ಅಕ್ಟೋಬರ್-ನವಂಬರ್‌ನಲ್ಲಿ ನಡೆಯುವ ಬಿಹಾರ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಅವರು ಏಕಾಂಗಿಯಾಗಿ ಸ್ಪರ್ಧಿಸುವ ಆಶಯವನ್ನು ವ್ಯಕ್ತಪಡಿಸಿದ್ದು, ಬಿಜೆಪಿಯು ತನ್ನ ಅಭ್ಯರ್ಥಿಗಳ ಬಗ್ಗೆ ಮರುಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ, ಬಿಹಾರದ ಉಸ್ತುವಾರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಸೇರಿದಂತೆ ಬಿಜೆಪಿ ಉನ್ನತ ನಾಯಕರು ದೆಹಲಿಯಲ್ಲಿ ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಅವರ ಮನೆಯಲ್ಲಿ ಸಭೆ ನಡೆಸುತ್ತಿದ್ದಾರೆ. ನಿನ್ನೆ, ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ ಮತ್ತು ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಇತರ ಉನ್ನತ ನಾಯಕರು ಬಿಹಾರ ಸ್ಥಾನಗಳು ಮತ್ತು ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ: ಶುರುವಾಗಿದೆ NDA ವಿರುದ್ಧ ’ಬ್ಯಾನರ್’ ಯುದ್ಧ!
ಲೋಕ್ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖಂಡ ಚಿರಾಗ್ ಪಾಸ್ವಾನ್ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟದ ಭಾಗವಾಗಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಿನ್ನೆ ಘೋಷಿಸಿದರು. “ನಮಗೆ ಬಿಜೆಪಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಸಮಸ್ಯೆ ಇದೆ. ಹಾಗಾಗಿ ಬಿಹಾರ ಚುನಾವಣೆಯ ನಂತರ ತಮ್ಮ ಪಕ್ಷ ಮತ್ತು ಬಿಜೆಪಿ ಸೇರಿ ಸರ್ಕಾರ ರಚಿಸಲಿವೆ” ಎಂದು ಹೇಳಿದರು. ಚಿರಾಗ್ ಪಾಸ್ವಾನ್ ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆಯಲ್ಲಿ ಆಜಾದ್ ಸಮಾಜ ಪಕ್ಷ ಸ್ಪರ್ಧೆ: ಚಂದ್ರಶೇಖರ್ ಆಜಾದ್
ಆದರೆ, ಬಿಜೆಪಿ ಸ್ಪರ್ಧಿಸುವ ಸ್ಥಾನಗಳನ್ನು ಬಿಟ್ಟು ನಿತೀಶ್ ಕುಮಾರ್ ಅವರ ಜನತಾದಳ ಯುನೈಟೆಡ್ (ಜೆಡಿಯು) ಪಕ್ಷದ ಎದುರು ಅಭ್ಯರ್ಥಿಗಳನ್ನು ನೇಮಿಸುವುದಾಗಿ ಪಾಸ್ವಾನ್ ಘೋಷಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ನಾಯಕರೊಡನೆ ಎರಡು ಸಭೆಗಳನ್ನು ನಡೆಸಿದ ಚಿರಾಗ್ ಪಾಸ್ವಾನ್‌ರವರ ಈ ನಡೆ ಮತ್ತು ಬಿಜೆಪಿಯ ಮೌನವು ತನ್ನ ‘ಪ್ಲ್ಯಾನ್ ಬಿ’ಯಲ್ಲಿ ನಿತೀಶ್ ಕುಮಾರ್ ಅವರನ್ನು ನಿಗ್ರಹಿಸಲು ಮೌನ ಸಮ್ಮತಿಯನ್ನು ಸೂಚಿಸಿದೆಯೇ ಎಂದು ಹಲವರಲ್ಲಿ ಅನುಮಾನ ಮೂಡಿಸಿದೆ. ಚಿರಾಗ್ ಪಾಸ್ವಾನ್‌ರವರ ಈ ಘೋಷಣೆಯ ನಂತರವೂ ಯಾವುದೇ ಬಿಜೆಪಿ ಮುಖಂಡರು ಪ್ರತಿಕ್ರಿಯಿಸದಿರುವುದು ಈ ಊಹಾಪೋಹಗಳಿಗೆ ಇಂಬು ನೀಡಿವೆ. ಅದಾಗ್ಯೂ ಮೇಲ್ನೋಟಕ್ಕೆ ನಿತೀಶ್ ಕುಮಾರ್ ಅವರನ್ನು ಎನ್‌ಡಿಎ ಮೈತ್ರಿ ಕೂಟದ ನಾಯಕ ಎಂದು ಬಿಜೆಪಿ ದೃಢವಾಗಿ ಅನುಮೋದಿಸಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಜಿತಾನ್ ರಾಮ್ ಮಾಂಜಿ ಮಹಾಮೈತ್ರಿ ತೊರೆಯುವುದಾಗಿ ಘೋಷಣೆ
ಬಿಜೆಪಿ-ನಿತೀಶ್ ಕುಮಾರ್ ಸ್ಥಾನಗಳ ಒಪ್ಪಂದದಲ್ಲಿ, ಬಿಹಾರದ 243 ಸ್ಥಾನಗಳಲ್ಲಿ, ಜೆಡಿಯು- 122, ಬಿಜೆಪಿ- 121 ಸ್ಥಾನಗಳಿಗೆ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ. ಬಿಜೆಪಿ ತನ್ನ ಪಾಲಿನಿಂದ ಎಲ್‌ಜೆಪಿಗೆ ಸ್ಥಾನಗಳನ್ನು ನೀಡಬೇಕಾಗಿತ್ತು. ಆದರೆ ಇದು ಈಗ ವಿವಾದಾಸ್ಪದವಾಗಿದೆ.
ದಲಿತರ ಮತಗಳ ಭದ್ರ ನೆಲೆ ಎಂದು ಹೇಳಿಕೊಳ್ಳುವ ಎಲ್‌ಜಿಪಿ ಹಿಂದಿನ ಚುನಾವಣೆಗಳಲ್ಲಿಯೂ ಇದೇ ರೀತಿಯ ತಂತ್ರವನ್ನು ಅನುಸರಿಸಿತ್ತು.
ಚಿರಾಗ್ ಪಾಸ್ವಾನ್ ಅವರು ಇತ್ತೀಚಿನ ದಿನಗಳಲ್ಲಿ ನಿತೀಶ್ ಕುಮಾರ್ ಅವರ ಬಗ್ಗೆ ತೀವ್ರವಾದ ಟೀಕೆಗಳನ್ನು ಮಾಡುತ್ತಿದ್ದರು. ರಾಜ್ಯದ ಮುಖ್ಯಮಂತ್ರಿಗಳು ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಮತ್ತು ವಲಸೆಗಾರರ ಬಿಕ್ಕಟ್ಟನ್ನು ಎದುರಿಸುವುದರಲ್ಲಿ ಎಡವಿದ್ದಾರೆ ಎಂದು ಬಹಿರಂಗವಾಗಿ ಟೀಕಿಸಿದ್ದರು.
ಇದನ್ನೂ ಓದಿ: ಬಿಹಾರ ಚುನಾವಣೆ: ಬಿಜೆಪಿ – ಜೆಡಿಯು ನಡುವೆ ಸ್ಥಾನ ಹಂಚಿಕೆ ಮಾತುಕತೆ
ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತರೂಢ ಎನ್‌ಡಿಎ ಮತ್ತು ಮಹಾಮೈತ್ರಿ ನಡುವೆ ನೇರ ಹಣಾಹಣಿ ನಡೆಯಲಿದೆ. ಈ ಹಿಂದೆ, ಎನ್‌ಡಿಯ ಮೈತ್ರಿಕೂಟದಲ್ಲಿ ನಿತೀಶ್ ಕುಮಾರ್‌ರವರ ಜೆಡಿಯು, ಬಿಜೆಪಿ, ಚಿರಾಗ್ ಪಾಸ್ವಾನ್‌ರವರ ಎಲ್‌ಜೆಪಿ ಮತ್ತು ಜತಿನ್ ರಾಮ್ ಮಾಂಝಿಯವರ ಹಿಂದೂಸ್ತಾನ್ ಅವಮ್ ಮೋರ್ಚಾ ಸೇರಿತ್ತು. ಇದರ ಪ್ರತಿಸ್ಪರ್ಧಿ ಮಹಾಮೈತ್ರಿಯಲ್ಲಿ ಲಾಲು ಪ್ರಸಾದ್ ಯಾದವ್‌ರವರ ಆರ್‌ಜೆಡಿ, ಕಾಂಗ್ರೆಸ್ ಪ್ರಮುಖ ಪಕ್ಷಗಳಾಗಿತ್ತು. ಆದರೆ ಈಗ ಚಿರಾಗ್ ಪಾಸ್ವಾನ್ ಅವರ ಈ ನಿರ್ಧಾರವು ಈ ಯೋಜನೆಯನ್ನು ತಿರುಗುಮುರುಗು ಮಾಡಿದೆ.
ಸದ್ಯಕ್ಕೆ ಲಾಲು ಪ್ರಸಾದ್ ಯಾದವ್‌ರವರು ಜೈಲಿನಲ್ಲಿರುವ ಕಾರಣ ಅವರ ಮಗ ತೇಜಸ್ವಿ ಯಾದವ್ ಆರ್‌ಜೆಡಿ ಮತ್ತು ಮಹಾಮೈತ್ರಿಯನ್ನು ಮುನ್ನಡೆಸುತ್ತಿದ್ದಾರೆ.
ಭಾರೀ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್ 28 ರಿಂದ ಆರಂಭವಾಗಲಿದ್ದು, 3 ಹಂತಗಳಲ್ಲಿ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಹಲವರು ವೈರಸ್ ವಿರುದ್ಧ ಹೋರಾಡುತ್ತಿದ್ದರೆ ಬಿಹಾರ ಸಿಎಂ ಚುನಾವಣೆ ಪ್ರಚಾರದಲ್ಲಿದ್ದಾರೆ; ಪ್ರಶಾಂತ್ ಕಿಶೋರ್


