ಲಡಾಖ್ ಮೂಲದ ಶಿಕ್ಷಣ ತಜ್ಞ ಮತ್ತು ಹೋರಾಟಗಾರ ಸೋನಮ್ ವಾಂಗ್‌ಚುಕ್ ಸ್ಥಾಪಿಸಿದ ಸಂಸ್ಥೆಯ ವಿರುದ್ಧ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಆರೋಪದ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ಆರಂಭಿಸಿದೆ ಎಂದು ಗುರುವಾರ ವರದಿಯಾಗಿದೆ.
ಕೆಲ ಸಮಯದಿಂದ ವಾಂಗ್‌ಚುಕ್ ಅವರ ಸಂಸ್ಥೆಗಳ ವಿರುದ್ದ ತನಿಖೆ ನಡೆಯುತ್ತಿದೆ. ಆದರೆ, ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸುಮಾರು 10 ದಿನಗಳ ಹಿಂದೆ ಸಿಬಿಐ ತಂಡವು ‘ಒಂದು ಆದೇಶ’ ಪ್ರತಿಯೊಂದಿಗೆ ಬಂದಿದ್ದು, ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ ಲಡಾಖ್ (ಹೆಚ್‌ಐಎಲ್) ನಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘನೆಗಳ ಕುರಿತು ಗೃಹ ಸಚಿವಾಲಯದ ದೂರಿನ ಮೇರೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂಬುವುದಾಗಿ ಹೇಳಿದ್ದಾರೆ ವಾಂಗ್‌ಚುಕ್ ಹೇಳಿದ್ದಾಗಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ.
“ವಿದೇಶಿ ನಿಧಿಗಳನ್ನು ಸ್ವೀಕರಿಸಲು ನಾವು ಎಫ್‌ಸಿಆರ್‌ಎ ಅಡಿಯಲ್ಲಿ ಅನುಮತಿ ಪಡೆದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ. ನಾವು ವಿದೇಶಿ ನಿಧಿಗಳ ಮೇಲೆ ಅವಲಂಬಿತರಾಗಲು ಬಯಸುವುದಿಲ್ಲ, ನಾವು ನಮ್ಮ ಜ್ಞಾನವನ್ನು ರಫ್ತು ಮಾಡುತ್ತೇವೆ ಮತ್ತು ಆದಾಯವನ್ನು ಸಂಗ್ರಹಿಸುತ್ತೇವೆ. ಅಂತಹ ಮೂರು ಸಂದರ್ಭಗಳಲ್ಲಿ, ಅವರು ಅದನ್ನು ವಿದೇಶಿ ಕೊಡುಗೆ ಎಂದು ಭಾವಿಸಿದ್ದಾರೆ” ಎಂದು ವಾಂಗ್‌ಚುಕ್ ಹೇಳಿದ್ದಾರೆ.
ಸಿಬಿಐ ತಂಡವು ಕಳೆದ ವಾರ ಹೆಚ್‌ಐಎಎಲ್ ಮತ್ತು ಲಡಾಖ್‌ನ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳವಳಿ (ಎಸ್‌ಇಸಿಎಂಒಎಲ್) ಗೆ ಭೇಟಿ ನೀಡಿ, 2022ಮತ್ತು 2024ರ ನಡುವೆ ಅವರು ಪಡೆದ ವಿದೇಶಿ ನಿಧಿಗಳ ವಿವರಗಳನ್ನು ಕೋರಿದೆ ಎಂದು ವಾಂಗ್‌ಚುಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಿಬಿಐ ತಂಡಗಳು ಇನ್ನೂ ಲಡಾಖ್‌ನಲ್ಲಿ ಮೊಕ್ಕಾಂ ಹೂಡಿ ಸಂಸ್ಥೆಗಳ ಖಾತೆಗಳು ಮತ್ತು ಹೇಳಿಕೆಗಳನ್ನು ಪರಿಶೀಲಿಸುತ್ತಿವೆ ಎಂದಿದ್ದಾರೆ.
ಕೇಂದ್ರದ ವಿರುದ್ದ ವಾಂಗ್‌ಚುಕ್ ಹೋರಾಟ ಮತ್ತು ಸಿಬಿಐ ತನಿಖೆ
ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು ಮತ್ತು ಈ ಪ್ರದೇಶಕ್ಕೆ ಸಂವಿಧಾನದ 6ನೇ ಪರಿಚ್ಛೇದದ ಅಡಿ ರಕ್ಷಣೆ ಒದಗಿಸಬೇಕು ಎಂದು ಸೋನಂ ವಾಂಗ್‌ಚುಕ್ ಹೋರಾಟ ನಡೆಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಬುಧವಾರ (ಸೆ.23) ವಾಂಗ್‌ಚುಕ್ ಹೋರಾಟ ಬೆಂಬಲಿಸಿ ಮತ್ತು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಯುವಜನರು ಲೇಹ್‌ನಲ್ಲಿ ಬೀದಿಗಿಳಿದಿದ್ದರು. ಇದರಿಂದ ಪ್ರತಿಭಟನೆ ಹಿಂಸಾತ್ಮಕರೂಪ ಪಡೆದಿತ್ತು. ಪ್ರಸ್ತುತ ಸೋನಂ ವಾಂಗ್‌ಚುಕ್ ತನ್ನ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಕೇಂದ್ರದ ವಿರುದ್ದ ವಾಂಗ್‌ಚುಕ್ ಹೋರಾಟ ಕೈಗೊಂಡಿರುವ ನಡುವೆ, ಅವರ ಸಂಸ್ಥೆಗಳ ಮೇಲೆ ಸಿಬಿಐ ತನಿಖೆ ಆರಂಭಿಸಿರುವುದು ಗಮನಾರ್ಹ.
ಲಡಾಖ್ ರಾಜ್ಯ ಸ್ಥಾನಮಾನ ವಿವಾದ: ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಸೋನಂ ವಾಂಗ್‌ಚುಕ್


