“ಇನ್ನು ಒಂಬತ್ತು ಮುಸ್ಲಿಮರ ತಲೆಯನ್ನು ಕಡಿಯಬೇಕು” ಎಂದು ಪ್ರಚೋದನಾತ್ಮಕವಾಗಿ ಮಾತನಾಡಿದ ಕಾರಣ ಕಾಳಿ ಸ್ವಾಮಿ ಅಲಿಯಾಸ್ ಋಷಿಕುಮಾರ ಸ್ವಾಮೀಜಿ ವಿರುದ್ಧ ತುಮಕೂರಿನಲ್ಲಿ ಇಂದು ಪ್ರಕರಣ ದಾಖಲಾಗಿದೆ.
ಒಂದು ಸಮುದಾಯದ ವಿರುದ್ಧ ಸದಾ ದ್ವೇಷದ ಹೇಳಿಕೆಗಳನ್ನು ನೀಡುವ ಕಾಳಿ ಸ್ವಾಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಕೊಲೆಗೂ ಪ್ರಚೋದನೆ ನೀಡಿ ಈಗ ಸುದ್ದಿಯಲ್ಲಿದ್ದಾರೆ.
ಅತ್ಯಂತ ಅವಹೇಳನಕಾರಿಯಾಗಿ, ಸಮುದಾಯಗಳ ನಡುವೆ ದ್ವೇಷ ಬಿತ್ತುವಂತೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಅಣಕಿಸುವಂತೆ ಮಾತನಾಡಿರುವ ಕಾಳಿ ಸ್ವಾಮೀ, “ಇನ್ನೂ 9 ಜನ ಮುಸ್ಲಿಮರ ತಲೆ ಕಡಿಯಬೇಕು” ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅದಕ್ಕಾಗಿ ಈಗ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲೇ ಪೊಲೀಸರು ಬಂಧಿಸುತ್ತಾರೋ ನೋಡಬೇಕು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಾವಿ ಧರಿಸಿರುವ ವ್ಯಕ್ತಿಯೊಬ್ಬ ಹೀಗೆ ಅನಾಗರಿಕವಾಗಿ ಮಾತನಾಡುತ್ತಿರುವುದಕ್ಕೆ ಕನ್ನಡ ನಾಡಿನ ಜನತೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಕಾವಿಗೆ ಮಾಡುತ್ತಿರುವ ಅವಮಾನ ಇದೆಂದು ಪದೇ ಪದೇ ಜನಾಕ್ರೋಶ ವ್ಯಕ್ತವಾಗುತ್ತಿದ್ದರೂ ಕಾಳಿ ಸ್ವಾಮಿಯವರು ನಾಲಗೆ ಹರಿಬಿಡುವುದನ್ನು ನಿಲ್ಲಿಸಿಲ್ಲ.
ಇದನ್ನೂ ಓದಿರಿ: ಸಿಎಂ ಬೊಮ್ಮಾಯಿ, ಗೃಹಸಚಿವರನ್ನು ಕೊಲ್ಲಿ: ಕಾಳಿ ಸ್ವಾಮೀಜಿ ಪ್ರಚೋದನೆ
ಕಳೆದ ಕೆಲವು ತಿಂಗಳಿಂದ ಕಾಳಿ ಸ್ವಾಮಿ ಸಾಮಾಜಿಕವಾಗಿ ಉಂಟು ಮಾಡಿರುವ ಕ್ಷೋಭೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕಾವಿ ಧರಿಸಿರುವ ವ್ಯಕ್ತಿಯೊಬ್ಬ ಮಾಡುತ್ತಿರುವ ಅವಾಂತರಗಳನ್ನು ಬೊಮ್ಮಾಯಿ ಸರ್ಕಾರ ಕಣ್ಣುಬಿಟ್ಟು ನೋಡಬೇಕಾದ ತುರ್ತಿದೆ.
ರಾಷ್ಟ್ರಕವಿ ಕುವೆಂಪುವಿಗೆ ಅಗೌರವ ವಿವಾದ
ರಾಷ್ಟ್ರಕವಿ ಕುವೆಂಪು ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಕಾಳಿ ಸ್ವಾಮಿಯವರಿಗೆ ಮಸಿ ಬಳಿದ ಘಟನೆ ಮೇ ತಿಂಗಳಲ್ಲಿ ನಡೆದಿತ್ತು.
ಶಿವರಾಮೇಗೌಡ ಬಣದ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಮಲ್ಲೇಶ್ವರದ ಗಂಗಮ್ಮ ದೇವಾಲಯಕ್ಕೆ ಋಷಿಕುಮಾರ ಸ್ವಾಮಿ ಬಂದಿದ್ದ ವೇಳೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಧಿಕ್ಕಾರ ಕೂಗಿ ಮುಖಕ್ಕೆ ಕಪ್ಪುಮಸಿ ಬಳಿದಿದ್ದರು.
ಆ ನಂತರದಲ್ಲಿ ಸ್ವಲ್ಪ ಬದಿಗೆ ಸರಿದಿದ್ದ ಕಾಳಿ ಸ್ವಾಮಿ ಈಗ ಮತ್ತೆ ಕ್ಷೋಭೆ ಉಂಟು ಮಾಡಲು ಮುಂದಾಗಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯ ಬಳಿಕ ಫಾಝಿಲ್ ಎಂಬ ಯುವಕನ ನೆತ್ತರು ಹರಿದಿದೆ. ಇನ್ನೂ ಒಂಬತ್ತು ಮುಸ್ಲಿಮರನ್ನು ಕೊಲ್ಲುತ್ತೇವೆ ಎಂದು ಕಾಳಿ ಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿರಿ: ಉಡುಪಿ: ಪಿಕ್ನಿಕ್‌ಗೆ ಬಂದಿದ್ದ ಮುಸ್ಲಿಂ ಕುಟುಂಬದ ಮೇಲೆ ಶ್ರೀರಾಮಸೇನೆ ವಾಗ್ದಾಳಿ
ಮಸೀದಿ ಒಡೆಯಲು ಪ್ರಚೋದನೆ
ಶ್ರೀರಂಗಪಟ್ಟಣದಲ್ಲಿನ ಮಸೀದಿಯು ದೇವಸ್ಥಾನದ ಮೇಲೆ ನಿರ್ಮಾಣವಾಗಿದೆ. ಬಾಬ್ರಿ ಮಸೀದಿಯನ್ನು ಕೆಡವಿ ರಾಮ ಮಂದಿರ ನಿರ್ಮಾಣ ಮಾಡಿದಂತೆ ಶ್ರೀರಂಗಪಟ್ಟಣ ಮಸೀದಿಯನ್ನು ಕೆಡವಿ ಹನುಮ ಮಂದಿರವನ್ನು ಕಟ್ಟಬೇಕು ಎಂದಿದ್ದರು ಕಾಳಿ ಸ್ವಾಮಿ. ಬಳಿಕ ಅವರನ್ನು ಬಂಧಿಸಿ ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಆದರೆ ಮಸೀದಿಯನ್ನು ಕೆಡವಬೇಕೆಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತೆ ಸಮರ್ಥಿಸಿಕೊಂಡಿದ್ದರು.
“ಶ್ರೀರಂಗಪಟ್ಟಣ ಎಂದರೆ ಗತ ವೈಭವವನ್ನು ಸಾರುವ ನೆಲವೀಡು. ಗಂಗರು, ಹೊಯ್ಸಳರು, ಮೈಸೂರು ಅರಸರು, ಹೈದರಾಲಿ, ಟಿಪ್ಪು ಸುಲ್ತಾನ್ ಆಳಿದ ನೆಲ. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀರಂಗಪಟ್ಟಣ ಎಂದರೆ ಹಿಂದೂ ಮುಸ್ಲಿಮರ ಭಾವೈಕ್ಯ ತಾಣ. ಸಾಮರಸ್ಯವೇ ಇಲ್ಲಿನ ಶಕ್ತಿ. ಇತ್ತೀಚೆಗೆ ಕೆಲವು ಮತಾಂಧ ಶಕ್ತಿಗಳು ಈ ಸಾಮರಸ್ಯವನ್ನು ಕದಡುವ ಕೆಲಸವನ್ನು ಮಾಡುತ್ತಿವೆ” ಎಂದು ತಮ್ಮ ವರದಿಯಲ್ಲಿ ಅಭಿಪ್ರಾಯತಾಳುತ್ತಾರೆ ಪ್ರಜಾವಾಣಿ ಪತ್ರಿಕೆಯ ಮೈಸೂರು ಬ್ಯುರೊ ಮುಖ್ಯಸ್ಥರಾದ ಕೆ.ನರಸಿಂಹಮೂರ್ತಿ. “ಸ್ಥಳೀಯವಾಗಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಿದ್ದರೂ ಹೊರಗಿನಿಂದ ಬಂದವರೇ ವಿವಾದವನ್ನು ಸೃಷ್ಟಿಸುತ್ತಿದ್ದಾರೆ” ಎಂಬ ಸಂಗತಿಯನ್ನು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದರು.
ಆಜಾನ್ ವಿರುದ್ಧ ವಿವಾದ ಸೃಷ್ಟಿ
ದಿನಕ್ಕೆ ಐದು ಬಾರಿ ಪ್ರಾರ್ಥನೆಯನ್ನು ಸಲ್ಲಿಸುವುದು ಇಸ್ಲಾಂನಲ್ಲಿ ನಡೆದು ಬಂದಿರುವ ಸಂಪ್ರದಾಯ. ಆಜಾನ್ ಅಥವಾ ಅದಾನ್ ಎಂಬುದು ಪ್ರಾರ್ಥನೆಗೆ ನೀಡುವ ಕರೆಯೇ ಹೊರತು, ಪ್ರಾರ್ಥನೆಯಲ್ಲ. ಆದರೆ ಆಜಾನ್‌ಗೆ ವಿರುದ್ಧವಾಗಿ ಹನುಮಾನ್ ಚಾಲೀಸ್ ಹಾಡುತ್ತೇವೆ ಎಂಬ ಚರ್ಚೆಯನ್ನು ಮುನ್ನೆಲೆಗೆ ತರಲಾಯಿತು. ಕ್ಯಾಮೆರಾ ಮುಂದೆ ಧಾರ್ಮಿಕತೆಯನ್ನು ಪ್ರದರ್ಶಿಸುವ ಕೆಲಸವೂ ಆಯಿತು.
ಆಜಾನ್‌ನ ಹಿನ್ನೆಲೆ ಉದ್ದೇಶ ತಿಳಿಯದ ಧರ್ಮಗುರು ಕಾಳಿ ಸ್ವಾಮಿ, ಮೈಕ್ ಹಿಡಿದು ರಾಮಜಪ ಮಾಡಿ ವಿಡಿಯೊ ಹರಿಬಿಟ್ಟಿದ್ದರು. ಬೆಂಗಳೂರಿನ ಚುಂಚನ ಘಟ್ಟದಲ್ಲಿರುವ ರಾಮಾಂಜನೇಯ ದೇವಾಲಯಲ್ಲಿ ಧ್ವನಿ ವರ್ಧಕ ಅಳವಡಿಸಿ ಬೆಳಿಗ್ಗೆ 5.33ಕ್ಕೆ 3 ಬಾರಿ ರಾಮ ಜಪ ಮಾಡಿದ್ದರು. ಇದು ಕೂಡ ಭಾರೀ ಟ್ರೋಲ್‌ಗೆ ಒಳಗಾಗಿತ್ತು.

ಹಲಾಲ್ ಕಟ್ v/s ಜಟ್ಕಾ ಕಟ್
ಯುಗಾದಿ ವರ್‍ಸತೊಡಕಿನ ಆಚೀಚೆ ಹಲಾಲ್ ಕಟ್‌ಗೆ ವಿರುದ್ಧವಾಗಿ ಜಟ್ಕಾ ಕಟ್ ಎಂಬ ವಿವಾದ ಸೃಷ್ಟಿಯಾಯಿತು. ಮುಸ್ಲಿಮರ ಬಳಿ ಮಾಂಸ ಖರೀದಿಸಬೇಡಿ ಎಂದು ಹಬ್ಬಿಸಲಾಯಿತು. ಹಿಂದೂ ಸಮಾಜದ ಜನರೇ ಸರಿಯಾಗಿ ಝಾಡಿಸಿದ ಮೇಲೆ ವಿವಾದ ಬದಿಗೆ ಸರಿಯಿತು.
ಹಲಾಲ್ ಕಟ್ ಎಂದರೇನು? ಜಟ್ಕಾ ಕಟ್ ಎಂದರೇನು? ಎಂದು ಪ್ರಜ್ಞಾವಂತರು ವಿವರಿಸಿದರು. ತಿನ್ನುವ ಅನ್ನದಲ್ಲೆಲ್ಲ ಮತಾಂಧತೆಯನ್ನು ಹುಡುಕುವುದನ್ನು ಜನರು ಟೀಕಿಸಿದರು.
ಇದನ್ನೂ ಓದಿರಿ: ಉಗಾದಿ ವರ್‍ಸತೊಡಕು: ದಲಿತರಿಗೆ ತಮ್ಮಿಷ್ಟದ ‘ಜಟ್ಕಾ ಕಟ್ ಮಾಂಸ’ ಸಿಗುವುದೇ?
ವಿವಾದ ಮುಂಚೂಣಿಯಲ್ಲಿದ್ದ ಸಂದರ್ಭದಲ್ಲಿ ಗಾಯಕ್ಕೆ ಉಪ್ಪು ಸವರುವ ಕೆಲಸ ಮಾಡಿದ ಕಾಳಿ ಸ್ವಾಮೀಜಿ, “ಹಿಂದೂ ಧರ್ಮದ ಯುವಕರು ಜಟ್ಕಾ ಮೀಟ್ ಅಂಗಡಿಗಳನ್ನು ತೆರೆಯುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗಿ ತಮ್ಮ ಕುಟುಂಬ ಹಾಗೂ ಹಿಂದೂ ಧರ್ಮವನ್ನು ಬಲಿಷ್ಠಗೊಳಿಸಬೇಕು” ಎಂದರು.
ಹಿಂದೂವೀ ಜಟ್ಕಾ ಮಾರ್ಟ್ ಎಂಬ ಮಳಿಗೆಯಲ್ಲಿ ದೇವರ ಫೋಟೋಕ್ಕೆ ಪೂಜೆ ಸಲ್ಲಿಸಿ ನಂತರ ಕರಿ ಕೋಳಿಯೊಂದನ್ನು ಜಟ್ಕಾ ಕಟ್ ಮಾಡಲು ಕಾಳಿ ಸ್ವಾಮಿ ಮುಂದಾದರು. ಈ ವಿಡಿಯೊ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕಾಳಿ ಸ್ವಾಮಿಯವರ ವರ್ತನೆಯನ್ನು ಕೆಲವು ಸ್ವಾಮೀಜಿಗಳು ಟೀಕಿಸಿದ್ದರು. ಜನರು ವ್ಯಂಗ್ಯವಾಡಿದರು.
ಕೋಮು ಕೇಂದ್ರಿತ ಪ್ರಕರಣಗಳಲ್ಲಿ ಕಾಳಿ ಸ್ವಾಮೀಯವರ ಉಪಸ್ಥಿತಿ ಇದ್ದೇ ಇರುತ್ತದೆ. ಸಂವಿಧಾನ ಬಾಹಿರವಾಗಿ, ಒಂದು ಸಮುದಾಯದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ, ಸಮಾಜದಲ್ಲಿ ದ್ವೇಷ ಬೆಳೆಸುತ್ತಾ ಕಾಳಿ ಸ್ವಾಮೀಜಿ ವೈಯಕ್ತಿಯ ಪ್ರಚಾರವನ್ನು ಪಡೆಯುತ್ತಿದ್ದಾರೆ. ಇಂಥವರ ಎದುರು ಲೋಗೋಗಳನ್ನು ಹಿಡಿಯುವ ಮಾಧ್ಯಮ ಮಂದಿಯೂ ಪಾಠ ಕಲಿತಂತೆ ಕಾಣುತ್ತಿಲ್ಲ.
“ಎಲ್ಲ ಜನವರ್ಗವನ್ನು ಪ್ರೀತಿ, ಗೌರವದಿಂದ ಕಾಣುವವರು ನಿಜವಾದ ಸ್ವಾಮೀಜಿ” ಎನ್ನುತ್ತಾರೆ ಗದುಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ. ಆದರೆ ಋಷಿಕುಮಾರ ಸ್ವಾಮಿಯಂಥವರು ಈ ಎಲ್ಲೆಗಳನ್ನು ಮೀರಿದಂತೆ ಕಾಣುತ್ತಾರೆ. ಹೀಗಾಗಿ ವಿಪರೀತ ಟ್ರೋಲ್‌ಗೂ ಒಳಗಾಗಿದ್ದಾರೆ. ಆದರೆ ಈ ಟ್ರೋಲ್‌ಗಳನ್ನೇ ಭೂಷಣವೆಂಬಂತೆ ಕಾಳಿ ಸ್ವಾಮೀಜಿ ಭಾವಿಸಿದ್ದಾರೇನೋ! ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು- ಇಂತಹ ಫ್ರಿಂಜ್ ಎಲಿಮೆಂಟ್‌ಗಳ ವಿರುದ್ಧ ಕ್ರಮ ಜರುಗಿಸಬೇಕಾಗಿದೆ.


