ಅಧಿಕಾರಿಗಳಿಂದ, ಮುಖ್ಯವಾಗಿ ಪೊಲೀಸರಿಂದ ಸಾಮಾನ್ಯ ಜನರಿಗೆ ಆಗುವ ದೌರ್ಜನ್ಯಗಳನ್ನು ತನಿಖೆ ಮಾಡಲು ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶ ನೇತೃತ್ವದಲ್ಲಿ ಸ್ಥಾಯಿ ಸಮಿತಿ ರಚಿಸಲು ಒಪ್ಪಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳೂ ತೀವ್ರತರನಾದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ಸಿಜೆಐ ಗಮನಿಸಿದ್ದಾರೆ. ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಪೊಲೀಸ್ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ಮಾಡಿದಾಗ ಉದ್ಯಮಿಯ ಸಾವು ಸಂಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ತಂದೆ, ಮಗನಾದ ಪಿ.ಜಯರಾಜ್ ಮತ್ತು ಜೆ.ಬೆನ್ನಿಕ್ಸ್ ಎಂಬವರು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಒಂಬತ್ತು ಪೊಲೀಸರ ಮೇಲೆ ಚಾರ್ಜ್‌ಶೀಟ್ ಸಲ್ಲಿಸಿದೆ. ಲಾಕ್‌ಡೌನ್ ವೇಳೆ ಜಿಲ್ಲಾಡಳಿತಗಳ ಅಧಿಕಾರಿಗಳು ನಾಗರಿಕರ ಮೇಲೆ ದಬ್ಬಾಳಿಕೆ ನಡೆಸಿರುವ ವಿಡಿಯೋಗಳು ಹರಿದಾಡಿವೆ.
“ಅಧಿಕಾರಿಗಳು, ಅದರಲ್ಲೂ ಪೊಲೀಸ್ ಅಧಿಕಾರಿಗಳು ಮಾಡುತ್ತಿರುವ ಕೆಲಸವನ್ನು ನೋಡಿ ನಾವು ತುಂಬಾ ವಿಚಲಿತರಾಗಿದ್ದೇವೆ. ಅಧಿಕಾರಿಗಳಿಂದ, ಮುಖ್ಯವಾಗಿ ಪೊಲೀಸರಿಂದ ನಡೆಯುವ ದೌರ್ಜನ್ಯಗಳ ಕುರಿತ ದೂರುಗಳನ್ನು ವಿಚಾರಣೆಗೆ ಒಳಪಡಿಸಲು ಹೈಕೋರ್ಟ್‌ಗಳ ಮುಖ್ಯನ್ಯಾಯಮೂರ್ತಿಯವರ ನೇತೃತ್ವದಲ್ಲಿ ಸ್ಥಾಯಿ ಸಮಿತಿ ರಚನೆಗೆ ನನ್ನ ಒಪ್ಪಿಗೆ ಇದೆ” ಎಂದು ನ್ಯಾಯಾಲಯದಲ್ಲಿ ಸಿಜೆಐ ತಿಳಿಸಿದ್ದಾರೆ.
ಛತ್ತೀಸ್‌ಘಡದ ಇಂದಿನ ಕಾಂಗ್ರೆಸ್ ಸರ್ಕಾರ, ಇಲ್ಲಿನ ಹೆಚ್ಚುವರಿ ಪೊಲೀಸ್ ನಿರ್ದೇಶಕನ ಮೇಲೆ ದಾಖಲಿಸಿರುವ ಪ್ರಕರಣಗಳ (ದೇಶದ್ರೋಹ, ಹಲವು ಅಪರಾಧ ಕೃತ್ಯಗಳು, ಸುಲಿಗೆ, ಬೆದರಿಕೆ) ವಿಚಾರಣೆ ವೇಳೆ ಕೋರ್ಟ್ ಅಧಿಕಾರಿಗಳ ದಬ್ಬಾಳಿಕೆಯನ್ನು ಪ್ರಸ್ತಾಪಿಸಿದೆ.
ರಾಜಕೀಯ ಸೇಡು
ಪೊಲೀಸರು ರಾಜಕೀಯ ಸೇಡಿಗೆ ಗುರಿಯಾಗುತ್ತಿರುವುದನ್ನು ಮುಖ್ಯವಾಗಿ ಗಮನಿಸಿದ ಪೀಠವು, “ಇದು ದುರಂತ” ಎಂದು ಬಣ್ಣಿಸಿದೆ. ಮೌಖಿಕವಾಗಿ ಪ್ರಸ್ತಾಪಿಸಿರುವ ಸಿಜೆಐ, “ಒಂದು ರಾಜಕೀಯ ಪಕ್ಷ ಅಧಿಕಾರದಲ್ಲಿದ್ದಾಗ ಪೊಲೀಸ್ ಅಧಿಕಾರಿಗಳು ಆ ಪಕ್ಷದೊಂದಿಗೆ ಇರುತ್ತಾರೆ. ಮತ್ತೊಂದು ಹೊಸ ಪಕ್ಷ ಅಧಿಕಾರಕ್ಕೆ ಬಂದಾಗ, ಹಿಂದಿನ ಪಕ್ಷದೊಂದಿಗೆ ಇದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ” ಎಂದಿದ್ದಾರೆ.
ಸಿಂಗ್ ಅವರ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ರಕ್ಷಣೆ ನೀಡಿದೆ.
ಇದನ್ನೂ ಓದಿರಿ: ನ್ಯಾಯಾಂಗದಲ್ಲಿ ಶೇ. 50 ಮಹಿಳಾ ಮೀಸಲಾತಿಗೆ ಸಿಜೆಐ ಕರೆ


