ಕೇಂದ್ರ ಸರ್ಕಾರಕ್ಕೆ ಯಾವುದೇ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಅಥವಾ ಹೊಸ ಹೆದ್ದಾರಿ ನಿರ್ಮಿಸಲು ಸ್ವಾಧೀನಪಡಿಸಿಕೊಳ್ಳುವ ಸಂಪೂರ್ಣ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಎಂಟು ಪಥಗಳ ಚೆನ್ನೈ-ಕೃಷ್ಣಗಿರಿ-ಸೇಲಂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕಾಯ್ದೆ 1956 ರ ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಗಳನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
ಭರತ್ಮಾಲಾ ಪರಿಯೋಜನಾದ- ಮೊದಲ ಹಂತದ ಯೋಜನೆಯ ಭಾಗವಾಗಿ ಎಂಟು ಪಥಗಳ ಚೆನ್ನೈ-ಕೃಷ್ಣಗಿರಿ-ಸೇಲಂ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗುವುದು.
ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಮದ್ರಾಸ್ ಹೈಕೋರ್ಟ್ 2019ರಲ್ಲಿ ರದ್ದುಪಡಿಸಿತ್ತು. ಅದರ ವಿರುದ್ಧ ಎನ್‌ಎಚ್‌ಎಐ ಮತ್ತು ಕೇಂದ್ರವು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು. ಸದ್ಯ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ಅವರ ನ್ಯಾಯಪೀಠವು ಅಧಿಸೂಚನೆಗಳಿಗೆ ಅಸ್ತು ಎಂದಿದ್ದು, ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದೆ.
ಇದನ್ನೂ ಓದಿ: ಡಿ. 15ರೊಳಗೆ ಶಾಲೆ ಆರಂಭಿಸಿ: ಸಂಘಟನೆಗಳಿಂದ ಶಿಕ್ಷಣ ಸಚಿವರಿಗೆ ಬಹಿರಂಗ ಪತ್ರ
ಈ ಆದೇಶದ ಪ್ರಕಾರ, ‘ ರಾಜ್ಯದೊಳಗಿನ ಯಾವುದೇ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು (ಅದು ಪ್ರಸ್ತುತ ಇರುವ ರಸ್ತೆ ಮತ್ತು ಹೆದ್ದಾರಿಯ ಹೊರತಾದ ಭೂಮಿ) ಸ್ವಾಧೀನಪಡಿಸಿಕೊಳ್ಳಲು, ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅರ್ಹವಾಗಿದೆ’ ಎಂದು ಪೀಠ ಉಲ್ಲೇಖಿಸಿದೆ.
“ಕೇಂದ್ರ ಸರ್ಕಾರವು, ಸಂಬಂಧಪಟ್ಟ ಪ್ರದೇಶದ ಜನರ ಅಭಿವೃದ್ಧಿಗಾಗಿ ಸಂವಿಧಾನದ ಭಾಗ IV ರ ಅಡಿಯಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ಮುಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಪ್ರದೇಶದಲ್ಲಿ, ಸ್ಥಳೀಯ ಜನರಿಗೆ ಸಾಕಷ್ಟು ಜೀವನೋಪಾಯವನ್ನು ಒದಗಿಸುವುದು, ಹೊಸ ಆರ್ಥಿಕ ಅವಕಾಶಗಳನ್ನು ಒದಗಿಸುವುದು ಮತ್ತು ಆ ಪ್ರದೇಶದ ಜನರನ್ನು ಸಬಲೀಕರಣಗೊಳಿಸಬೇಕು” ಎಂದು ನ್ಯಾಯಪೀಠ ಹೇಳಿದೆ.
“ರಾಜ್ಯದ ಯಾವುದೇ ಭಾಗದಲ್ಲಿ ಹೆದ್ದಾರಿಯ ಲಭ್ಯತೆಯು ಸುಸ್ಥಿರ ಅಭಿವೃದ್ಧಿಗೆ ಮತ್ತು ಮಾನವ ಯೋಗಕ್ಷೇಮದ ಒಟ್ಟಾರೆ ವರ್ಧನೆಗೆ ದಾರಿ ಮಾಡಿಕೊಡುತ್ತದೆ, ಅಲ್ಲಿನ ನಿವಾಸಿಗಳಿಗೆ ಯೋಗ್ಯವಾದ ಜೀವನ ನಡೆಸಲು ಅನುಕೂಲವಾಗುವುದು’ ಎಂದು ಪೀಠ ತಿಳಿಸಿದೆ.
ಇದನ್ನೂ ಓದಿ: ಆಂಧ್ರಪ್ರದೇಶ: ನಿಗೂಢ ಕಾಯಿಲೆಗೆ ಸೀಸ ಮತ್ತು ನಿಕ್ಕಲ್ ಅಂಶ ಕಾರಣ- ತಜ್ಞರು
ಎನ್‌ಎಚ್‌ಎಐ ಕಾಯ್ದೆಯ ಸೆಕ್ಷನ್ 3 (ಎ) ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಯನ್ನು ಪರಿಸರ ಇಲಾಖೆ ಅನುಮತಿಯ ನಂತರವೇ ಮಾಡಬಹುದಿತ್ತು ಎಂಬ ಕಾರಣಕ್ಕೆ ಈ ಯೋಜನೆಗೆ ತಡೆ ಒಡ್ಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣಕ್ಕಾಗಿ ಕೇಂದ್ರವು ಕೃಷಿಯೋಗ್ಯ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಮೊದಲಿನಿಂದಲೂ ಇರುವ ರಾಜ್ಯ ಹೆದ್ದಾರಿಯನ್ನು ಮಾತ್ರ ಹಾಗೆ ಘೋಷಿಸಬಹುದು ಎಂದು ವಾದಿಸಲಾಗಿತ್ತು.
ಯೋಜನೆಗಾಗಿ ಸೆಕ್ಷನ್ 3 (ಎ) ಅಡಿಯಲ್ಲಿ ಅಧಿಸೂಚನೆ ಹೊರಡಿಸಲು ಪರಿಸರ ಇಲಾಖೆಯಿಂದ ಅನುಮತಿ ಅಗತ್ಯ ಎಂಬ ವಾದವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಏಕೆಂದರೆ ಯೋಜನೆ ಮಾರ್ಗವು 10 ಕಿ.ಮೀ ಅರಣ್ಯ ಪ್ರದೇಶದ ಮೂಲಕ ಹಾದುಹೋಗಲಿದೆ. ಆದರೆ ಸುಪ್ರೀಂಕೋರ್ಟ್, ‘1956ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಅನ್ವಯ, ಯೋಜನೆಗರ ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿಲ್ಲ’ ಎಂದಿದೆ.
ಚೆನ್ನೈ-ಸೇಲಂ ಹೆದ್ದಾರಿ ಯೋಜನೆ:
ಚೆನ್ನೈ-ಸೇಲಂ ಹೆದ್ದಾರಿ ಯೋಜನೆಯು, 10,000 ಕೋಟಿ ರೂಪಾಯಿ ವೆಚ್ಚದಲ್ಲಿ, 15 ಹಂತಗಳ ಭರತ್ಮಾಲಾ ಪರಿಯೋಜನಾ ಯೋಜನೆಯಾಗಿದೆ. ಈ ಯೋಜನೆಯು ರಾಜಧಾನಿ ಚೆನ್ನೈನಿಂದ ಸೇಲಂಗೆ ಆರು ಗಂಟೆಗಳ ಪ್ರಯಾಣವನ್ನು ಸುಮಾರು ಎರಡೂವರೆ ಗಂಟೆಗಳವರೆಗೆ ಕಡಿತಗೊಳಿಸುತ್ತದೆ. 277.30 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ 2018ರಲ್ಲಿ ಒಪ್ಪಿಗೆ ನೀಡಲಾಗಿತ್ತು.
ಯೋಜನೆಗೆ ವಿರೋಧವೇಕೆ…?
ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಆರಂಭವಾಗುತ್ತಿದ್ದಂತೆ ಸೇಲಂ ಮತ್ತು ಸ್ಥಳೀಯ ಪ್ರದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಸೇಲಂನ ರೈತರು ತಮ್ಮ ಕೃಷಿ ಭೂಮಿಯನ್ನು ಯೋಜನೆಗಾಗಿ ತೆಗೆದುಕೊಳ್ಳುವುದನ್ನು ವಿರೋಧಿಸಿದರು. ಈ ಯೋಜನೆಗಾಗಿ ಸುಮಾರು 5,000 ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾಪಿಸಲಾಗಿತ್ತು.

ಜೊತೆಗೆ ಅರಣ್ಯ ಭೂಮಿ ಮತ್ತು ಜಲಮೂಲಗಳು ಸಹ ಯೋಜನೆಯ ಮಾರ್ಗದಲ್ಲಿ ಇದ್ದ ಕಾರಣ ರಾಜ್ಯದ ಪರಿಸರವಾದಿಗಳು ಕೂಡ ಈ ಯೋಜನೆಯನ್ನು ವಿರೋಧಿಸಿ, ಪ್ರತಿಭಟನೆ ನಡೆಸಿದರು. ವ್ಯಾಪಕ ವಿರೋಧ ವ್ಯಕ್ತಪಡಿಸಿದ 35 ಭೂಮಾಲೀಕರು ಮತ್ತು ಪಿಎಂಕೆ (Pattali Makkal Katchi) ಯುವ ವಿಭಾಗದ ಮುಖಂಡ ಅನ್ಬುಮಾನಿ ರಾಮದಾಸ್ ಈ ಯೋಜನೆಯ ವಿರುದ್ಧ ಮದ್ರಾಸ್ ಹೈಕೋರ್ಟ್‌ಗೆ ತೆರಳಿದರು.
ಏಪ್ರಿಲ್ 8, 2019 ರಂದು ಮದ್ರಾಸ್ ಹೈಕೋರ್ಟ್ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯೋಜಿಸಿದ್ದ ಭೂಸ್ವಾಧೀನವನ್ನು ರದ್ದುಗೊಳಿಸಿತು. ಹೈಕೋರ್ಟ್‌ನ ಆದೇಶದಿಂದ ಈ ಪ್ರದೇಶದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಆದರೆ, ಸುಪ್ರೀಂಕೋರ್ಟ್ ಈಗ ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ್ದು, ಕೇಂದ್ರ ಸರ್ಕಾರಕ್ಕೆ ಯಾವುದೇ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಅಥವಾ ಹೊಸ ಹೆದ್ದಾರಿ ನಿರ್ಮಿಸಲು ಸ್ವಾಧೀನಪಡಿಸಿಕೊಳ್ಳುವ ಸಂಪೂರ್ಣ ಅಧಿಕಾರ ಇದೆ ಎಂದಿದೆ.


