ ಕಲ್ಯಾಣ ಅನ್ನುವ ಪದ ಬರ್ತದ. ಅದರಾಗ ಅನೇಕ ಜನ ಆ ಊರಿನ ಹೆಸರು ಹಾಗೂ ಜನ ಕಲ್ಯಾಣ ಅನ್ನುವ ಅರ್ಥದೊಳಗ ಅದನ್ನ ಬಳಸಿಕೊಂಡಾರ.
ಆ ಕೆರೆ ಈಗ ಅರ್ಧ ಒಣಗಿ ಹೋಗೇತಿ. ಅದು ಅಷ್ಟೇ ಅಲ್ಲ, ಅಲ್ಲಿನ ಸುಮಾರು 25 ಶರಣರ ಸಮಾಧಿ-ಸ್ಮಾರಕ-ಗವಿಗಳ ಹತ್ತಿರ ಇರುವ ಕೆರೆ-ಬಾವಿಗಳು ಸಹಿತ ‘ನಳನಳಿಸುವ ಸ್ಥಿತಿ’ಯೊಳಗ ಇಲ್ಲ. ಕಲ್ಯಾಣದ ಇತಿಹಾಸ ಸಂಶೋಧಕರ ಪ್ರಕಾರ ಅಲ್ಲಿ 100ಕ್ಕೂ ಹೆಚ್ಚು ಸ್ಮಾರಕ ಇರಬೇಕಾಗಿತ್ತು. ಆದರ ಅಲ್ಲೆ ಸದ್ಯಕ್ಕ 27 ಸ್ಮಾರಕ ಪತ್ತೆ ಹಚ್ಚಿ ಅಭಿವೃದ್ಧಿ ಮಾಡೋ ಕೆಲಸ ಶುರು ಆಗೇದ.

ಕೋಟಿಗಟ್ಟಲೆ ಖರ್ಚು ಮಾಡಿ ಕಟ್ಟಿದ ಅಥವಾ ಪುನರ್ ನಿರ್ಮಾಣ ಮಾಡಿದ ಈ ಸ್ಮಾರಕಗಳು ಭಾಳ ಛಂದ ಅದಾವು. ಆದರ ಅಲ್ಲೆ ಇದು ಹಿಂಗ, ಇದರ ಇತಿಹಾಸ ಹಿಂಗ ಅಂತ ಹೇಳಿಕೊಡುವ ಗೈಡುಗಳು ಇಲ್ಲ. ನೀವು ಬಸವಕಲ್ಯಾಣ ಬಸ್ ನಿಲ್ದಾಣದೊಳಗ ಇಳದು ಇಲ್ಲೆ ನಾವು ಏನು ಏನು ನೋಡಬಹುದು ಅಂತ ಕೇಳಿದರ ಹೇಳೋ ಪ್ರವಾಸೋದ್ಯಮ ಇಲಾಖೆ ಕಚೇರಿ ಇಲ್ಲ. ಸಿಟಿ ರೌಂಡ್ ಹೊಡೆಸಿಕೊಂಡು ಬರುವ ಟ್ಯಾಕ್ಸಿ ಸೇವೆ ಇಲ್ಲ.
ತಾಲೂಕು ಕೇಂದ್ರ ಆಗಿರುವ ಈ ಪಟ್ಟಣದಿಂದ ಬೇರೆ ಬೇರೆ ಪಕ್ಷದ ಶಾಸಕರು ಆರಿಸಿಹೋಗಿದ್ದರೂ ಸಹಿತ, ಅದು ಹಿಂದುಳಿದ ಹೈದರಾಬಾದ್ ಕರ್ನಾಟಕದ ಛಾಪು ಉಳಿಸಿಕೊಂಡದ. ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅದು ಶತಮಾನಗಳಷ್ಟು ಹಿಂದೆ ಉಳಿದದ. ಅಲ್ಲಿ ಒಂದು ಉನ್ನತ ಗುಣಮಟ್ಟದ ಆಸ್ಪತ್ರೆ ಇಲ್ಲ. ಇಲ್ಲಿ ಮಹಿಳಾ ವೈದ್ಯರು, ಹೃದಯತಜ್ಞರು, ಕಿಡ್ನಿ ತಜ್ಞರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ತಾಲೂಕ ಆಸ್ಪತ್ರೆ ಇದೆ. ಅದು ಸುಸಜ್ಜಿತವಾಗಿಲ್ಲ. ಇತರ ನಗರದೊಳಗ ಇರುವಂತ ಆರೋಗ್ಯ ಕೇಂದ್ರ ಇಲ್ಲಿಲ್ಲ.
ಬಸವಕಲ್ಯಾಣದೊಳಗ ಒಂದು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲ. ಇಡೀ ತಾಲೂಕಿನಲ್ಲಿ ಕೇವಲ ಒಂದು ಸರ್ಕಾರಿ ಡಿಗ್ರಿ ಕಾಲೇಜು ಹಾಗೂ ಎರಡು ಸರ್ಕಾರಿ ಪಿಯುಸಿ ಕಾಲೇಜು ಇವೆ.
ಇದಕ್ಕೆ ಹೋಲಿಸಿದರೆ ಹಾಸನ ತಾಲೂಕಿನಲ್ಲಿ ಆರು ಸರ್ಕಾರಿ ಡಿಗ್ರಿ ಕಾಲೇಜು ಹಾಗೂ 12 ಸರ್ಕಾರಿ ಪಿಯುಸಿ ಕಾಲೇಜು ಇವೆ.
ಅದರ ಪಕ್ಕದ ಹೊಳೆನರಸೀಪುರ ಕ್ಷೇತ್ರದೊಳಗ ಅರ್ಧ ಡಜನ್ ಸರ್ಕಾರಿ ಡಿಗ್ರಿ ಕಾಲೇಜು ಅದಾವು.
ಇಲ್ಲಿ ಒಂದು ರಿಂಗ್ ರೋಡ್ ಇಲ್ಲ. ಬೈಪಾಸ್ ರಸ್ತೆ ಇಲ್ಲ. ಹೊಸ ಮಾದರಿಯ ಬಸ್ ನಿಲ್ದಾಣ ಇಲ್ಲ. ಅತ್ಯಂತ ಹತ್ತಿರದ ರೈಲ್ವೆ ಹಳಿ 35 ಕಿಲೋಮೀಟರ್ ದೂರ ಐತಿ. ಅಲ್ಲಿಗೆ ಒಂದೇ ರೈಲು ಬರಬೇಕಾಗಿತ್ತು. ಅದೂ ಬಂದಿಲ್ಲ. ಅತಿ ಹತ್ತಿರದ ರೈಲು ಬರೋ ನಿಲ್ದಾಣ 100 ಕಿಲೋಮೀಟರ್ ದೂರ ಬೀದರ್‌ದಾಗ ಐತಿ.
ಕುಡಿಯುವ ನೀರು, ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಒಳಚರಂಡಿ ಇಲ್ಲ. ಜಿಲ್ಲಾ ಕೇಂದ್ರ ಬೀದರ್‌ಗಿಂತ ಕಲ್ಯಾಣ ದೊಡ್ಡದಾದರೂ ಇಲ್ಲಿ ನಗರ ಬಸ್ ಸಂಚಾರ ಇಲ್ಲ. ಪ್ರವಾಸಿಗರಿಗಾಗಿ ವಿಶೇಷ ಬಸ್ ವ್ಯವಸ್ಥೆ ಇಲ್ಲ. ಮೂರು ಯಾತ್ರಿ ನಿವಾಸ ಅದಾವು. ಆದರ ಅದರ ಮಾಹಿತಿ ಅಂತರಜಾಲದಾಗ ಇಲ್ಲ.
ಬಸವಕಲ್ಯಾಣವನ್ನು ಅಂತರರಾಷ್ಟ್ರೀಯ ಯಾತ್ರಾ ಸ್ಥಳ ಮಾಡಬೇಕು ಅಂತ ಹೇಳಿದವರು ಹಲವರು. ಅದನ್ನು ಜಾಗತಿಕ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸುತ್ತೇವೆ ಅಂತ ಹೇಳಿದವರು ಇಲ್ಲ. ಇಲ್ಲಿ ಬಸವಣ್ಣನ ಬಗ್ಗೆ, ಇತರ ಶರಣರ ಬಗ್ಗೆ, ಒಂದು ದೊಡ್ಡ ಮ್ಯೂಜಿಯಂ ಅಥವಾ ಲೈಬ್ರರಿ ಇಲ್ಲ. ಮಲ್ಟಿಮೀಡಿಯಾದಂತಹ ಆಧುನಿಕ ತಂತ್ರಜ್ಞಾನ ಬಳಸಿ ಹನ್ನೆರಡನೇ ಶತಮಾನದ ಕ್ರಾಂತಿಯ ಕತೆ ಹೇಳುವ ಕೇಂದ್ರ ಇಲ್ಲ. ಹಾಡು-ನೃತ್ಯ, ನಾಟಕ-ಜನಪದ ಕಲೆ ತೋರುವ, ಬೆಳೆಸುವ ಕೇಂದ್ರ ಇಲ್ಲ. ಆಧುನಿಕ ತಾಂತ್ರಿಕತೆಯ ರಂಗಮಂದಿರ ಇನ್ನೂ ಆಗಬೇಕು.
ಒಂದು ಉನ್ನತ ಗುಣಮಟ್ಟದ ವಚನ ಸಂಶೋಧನಾ ಕೇಂದ್ರ ಇಲ್ಲ. ಪಕ್ಕದ ಮಹಾರಾಷ್ಟ್ರದ ಸಂತರ, ತೆಲಂಗಾಣದ ಭಕ್ತಿ ಕವಿಗಳ ಕೃತಿ ಚರ್ಚಿಸುವ, ಪರಿಚಯಿಸುವ, ಸ್ಥಳೀಯ ಸೂಫಿ ಸಂತರ ಬಗ್ಗೆ ತಿಳಿಸಿಕೊಡುವ ಸಂಸ್ಥೆ ಇಲ್ಲ.
ಕಲ್ಯಾಣವನ್ನು ಶತಮಾನಗಳಗಟ್ಟಲೆ ಆಳಿದ, ಕಲ್ಯಾಣಿ ಚಾಲುಕ್ಯರ ಆಡಳಿತ ಕುರಿತು ಅಧ್ಯಯನ ನಡೆಸುವ, ಪ್ರಚಾರ ಮಾಡುವ ಪ್ರಯತ್ನ ಆಗಿಲ್ಲ. ದೇಶದ ತುಂಬ ವಿಶಿಷ್ಟ ವಾಸ್ತುಶಿಲ್ಪಗಳ ದೇವಾಲಯ ಕಟ್ಟಿದ, ಮಾನಸೋಲ್ಲಾಸದಂತಹ ಎನ್‌ಸೈಕಲೋಪೀಡಿಯ ಬರೆದ, ಪ್ರಾಣಿ ವಿಜ್ಞಾನದ ಬಗ್ಗೆ ಪುಸ್ತಕ ಬರೆದ ಚಾಲುಕ್ಯ ಅರಸು-ಪಂಡಿತರ ಬಗ್ಗೆ ಒಂದು ಸ್ಮಾರಕವೂ ಇಲ್ಲ. ಅವರು ಕಟ್ಟಿದ, ಮೂರು ಅಂತಸ್ತಿನ ಕೋಟೆ ಸುಸ್ಥಿತಿಯಲ್ಲಿ ಇಲ್ಲ.
ಕನ್ನಡಿಗರನ್ನು ಬಿಟ್ಟು ಹೊರಗಿನವರು ಬಂದರೆ, ವಿದೇಶೀಯರು ಬಂದರೆ ಅವರ ಕೈ ಹಿಡಿದು ಊರು ತೋರಿಸುವ ಸಂಸ್ಥೆಗಳು ಇಲ್ಲ. ಸಂಪನ್ಮೂಲ ವ್ಯಕ್ತಿಗಳು ಕಮ್ಮಿ. ವಿಶ್ವಕ್ಕೇ ದಾರಿ ತೋರಬಹುದಾದ ಕನ್ನಡ ನಾಡಿನ ಸಾಂಸ್ಕೃತಿಕ ಕ್ರಾಂತಿಯ ಪರಿಚಯ ಇತರರಿಗೆ ಮಾಡುವ ಪ್ರಯತ್ನಗಳನ್ನು ಸರಕಾರ ಮಾಡಿಲ್ಲ.

ಅಂದಂಗ ನಮ್ಮ ಘನ ಸರಕಾರ ಆರು ನೂರು ಕೋಟಿ ರೂಪಾಯಿ ಖರ್ಚು ಮಾಡಿ ಒಂದು ಕಟ್ಟಡ ಕಟ್ಟುವ ಘೋಷಣೆ ಮಾಡಿದ್ದು ನಿಮಗ ಗೊತ್ತು ಇರಬೇಕು. ಮುಖ್ಯಮಂತ್ರಿಯವರು ಹೋಗಿ ಕಲ್ಲು ಹಾಕಿರುವ ಈ ಕಟ್ಟಡದ ಹೆಸರು ಅನುಭವ ಮಂಟಪ. ಈಗಾಗಲೇ ತ್ರಿಪುರಾಂತ ಕೆರೆಯ ದಂಡೆಯ ಮೇಲೆ ಅನುಭವ ಮಂಟಪ ಮಾದರಿಯ ಒಂದು ದೊಡ್ಡ ಕಟ್ಟಡ ಐತಿ.ಆ ಕಟ್ಟಡದ ವಿನ್ಯಾಸ ತಯಾರು ಆಗಿಲ್ಲ. ಅದರ ಹಣಕಾಸು ಯೋಜನೆ ಸರ್ಕಾರದ ಮುಂದೆ ಬಂದಿಲ್ಲ. ಟೆಂಡರ್ ಆಗಿಲ್ಲ. ಜಮೀನು ಗುರುತು ಆಗಿಲ್ಲ. ಆದರ ಮುಂದ ಬರೋ ಉಪ ಚುನಾವಣೆ ತಯಾರಿಗಾಗಿ ಸರಕಾರ ಅನುಭವ ಮಂಟಪದ ಘೋಷಣೆ ಮಾಡೆದ.
ಅಂದ ಹಂಗ ಪ್ರಮಥರಲ್ಲಿ ಒಬ್ಬರಾದ ಗುರು ಸಿದ್ದೇಶ್ವರ ಅವರು ತಮ್ಮ ವಚನಗಳಲ್ಲಿ ಅನುಭವ ಮಂಟಪ ಅನ್ನುವ ಪದ ಬಳಸೋದಿಲ್ಲ. ಅನುಭಾವ ಮಂಟಪ ಅನ್ನುವ ಪದ ಬಳಕೆ ಮಾಡತಾರ. ಒಂದು ಆಕಾರದೊಳಗ ನಾವು ನೋಡೋ ರೀತಿನ ಬದಲು ಆಗತದ ಅಂತ ತೋರಿಸಿಕೊಡತಾರ.
ಗುರುಸಿದ್ಧ ದೇವರ ವಚನಗಳಲ್ಲಿ ಅನುಭಾವ ಮಂಟಪ ಒಂದು ಉದಾಹರಣೆ.
ಅಯ್ಯ, ವರಕುಮಾರ ದೇಶಿಕೋತ್ತಮನೆ ಕೇಳ!
ಕಲ್ಯಾಣಪಟ್ಟಣದ ಅನುಭಾವಮಂಟಪದಲ್ಲಿ
ಬಸವ ಮೊದಲಾದ ಪ್ರಮಥರೆಲ್ಲ
ಚೆನ್ನಬಸವರಾಜೇಂದ್ರಂಗೆ ಅಬ್ಥಿವಂದಿಸಿ,
ಮಹಾಲಿಂಗೈಕ್ಯಾನುಭಾವವ ಬೆಸಗೊಳಲು
ಅದೇ ಪ್ರಸಾದವ ನಿನಗೆ ಅರುಹಿಸಿ ಕೊಟ್ಟೆವು ಕೇಳಾ ನಂದೀಶ,
ಸಂಗನಬಸವೇಶ್ವರ.
ನಾವೆಲ್ಲಾ ಅನುಭಾವದ ಬಗ್ಗೆ ತಿಳಿದುಕೊಳ್ಳಲಿಕ್ಕೆ ಇನ್ನೂ ತಡ ಆಗಿಲ್ಲ, ಅಲ್ಲವೇ ಮನೋಲ್ಲಾಸಿನಿ?


