Homeಕರ್ನಾಟಕಸಿದ್ಧಾರ್ಥ ಎಸ್.ಎಂ ಕೃಷ್ಣರ ಅಳಿಯನಾಗಿರದಿದ್ದರೆ ಈ ಸಾವು ಸಂಭವಿಸುತ್ತಿರಲಿಲ್ಲವೇನೊ???

ಸಿದ್ಧಾರ್ಥ ಎಸ್.ಎಂ ಕೃಷ್ಣರ ಅಳಿಯನಾಗಿರದಿದ್ದರೆ ಈ ಸಾವು ಸಂಭವಿಸುತ್ತಿರಲಿಲ್ಲವೇನೊ???

ತಳಮಟ್ಟದಿಂದ ಮೇಲೇರುತ್ತಾ ಬಂದ ಸಿದ್ದಾರ್ಥ ಒಮ್ಮೆಗೇ ಆಕಾಶಕ್ಕೆ ಏಣಿ ಹಾಕಲಿಲ್ಲ. ಮೊದಲಿಗೆ ಅವರದ್ದು ಬಡಕುಟುಂಬವೇನಲ್ಲ. ಅಲ್ಲಿಂದ ಆರಂಭಿಸಿ ಹಂತ ಹಂತವಾಗಿಯೇ ಆದರೂ ದೊಡ್ಡ ನೆಗೆತಗಳನ್ನು ಸಾಧಿಸಿದ್ದರು. ಒಂದು ಹಂತ ದಾಟಿದ ಮೇಲೆ ಎಲ್ಲಾ ಉದ್ದಿಮೆಪತಿಗಳಿಗೂ ಸುಲಭಕ್ಕೆ ಮಣೆ ಹಾಕುವ ನಮ್ಮ ಸರ್ಕಾರೀ ವ್ಯವಸ್ಥೆಯು ಇವರಿಗೂ ರೆಡ್ ಕಾರ್ಪೆಟ್ ಹಾಸಿತು. ಎಸ್ಸೆಂ ಕೃಷ್ಣರ ಅಳಿಯ ಆಗಿರುವ ಕಾರಣಕ್ಕೆ ಅದು ಇನ್ನೂ ಸುಲಭಕ್ಕೆ ಆಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

- Advertisement -
- Advertisement -

ಜಪ್ಪಿನಮೊಗರು ಬಳಿ ಕಾಣುವ ನೇತ್ರಾವತಿ ನದಿ ಸಾಮಾನ್ಯವಾಗಿ ಸಮುದ್ರವನ್ನು ಸೇರಲು ಇಷ್ಟವಿಲ್ಲದಂತೆ ಬಹಳ ನಿಧಾನವಾಗಿ ಹರಿಯುತ್ತದೆ. ಆದರೆ ಮುಂಗಾರು ರಭಸವಾದಾಗ ಅದು ಬಹಳ ರಭಸದಿಂದ ಸಾಗುತ್ತದೆ. ಅಲ್ಲಿಂದ ಸಮುದ್ರ ಕೆಲವೇ ಕಿ.ಮೀ.ಗಳು. ಅಂತಹ ಸಮುದ್ರವಾಗಬೇಕೆಂಬ ಮಹತ್ವಾಕಾಂಕ್ಷೆ ಹೊತ್ತಿದ್ದ ಚಟ್ನಳ್ಳಿ ಗಂಗಯ್ಯ ಹೆಗ್ಡೆಯವರ ಮಗ ಸಿದ್ಧಾರ್ಥ, ಹುಟ್ಟಿದ್ದು ಮಲೆನಾಡಿನಲ್ಲಿ ಹುಟ್ಟುವ ಸಣ್ಣ ತೊರೆಯಾಗಿ. ಅಲ್ಲಿಂದ ನದಿಯಾಗಿ ಹಿಗ್ಗುತ್ತಾ ಹೋದ ಆತ ಸಮುದ್ರವನ್ನು ಸೇರಿದ್ದು ಉದ್ಯಮಶೀಲತೆಯಲ್ಲಲ್ಲ. ಎಲ್ಲರ ಅನುಮಾನ ನಿಜವಾಗುವಂತೆ ಆತನ ದೇಹ ಮಾತ್ರ ಸಮುದ್ರ ಸೇರಿದೆ.

ಮೇಲ್ನೋಟಕ್ಕೆ ಭಾರತದ ರಾಜಕಾರಣದಲ್ಲಿ ಬಹಳ ದೊಡ್ಡ ಸ್ಥಾನಗಳನ್ನು ನಿಭಾಯಿಸಿದ ಎಸ್.ಎಂ.ಕೃಷ್ಣ ಎಂಬ ರಾಜಕಾರಣಿಯ ಅಳಿಯನಾಗಿ ಮಾತ್ರ ಹೆಚ್ಚಿನವರಿಗೆ ಗೊತ್ತಿರುವ ವ್ಯಕ್ತಿ ಸಿದ್ದಾರ್ಥ ಹೆಗಡೆ. ಆ ಕಾರಣಕ್ಕಾಗಿ ಸಿದ್ದಾರ್ಥರ ಸಾಮ್ರಾಜ್ಯವು ಕೃಷ್ಣ ಅವರ ರಾಜಕೀಯ ಅಧಿಕಾರದಿಂದ ಬೆಳೆದ ಉದ್ದಿಮೆಯಾಗಿ ಮಾತ್ರ ಹೊರಜಗತ್ತಿಗೆ ಕಾಣುತ್ತದೆ. ಅದು ಅಗಾಧವಾಗಿ ಬೆಳೆದದ್ದು, ಬೇರೆ ದೇಶಗಳಿಗೂ ವಿಸ್ತರಿಸಿದ್ದು ಮತ್ತು ಅಂತಿಮವಾಗಿ ಬಿಕ್ಕಟ್ಟಿಗೆ ಸಿಲುಕುವಂತಾಗಿದ್ದಕ್ಕೂ ಕೃಷ್ಣ ಅವರ ಅಳಿಯನಾಗಿದ್ದಕ್ಕೂ ಸಂಬಂಧ ಇದೆ. ಅಧಿಕಾರಸ್ಥರ ಸ್ವಜನಪಕ್ಷಪಾತ, ರಾಜಕೀಯದಾಟಗಳಿಗೆ ಹಣ ಸರಬರಾಜು ಮಾಡುವ ಉದ್ದಿಮೆದಾರರ ಹಿತಾಸಕ್ತಿ, ಸರ್ಕಾರೀ ನಿಯಮಗಳನ್ನು ಮೀರಿ ನಡೆಸುವ ವ್ಯವಹಾರಗಳು ಇವೆಲ್ಲಕ್ಕೂ ಸಿದ್ದಾರ್ಥ ಉದಾಹರಣೆಯಾಗಿ ನಿಲ್ಲಬಹುದು.

ಆದರೆ, ಸಿದ್ದಾರ್ಥ ಹೆಗಡೆ ಎನ್ನುವ ವಿದ್ಯಮಾನವು ಇವಿಷ್ಟೇ ಸಹಾ ಅಲ್ಲ. ಸಾಮಾನ್ಯ ಕುಟುಂಬವೊಂದರ ಮಹತ್ವಾಕಾಂಕ್ಷಿ ಯುವಕನೊಬ್ಬ ಅಗಾಧವಾದುದರ ಬೆನ್ನು ಹತ್ತಿ, ಅದನ್ನು ಸಾಧಿಸುತ್ತಾ, ಕಾರ್ಪೊರೇಟ್ ವ್ಯವಸ್ಥೆಯ ಒಳಸುಳಿಗಳಿಂದ ಹೊರಬರಲಾಗಿ ತನ್ನನ್ನೇ ಕೊಂದುಕೊಳ್ಳುವ ಸಿನಿಮೀಯ ಕಥಾನಕ. ಮೇಲ್ನೋಟದ ಕೆಲವು ವಿವರಗಳಿಂದಷ್ಟೇ ಈ ವ್ಯಕ್ತಿಯ ವ್ಯಕ್ತಿತ್ವವನ್ನೂ, ಸಾಧನೆಯನ್ನೂ, ಸಾವನ್ನೂ ಅರ್ಥಮಾಡಿಕೊಳ್ಳಲಾಗದು.

ಸಿಧ್ಧಾರ್ಥರವರ ಡೈರಿಯ ಸಾಲುಗಳು

ಈ ಲೇಖಕ 2012ರಲ್ಲಿ ಅಧ್ಯಯನವೊಂದರ ಭಾಗವಾಗಿ ಮೂಡಿಗೆರೆಗೆ ಹೋಗಿದ್ದಾಗ ಅಚ್ಚರಿ ಮೂಡಿಸಿದ ಘಟನೆಯೊಂದು ನಡೆದಿತ್ತು. ಕಾಫಿ ತೋಟದ ಕಾರ್ಮಿಕರನ್ನು ಸಂಘಟಿಸುವ ಕಾಮ್ರೇಡ್ ಒಬ್ಬರು ಸಿದ್ದಾರ್ಥ ಹೆಗಡೆಯ ಕುರಿತು ಬಹಳ ಗೌರವ ಮತ್ತು ಪ್ರೀತಿಗಳಿಂದ ಮಾತಾಡುತ್ತಿದ್ದರು. ಅವರ ಪ್ರಕಾರ ಆ ಸಂದರ್ಭದ ಕಾರ್ಮಿಕರ ಅತ್ಯಂತ ಹೆಚ್ಚಿನ (ಮ್ಯಾಕ್ಸಿಮಮ್) ಹಕ್ಕೊತ್ತಾಯಗಳನ್ನು ಎಬಿಸಿ (ಸಿದ್ದಾರ್ಥರ) ಕಂಪೆನಿಯ ಎಸ್ಟೇಟ್‍ಗಳಲ್ಲಿ ಕೇಳುವುದಕ್ಕಿಂತ ಮುಂಚೆಯೇ ಈಡೇರಿಸುತ್ತಿದ್ದರು. ಮಂಗಳೂರಿನ ಸೆಂಟ್ ಅಲಾಶಿಯಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಓದುವಾಗ ಪಕ್ಕದಲ್ಲಿದ್ದ ಕಮ್ಯುನಿಸ್ಟ್ ಲೈಬ್ರರಿಯಲ್ಲಿ 10 ರೂ ಚಂದಾ ಕಟ್ಟಿ ಕಾರ್ಲ್ ಮಾರ್ಕ್ಸ್ ರನ್ನು ಓದಿದ್ದೆ ಎಂದು ನಂತರ ಒಮ್ಮೆ ಬರೆದುಕೊಳ್ಳುವ ಸಿದ್ದಾರ್ಥ, ಎಂದೂ ಕಮ್ಯೂನಿಸಂ ಒಪ್ಪಿರಲಿಲ್ಲ. ಇಂತಹ ಉದ್ದಿಮೆದಾರರಂತೆ ನಾವು ಮೊದಲು ಸಂಪತ್ತು ಸೃಷ್ಟಿಸಬೇಕು ಎಂದೇ ಹೊರಟವರು.

ಈ ಹೊತ್ತು ಕಾರ್ಮಿಕರ ಮತ್ತು ಜನಸಾಮಾನ್ಯರ ಮ್ಯಾಕ್ಸಿಮಮ್ ಹಕ್ಕೊತ್ತಾಯಗಳೇ ಬಹಳ ಮಿನಿಮಮ್ ಆಗಿಬಿಟ್ಟಿವೆ. ತಮ್ಮ ಅಪಾರ ಗಳಿಕೆಯಲ್ಲಿ ಸಣ್ಣ ಪಾಲನ್ನು ಸಾಮಾನ್ಯ ಜನರಿಗೆ ವ್ಯಯಿಸುವುದರ ಜೊತೆಗೆ ಸಜ್ಜನಿಕೆ, ಸರಳ ನಡವಳಿಕೆ ಇದ್ದರೆ ಸಾಕು, ಜನರ ಪಾಲಿಗೆ ಅವರು ಆರಾಧ್ಯದೈವಗಳಾಗಿಬಿಡುತ್ತಾರೆ. ಅಂತಹ ಸಜ್ಜನಿಕೆ, ಸರಳತೆಗಳು ತಂದೆ-ಮಕ್ಕಳಿಬ್ಬರಿಗೂ ಇರುವುದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲೂ ಅವರ ಪರವಾಗಿ ನೆಗೆಟಿವ್ ಮಾತಾಡುವವರು ವಿರಳ.

ಚಿಕ್ಕಮಗಳೂರಿನ ಮುಸ್ಲಿಂ ಮಹಿಳೆ ಅಜ್ರಾ ಅವರು ನಡೆಸುತ್ತಿದ್ದ ಮೌಂಟೆನ್ ವ್ಯೂ ಶಾಲೆಯಲ್ಲಿ ಓದಿದ ಸಿದ್ದಾರ್ಥರಿಗೆ ‘ಅಜ್ರಾ ಮಿಸ್’ ಬಗ್ಗೆ ಬಹಳ ಗೌರವ. ತಾನು ಸರಿಯಾಗಿ ಓದದಿದ್ದಾಗ ಬಯ್ಯುವುದರ ಬದಲು ಅವರು ಅತ್ತಿದ್ದುದು ಅವರಿಗೆ ಸೋಜಿಗ ತರಿಸಿತ್ತಂತೆ. ಅರ್ಥಶಾಸ್ತ್ರ ಪದವಿ ಮುಗಿಸಿದ ಮೇಲೆ ಊರಿನ ಕಾಫಿ ತೋಟವನ್ನು ವಿಸ್ತರಿಸುವ ಆಲೋಚನೆ ಅವರಿಗಿರಲಿಲ್ಲ. ಸೀದಾ ಹೋಗಿದ್ದು ಮುಂಬೈಗೆ. ಬೆಳಗಾಂವರೆಗೆ ಒಂದು ಬಸ್ಸು ಹತ್ತಿ, ಅಲ್ಲಿಂದ ಮುಂಬೈಗೆ ಇನ್ನೊಂದು ಬಸ್‍ನಲ್ಲಿ ಹೋಗಿ ಲೋನಾವಾಲಾದಲ್ಲಿದ್ದ ಮಹೇಂದ್ರಭಾಯಿಯ ಕಚೇರಿಗೆ ಹೋಗಿ ಸೇರಿದರು.

ಮಹೇಂದ್ರ ಭಾಯಿ

ಷೇರು ಮಾರುಕಟ್ಟೆಯು ಆಗತಾನೇ ವಿಸ್ತರಿಸುತ್ತಿದ್ದ ‘80ರ ದಶಕದಲ್ಲೇ ಅದಕ್ಕಿದ್ದ ಮಹತ್ವವನ್ನು ಅರಿತಿದ್ದ ಸಿದ್ದಾರ್ಥ ಎರಡು ವರ್ಷ ಮುಂಬೈನಲ್ಲಿ ತರಬೇತಿ ಪಡೆದುಕೊಂಡು ಕರ್ನಾಟಕಕ್ಕೆ ಮರಳಿದರು. ತಂದೆಯಿಂದ 7.5 ಲಕ್ಷ ರೂ. ಪಡೆದು ಬೆಂಗಳೂರಿಗೆ ಬಂದು ‘ಶಿವನ್ ಸೆಕ್ಯುರಿಟೀಸ್’ ಶುರು ಮಾಡಿದರು. ಆಗಿನ್ನೂ ಪ್ರವರ್ಧಮಾನಕ್ಕೆ ಬಂದಿರದಿದ್ದ ಇನ್ಫೋಸಿಸ್‍ನ 60,000 ಷೇರುಗಳನ್ನು ಕೊಂಡು, ಅದು 6 ಪಟ್ಟು ಹೆಚ್ಚಾದಾಗ ಸಂಪೂರ್ಣ ಮಾರಾಟ ಮಾಡಿ ಕಾಫಿ ತೋಟ ವಿಸ್ತರಣೆಗೆ ಕೈ ಹಾಕಿದರು. ಕಾಫಿ ರೇಟು ಅಷ್ಟೇನೂ ಇರದ ಸಂದರ್ಭ ಇದು. ಆದರೆ, ಏನೋ ಒಂದು ಅಂದಾಜಿನ ಮೇಲೆ ಎಸ್ಟೇಟ್ ಮಾಡುತ್ತಾ ಹೋದ ಅವರಿಗೆ ಬಂಪರ್ ಹೊಡೆದಿತ್ತು. ಜಾಗತೀಕರಣ ನೀತಿಗಳ ಫಲವಾಗಿ 1992ರಲ್ಲಿ ಕಾಫಿ ಮೇಲಿನ ನಿಯಂತ್ರಣ ತೆಗೆದು ಹಾಕಿದಾಗ (ಅಂದರೆ ಕಾಫಿ ಬೋರ್ಡಿನ ನಿಯಂತ್ರಣವಿಲ್ಲದೇ ರಫ್ತು ಮಾಡುವುದೂ ಸಾಧ್ಯವಾದಾಗ) ಬೆಲೆ ಇದ್ದಕ್ಕಿದ್ದಂತೆ ನಾಲ್ಕೈದು ಪಟ್ಟು ಏರಿತ್ತು.

ಅದಕ್ಕೆ ಸಾಕಷ್ಟು ಮುಂಚೆಯೇ ವಿಸ್ತರಣೆ ಶುರು ಮಾಡಿಕೊಂಡಿದ್ದ ಸಿದ್ದಾರ್ಥ ಹೆಗಡೆಯ ಕಾಫಿ ತೋಟ 1993ರ ಹೊತ್ತಿಗೆ 3,000 ಎಕರೆಗಳು ಆಗಿದ್ದವು! ಆಗ ಹುಟ್ಟಿಕೊಂಡಿದ್ದೇ ಎಬಿಸಿ (ಅಮಾಲ್ಗಮೇಟೆಡ್ ಬೀನ್) ಕಂಪೆನಿ. 6 ಕೋಟಿಯಿಂದ ಶುರುವಾದ ಅದರ ವಹಿವಾಟು 2015ರ ಹೊತ್ತಿಗೆ 2,500 ಕೋಟಿಯಾಗಿತ್ತು. 1995ರ ಹೊತ್ತಿಗೇ ದೇಶದ ಅತೀ ದೊಡ್ಡ (ಹುರಿದಿಲ್ಲದ) ಕಾಫಿ ರಫ್ತು ಮಾಡುವ ಕಂಪೆನಿಯಾಗಿ ಬೆಳೆದಿತ್ತು. ಕೆಲ ವರ್ಷಗಳ ನಂತರ ಸಾಫ್ಟ್ ವೇರ್ ಕಂಪೆನಿ ಮೈಂಡ್‍ಟ್ರೀ, ಅಲ್ಲಿಂದ ಮುಂದೆ ಚೇತನ್ ವುಡ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್, ಬೇರ್‍ಫೂಟ್ ರೆಸಾಟ್ರ್ಸ್, ಡಾರ್ಕ್ ಫಾರೆಸ್ಟ್ ಫರ್ನೀಚರ್ ಹೀಗೆ ವಿಸ್ತರಿಸುತ್ತಲೇ ಹೋದರು. ಇದರ ಮಧ್ಯೆ ಅವರು ಮದುವೆಯಾಗಿದ್ದು ಅಂದಿನ ಪ್ರಭಾವಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಮಗಳು ಮಾಳವಿಕಾ ಅವರನ್ನು.

ಕಾಫಿ ಬೀಜವನ್ನು ಬೆಳೆದು ಅಥವಾ ಬೆಳೆಗಾರರಿಂದ ಕೊಂಡು ದೇಶ ವಿದೇಶಗಳಿಗೆ ರಫ್ತು ಮಾಡುವ ಬಿಸಿನೆಸ್ ಮಾಡುತ್ತಿದ್ದ ಅವರಿಗೆ ಇದ್ದಕ್ಕಿದ್ದ ಹಾಗೆ ತಾನು ಕಾಫಿ ಪುಡಿಯನ್ನು ಏಕೆ ಮಾರಬಾರದು ಎನಿಸಲು ಕಾರಣವಿತ್ತು. ಕಾಫಿ ಪುಡಿ ಮಾರುತ್ತಿದ್ದ ಜರ್ಮನಿಯ ಚಿಬೋ ಕಂಪೆನಿಯ ಕುಟುಂಬವೊಂದರ ಮೂರನೇ ತಲೆಮಾರಿನ ವ್ಯಕ್ತಿಯೊಬ್ಬರನ್ನು 1994ರಲ್ಲಿ ಅಕಸ್ಮಾತ್ತಾಗಿ ಭೇಟಿ ಮಾಡಿದ್ದರು. ಆಗ ಆ ಕಂಪೆನಿಯು ಯೂರೋಪ್‍ನ 2ನೇ ಅತಿ ದೊಡ್ಡ ಕಾಫಿ ಮಾರುವ ಕಂಪೆನಿಯಾಗಿತ್ತು!

ಕಾಫಿ ಬೀಜ ಮಾರುವುದಕ್ಕಿಂತ ಕಾಫಿ ಪುಡಿ ಮಾಡಿ ಮಾರಿದರೆ ಶೇ.100ರಷ್ಟು ಲಾಭ ಬರುತ್ತದೆಂದು ಸಿದ್ದಾರ್ಥ ಲೆಕ್ಕ ಹಾಕಿದ್ದರು. ಕೂಡಲೇ ದಕ್ಷಿಣ ಭಾರತದ ಬೇರೆಬೇರೆ ಕಡೆ 20 ಕಾಫಿ ಡೇ ಅಂಗಡಿಗಳನ್ನು ತೆಗೆದರು. ನೋಡು ನೋಡುತ್ತಿದ್ದಂತೆ ಅವು 450 ಅಂಗಡಿಗಳಾದವು. ಅದರ ನಂತರ ಸಿಂಗಾಪುರಿನ ಅವರ ಅಡ್ಡಾ ಆಗಿದ್ದ ಬೀರ್ ಕೆಫೆಯನ್ನು ನೋಡಿ ಇನ್ನೂ ಒಂದು ಐಡಿಯಾ ಅವರ ತಲೆಹೊಕ್ಕಿತು. ‘ನಾವು ಕಾಫಿಯನ್ನೇ ಮಾರಿದರೆ 800-900% ಲಾಭ ಬರುತ್ತದೆ’. ಇದಕ್ಕೆ ಅವರ ಸ್ನೇಹಿತರು ಒಪ್ಪದಿದ್ದುದರಿಂದ, ಇಂಟರ್‍ನೆಟ್ ಕೆಫೆಯೊಂದನ್ನು ಬ್ರಿಗೇಡ್ ರಸ್ತೆಯಲ್ಲಿ ಶುರು ಮಾಡಿದರು. ನಂತರ ಹುಟ್ಟಿಕೊಂಡಿದ್ದೇ ಕೆಫೆ ಕಾಫಿಡೇ. ಇಂದು ದೇಶದೊಳಗೆ 1,500ಕ್ಕೂ ಹೆಚ್ಚು ಕೆಫೆ ಕಾಫಿ ಡೇ ಕೆಫೆಗಳು ಮತ್ತು 600ಕ್ಕೂ ಹೆಚ್ಚು ಅಂಗಡಿಗಳು ಇವೆ.

ಕಾಫಿ ಬೀಜದಿಂದ ಕಾಫಿ ತಯಾರಿಯವರೆಗೆ, ಅವರ ಕೆಫೆಗಳಲ್ಲಿ ಬಳಸುವ ಫರ್ನೀಚರ್ ಸೇರಿದಂತೆ ಎಲ್ಲವನ್ನೂ ಅವರೇ ತಯಾರು ಮಾಡುವುದು ಇನ್ನೊಂದು ವಿಶೇಷ. ಎಲ್ಲಾ ಕಡೆ ಒಂದೇ ಸ್ವಾದ ಇರುವ ಕಾಫಿ ಸಿಗಬೇಕೆಂದರೆ, ಅದನ್ನು ಮೆಷಿನ್‍ನಿಂದ ತಯಾರಿಸಬೇಕಾಗುತ್ತದೆ. ಆದರೆ, ನಮ್ಮ ಮೆಷಿನ್ ನಾವೇ ತಯಾರಿಸುವ ತನಕ ಕೈಯ್ಯಲ್ಲೇ ಕಾಫಿ ತಯಾರಿಸುತ್ತೇವೆ ಎಂದು ಸಿದ್ದಾರ್ಥ ನಿಶ್ಚಯಿಸಿದ್ದರು.

ಅಲ್ಲಿಂದ ಮುಂದೆ ತನ್ನ ಕಂಪೆನಿಯನ್ನು ಸಿದ್ದಾರ್ಥ ವಿಸ್ತರಿಸುತ್ತಾ ಹೋಗುವ ಹೊತ್ತಿಗೆ ಅವರ ಮಾವ ಎಸ್.ಎಂ.ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅದರ ಲಾಭವನ್ನು ಪಡೆದು ಕಾಫಿಯಿಂದಾಚೆಗೂ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಹೋದರು. ಅದು ದೊಡ್ಡ ನೆಗೆತ ಕಂಡಿದ್ದು ಕೃಷ್ಣ ಅವರು ಕರ್ನಾಟಕ ಬಿಟ್ಟ ನಂತರವೇ. 2007ರಲ್ಲಿ ತನ್ನ ಕಂಪೆನಿಯು ಮುಂಬೈ ಸ್ಟಾಕ್ ಎಕ್ಸ್ ಚೇಂಚ್‍ಗೆ ಹೋಗುವಂತೆ ನೋಡಿಕೊಂಡರು. ಹಲವು ಖಾಸಗಿ ಈಕ್ವಿಟಿ ಪಾಲುದಾರರಿಂದ ಹೂಡಿಕೆಯನ್ನೂ ಮಾಡಿಸಿಕೊಂಡರು. ಸಾವಿರಾರು ಕೋಟಿ ರೂ.ಗಳ ವಹಿವಾಟಾಗಿ ಅದು ಬೆಳೆಯಿತು. 2004ರ ನಂತರ ಕೃಷ್ಣ ಮಹಾರಾಷ್ಟ್ರದ ರಾಜ್ಯಪಾಲರಾದರು ಮತ್ತು 2009ರಲ್ಲಿ ಕೇಂದ್ರ ವಿದೇಶಾಂಗ ಖಾತೆಯ ಸಚಿವರಾದರು ಎಂಬುದನ್ನು ಗಮನಿಸಬೇಕು.

ಅಷ್ಟು ಹೊತ್ತಿಗೆ ಅಳಿಯನ ಸಾಮ್ರಾಜ್ಯವೂ ದೇಶವನ್ನು ದಾಟಲಾರಂಭಿಸಿತ್ತು. ಘಾನಾ ದೇಶದಲ್ಲಿ ಮತ್ತು ದಕ್ಷಿಣ ಅಮೆರಿಕದ ಅಮೆಜಾನ್ ಕಾಡುಗಳ ಮೇಲೆ ಅವರ ಕಣ್ಣು ಬಿದ್ದಿತು. ಜಗತ್ತಿಗೆಲ್ಲಾ ಫರ್ನೀಚರ್ ಮಾಡಿಕೊಡಬಹುದೆಂಬ ಐಡಿಯಾ ಸಿದ್ದಾರ್ಥರ ತಲೆ ಹೊಕ್ಕಿತು. ಅದಕ್ಕೊಂದು ಕಂಪೆನಿ ಸ್ಥಾಪಿಸಿದರು.

ಇದರ ನಂತರ ಮತ್ತೊಂದು ಬಿಸಿನೆಸ್‍ಗೆ ಅವರು ಕೈಹಾಕಿದರೆಂದು ಹೇಳಲಾಗುತ್ತಿದೆ. ಅದರ ಕುರಿತು ಖಚಿತ ಮಾಹಿತಿಗಳು ಲಭ್ಯವಿಲ್ಲ. 2011ರಲ್ಲಿ ಶಿಪ್ಪಿಂಗ್ ಬಿಸಿನೆಸ್‍ಗೆ ಕೈ ಹಾಕಲು ಹೊರಟರು. ಈಗಾಗಲೇ ಪ್ರಪಂಚದ ಮಾರುಕಟ್ಟೆಯಲ್ಲಿ 70% ವಹಿವಾಟು ಹೊಂದಿದ್ದ ಕಂಪೆನಿಯನ್ನು ತಮ್ಮದಾಗಿಸಿಕೊಳ್ಳಲು ಹೊರಟಿದ್ದೇ ಅವರನ್ನು ಈಗ ಆತ್ಮಹತ್ಯೆಗೆ ದೂಡಿತು ಎಂಬುದು ಅವರ ಆಪ್ತ ವಲಯಗಳಲ್ಲಿ ಕೇಳಿಬರುತ್ತಿರುವ ಮಾತು. ಇಂದು ಬೆಳಿಗ್ಗೆ ಸಿದ್ದಾರ್ಥ ಅವರ ಕಂಪೆನಿಯ ಉನ್ನತ ಸ್ಥಾನಗಳಲ್ಲಿರುವವರ ಬಾಯಲ್ಲಿ ಹೆಚ್ಚು ಕಾಣಿಸಿಕೊಂಡ ಪದ ಅದೇ, ‘ಶಿಪ್ಪಿಂಗ್ ಬಿಸಿನೆಸ್’. ಈ ಮಾತನ್ನು ಹಿಂದೆ ಈ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಾರ್ಥರ ಸಹವರ್ತಿಯೊಬ್ಬರೂ ಸಹ ಹೇಳುತ್ತಿದ್ದಾರಾದರೂ, ಅದನ್ನು ಖಾತರಿಪಡಿಸಿಕೊಳ್ಳಲಾಗಿಲ್ಲ.

2015ರ ಹೊತ್ತಿಗೆ ಸಿದ್ದಾರ್ಥ ಬಹಳ ಬಿಕ್ಕಟ್ಟಿಗೆ ಬಿದ್ದಿದ್ದರು. ಸಿಕಾಲ್ ಲಾಜಿಸ್ಟಿಕ್ಸ್‍ದು 500 ಕೋಟಿ, ಮೈಂಡ್‍ಟ್ರೀಯದ್ದು 2000 ಕೋಟಿ, ಟ್ಯಾಂಗ್ಲಿನ್ ಡೆವೆಲಪ್‍ಮೆಂಟ್ಸ್‍ದು 800 ಕೋಟಿ ರೂ ಸಾಲಕ್ಕೆ ಸಿಕ್ಕಿಕೊಂಡಿತ್ತು. ಇವೆಲ್ಲವನ್ನೂ ಒಂದೇ ಏಟಿಗೆ ಬಗೆಹರಿಸಿಕೊಳ್ಳುವುದು ಅವರಿಗೆ ಅಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಅವರು ಅವರ ಹೆಸರುವಾಸಿ ಬ್ರಾಂಡ್‍ಗಳಾದ ಕಾಫಿಡೇ ಮತ್ತು ಮೈಂಡ್‍ಟ್ರೀಯಿಂದಲೇ ಬಂಡವಾಳ ತೆಗೆಯಬೇಕಾಗುತ್ತಿತ್ತು. ಅಂದರೆ ಅಲ್ಲಿನ ಷೇರುಗಳನ್ನು ಮಾರಬೇಕಾಗಿತ್ತು. ಅದಕ್ಕೂ ಅವರು ಮುಂದಾದರು. ಕಾಫಿಡೇಯನ್ನು ಕೋಕಾಕೋಲಾಗೆ 10,000 ಕೋಟಿ ರೂ.ಗಳಿಗೆ ಮಾರಲು ಮಾತುಕತೆ ನಡೆಸಿದ್ದರು ಎಂಬುದು ಈಗ ಎಲ್ಲರೂ ಮಾತನಾಡುತ್ತಿರುವ ಸಂಗತಿ. ಅದರ ಜೊತೆಗೆ ಮೈಂಡ್‍ಟ್ರೀನ 20% ಷೇರುಗಳನ್ನು ಎಲ್& ಟಿಗೆ ಮಾರಿದ್ದು, ಅದರ ಸುತ್ತ ನಡೆದ ಕೋಲಾಹಲ ಬಿಸಿನೆಸ್ ವಲಯಗಳಲ್ಲಿ ಸಾಕಷ್ಟು ಸುದ್ದಿಯಾದ ವ್ಯವಹಾರವಾಗಿತ್ತು.

ಈ ಸಂದರ್ಭದಲ್ಲೇ ಅವರಿಗೆ ಐಟಿಯ ತೊಡಕು ಶುರುವಾಗಿದ್ದು. ಸಿದ್ದಾರ್ಥ ಅವರ ‘ಕಡೆಯ ಪತ್ರ’ ಎಂದು ಹೇಳಲಾದ ಪತ್ರದಲ್ಲಿ ಬರೆದಿರುವುದು ಇದೇ ಐಟಿ ತೊಡಕನ್ನು. ಅವರ ಆಸ್ತಿ, ವಹಿವಾಟುಗಳನ್ನು ಆದಾಯ ತೆರಿಗೆ ಇಲಾಖೆಯು ಅಟ್ಯಾಚ್ ಮಾಡಲು ಶುರು ಮಾಡಿತ್ತು. ಮೈಂಡ್‍ಟ್ರೀನ 4.5% ಷೇರುಗಳು ಅಟ್ಯಾಚ್ ಆದವು. ಇದರಿಂದ ಅವರು ವಹಿವಾಟನ್ನು ಸರಿ ಮಾಡಿಕೊಳ್ಳಲು ಬೇಕಾದ ದಾರಿಯೂ ಮುಚ್ಚಿತು ಎಂದು ಹೇಳಲಾಗುತ್ತಿದೆ. ಇಲ್ಲಿಂದ ಮುಂದಕ್ಕೆ ತಮ್ಮ ಕುಟುಂಬ, ಕಂಪೆನಿಯ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳಿಗೂ ಗೊತ್ತಿಲ್ಲದ ವ್ಯವಹಾರವನ್ನು ತಾನು ಮಾಡಿದೆ ಎಂದು ಸಿದ್ದಾರ್ಥರ ‘ಪತ್ರ’ ಹೇಳುತ್ತದೆ.

ಕಾರ್ಪೊರೇಟ್ ವ್ಯವಹಾರಗಳ ಇಲಾಖೆಗೆ ಗೊತ್ತಿರುವಂತೆ ಅವರ ಸಾಲ 8000 ಕೋಟಿ ಎಂದು ಹೇಳುತ್ತಿದ್ದರೂ, ಅದು 10ರಿಂದ 15 ಸಾವಿರ ಕೋಟಿವರೆಗೆ ಇದ್ದಿರಬಹುದು ಎಂಬುದು ಸಿಸಿಡಿ ವಲಯಗಳ ಮಾತು. ಇದು ಕೆಫೆ ಕಾಫಿಡೇ ಸಾಲ ಆಗಿರಲು ಸಾಧ್ಯವೇ ಇಲ್ಲ. ಏಕೆಂದರೆ, ಅದರ ಒಟ್ಟು ಆಸ್ತಿಯೇ ಅಷ್ಟಿಲ್ಲದಿರುವಾಗ, ಯಾರೂ ಅಷ್ಟು ಸಾಲವನ್ನು ಕೊಡಲಾರರು. ಹಾಗಾಗಿಯೇ ಹೊರಗೆ ಬಂದಿರದ ಇನ್ನೂ ಯಾವುದೋ ವ್ಯವಹಾರಗಳು ಅವರಿಗಿದ್ದವು ಎಂಬ ವದಂತಿ ಓಡಾಡುತ್ತಿದೆ.

ಇದಕ್ಕಿಂತಲೂ ಭೀಕರವಾದ ಪರಿಸ್ಥಿತಿ ಹಲವು ಉದ್ದಿಮೆದಾರರಿಗೆ ಬಂದಿದೆ. ಆದರೆ, ಅವೆಲ್ಲವನ್ನೂ ಅವರು ನಿವಾರಿಸಿಕೊಂಡಿದ್ದು ಕೇಂದ್ರ ಸರ್ಕಾರದ ಜೊತೆಗೆ ಮಾಡಿಕೊಂಡ ಅಡ್ಜಸ್ಟ್‍ಮೆಂಟ್‍ಗಳಿಂದ. ಎಸ್.ಎಂ.ಕೃಷ್ಣ ಅವರು ಬಿಜೆಪಿಗೆ ಸೇರಿದ್ದನ್ನೂ ಇದೇ ಹಿನ್ನೆಲೆಯಲ್ಲಿ ಅರ್ಥೈಸಲಾಗಿತ್ತು. ಅದು ನಿಜವೇ ಇರಬಹುದು ಎಂಬುದನ್ನೂ ಈ ಬೆಳವಣಿಗೆಯೂ ಖಾತರಿಪಡಿಸುತ್ತದೆ. ಆದರೆ, ಬಿಜೆಪಿ ಸೇರಿಕೊಂಡ ನಂತರವೂ ಏಕೆ ಇವರ ಸಮಸ್ಯೆ ಬಗೆಹರಿಯಲಿಲ್ಲ ಎಂಬುದು ನಿಗೂಢವಾಗಿದೆ. ಕೃಷ್ಣ ಅವರ ಸಮಸ್ಯೆಗಳನ್ನು ಒಂದೇ ಏಟಿಗೆ ಬಗೆಹರಿಸಬಾರದು ಎಂದು ಬಿಜೆಪಿ ಸರ್ಕಾರ ಬಯಸಿತೇ? ಏಕೆಂದರೆ ಅರುಣ್ ಜೇಟ್ಲಿಯವರ ಆಪ್ತ ಎಂದು ಹೇಳಲಾಗುತ್ತಿರುವ ಐಟಿ ಅಧಿಕಾರಿಯ ಮೇಲೆಯೇ ಈಗ ‘ಸಿದ್ದಾರ್ಥರ ಪತ್ರ’ದಲ್ಲಿ ಆರೋಪ ಮಾಡಲಾಗಿದೆ.

ಎಸ್.ಎಂ.ಕೃಷ್ಣ ಅವರು ರಾಜಕಾರಣದಲ್ಲಿ ಬಹುತೇಕ ಅಧಿಕಾರವನ್ನು ಅನುಭವಿಸಿದ್ದು ಕಾಂಗ್ರೆಸ್‍ನಲ್ಲಿ. 80 ವರ್ಷ ದಾಟಿದ ನಂತರ ಅದರ ಕಡುವೈರಿ ಬಿಜೆಪಿಗೆ ಸೇರಿದರು. ಬಿಜೆಪಿ ಸೇರಿದರೂ ಎಸ್ಸೆಂ ಕೃಷ್ಣ ಅಳಿಯನನ್ನು ಉಳಿಸಿಕೊಳ್ಳಲಾಗಲಿಲ್ಲ. ವ್ರತವು ಕೆಟ್ಟರು, ಸುಖವೂ ಪಡಲಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ಸಂಗತಿಯಾಗಿದೆ.

ಕಡಿಮೆಯೆಂದರೂ 12000 ಎಕರೆ ಎಸ್ಟೇಟ್ ಮಾಲೀಕ, ಸ್ಟಾಕ್ ಎಕ್ಸ್ ಚೇಂಜ್‍ನಲ್ಲಿ ಇರುವ ಕಂಪೆನಿಯ ಒಡೆಯ, ದೇಶದ ಬಲಾಢ್ಯ ಅಧಿಕಾರಸ್ಥ ಪಕ್ಷದಲ್ಲಿರುವ ಪ್ರಭಾವಿ ಮಾವ ಇಷ್ಟಿದ್ದೂ ತನ್ನ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗಲಿಲ್ಲವೇ ಎಂಬುದು ಮುಂದಿನ ದಿನಗಳಲ್ಲಿ ಇನ್ನೂ ಹೊರಬರಬೇಕಿದೆ. ಎಸ್.ಎಂ.ಕೃಷ್ಣರ ಅಳಿಯನಾಗಿ, ಅಧಿಕಾರದ ಅನುಕೂಲಗಳನ್ನು ಪಡೆದು ಸಾಮ್ರಾಜ್ಯ ವಿಸ್ತರಣೆಗೆ ಹೋಗದೇ ಇದ್ದಿದ್ದರೆ ಇಂತಹ ಇಕ್ಕಟ್ಟಿಗೆ ಸಿಲುಕುತ್ತಿರಲಿಲ್ಲ. ಎರಡನೆಯದಾಗಿ, ಸಾಮಾನ್ಯವಾಗಿ ಇಂತಹ ಉದ್ದಿಮೆಪತಿಗಳಿಗೆಲ್ಲರಿಗೆ ನಿಯಮ, ನೈತಿಕತೆ ಮೀರಿ ಸಹಾಯ ಮಾಡುವ ಸರ್ಕಾರಗಳು ಕೇಂದ್ರದಲ್ಲಿ ಅಧಿಕಾರದಲ್ಲಿವೆ. ಅವರು ಎಸ್.ಎಂ.ಕೃಷ್ಣರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲೆಂದೇ ಸಿದ್ದಾರ್ಥರ ಸಮಸ್ಯೆ ಬಗೆಹರಿಯದಂತೆ ನೋಡಿಕೊಂಡಿರಬಹುದು.

ಇದಲ್ಲದೇ, ಇಡೀ ವಿದ್ಯಮಾನವನ್ನು ಬೇರೊಂದು ನೆಲೆಯಲ್ಲೂ ನೋಡಬೇಕಿದೆ. ಅದು ವ್ಯಕ್ತಿಗತವಾಗಿ ಸಿದ್ದಾರ್ಥ ಎಂತಹ ಮನುಷ್ಯರಾಗಿದ್ದರು ಎಂಬುದು. ಈ ಸೂಕ್ಷ್ಮ ವ್ಯಕ್ತಿತ್ವವೇ ಅವರನ್ನು ಸಾವಿನ ಕಡೆಗೆ ಕರೆದೊಯ್ದಿರಬಹುದು ಎನಿಸಲು ಬೇಕಾದ ಹಲವು ಗುಣಗಳು ಅವರಲ್ಲಿದ್ದವು.
ತಳಮಟ್ಟದಿಂದ ಮೇಲೇರುತ್ತಾ ಬಂದ ಸಿದ್ದಾರ್ಥ ಒಮ್ಮೆಗೇ ಆಕಾಶಕ್ಕೆ ಏಣಿ ಹಾಕಲಿಲ್ಲ. ಮೊದಲಿಗೆ ಅವರದ್ದು ಬಡಕುಟುಂಬವೇನಲ್ಲ. ಮಲೆನಾಡಿನ ಸಿರಿವಂತ ಕುಟುಂಬಗಳಲ್ಲಿ ಅವರದ್ದೂ ಒಂದು. ಆದರೆ, ಅದು ದೊಡ್ಡ ಉದ್ದಿಮೆದಾರರಿಗೆ ಹೋಲಿಸುವಂಥದಲ್ಲ. ಅಲ್ಲಿಂದ ಆರಂಭಿಸಿ ಹಂತಹಂತವಾಗಿಯೇ ಆದರೂ ದೊಡ್ಡ ನೆಗೆತಗಳನ್ನು ಸಾಧಿಸಿದ್ದರು. ಒಂದು ಹಂತ ದಾಟಿದ ಮೇಲೆ ಎಲ್ಲಾ ಉದ್ದಿಮೆಪತಿಗಳಿಗೂ ಸುಲಭಕ್ಕೆ ಮಣೆ ಹಾಕುವ ನಮ್ಮ ಸರ್ಕಾರೀ ವ್ಯವಸ್ಥೆಯು ಇವರಿಗೂ ರೆಡ್ ಕಾರ್ಪೆಟ್ ಹಾಸಿತು. ಎಸ್ಸೆಂ ಕೃಷ್ಣರ ಅಳಿಯ ಆಗಿರುವ ಕಾರಣಕ್ಕೆ ಅದು ಇನ್ನೂ ಸುಲಭಕ್ಕೆ ಆಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಎಸ್ಸೆಂ ಕೃಷ್ಣರಂತಹ, ಮೋದಿಯಂತಹ, ಚಿದಂಬರಂ ಥರದ ರಾಜಕಾರಣಿಗಳು ಇದನ್ನು ಎಲ್ಲಾ ಉದ್ದಿಮೆಪತಿಗಳಿಗೂ ಮಾಡುತ್ತಾರೆ.

ಇವೆಲ್ಲಾ ಮಾಡುತ್ತಿದ್ದಾಗಲೂ ತಾನು ಹಂತಹಂತವಾಗಿ ಏರಬೇಕಾದ ಮೆಟ್ಟಿಲುಗಳಿವೆ, ತಾವೇನೂ ಅದ್ಭುತವಾಗಿ ಎಲ್ಲವನ್ನೂ ಮಾಡುತ್ತಿಲ್ಲ ಎಂದು ಆತ ಪದೇ ಪದೇ ಹೇಳಿಕೊಂಡಿದ್ದಾರೆ. ಮೊದಮೊದಲು ಮಾಧ್ಯಮಗಳಿಗೆ ಸಂದರ್ಶನ ನೀಡದ ಸಿದ್ದಾರ್ಥ, ಬಿಸಿನೆಸ್‍ಟುಡೇ ಜೊತೆ ಮಾತನಾಡಿದ ನಂತರ ಹಲವು ಪತ್ರಕರ್ತರ ಜೊತೆ ಅವೆಲ್ಲವನ್ನೂ ಚರ್ಚಿಸಿದ್ದಾರೆ. ಮುಂಬೈನಲ್ಲಿ ಎರಡು ವರ್ಷ ತರಬೇತಿ ಪಡೆಯುವಾಗ, ಮಹೇಂದ್ರಭಾಯಿಯ ಊಟದ ಡಬ್ಬಿಯನ್ನು ಹೊರುವಾಗ ತನಗ್ಯಾವ ಅವಮಾನ ಎನಿಸಿರಲಿಲ್ಲ ಎಂದು ಹೇಳುವ ಆತ, 2007ರಲ್ಲಿ ತನಗೆ ಆದದ್ದು ಮಾತ್ರ ಬಹಳ ನೋವನ್ನುಂಟು ಮಾಡಿತು ಎಂದು ಬರೆದುಕೊಂಡಿದ್ದಾರೆ. ಅದೊಂದು ಗಮನಿಸಬೇಕಾದ ಘಟನೆ.

ಸಿದ್ದಾರ್ಥ ಆಗಾಗ್ಗೆ ಕೊಲ್ಕತ್ತಾಗೆ ಹೋಗುತ್ತಿದ್ದರು. ಅವರ ಕುಟುಂಬವೂ ವಿಶ್ವಾಸವಿಟ್ಟಿದ್ದ ಅಲ್ಲಿನ ರಾಮಕೃಷ್ಣ ಆಶ್ರಮ ಇವರಿಗೆ ನೆಮ್ಮದಿ ನೀಡುತ್ತಿದ್ದ ತಾಣ. ಖಭೌತ ವಿಜ್ಞಾನದಲ್ಲಿ ಪಿಎಚ್‍ಡಿ ಪಡೆದಿದ್ದ ಅವರ ‘ಅಕ್ಕ’ ಶುಭ, ಪದವಿ ಪಡೆದ ಮರುಕ್ಷಣ ಹೊರಟು ನಿಂತಿದ್ದು ಶಾರದಾ ಆಶ್ರಮಕ್ಕೆ. ಆಕೆಯ ಜೀವನವು ತನ್ನಲ್ಲಿ ಮೂಡಿಸುತ್ತಿದ್ದ ಭಾವವನ್ನು ಸಿದ್ದಾರ್ಥ ಆಪ್ತವಾಗಿ ನೆನೆಯುತ್ತಾರೆ. ಒಮ್ಮೆ ಕೊಲ್ಕೊತ್ತಾಗೆ ಹೋದವರು, (2007ರ ಡಿಸೆಂಬರ್ 31ರಂದು) ತನ್ನದೇ ಕಾಫಿಡೇ ಕೆಫೆಯಲ್ಲಿ ಯೂನಿಫಾರಂ ತೊಟ್ಟು ಕಾಫಿ ಸಪ್ಲೈ ಮಾಡಲು ನಿಂತರು. ಪ್ರತಿ ಗಂಟೆಗೆ 2 ಲಕ್ಷ ಕಪ್‍ಗಳನ್ನು ಜಗತ್ತಿನಾದ್ಯಂತ ಸರ್ವ್ ಮಾಡುವ ಕಂಪೆನಿಯ ಮಾಲಿಕ ಎಂದು ಗೊತ್ತಿಲ್ಲದ ಗ್ರಾಹಕರು ಸಪ್ಲೈಯರ್‍ಗಳನ್ನು ನಡೆಸಿಕೊಳ್ಳುವ ರೀತಿಯಲ್ಲಿಯೇ ಇವರನ್ನೂ ನಡೆಸಿಕೊಂಡರು. ಆದರೆ, ಗ್ರಾಹಕರು ಪರಿಚಾರಕರನ್ನು ನಡೆಸಿಕೊಳ್ಳುವ ರೀತಿ ಸ್ವಂತ ಅರಿವಿಗೆ ಬಂದಾಗ ದಂಗಾದರು. ಒಬ್ಬರೂ ಥ್ಯಾಂಕ್ಸ್ ಹೇಳರು, ಹ್ಯಾಪಿ ನ್ಯೂ ಇಯರ್ ಹೇಳುವುದಿಲ್ಲ, ಮುಗುಳ್ನಗೆ ಸಹಾ ಬೀರುವುದಿಲ್ಲ. ಹೀಗಿದ್ದ ಮೇಲೆ ಕೆಲಸಗಾರರಿಗೆ ಕೆಲಸ ಮಾಡುವ ಉಮೇದು ಹೇಗೆ ಬರುತ್ತದೆ ಎಂದು ಅವರಿಗೆ ಅನಿಸಿತಂತೆ.

ಶುಭ ಅಕ್ಕನೊಂದಿಗೆ ಸಿದ್ಧಾರ್ಥ

ಒಟ್ಟು ಸುಮಾರು 50,000 ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಗೆ ಕಾರಣವಾಗಿದ್ದ ಸಾಮ್ರಾಜ್ಯದ ಅಧಿಪತಿಯಾಗಿದ್ದ ಆತ, ತನ್ನೂರಿನ ಹಲವರನ್ನು ಕಂಪೆನಿಯಲ್ಲಿ ಸೇರಿಸಿಕೊಂಡಿದ್ದರು. ಕಾಫಿ ಡೇಯಲ್ಲಿ ಚಿಕ್ಕಮಗಳೂರಿನ, ಮಲೆನಾಡಿನ ಮತ್ತು ಕರ್ನಾಟಕದ ಬಹಳಷ್ಟು ಜನರು ಬದುಕು ಕಂಡುಕೊಂಡಿದ್ದರು. ಆ ಭಾಗದ ಶಾಲೆಗಳಿಗೆ ಉದಾರ ನೆರವನ್ನು ತಂದೆ-ಮಕ್ಕಳಿಬ್ಬರೂ ನೀಡುತ್ತಿದ್ದರು. ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಎಸ್ಸೆಂ ಕೃಷ್ಣ ಕುಟುಂಬದ ಆಧಾರಸ್ತಂಭ ಅವರಾಗಿದ್ದರು. ಸಿರಿವಂತರಲ್ಲಿ ಇಷ್ಟು ಗುಣವಿದ್ದುಬಿಟ್ಟರೆ ಜನರು ಅವರಲ್ಲಿ ಅರ್ಧ ದೇವರನ್ನೇ ಕಾಣಲು ಶುರು ಮಾಡುವ ಸಮಾಜ ನಮ್ಮದು.

ಈ ಥರದ ವ್ಯಕ್ತಿತ್ವದ ಸಿದ್ದಾರ್ಥ ಈಗ ಕೇವಲ ಗಂಗಯ್ಯ ಹೆಗ್ಡೆಯವರ ಮಗನಾಗಿರಲಿಲ್ಲ. ಅದರ ಜೊತೆಗೆ ಜಗತ್ತಿನ ವಹಿವಾಟಿನ ಅಗಾಧತೆ ಗೊತ್ತಿದ್ದ ಉದ್ಯಮಿ ಮತ್ತು ಪ್ರಭಾವಿ ರಾಜಕಾರಣಿ ಎಸ್ಸೆಂ ಕೃಷ್ಣ ಅವರ ಅಳಿಯನೂ ಆಗಿದ್ದರು. ಇನ್ನೂ ಮೇಲೆ ಮೇಲೆ ಏರಬೇಕೆನ್ನುವ ಹಂಬಲ 2010ರಿಂದ ಏರುತ್ತಾ ಹೋಯಿತು. ಆದರೆ, ಸಾಮ್ರಾಜ್ಯದೊಳಗೆ ಇದ್ದ ಬಿರುಕುಗಳು ಅವರನ್ನು ಕೆಳಗೆ ಇಳಿಸತೊಡಗಿದ್ದವು. ಇದು ಉದ್ದಿಮೆ ವಲಯಗಳಲ್ಲಿ ಮನೆಮಾತಾದಾಗ ಒಮ್ಮೆ ಹೀಗೆ ಹೇಳಿದ್ದರು.

‘ತನ್ನ ಹೋಲ್ಡಿಂಗ್ ಕಂಪೆನಿಯಲ್ಲಿ 1000 ಕೋಟಿ ರೂಗಳ ಸಾಲ ಇರುವುದು ನಿಜ. ಆದರೆ, ನಾವು ರೀಟೇಲ್ ಬಿಸಿನೆಸ್‍ನಲ್ಲಿರುವ ಸಿಕ್ವೋಯಿಯಾ ಕ್ಯಾಪಿಟಲ್ ಮತ್ತು ಗೋಲ್ಡ್‍ಮನ್ ಸ್ಯಾಕ್ಸ್ ಅವರ ಷೇರುಗಳನ್ನು ಕೊಳ್ಳಲು ಮಾಡಿದ ಸಾಲ ಅದು. ಇನ್ನೊಂದು 200 ಕೋಟಿ ರೂ ಸಾಲ ಮಾಡಿದ್ದು ಮೈಂಡ್‍ಟ್ರೀಯಲ್ಲಿನ ಇತರರ ಷೇರುಗಳನ್ನು ಕೊಳ್ಳಲು. ನಾವೊಂದು ವೇಳೆ ಮೈಂಡ್‍ಟ್ರೀಯಲ್ಲಿನ ಷೇರುಗಳೆಲ್ಲವನ್ನೂ ಮಾರಿಬಿಟ್ಟರೆ ನಮ್ಮಿಡೀ ಕಂಪೆನಿಯು ಋಣಮುಕ್ತವಾಗಿಬಿಡುತ್ತದೆ. ಆದರೆ, ಕಳೆದ 16 ವರ್ಷಗಳಲ್ಲಿ ನಮಗೆ ಶೇ.40ರಷ್ಟು ಲಾಭ ತಂದುಕೊಟ್ಟಿರುವ ಅದನ್ನು ನಾವು ಮಾರಲು ಬಯಸುವುದಿಲ್ಲ.’

ಇದು ಅವರ ಬಿಸಿನೆಸ್‍ನಲ್ಲಿನ ಸಮಸ್ಯೆಯನ್ನು ತೋರುತ್ತದಾದರೆ, ಆದಾಯ ತೆರಿಗೆ ಇಲಾಖೆ ಮತ್ತು ಇವರಿಗೆ ಸಾಲಕೊಟ್ಟವರು ಇವರನ್ನು ಹಿಂಡುತ್ತಿದ್ದ ಬಗೆ ಸಮಸ್ಯೆಯನ್ನು ಮತ್ತಷ್ಟು ಆಳಗೊಳಿಸಿದವು. ಇಂತಹ ಸಮಸ್ಯೆಗಳು ಗುಜರಾತಿ ಉದ್ದಿಮೆದಾರರಿಗೆ ಆದರೆ ಕೈ ಹಿಡಿಯಲು ಗುಜರಾತಿ ರಾಜಕಾರಣಿಗಳು ದೆಹಲಿಯಲ್ಲಿ ಅಧಿಕಾರಸ್ಥರಾಗಿದ್ದಾರೆ. ಆದರೆ, ಕರ್ನಾಟಕದ ಈ ಉದ್ದಿಮೆದಾರನ ಪ್ರಭಾವಿ ಮಾವನನ್ನು ಮಣಿಸಲು ಈ ಬಿಕ್ಕಟ್ಟನ್ನು ಬಳಸಿಕೊಂಡ ಗುಜರಾತಿ ರಾಜಕಾರಣಿಗಳು ಈತನ ಸಹಾಯಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆ ಮಾತ್ರ ಉಳಿಯುತ್ತದೆ.

ಬಂಡವಾಳ ಹಾಕಿ ಬಂಡವಾಳ ತೆಗೆಯುತ್ತಲೇ ಹೋಗುವ ಈ ಕಾರ್ಪೋರೇಟ್ ಜಗತ್ತಿನಲ್ಲಿ, ಲಾಭಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಾದ ದುಷ್ಟರು ಬೆಳೆಯುತ್ತಲೇ ಹೋಗುತ್ತಿದ್ದಾರೆ. ಸೂಕ್ಷ್ಮ ವ್ಯಕ್ತಿತ್ವದ ಸಿದ್ದಾರ್ಥ ಹೆಗಡೆ ಅಲ್ಲಿನ ಕ್ರೂರ ನಿಯಮಗಳಲ್ಲಿ ಎಲ್ಲಕ್ಕೂ ಒಳಪಡಲು ಸಿದ್ಧವಿರಲಿಲ್ಲವೇನೋ? ಮಹತ್ತರವಾದುದನ್ನು ಸಾಧಿಸಲೇಬೇಕೆನ್ನುವ ಮಹತ್ವಾಕಾಂಕ್ಷೆಯು ‘ತಾನೊಬ್ಬ ವಿಫಲ ಉದ್ಯಮಶೀಲ ವ್ಯಕ್ತಿ’ ಎಂದೆನಿಸಿದ ತಕ್ಷಣ ಆತ್ಮಹತ್ಯೆವರೆಗೆ ಕೊಂಡೊಯ್ದಿರುವ ಎಲ್ಲಾ ಸಾಧ್ಯತೆಯಿದೆ.

ಮಹಾಲಕ್ಷ್ಮಿ ಎಂಬ ಪತ್ರಕರ್ತೆಗೆ ನೀಡಿದ ಸಂದರ್ಶನದಲ್ಲಿ ಆತ ಹೇಳಿದ ಮಾತು ಆತನ ಸ್ಥಿತಿಯನ್ನು ಸೂಚಿಸುವಂತಿದೆ – ‘ಉದ್ಯಮಶೀಲ ವ್ಯಕ್ತಿಗಳು ನಿವೃತ್ತರಾಗುವುದಿಲ್ಲ, ಸಾಯುತ್ತಾರೆ’ ಎಂದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...