ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡಬೇಕು ಮತ್ತು ಅದನ್ನು ಸಂವಿಧಾನದ ಆರನೇ ಶೆಡ್ಯೂಲ್ ಅಡಿಯಲ್ಲಿ ಸೇರಿಸಬೇಕೆಂದು ಒತ್ತಾಯಿಸಿ ಹವಾಮಾನ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ಲೇಹ್ ಅಪೆಕ್ಸ್ ಬಾಡಿ ಜೊತೆಗೂಡಿ ಬುಧವಾರ ಲೇಹ್‌ನಲ್ಲಿ 35 ದಿನಗಳ ಹೊಸ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ಮುಖ್ಯ ಬೇಡಿಕೆಗಳ ಕುರಿತು ಚರ್ಚೆಗಳು ಪ್ರಾರಂಭವಾಗುವ ಹಂತಕ್ಕೆ ಮಾತುಕತೆಗಳು ತಲುಪಿದ್ದರೂ”, ಕಳೆದ ಎರಡು ತಿಂಗಳುಗಳಲ್ಲಿ ಕೇಂದ್ರ ಗೃಹ ಸಚಿವಾಲಯವು ಲಡಾಖ್‌ನ ಪ್ರತಿನಿಧಿಗಳೊಂದಿಗೆ ಯಾವುದೇ ಸಭೆಗಳನ್ನು ಕರೆದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ವಾಂಗ್‌ಚುಕ್ ಹೇಳಿದ್ದಾರೆ.
ಲೇಹ್‌ನಲ್ಲಿ ಹಿಲ್ ಕೌನ್ಸಿಲ್ ಚುನಾವಣೆಗಳು ಶೀಘ್ರದಲ್ಲೇ ನಡೆಯಲಿರುವುದರಿಂದ ಚಳುವಳಿಯನ್ನು ತೀವ್ರಗೊಳಿಸುತ್ತೇವೆ ವಾಂಗ್‌ಚುಕ್ ತಿಳಿಸಿದ್ದಾರೆ.
2020ರ ಹಿಲ್ ಕೌನ್ಸಿಲ್ ಚುನಾವಣೆಯ ಸಮಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಲಡಾಖ್ ಅನ್ನು ಆರನೇ ಶೆಡ್ಯೂಲ್ ಅಡಿಯಲ್ಲಿ ಸೇರಿಸಲಾಗುವುದು ಎಂದು ಭರವಸೆ ನೀಡಿತ್ತು. ಗಡಿ ಪ್ರದೇಶಕ್ಕೆ ಸಂಬಂಧಿಸಿದ ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಪ್ರಮುಖ ಮೂರು ಕಾರ್ಯಸೂಚಿಗಳಲ್ಲಿ ಈ ಭರವಸೆಯೂ ಸೇರಿತ್ತು.
ಸಂವಿಧಾನದ 244ನೇ ವಿಧಿ (ಪರಿಶಿಷ್ಟ ಪ್ರದೇಶಗಳು ಮತ್ತು ಬುಡಕಟ್ಟು ಪ್ರದೇಶಗಳ ಆಡಳಿತ) ಅಡಿಯಲ್ಲಿ ಆರನೇ ಶೆಡ್ಯೂಲ್ ಭೂಮಿಗೆ ಕೆಲವು ರಕ್ಷಣೆಗಳನ್ನು ಮತ್ತು ಗೊತ್ತುಪಡಿಸಿದ ಬುಡಕಟ್ಟು ಪ್ರದೇಶಗಳಲ್ಲಿ ನಾಗರಿಕರಿಗೆ ನಾಮಮಾತ್ರ ಸ್ವಾಯತ್ತತೆಯನ್ನು ಖಾತರಿಪಡಿಸುತ್ತದೆ. ಲಡಾಖ್‌ನಲ್ಲಿ, ಜನಸಂಖ್ಯೆಯ 97% ಕ್ಕಿಂತ ಹೆಚ್ಚು ಜನರು ಪರಿಶಿಷ್ಟ ಪಂಗಡಗಳಿಗೆ ಸೇರಿದವರು.
ಆಗಸ್ಟ್ 5, 2019ರಂದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು ಮತ್ತು ರಾಜ್ಯವನ್ನು ಜಮ್ಮು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ.
ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆ ನೀಡುವಂತೆ ಒತ್ತಾಯಿಸಿ 2024ರ ಲೋಕಸಭಾ ಚುನಾವಣೆಗೆ ಮುನ್ನ 21 ದಿನಗಳ ಉಪವಾಸ ಸತ್ಯಾಗ್ರಹ ಸೇರಿದಂತೆ ವಾಂಗ್‌ಚುಕ್ ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದರು.
ಆಗಸ್ಟ್‌ನಲ್ಲಿ, ವಾಂಗ್‌ಚುಕ್ ಮತ್ತು ಲಡಾಖ್ ಸಂಸದ ಮೊಹಮ್ಮದ್ ಹನೀಫಾ ಜಾನ್ ಅವರು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಮೂರು ದಿನಗಳ ಉಪವಾಸ ಸತ್ಯಾಗ್ರಹವನ್ನು ಮುಕ್ತಾಯಗೊಳಿಸುವ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ಕೊನೆಯ ಸುತ್ತಿನ ಮಾತುಕತೆ 2025ರ ಮೇ 27ರಂದು ನಡೆದಿತ್ತು. ಅದರ ನಂತರ ಕೇಂದ್ರವು ಜೂನ್‌ನಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ ಹೊಸ ನಿವಾಸ ಮತ್ತು ಉದ್ಯೋಗ ಮೀಸಲಾತಿ ನೀತಿಯನ್ನು ಘೋಷಿಸಿತು.
ಹೊಸ ನಿಯಮಗಳ ಪ್ರಕಾರ, ಅಕ್ಟೋಬರ್ 31, 2019ರಂದು ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ರಚನೆಯಾದಾಗಿನಿಂದ 15 ವರ್ಷಗಳ ಕಾಲ ಲಡಾಖ್‌ನಲ್ಲಿ ವಾಸಿಸುತ್ತಿರುವ ವ್ಯಕ್ತಿ ಮಾತ್ರ ಅಲ್ಲಿನ ನಿವಾಸಿವಾಗಲು ಅರ್ಹರಾಗಿರುತ್ತಾರೆ.
ಅಕ್ಟೋಬರ್ 31, 2019ರಿಂದ ಏಳು ವರ್ಷಗಳ ಕಾಲ ಅಧ್ಯಯನ ಮಾಡಿ ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ 10 ಅಥವಾ 12 ನೇ ತರಗತಿ ಪರೀಕ್ಷೆಗಳನ್ನು ಬರೆದ ವ್ಯಕ್ತಿಯೂ ಸಹ ನಿವಾಸಿಯಾಗಲು ಅರ್ಹತೆ ಪಡೆಯುತ್ತಾರೆ. ಆದಾಗ್ಯೂ, ನಿವಾಸ ನಿಯಮವು “ಲಡಾಖ್ ನಾಗರಿಕ ಸೇವೆಗಳ ವಿಕೇಂದ್ರೀಕರಣ ಮತ್ತು ನೇಮಕಾತಿಯಲ್ಲಿ ವ್ಯಾಖ್ಯಾನಿಸಲಾದ ಲಡಾಖ್ ಕೇಂದ್ರಾಡಳಿತ ಪ್ರದೇಶದ ಅಡಿಯಲ್ಲಿ ಹುದ್ದೆಗಳಿಗೆ ನೇಮಕಾತಿ ಮಾಡುವ ಉದ್ದೇಶಕ್ಕಾಗಿ ಮಾತ್ರ ಮಾನ್ಯವಾಗಿರುತ್ತದೆ”.
ಮೀಸಲಾತಿ ನೀತಿಯನ್ನು ತಿದ್ದುಪಡಿ ಮಾಡಲು ಕೇಂದ್ರವು ಒಂದು ಸುಗ್ರೀವಾಜ್ಞೆಯನ್ನು ಸಹ ತಂದಿತ್ತು. ಸುಗ್ರೀವಾಜ್ಞೆಯ ಪ್ರಕಾರ, ಲಡಾಖ್‌ನಲ್ಲಿರುವ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ 85% ಉದ್ಯೋಗಗಳು ಮತ್ತು ಪ್ರವೇಶಗಳನ್ನು ಕೇಂದ್ರಾಡಳಿತ ಪ್ರದೇಶದ ನಿವಾಸಿಗಳಿಗೆ ಮೀಸಲಿಡಬೇಕು. ಆದಾಗ್ಯೂ, ಲಡಾಖ್ ನಾಯಕತ್ವವು ಇದನ್ನು ‘ಮೊದಲ ಹೆಜ್ಜೆ’ ಮತ್ತು ನಿರ್ಣಯವನ್ನು ತಲುಪುವಲ್ಲಿ ‘ಪ್ರಗತಿ’ ಎಂದು ಮಾತ್ರ ಕರೆದಿತ್ತು.
ಬಿಹಾರದಂತೆ ದೇಶದಾದ್ಯಂತ ಮತದಾರರ ಪಟ್ಟಿಯ ಪರಿಷ್ಕರಣೆಗೆ ಮುಂದಾದ ಚು.ಆಯೋಗ