ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಪುತ್ರ ಬಿ.ವೈ ವಿಜಯೇಂದ್ರ ಭ್ರಷ್ಟಾಚಾರ ನಡೆಸಿದ್ದಾರೆಂದು ಆರೋಪಿಸಿ ದಾಖಲೆ ಸಹಿತ ವರದಿ ಮಾಡಿದ್ದಕ್ಕೆ ಸ್ಥಗಿತಗೊಂಡಿದ್ದ ಕನ್ನಡದ ಸುದ್ದಿ ಮಾಧ್ಯಮ ಪವರ್ ಟಿವಿ ನಾಳೆಯಿಂದ ಮತ್ತೆ ಕಾರ್ಯರಂಭ ಮಾಡಲಿದೆ.
ಸಿಎಂ ಪುತ್ರನ ಭ್ರಷ್ಟಾಚಾರ ಬಯಲು ಮಾಡಿದ ಕಾರಣ ರಾಜ್ಯ ಸರ್ಕಾರ ದ್ವೇಷ ರಾಜಕೀಯ ಮಾಡಿ ನಮ್ಮ ಸಂಸ್ಥೆಯನ್ನು ಮುಚ್ಚಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ಪವರ್ ಟಿವಿ ಆರೋಪಿಸಿತ್ತು.
ಸೆ.28ರಂದು ಕನ್ನಡದ ಸುದ್ದಿ ಮಾಧ್ಯಮ ಪವರ್ ಟಿವಿ ಮುಖ್ಯಸ್ಥರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ನಂತರ ಚಾನೆಲ್‌ನ ಪ್ರಿನ್ಸಿಪಲ್ ಎಡಿಟರ್ ರಹಮಾನ್ ಹಾಸನ್ ಅವರನ್ನು ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು. ಮುಖ್ಯಮಂತ್ರಿ ಕುಟುಂಬ ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸಾಕ್ಷಿ ಸಮೇತ ನಿರಂತರ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಪೊಲೀಸರಿಂದ ದಾಳಿ ಮಾಡಿಸಿ ಬೆದರಿಸುವ ಹುನ್ನಾರವಿದು ಎಂದು ಸುದ್ದಿ ಸಂಸ್ಥೆ ಪ್ರತಿಕ್ರಿಯಿಸಿತ್ತು.
ಅದೇ ದಿನ ತಮ್ಮ ಖಾಸಗಿ ಫೇಸ್‌ಬುಕ್‌ನಿಂದ ಲೈವ್ ಬಂದು ಮಾತನಾಡಿದ್ದ ರಹಮಾನ್ ಹಾಸನ್, ’ಸಿಸಿಬಿ ಪೊಲೀಸರು ಕೇಸಿಗೆ ಸಂಬಂಧಪಟ್ಟಂತೆ ಸರ್ಚ್ ವಾರೆಂಟ್ ತಂದು ಪವರ್ ಟಿವಿ ಕಚೇರಿಯಲ್ಲಿ ಸರ್ಚ್ ಮಾಡಿದ್ದಾರೆ. ಅವರಿಗೆ ಬೇಕಾಗಿರುವ ಸಿಸ್ಟಂ, ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್ ಸಹಿತ ಎಲ್ಲಾ ದಾಖಲೆಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಪವರ್ ಟಿವಿಯ ಫೇಸ್‌ಬುಕ್ ಲೈವ್ ಕೂಡಾ ತಡೆಹಿಡಿಯಲಾಗಿದೆ. ಸುಮಾರು 250 ಉದ್ಯೋಗಿಗಳಿರುವ ಚಾನೆಲನ್ನು ತಡೆಹಿಡಿದಿದ್ದಾರೆ, ಎಲ್ಲರೂ ಬೀದಿಗೆ ಬಂದಿದ್ದಾರೆ ಎಂದು ಭಾವುಕರಾಗಿದ್ದರು.
ಇದನ್ನೂ ಓದಿ: ಸಿಎಂ ಮಗನ ಭ್ರಷ್ಟಾಚಾರ ಬಯಲು: ಪವರ್ ಟಿವಿ ಪ್ರಸಾರಕ್ಕೆ ತಡೆ!
’ನಮ್ಮ ಕಚೇರಿಗೆ ಬಂದಿದ್ದ ಸಿಸಿಬಿ ಪೊಲೀಸರು ದಾಖಲೆಗಳನ್ನು ಪಡೆದು ಕೊನೆಗೆ ಚಾನೆಲ್ ಸರ್ವರ್‌ನ್ನು ಕೂಡಾ ವಶಕ್ಕೆ ಪಡೆದರು. ನಾವು ಚಾನೆಲನ್ನು ಮುಚ್ಚಿಸಬೇಡಿ ಎಂದು ಎಷ್ಟೇ ಕೇಳಿಕೊಂಡರೂ ಸರ್ವರ್ ಸಿಸ್ಟಂ ಕೂಡಾ ಪಡೆದರು. ನಮಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ” ಎಂದು ರಹಮಾನ್ ಹೇಳಿದ್ದರು.

ರಾಜ್ಯದಲ್ಲಿ ಅನೇಕ ಸಂಘಟನೆಗಳು ಪವರ್ ಬೆಂಬಲಕ್ಕೆ ನಿಂತಿದ್ದರು. ಸರ್ಕಾರದ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ we are with power tv ಟ್ರೆಂಡ್ ಆಗಿತ್ತು. ನೇರ ಪ್ರಸಾರ ತಡೆಹಿಡಿದಿದ್ದರು ಬೇರೆ ಖಾತೆಗಳ ಫೇಸ್‌ಬುಕ್ ಲೈವ್‌ಗಳ ಮೂಲಕ ಸುದ್ದಿ ಪ್ರಸಾರ ಮಾಡುತ್ತಿತ್ತು.
ಸಿಸಿಬಿ ಪೊಲೀಸರು ಸರ್ವರ್ ತೆಗೆದುಕೊಂಡು ಹೋಗಿರುವುದರಿಂದ ಪ್ರಸಾರ ನಿಲ್ಲಿಸಲಾಗಿತ್ತು. ಈಗ ಹೊಸ ಸರ್ವರ್ ವ್ಯವಸ್ಥೆ ಆಗಿರುವುದರಿಂದ ನಾಳೆಯಿಂದ ಮತ್ತೆ ಚಾನೆಲ್ ಕಾರ್ಯಾರಂಭವಾಗಲಿದೆ. ಇದು ನ್ಯಾಯಕ್ಕೆ ಸಿಕ್ಕ ಗೆಲುವು ಎಂದು ಉದ್ಯೋಗಿಗಳು ಪ್ರತಿಕ್ರಿಯಿಸಿದ್ದಾರೆ.


