ಕೇರಳದಲ್ಲಿ ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಯಾಗುತ್ತಿದ್ದು, ರಾಜ್ಯದಲ್ಲಿ ಈ ವಾರದಿಂದ ವಾರಾಂತ್ಯದ ಲಾಕ್‌ಡೌನ್ ಅನ್ನು ಇನ್ನಷ್ಟು ವಿಸ್ತರಿಸಲಾಗುತ್ತಿದೆ.
ಒಕ್ಕೂಟ ಸರ್ಕಾರವು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಿಂದ ಆರು ಜನರ ತಂಡವನ್ನು ರಾಜ್ಯಕ್ಕೆ ಕಳುಹಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
“ಕೇರಳದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದ ನಿರಂತರ ಪ್ರಯತ್ನಗಳಿಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ತಂಡವು ನೆರವಾಗಲಿದೆ” ಎಂದು ಮಾಂಡವಿಯಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಲಸಿಕೆ ಕೊರತೆ; ವ್ಯಾಕ್ಸಿನೇಷನ್ ಪ್ರಕ್ರಿಯೆ ನಿಲ್ಲಿಸುವತ್ತ ಕೇರಳ
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಇತ್ತೀಚೆಗೆ ಕೇರಳದಲ್ಲಿ ಗಮನಿಸಿದ “ಸೂಪರ್ ಸ್ಪ್ರೆಡರ್ ಘಟನೆಗಳು” ಕುರಿತು ರಾಜ್ಯಕ್ಕೆ ಪತ್ರ ಬರೆದಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಎಂದು ಒತ್ತಿಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ವಾರ ಬಕ್ರೀದ್ ಹಬ್ಬದ ಹಿನ್ನೆಲೆ ಮೂರು ದಿನಗಳ ಕಾಲ ಕೋವಿಡ್ ನಿರ್ಬಂಧವನ್ನು ಸಡಿಲಗೊಳಿಸಲಾಗಿತ್ತು. ಕೇರಳ ಸರ್ಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ನೀಡಿತ್ತು.
ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ನ್ಯಾಯಪೀಠವು, “ಭಾರತದ ನಾಗರಿಕರ ಆರೋಗ್ಯ ಮತ್ತು ಜೀವಿಸುವ ಹಕ್ಕು ಅತ್ಯುನ್ನತವಾದದ್ದು. ಧಾರ್ಮಿಕ ಆಚರಣೆಗಳಾಗಿರಲಿ, ಬೇರೆ ಇತರ ಭಾವನಾತ್ಮಕ ವಿಚಾರಗಳೇ ಆಗಿರಲಿ ಅವು ಈ ಮೂಲಭೂತ ಮೂಲಭೂತ ಹಕ್ಕಿಗೆ ಅಧೀನವಾಗಿವೆ. ಯಾವುದೇ ರೀತಿಯ, ಧಾರ್ಮಿಕ ಅಥವಾ ಇತರ ಒತ್ತಡದ ಗುಂಪುಗಳು ಬೇರೆ ಯಾವುದೇ ರೀತಿಯಲ್ಲಿ ಜೀವಿಸುವ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ” ಎಂದು ಹೇಳಿತ್ತು.
ಕೋವಿಡ್ ನಿರ್ವಹಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿಕ್ಕಾಗಿ ಹಿಂದೆ ಕೇರಳಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದರು. ಈಗ ದೇಶದಲ್ಲಿ ಪ್ರತಿದಿನ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಸುಮಾರು 40% ಪ್ರಕರಣಗಳು ಕೇರಳದಿಂದ ವರದಿಯಾಗುತ್ತಿವೆ.
ಕೇರಳದಲ್ಲಿ ಬುಧವಾರ 22,056 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 131 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಬಕ್ರೀದ್ ಹಬ್ಬಕ್ಕೆ ಅಂಗಡಿ ತೆರೆಯಲು ಕೇರಳ ಸರ್ಕಾರದ ಅನುಮತಿ: ಸುಪ್ರೀಂಕೋರ್ಟ್ ತರಾಟೆ


