ಬಾಲಿವುಡ್ ನಟ ಸೈಫ್ ಅಲಿ ಖಾನ್, ತಮ್ಮ ಮುಂದಿನ ಪೌರಾಣಿಕ ಚಿತ್ರ ಆದಿಪುರುಷ್ ಸಿನಿಮಾಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ರಾವಣ ಮಾನವೀಯ ಗುಣವುಳ್ಳವನು ಎಂದು ಹೇಳಿದ್ದರು. ಈ ಹೇಳಿಕೆ ನೀಡಿದ್ದ ಸೈಫ್ ವಿರುದ್ಧ ಉತ್ತರ ಪ್ರದೇಶದಲ್ಲಿ ದೂರು ದಾಖಲಾಗಿದೆ.
ಸೈಫ್ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇವರ ಹೇಳಿಕೆ ರಾವಣ ಸೀತೆಯನ್ನು ಅಪಹರಿಸಿದ್ದನ್ನು ಸಮರ್ಥಿಸುತ್ತದೆ ಎಂದು ಹಲವರು ಟೀಕಿಸಿದ್ದರು. ಎಕ್ಷಣ ಎಚ್ಚೆತ್ತುಕೊಂಡ ನಟ ಧಾಮಿಕ ಭಾವನೆಗಳಿಗೆ ದಕ್ಕೆ ತಂದಿದ್ದಕ್ಕಾಗಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದರು.
ಈಗ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ವಕೀಲರೊಬ್ಬರು ನಟ ಸೈಫ್ ಅಲಿ ಖಾನ್ ಮತ್ತು ನಿರ್ದೇಶಕ ಓಂ ರಾವತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಅರ್ಜಿಯನ್ನು ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ನ್ಯಾಯಾಲಯದಲ್ಲಿ ಡಿಸೆಂಬರ್ 23 ರಂದು ವಿಚಾರಣೆ ನಡೆಸಲು ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ರೈತರ ಬಗ್ಗೆ ಅವಹೇಳನಕಾರಿ ಟ್ವೀಟ್: ನಟಿ ಕಂಗನಾಗೆ ಮತ್ತೊಂದು ಲೀಗಲ್ ನೋಟಿಸ್
ದೂರು ಸಲ್ಲಿಸಿರುವ ಸಿವಿಲ್ ನ್ಯಾಯಾಲಯದ ವಕೀಲ ಹಿಮಾಂಶು ಶ್ರೀವಾಸ್ತವ, ತಮ್ಮ ಅರ್ಜಿಯಲ್ಲಿ ’ತಾನು ಸನಾತನ ಧರ್ಮದಲ್ಲಿ ನಂಬಿಕೆಯುಳ್ಳವರು’ ಎಂದು ಹೇಳಿದ್ದಾರೆ. ಸಾಂಪ್ರದಾಯಿಕವಾಗಿ, ಭಗವಾನ್ ರಾಮನನ್ನು ಒಳ್ಳೆಯದರ ಸಂಕೇತವೆಂದು ಪರಿಗಣಿಸಿದರೆ, ರಾವಣನನ್ನು ದುಷ್ಟ ಎಂದು ಪರಿಗಣಿಸಲಾಗುತ್ತದೆ. ಸಂದರ್ಶನವು ಸನಾತನ ಧರ್ಮದ ಮೇಲಿನ ನಂಬಿಕೆಯ ನಕಾರಾತ್ಮಕ ಚಿತ್ರಣವಾಗಿದೆ ಎಂದು ವಕೀಲ ಹಿಮಾಂಶು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಸೈಫ್ ಅಲಿ ಖಾನ್ ತಮ್ಮ ಸಂದರ್ಶನದಲ್ಲಿ, ’ರಾಕ್ಷಸ ರಾಜನಾಗಿ ನಟಿಸುವುದು ಆಸಕ್ತಿದಾಯಕವಾಗಿದೆ. ನಮ್ಮ ಚಿತ್ರದಲ್ಲಿ ರಾವಣನನ್ನು ಮಾನವೀಯ ಗುಣವುಳ್ಳವನಾಗಿ ಚಿತ್ರಿಸಿದ್ದೇವೆ. ರಾವಣ, ಸೀತೆಯನ್ನು ಅಪಹರಿಸಿದ್ದು ಮತ್ತು ರಾಮನೊಂದಿಗೆ ಯುದ್ದ ಮಾಡಿದ್ದು, ತನ್ನ ತಂಗಿ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ ಎಂಬ ಕೋಪಕ್ಕೆ ಎಂದು ಮಾತನಾಡಿದ್ದರು.
ಓಂ ರಾವತ್ ನಿರ್ದೇಶನದ ಪೌರಾಣಿಕ ಚಿತ್ರ ಆದಿಪುರುಷ್‌ನಲ್ಲಿ ಸೈಫ್ ಲಂಕಾದೊರೆ ಲಂಕೇಶ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣವನ್ನು ಆಧರಿಸಿದ ಈ ಸಿನಿಮಾದಲ್ಲಿ ನಟ ಪ್ರಭಾಸ್ ರಾಮನ ಪಾತ್ರ ನಿರ್ವಹಿಸಲಿದ್ದಾರೆ.
ಇದನ್ನೂ ಓದಿ: ಬರಲಿದೆ ‘ಭೀಮಾ ಕೋರೆಗಾಂವ್’ ಚಿತ್ರ: ಸಾಮಾಜಿಕ ಮಾಧ್ಯಮಗಳಲ್ಲಿ ಫಸ್ಟ್‌ಲುಕ್ ವೈರಲ್!


