ಪಿಕ್ನಿಕ್‌ಗೆ ಬಂದಿದ್ದ ಮುಸ್ಲಿಂ ಕುಟುಂಬವೊಂದು ಉಡುಪಿಯ ದೇವಸ್ಥಾನವೊಂದರ ಸಮೀಪ ಅಡುಗೆ ಮಾಡುತ್ತಿದ್ದಾಗ ಶ್ರೀರಾಮ ಸೇನೆಗೆ ಸೇರಿದ ಕಾರ್ಯಕರ್ತರ ಗುಂಪೊಂದು ಕಿರುಕುಳ ನೀಡಿದ್ದು, ಜಾಗ ಖಾಲಿ ಮಾಡುವಂತೆ ಸೂಚಿಸಿರುವುದಾಗಿ ‘ದಿ ಕ್ವಿಂಟ್’ ವರದಿ ಮಾಡಿದೆ.
ಬಲಪಂಥೀಯ ಹಿಂದೂ ಗುಂಪಿಗೆ ಸೇರಿದ ಕಾರ್ಯಕರ್ತರು, “ಕುಟುಂಬವು ಮೀನು ಬೇಯಿಸುವ ಮೂಲಕ ದೇವಾಲಯದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
ಮುಸ್ಲಿಂ ಕುಟುಂಬವು ಮಂಗಳೂರಿನಿಂದ ಇಲ್ಲಿನ ಸೀತಾನದಿಯ ದಂಡೆಗೆ ಒಂದು ದಿನದ ಪಿಕ್ನಿಕ್‌ಗಾಗಿ ಬಂದಿತ್ತು ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಾಧ್ಯಮಗಳಿಗೆ ಲಭ್ಯವಾಗಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು, “ನಿಮಗೇನಾಗಿದೆ? ಮಸೀದಿಯ ಮುಂದೆ ಯಾರಾದರೂ ಹಂದಿಯನ್ನು ಕಡಿದರೆ ನೀವು ಸುಮ್ಮನಿರುತ್ತೀರಾ? ನೀವು ತಿನ್ನಲು ಬಯಸಿದ್ದನ್ನು ನೀವು ತಿನ್ನಿರಿ. ನಮಗೆ ಯಾವುದೇ ತೊಂದರೆ ಇಲ್ಲ. ಆದರೆ, ಇಲ್ಲಿ ಅಡುಗೆ ಮಾಡಬೇಡಿ” ಎಂದು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ದಾಖಲಾಗಿದೆ.
ಶ್ರೀರಾಮಸೇನೆ ಕಾರ್ಯಕರ್ತರ ವಾಗ್ದಾಳಿಯ ನಂತರ ಮುಸ್ಲಿಂ ಕುಟುಂಬವು ಕ್ಷಮೆಯಾಚಿಸಿದೆ. ಮಗುವೊಂದು ಆತಂಕದಲ್ಲಿ ನೋಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
#sriramsene members accused a #Muslim family of spoiling the sanctity of a #temple and serpant shrine by preparing fish near it. The family who had come 4m #Mangalore for picnic had camped on the banks of Seethanadi, #Udupi.They later apologized to sene members & left the place. pic.twitter.com/Vulu6eWJ3t
— Imran Khan (@KeypadGuerilla) May 11, 2022
“ನಮಗೆ ತಿಳಿದಿರಲಿಲ್ಲ, ದೇವಸ್ಥಾನವು ದೂರದಲ್ಲಿದೆ ಎಂದು ನಾನು ಭಾವಿಸಿದೆವು” ಎಂದು ಕುಟುಂಬಕ್ಕೆ ಸೇರಿದ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಅದಕ್ಕೆ ಶ್ರೀರಾಮಸೇನೆ ಸದಸ್ಯರು ಪ್ರತಿಕ್ರಿಯಿಸಿ, “ನಿಮಗೆ ಗೊತ್ತಿಲ್ಲದಿದ್ದರೆ ಹೇಗೆ? ಅಲ್ಲೊಂದು ದೇಗುಲವಿದೆ. ಇದು ಸಾಮಾನ್ಯ ಜ್ಞಾನ” ಎಂದಿದ್ದಾರೆ.
ಇದನ್ನೂ ಓದಿರಿ: ‘ಮುಸ್ಕಾನ್’ ಬಗ್ಗೆ ಸುಳ್ಳು ಹಬ್ಬಿಸುತ್ತಿರುವ ಕನ್ನಡ ಮಾಧ್ಯಮಗಳು: ಬೇಸರ ವ್ಯಕ್ತಪಡಿಸಿದ ಪೊಲೀಸರು
ಹಿಂದೂ- ಮುಸ್ಲಿಂ ಸಮುದಾಯಗಳ ನಡುವೆ ಸಂಘರ್ಷವನ್ನು ಹುಟ್ಟುಹಾಕುತ್ತಿರುವ ಸಂಘಟನೆಗಳು ದಿನದಿಂದ ದಿನಕ್ಕೆ ಬಲವಾಗುತ್ತಿವೆ. ದೇವಾಲಯಗಳ ಬಳಿ ವ್ಯಾಪಾರಿಗಳಿಗೆ ನಿಷೇಧ, ಜಟ್ಕಾ ಕಟ್ ವಿವಾದ, ಆಜಾನ್ ವಿವಾದ – ಹೀಗೆ ಒಂದಲ್ಲ ಒಂದು ಕೋಮು ಕೇಂದ್ರಿತ ಸಂಗತಿಗಳನ್ನು ಎಳೆದುತಂದು ರಾಜ್ಯದಲ್ಲಿ ವಿವಾದ ಸೃಷ್ಟಿಸಲಾಗುತ್ತಿದೆ.
ಉಡುಪಿಯ ಕಾಲೇಜೊಂದರಲ್ಲಿ ಹಿಜಾಬ್- ಕೇಸರಿ ಶಾಲು ವಿವಾದ ಸೃಷ್ಟಿಸಿದ ಬಳಿಕ ಹಿಂದೂ- ಮುಸ್ಲಿಂ ಸಮುದಾಯದ ನಡುವೆ ವಿಷಮ್ಯವನ್ನು ಹರಡುವ ವಿದ್ಯಮಾನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಕಾರಣದಿಂದಾಗಿ ಉಡುಪಿಯಲ್ಲಿ ಮೇ 14ರಂದು ಸಾಮರಸ್ಯ ನಡಿಗೆ ಕಾರ್ಯಕ್ರಮವನ್ನು ಪ್ರಗತಿಪರ ಮನಸ್ಸುಗಳು ಆಯೋಜಿಸಿವೆ.