ಟ್ರಂಪ್ ಪ್ರತಿ ಸುಂಕದಿಂದ ಪ್ರಾರಂಭಗೊಂಡಿರುವ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ತಾರಕಕ್ಕೇರಿದ್ದು, ಅಮೆರಿಕ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ.84 ರಿಂದ 125ಕ್ಕೆ ಹೆಚ್ಚಿಸುವುದಾಗಿ ಚೀನಾ ಘೋಷಿಸಿದೆ. ಶನಿವಾರದಿಂದಲೇ (ಏ.12) ಹೆಚ್ಚುವರಿ ಸುಂಕ ಜಾರಿಗೆ ಬರಲಿದೆ ಎಂದಿದೆ.
ಅಮೆರಿಕದ ಏಕಪಕ್ಷೀಯ ಬೆದರಿಕೆಯನ್ನು ಎದುರಿಸಲು ಕೈ ಜೋಡಿಸುವಂತೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಅವರು ಶುಕ್ರವಾರ ಯುರೋಪಿಯನ್ ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ.
ವರದಿಗಳ ಪ್ರಕಾರ, ಗುರುವಾರ (ಏ.10) ಚೀನಾ ಮೇಲಿನ ಪ್ರತಿ ಸುಂಕವನ್ನು ಅಮೆರಿಕ ಶೇ.125ಕ್ಕೆ ಹೆಚ್ಚಿಸಿತ್ತು. ಶುಕ್ರವಾರ ಅದನ್ನು ಶೇ.145ಕ್ಕೆ ಹೆಚ್ಚಿಸಲಾಗಿದೆ. ಈ ಬೆನ್ನಲ್ಲೇ ಅಮೆರಿಕ ಮೇಲಿನ ಸುಂಕವನ್ನು ಶೇ.125ಕ್ಕೆ ಹೆಚ್ಚಿಸುವುದಾಗಿ ಚೀನಾ ಘೋಷಿಸಿದೆ.
“ನಾವು ಪ್ರತಿ ಸುಂಕ ವಿಧಿಸಿದ್ದಕ್ಕೆ ನಮ್ಮ ಮೇಲಿನ ಸುಂಕ ಹೆಚ್ಚಿಸಿ ಚೀನಾ ಪ್ರತೀಕಾರ ತೀರಿಸಿಕೊಂಡಿದೆ. ಅದಕ್ಕೆ ನಾವು ಅವರಿಗೆ ಹೆಚ್ಚುವರಿ ಸುಂಕ ವಿಧಿಸಿದ್ದೇವೆ. ನಮ್ಮೊಂದಿಗೆ ಪ್ರತೀಕಾರಕ್ಕೆ ಮುಂದಾಗದ 75 ದೇಶಗಳಿಗೆ 90 ದಿನಗಳ ಸುಂಕ ವಿನಾಯಿತಿ ಘೋಷಿಸಿದ್ದೇವೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದರು.
“ಅಮೆರಿಕ ಈಗ ವಿಧಿಸಿರುವ ಸುಂಕವನ್ನು ಒಪ್ಪಿಕೊಂಡು ಅವರು ರಪ್ತು ಮಾಡಿರುವ ಸರಕುಗಳನ್ನು ಸ್ಪೀಕರಿಸಲು ಸಾಧ್ಯವಿಲ್ಲ” ಎಂದು ಚೀನಾದ ಹಣಕಾಸು ಸಚಿವಾಲಯ ಹೇಳಿದೆ. ಅಮೆರಿಕದ ಮುಂದಿನ ಕ್ರಮವನ್ನು ನಿರ್ಲಕ್ಷಿಸಲಾಗುವುದು ಎಂದಿದೆ.
“ಚೀನಾದ ಮೇಲೆ ಅಮೆರಿಕ ಅಸಹಜವಾಗಿ ಹೆಚ್ಚಿನ ಸುಂಕಗಳನ್ನು ಹೇರುತ್ತಿರುವುದು ಅರ್ಥಶಾಸ್ತ್ರದಲ್ಲಿ ಪ್ರಾಯೋಗಿಕ ಮಹತ್ವವಿಲ್ಲದ ಸಂಖ್ಯಾ ಆಟವಾಗಿದೆ. ಅಮೆರಿಕ ಈ ಆಟವನ್ನು ಮುಂದುವರಿಸಿದರೆ, ಚೀನಾ ಅದನ್ನು ನಿರ್ಲಕ್ಷಿಸುತ್ತದೆ” ಎಂದು ಹಣಕಾಸು ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಟ್ರಂಪ್ ಅವರ ಸುಂಕ ಹೇರಿಕೆಯಿಂದ ಉಂಟಾದ ಜಾಗತಿಕ ಆರ್ಥಿಕ ಪ್ರಕ್ಷುಬ್ಧತೆಗೆ ಅಮೆರಿಕ ಸಂಪೂರ್ಣ ಹೊಣೆ ಹೊರಬೇಕು ಎಂದಿದೆ.
ಅಮೆರಿಕದ ಸುಂಕ ಹೇರಿಕೆಯಿಂದ ವಿಶ್ವ ಆರ್ಥಿಕತೆ, ಜಾಗತಿಕ ಮಾರುಕಟ್ಟೆಗಳು ಮತ್ತು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಗಳ ಮೇಲೆ ಗಂಭೀರ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಚೀನಾ ವಾಣಿಜ್ಯ ಸಚಿವಾಲಯದ ವಕ್ತಾರರು ಆರೋಪಿಸಿದ್ದಾರೆ.


