ಚುನಾವಣಾ ಪೂರ್ವದಲ್ಲಿ ಬಿಜೆಪಿಯು ದೆಹಲಿಯ ಸ್ಲಂ(ಕೊಳಗೇರಿ) ನಿವಾಸಿಗಳಿಗೆ ಮನೆಗಳನ್ನು ಕಟ್ಟಿಕೊಡುವ ಭರವಸೆ ನೀಡಿತ್ತು, ಆದರೆ ಇದೀಗ ಸ್ಲಂ ನಿವಾಸಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸದೆ ಸ್ಲಂನ್ನು ಕೆಡವಲು ಕೇಂದ್ರ ಸರ್ಕಾರ ಸಂಚು ನಡೆಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.
ಎರಡು ದಿನಗಳ ಹಿಂದೆ ಪ್ರಧಾನಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ದೆಹಲಿಯಾದ್ಯಂತ ಕೊಳೆಗೇರಿಗಳನ್ನು ತೆಗೆದುಹಾಕುವಂತೆ ಎಲ್ಲಾ ಭೂಮಾಲೀಕ ಸಂಸ್ಥೆಗಳಿಗೆ ತಿಳಿಸಲಾಗಿದೆ ಎಂದು ಎಎಪಿಯ ಹಿರಿಯ ನಾಯಕಿ ಅತಿಶಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಸರ್ಕಾರದ ಸಚಿವೆ ಅತಿಶಿ, ದೆಹಲಿಯ ಸ್ಲಂ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸದೆ ಸ್ಲಂನ್ನು ನಾಶಪಡಿಸಲಾಗುತ್ತಿದೆ. ಎರಡು ದಿನಗಳ ಹಿಂದೆ ಪ್ರಧಾನಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ದೆಹಲಿಯ ಎಲ್ಲಾ ಭೂ-ಮಾಲೀಕ ಸಂಸ್ಥೆಗಳಿಗೆ, ದೆಹಲಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ನಂತಹ ಭೂ ಒಡೆತನ ಹೊಂದಿರುವ ಸಂಸ್ಥೆಗಳಿಗೆ ನಗರದಲ್ಲಿರುವ ಎಲ್ಲಾ ಕೊಳಗೇರಿಗಳನ್ನು ನಾಶ ಮಾಡುವಂತೆ ಸೂಚಿಸಲಾಗಿದೆ. ಸಭೆಯಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ), ರೈಲ್ವೆ ಮತ್ತು ಇತರ ಏಜೆನ್ಸಿಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಹೇಳಿದ್ದಾರೆ.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 1,000 ದಿಂದ 1,500 ನಿವಾಸಿಗಳಿರುವ ಸುಂದರ್ ನರ್ಸರಿ ಹಾಗೂ ದೆಹಲಿ ಪಬ್ಲಿಕ್ ಶಾಲೆಯ ನಡುವೆ ಇರುವ ಕೊಳಗೇರಿಗಳನ್ನು ನವೆಂಬರ್‌ನಲ್ಲಿ ನೆಲಸಮಗೊಳಿಸಲಾಗಿದೆ. ಸ್ಥಳಾಂತರಕ್ಕೆ ಯಾವುದೇ ನೊಟೀಸ್ ನೀಡದೆ ಎರಡು ದಿನಗಳಲ್ಲಿ ಮನೆ ತ್ಯಜಿಸುವಂತೆ ಸೂಚಿಸಲಾಗಿದೆ ಎಂದು ಈ ಕೊಳಗೇರಿಗಳ ನಿವಾಸಿಗಳು ಆರೋಪಿಸಿದ್ದರು. ಅವರಿಗೆ ಪುನರ್ವಸತಿಯನ್ನು ಕೂಡ ಕಲ್ಪಿಸಿಲ್ಲ.
ವಸತಿ ಮತ್ತು ನಗರ ವ್ಯವಹಾರಗಳ ಕೇಂದ್ರ ಸಚಿವಾಲಯದ ಅಡಿಯಲ್ಲಿ ಬರುವ ಲ್ಯಾಂಡ್ ಅಂಡ್ ಡೆವಲಪ್‌ಮೆಂಟ್ ಆಫೀಸ್ (ಎಲ್ & ಡಿಒ) ಸುಂದರ್ ನರ್ಸರಿಯ ಬಳಿಯ ಸ್ಲಂನ್ನು ಕೆಡವಿರುವುದನ್ನು ಅತಿಶಿ ಅವರು ಉಲ್ಲೇಖಿಸಿದ್ದು, ಕೇಂದ್ರ ಸರ್ಕಾರದ ಇತ್ತೀಚಿನ ಆದೇಶಗಳು ಅದೇ ಉದ್ದೇಶದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.
GRAP ಅಡಿಯಲ್ಲಿ ಸ್ಲಂನ್ನು ಕೆಡವಲು ಅನುಮತಿಸಲಾಗಿಲ್ಲ ಆದರೆ ಸ್ಲಂನ್ನು ತೆಗೆದುಹಾಕಲು ಅವರು ವಿಶೇಷ ಅನುಮತಿಯನ್ನು ಪಡೆದಿದ್ದರು. ಜಿ20 ಶೃಂಗಸಭೆಯ ವೇಳೆ ರಸ್ತೆ ಬದಿಯ ಕೊಳೆಗೇರಿಗಳ ಸುತ್ತಲೂ ಎತ್ತರದ ಹಸಿರು ಗೋಡೆಗಳನ್ನು ನಿರ್ಮಿಸಿರುವುದನ್ನು ಉಲ್ಲೇಖಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು ಸ್ಲಂ ನಿವಾಸಿಗಳ ಬಗ್ಗೆ ನಾಚಿಕೆಪಡುತ್ತಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಮುಜಾಫರ್‌ನಗರ ವಿದ್ಯಾರ್ಥಿಗೆ ಕಪಾಳಮೋಕ್ಷ ಪ್ರಕರಣ: ಯುಪಿ ಸರಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ


