ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಫ್ರೀಜರ್‌ನಲ್ಲಿ ಇರಿಸಿದ್ದ ನೂಡಲ್ಸ್ ತಿಂದು ಫುಡ್ ಪಾಯ್ಸನಿಂಗ್ನಿಂದ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ. ಈ ನೂಡಲ್ಸ್ ಅನ್ನು ಜೋಳದ ಹಿಟ್ಟಿನೊಳಗೆ ಇರಿಸಲಾಗಿತ್ತು. ಕಲುಷಿತಗೊಂಡಿದ್ದ ಹಿಟ್ಟು, ವಿಷವಾಗಿ ಪರಿವರ್ತನೆಯಾಗಿತ್ತು.
ಚೀನಾದ ಈಶಾನ್ಯ ಭಾಗದ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದ ಜಿಕ್ಸಿ ನಗರದಲ್ಲಿ ಕುಟುಂಬವೊಂದು, ಕಳೆದ ಒಂದು ವರ್ಷದಿಂದ ಫ್ರೀಜರ್‌ನಲ್ಲಿ ನೂಡಲ್ಸ್ ಸೂಪ್ ಇಟ್ಟಿತ್ತು. ಅಕ್ಟೋಬರ್ 5ರಂದು ಈ ತಿನಿಸು ಸೇವಿಸಿದ್ದ ಕುಟುಂಬದವರು, ಅಕ್ಟೋಬರ್ 10ರಂದು ಮೃತಪಟ್ಟಿದ್ದಾರೆ. ಬಾಂಗ್ಕ್ರೆಕ್ ಆ್ಯಸಿಡ್ ಪಾಯ್ಸನಿಂಗ್ ಉಂಟಾಗಿ ಏಳು ಮಂದಿ ವಯಸ್ಕರು ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕುಟುಂಬಸ್ಥರು ಸೇವಿಸಿದ ಈ ನೂಡಲ್ಸ್ ಸೂಪ್ ಸ್ಥಳೀಯ ಚೀನಿ ಅಡುಗೆಯಾಗಿತ್ತು. ಅದೃಷ್ಟವಶಾತ್ ಕುಟುಂಬದ ಮೂವರು ಮಕ್ಕಳು ರುಚಿ ಹಿಡಿಸಿದ ಕಾರಣ ನೂಡಲ್ಸ್ ತಿನ್ನಲು ನಿರಾಕರಿಸಿದ್ದರಿಂದ ಬದುಕುಳಿದಿದ್ದಾರೆ ಎಂದು ಡೈಲಿಸ್ಟಾರ್.ಕೊ.ಯು ವರದಿ ಮಾಡಿದೆ.
ಇದನ್ನೂ ಓದಿ: ಹುಲಿಗಳಿಗೆ ಗೋಮಾಂಸ ನೀಡುವುದಕ್ಕೆ ಬಿಜೆಪಿ ಪ್ರತಿಭಟನೆ: ಹಾಗಾದರೆ ಇಡ್ಲಿ-ಸಾಂಬಾರ್ ಕೊಡಿ ಎಂದ ನೆಟ್ಟಿಗರು!
ಹೀಲೋಂಗ್ಜಾಂಗ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ನ ಆಹಾರ ಸುರಕ್ಷತೆ ನಿರ್ದೇಶಕ ಗಾವೋ ಫೀ, ಬಾಂಗ್ಕ್ರೆಕ್ ಆ್ಯಸಿಡ್ ವಿಷವು ಹೆಚ್ಚಾಗಿ ಮಾರಕವಾಗಿದೆ ಎಂದು ಹೇಳಿದರು. “ಇದು ಯಕೃತ್ತು, ಮೂತ್ರಪಿಂಡಗಳು, ಹೃದಯ ಮತ್ತು ಮೆದುಳು ಸೇರಿದಂತೆ ಮಾನವನ ಅನೇಕ ಅಂಗಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ” ಎಂದು ಹೇಳಿದ್ದಾರೆ.

’ಈ ಪಾಯ್ಸನಿಂಗ್ ನಿವಾರಣೆಗೆ ಯಾವುದೇ ಔಷಧಿ ಇಲ್ಲ. ಒಮ್ಮೆ ಪಾಯ್ಸನಿಂಗ್ ಉಂಟಾದರೆ, ಸಾವಿನ ಪ್ರಮಾಣವು ಶೇ.40ರಿಂದ 100ರಷ್ಟು ಇರುತ್ತದೆ. ಬಾಂಗ್ಕ್ರೆಕ್ ಆ್ಯಸಿಡ್ ಒಂದು ಅಪಾಯಕಾರಿ ವಿಷವಾಗಿದ್ದು, ಕಳಿತ ತೆಂಗಿನಕಾಯಿಯಿಂದ ಇದು ಉತ್ಪಾದನೆಯಾಗುತ್ತದೆ’ ಎಂದು ಗಾವೊ ಫೀ ತಿಳಿಸಿದ್ದಾರೆ ಎಂದು ಡೈಲಿಸ್ಟಾರ್.ಕೊ.ಯು ಉಲ್ಲೇಖಿಸಿದೆ.
ಇಂಡೋನೇಷ್ಯಾದ ಸಾಂಪ್ರದಾಯಿಕ ತಿನಿಸು ‘ಟೆಂಪೆ ಬೊಂಗ್‌ಕ್ರ್ಯಾಕ್’, ಡಿಜೆನ್ಕೋಲ್ ಬೀನ್ಸ್ ಅನ್ನು ನಿಷೇಧಿಸಲಾಗಿದೆ. ಏಕೆಂದರೆ ಇವುಗಳು ಕೂಡ ಅನೇಕ ಸಾವುಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. 1951ರಿಂದ 1975ರವರೆಗೆ ಇಂಡೋನೇಷ್ಯಾದಲ್ಲಿ ಬಾಂಗ್ಕ್ರೆಕ್ ಆ್ಯಸಿಡ್ನಿಂದ ಪ್ರತಿ ವರ್ಷ ಸರಾಸರಿ 288 ಜನರಿಗೆ ಪಾಯ್ಸನಿಂಗ್ ಉಂಟಾಗಿದ್ದು, 34 ಜನರು ಸಾವನ್ನಪ್ಪಿದ್ದರು.


