ಕಳೆದ ವಾರ ಮಾಧ್ಯಮಗಳಲ್ಲಿ ಪ್ರಸಾರಗೊಂಡು ರಾಜ್ಯ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಿಡಿ ಪ್ರಕರಣವನ್ನು ಷಡ್ಯಂತ್ರ ಎಂದು ಕರೆದಿರುವ ರಾಜ್ಯ ಸರ್ಕಾರ, ಸಿಡಿ ಮಾಡಿದ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.
’ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಕರಣದ ಹಿಂದಿರುವ ವ್ಯಕ್ತಿಗಳು ಯಾರು, ಅವರ ಉದ್ದೇಶಗಳೇನು, ಸಿಡಿ ಎಲ್ಲಿ ತಯಾರಾಗಿದೆ? ವೆಬ್‌ಸೈಟ್‌ಗಳಿಗೆ ಎಲ್ಲಿಂದ ಸಿಡಿ ಅಪ್‌ಲೋಡ್ ಆಗಿದೆ ಎಂಬ ಬಗ್ಗೆ ಈ ವಿಶೇಷ ತನಿಖಾ ತಂಡ ಕೂಲಂಕಷವಾಗಿ ತನಿಖೆ ನಡೆಸಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣ: ಸಿಡಿ ನಕಲಿ, ನಾನು ನಿರಪರಾಧಿ ಎಂದು ರಮೇಶ್ ಜಾರಕಿಹೊಳಿ
ಮಾಜಿ ಸಚಿವ ರಮೇಶ ಜಾರಕಿಹೊಳಿ ನನಗೆ ಪತ್ರ ಬರೆದಿದ್ದು, ರಾಜಕೀಯ ತೇಜೋವಧೆ ಹಾಗೂ ಮಾನಹಾನಿ ಮಾಡುವ ಉದ್ದೇಶದಿಂದ ಹಲವರು ಸೇರಿ ತಮ್ಮ ವಿರುದ್ಧ ಷಡ್ಯಂತ್ರ ರಚಿಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ ಎಂದಿದ್ದಾರೆ.
ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ಕರೆದಿದ್ದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದರು. ಜೊತೆಗೆ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಿರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಈ ಸಿಡಿ 100 ರಷ್ಟು ನಕಲಿ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನನ್ನ ರಾಜಕೀಯ ಏಳಿಗೆ ಸಹಿಸದ ಜನ, ನನ್ನನ್ನು ಎದುರಿಸಲಾಗದವರು ಈ ಕೆಲಸ ಮಾಡಿದ್ದಾರೆ. ನಾನು ನಿರಪರಾಧಿ’ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದರು.
ಇದನ್ನೂ ಓದಿ: ವೀರಶೈವ ಲಿಂಗಾಯತ, ಒಕ್ಕಲಿಗರ ನಿಗಮ ಸ್ಥಾಪನೆಯನ್ನು ಸ್ವಾಗತಿಸುತ್ತೇನೆ: ಬಜೆಟ್ ವಿಶ್ಲೇಷಣೆ ಮಾಡಿದ ಸಿದ್ದರಾಮಯ್ಯ
ಸಿಡಿ ನಕಲಿ ಎಂದು ಹೇಳಿ ಈಗ ಎಸ್‌ಐಟಿ ತನಿಖೆ ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಮಾಜಿ ಸಚಿವರೇ ತನಗೆ ಕಾಂಗ್ರೆಸ್, ಜೆಡಿಎಸ್‌ನಲ್ಲಿ ಯಾರು ಶತ್ರುಗಳಿಲ್ಲ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್, ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಮೇಶ್ ಜಾರಕಿಹೊಳಿಯವರ ಮೇಲೆ ಯುವತಿಯೊಬ್ಬರಿಗೆ ಕೆಲಸದ ಆಮಿವೊಡ್ಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪವಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿಡಿಯೋ ಸಿ.ಡಿ ಜೊತೆಗೆ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಕಳೆದೆರಡು ದಿನಗಳ ಹಿಂದೆ ದೂರ ವಾಪಸ್ ಪಡೆಯುವುದಾಗಿ ತಿಳಿಸಿದ್ದರು.
ರಾಜ್ಯ ರಾಜಕಾರಣದಲ್ಲಿ ಸಿಡಿ ಎಂಬ ಪದವೇ ಹೆಚ್ಚು ಓಡಾಡುತ್ತಿದೆ. ಹಲವು ರಾಜಕಾರಣಿಗಳ ಸಿಡಿಗಳು ಹೊರಬರಲಿವೆ ಎಂಬ ಮಾತುಗಳು ಹರಿದಾಡುತ್ತಿವೆ. ಆರು ಮಂದಿ ಸಚಿವರು ಈಗಾಗಲೇ ಮಾಧ್ಯಮಗಳಲ್ಲಿ ಸಿಡಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆ ತಂದಿವೆ.
ಇದನ್ನೂ ಓದಿ: ರಾಮ ಮಂದಿರ ನಿರ್ಮಾಣದ ನಂತರ ವೃದ್ದರನ್ನು ದರ್ಶನಕ್ಕಾಗಿ ಕಳುಹಿಸುತ್ತೇವೆ: ಕೇಜ್ರಿವಾಲ್


