ಮಹಿಳಾ ವಕೀಲೆ ಮತ್ತು ಆಕೆಯ ತಂದೆಯ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಕ್ಕಾಗಿ ಹಾಪುರ್ ಬಾರ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಲಾಠೀ ಚಾರ್ಜ್ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.
ವಕೀಲರು ಆರಂಭದಲ್ಲಿ ತಹಸಿಲ್ ಚೌಕ್‌ನಲ್ಲಿ ಜಮಾಯಿಸಿದ್ದರು. ಇದರಿಂದಾಗಿ ಸ್ಥಳದಲ್ಲಿ ಸಂಚಾರ ಸ್ಥಗಿತಗೊಂಡಿತು. ಪ್ರತಿಭಟನೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸರತಿ ಸಾಲುಗಳಲ್ಲಿ ನಿಂತಿದ್ದವು.
ಸ್ಥಳದಲ್ಲಿ ಸಂಚಾರ ದಟ್ಟಣೆ ಕುರಿತು ಲಭ್ಯವಾದ ಮಾಹಿತಿ ಹಿನ್ನೆಲೆ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪ್ರತಿಭಟನಾ ನಿರತ ವಕೀಲರೊಂದಿಗೆ ಮಾತುಕತೆ ನಡೆಸಿದರು. ಆ ಬಳಿಕ ಪೊಲೀಸರು ಹಾಗೂ ವಕೀಲರ ನಡುವೆ ವಾಗ್ವಾದ ನಡೆದು ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.
ವಕೀಲರು, ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಸ್ಥಳದಲ್ಲಿ ಭುಗಿಲೆದ್ದಿದೆ. ಇದು ಘರ್ಷಣೆಗೆ ಕಾರಣವಾಗಿವೆ. ಇದಕ್ಕೆ ಪ್ರತಿಯಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಲಾಠಿ ಚಾರ್ಜ್ ವೇಳೆ ಮೂವರು ಪೊಲೀಸ್ ಅಧಿಕಾರಿಗಳು ಮತ್ತು ಮೂವರು ವಕೀಲರಿಗೆ ಗಾಯಗಳಾಗಿವೆ.
ಆಗಸ್ಟ್ 25ರಂದು ಘಾಝಿಯಾಬಾದ್ ನ ಮಹಿಳಾ ವಕೀಲರೊಬ್ಬರು ತಮ್ಮ ತಂದೆಯೊಂದಿಗೆ ಪೊಲೀಸ್ ಅಧಿಕಾರಿಯೊಬ್ಬರಿಗೆ ನಿಂದಿಸಿ ಹಲ್ಲೆ ನಡೆಸಿರುವ ವೀಡಿಯೊ ವೈರಲ್ ಆಗಿತ್ತು. ಈ ಕುರಿತು ವಕೀಲೆ ಹಾಗೂ ಆಕೆಯ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಕೀಲರು, ಪೊಲೀಸ್ ಸಿಬ್ಬಂದಿ ಅಶಿಸ್ತಿನಿಂದ ವರ್ತಿಸಿದ್ದಾರೆ ಮತ್ತು ವಕೀಲೆಯ ಕಾರನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲು ಠಾಣೆಗೆ ಹೋದಾಗ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿಗಳು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ವಕೀಲರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನುಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುವ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನೆಡೆ


