ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ತಿರುವನಂತಪುರಂ ಜಿಲ್ಲೆಯ ನೇಮಮ್ ವಿಧಾನಸಭಾ ಕ್ಷೇತ್ರದಲ್ಲಿ ರಾಜೀವ್ ಚಂದ್ರಶೇಖರ್ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ಕೆ.ಎಸ್ ಶಬರಿನಾಥನ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ ಕೂಡ, ಆಯೋಗವು ಚಂದ್ರಶೇಖರ್ ಅವರ ನಾಮಪತ್ರವನ್ನು ಅಂಗೀಕರಿಸಿದೆ ಎಂದು ಹೇಳಲಾಗಿದೆ.
ಬೆಂಗಳೂರಿನ ಐಷಾರಾಮಿ ಪ್ರದೇಶವಾದ ಕೋರಮಂಗಲದಲ್ಲಿ ಚಂದ್ರಶೇಖರ್ ಅವರು 49,000 ಚದರ ಅಡಿಯ ಮನೆಯನ್ನು ಹೊಂದಿದ್ದಾರೆ ಎಂದು ಕೇರಳ ಕಾಂಗ್ರೆಸ್ ಘಟಕ ಹೇಳಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕಂದಾಯ ಇಲಾಖೆಯ ಆಸ್ತಿ ತೆರಿಗೆ ರಸೀದಿಯನ್ನು ಸೋಮವಾರ (ಮಾರ್ಚ್ 23) ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಮನೆಯ ವಿವರವನ್ನು ಚುನಾವಣಾ ಅಫಿಡವಿಟ್‌ನಲ್ಲಿ ಚಂದ್ರಶೇಖರ್ ಉಲ್ಲೇಖಿಸಿಲ್ಲ ಎಂದು ಆರೋಪಿಸಿದೆ.
ಕೋರಮಂಗಲದಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ಚಂದ್ರಶೇಖರ್ ಮಾರ್ಚ್ 17, 2026ರಂದು 5 ಲಕ್ಷ ರೂಪಾಯಿಗೂ ಹೆಚ್ಚು ಆಸ್ತಿ ತೆರಿಗೆ ಪಾವತಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
“ಇದು ದೇಶದ ಅತ್ಯಂತ ದುಬಾರಿ ಸ್ಥಳಗಳ ಪೈಕಿ ಒಂದರಲ್ಲಿ ಇರುವ 1.07 ಎಕರೆ ಆಸ್ತಿಯಾಗಿದ್ದು, ಇಲ್ಲಿ ಅನೇಕ ಭಾರತೀಯ ಶತಕೋಟ್ಯಾಧಿಪತಿಗಳು ವಾಸಿಸುತ್ತಿದ್ದಾರೆ. ಇಲ್ಲಿನ ಭೂಮಿಯ ಬೆಲೆ ಪ್ರತಿ ಚದರ ಅಡಿಗೆ ಸುಮಾರು 35,000 ರಿಂದ 50,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿದೆ. ಅಂದಾಜಿನ ಪ್ರಕಾರ, ಚಂದ್ರಶೇಖರ್ ಅವರ ಭೂಮಿಯ ಮೌಲ್ಯ ಮಾತ್ರ ಸುಮಾರು 200 ಕೋಟಿ ರೂ. ಆಗಿರಬಹುದು” ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಪರಿಶೀಲನೆಗಾಗಿ ಅರ್ಜಿಯ ಸಂಖ್ಯೆಯೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, “ತೆರಿಗೆಯನ್ನು ಕೇವಲ ಆರು ದಿನಗಳ ಹಿಂದೆ, ಅಂದರೆ ಮಾರ್ಚ್ 17ರಂದು ಪಾವತಿಸಲಾಗಿದೆ, ಇದನ್ನು ನೀವು ಸ್ವತಃ ಪರಿಶೀಲಿಸಬಹುದು” ಎಂದು ತಿಳಿಸಿದೆ. ಅಷ್ಟೇ ಅಲ್ಲದೆ, ಚಂದ್ರಶೇಖರ್ ಅವರು 2024ರ ಅಫಿಡವಿಟ್‌ನಲ್ಲಿ ಇದೇ ವಸತಿ ವಿಳಾಸವನ್ನು ನೀಡಿದ್ದರು ಎಂಬ ಅಂಶವನ್ನು ಒತ್ತಿ ಹೇಳಿದೆ.
ಚಂದ್ರಶೇಖರ್ ಅವರನ್ನು ‘ಹಬಿಚ್ಯುವಲ್ ಒಫೆಂಡರ್’ ಎಂದು ಕರೆದಿರುವ ಕಾಂಗ್ರೆಸ್, ಅವರನ್ನು ಅನರ್ಹಗೊಳಿಸಬೇಕೆಂದು ಒತ್ತಾಯಿಸಿದೆ.
ವರದಿಗಳ ಪ್ರಕಾರ, ಚಂದ್ರಶೇಖರ್ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಕೋರಮಂಗಲದ ಮೂರನೇ ಬ್ಲಾಕ್‌ನಲ್ಲಿರುವ ನಂ. 419 ವಿಳಾಸದ ಕೃಷಿಯೇತರ ಭೂಮಿಯನ್ನು ಮಾತ್ರ ಸ್ಥಿರಾಸ್ತಿಯೆಂದು ಘೋಷಿಸಿದ್ದಾರೆ. ಅವರು ಈ ಆಸ್ತಿಯನ್ನು 2006ರಲ್ಲಿ 5.26 ಕೋಟಿ ರೂಪಾಯಿಗೆ ಖರೀದಿಸಿದ್ದು, ಪ್ರಸ್ತುತ ಇದರ ಮಾರುಕಟ್ಟೆ ಮೌಲ್ಯ ಸುಮಾರು 15.07 ಕೋಟಿ ರೂಪಾಯಿ ಎಂದು ಅಂದಾಜಿಸಿದ್ದಾರೆ.
ತಮ್ಮ ಅಫಿಡವಿಟ್‌ನಲ್ಲಿ 2024-25ರ ಹಣಕಾಸು ವರ್ಷದ ಆದಾಯದ ಮೂಲಗಳ ಬಗ್ಗೆ ಮಾಹಿತಿ ನೀಡಿರುವ ಭಾಗದಲ್ಲಿ, ಚಂದ್ರಶೇಖರ್ ಅವರು ಕೋರಮಂಗಲದ ಮೂರನೇ ಬ್ಲಾಕ್‌ನಲ್ಲಿರುವ ‘ಪ್ಲಾಟ್ 408’ ವಿಳಾಸವನ್ನು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್‌ನ ಆಕ್ಷೇಪಣೆಗಳ ಹೊರತಾಗಿಯೂ, ಚುನಾವಣಾಧಿಕಾರಿಯು ಚಂದ್ರಶೇಖರ್ ಅವರ ನಾಮಪತ್ರವನ್ನು ಅಂಗೀಕರಿಸಿದ್ದಾರೆ. ಅಭ್ಯರ್ಥಿಗಳ ಕೈಪಿಡಿ 2023ರ ಪ್ರಕಾರ ನಾಮಪತ್ರವನ್ನು ತಿರಸ್ಕರಿಸಲು ಯಾವುದೇ ಪೂರಕ ಕಾರಣಗಳಿಲ್ಲ ಎಂದು ಅಧಿಕಾರಿ ತಿಳಿಸಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.
ಮಂಗಳವಾರ ಕೇರಳ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್‌ನ ಆರೋಪಗಳು ಸುಳ್ಳು ಎಂದು ತಳ್ಳಿಹಾಕಿದೆ. “ಚಂದ್ರಶೇಖರ್ ಅವರು ಕೋರಮಂಗಲದಲ್ಲಿ ಮನೆ ಹೊಂದಿದ್ದಾರೆ ಮತ್ತು ಆ ಮಾಹಿತಿಯನ್ನು ಚುನಾವಣಾ ಅಫಿಡವಿಟ್‌ನಲ್ಲಿ ಮರೆಮಾಚಿದ್ದಾರೆ ಎಂದು ‘ಕಾಂಗ್ರೆಸ್ ಸೈಬರ್ ತಂಡಗಳು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ವಿರುದ್ಧ ನಿರಂತರವಾಗಿ ಸುಳ್ಳು ಸುದ್ದಿ ಹರಡುತ್ತಿವೆ” ಎಂದು ಬಿಜೆಪಿ ಹೇಳಿದೆ.
ಸೋಲುವ ಭಯದಿಂದ ಕಾಂಗ್ರೆಸ್ ಈ ಆರೋಪಗಳನ್ನು ಮಾಡುತ್ತಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಕಾಂಗ್ರೆಸ್ ಇದೇ ರೀತಿಯ ದೂರುಗಳನ್ನು ನೀಡಿತ್ತು ಎಂದು ಬಿಜೆಪಿ ಪ್ರತಿಪಾದಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜೀವ್ ಚಂದ್ರಶೇಖರ್ ಕೂಡ ಕಾಂಗ್ರೆಸ್‌ನ ಆರೋಪಗಳನ್ನು ನಿರಾಕರಿಸಿದ್ದಾರೆ. “ಅವರು ಲೋಕಸಭಾ ಚುನಾವಣೆಯ ವೇಳೆಯೂ ಇದನ್ನು ಪ್ರಯತ್ನಿಸಿದ್ದರು. ನನ್ನ ಆದಾಯ ತೆರಿಗೆ ಮತ್ತು ಮನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಅವರು ಕೇರಳದ ಜನರಿಗೆ ಉತ್ತಮ ಭವಿಷ್ಯವನ್ನು ನೀಡುವ ಬದಲು, ಕೇವಲ ಸುಳ್ಳು ಮತ್ತು ಅಪಪ್ರಚಾರಗಳನ್ನು ನಂಬುವ ಅತ್ಯಂತ ದಡ್ಡ ಪಕ್ಷವಾಗಿ ಮಾರ್ಪಟ್ಟಿದ್ದಾರೆ. ನನ್ನ ಜೀವನದಲ್ಲಿ ಪ್ರತಿಯೊಂದು ಕೆಲಸವನ್ನೂ ಮುಕ್ತವಾಗಿ ಮತ್ತು ಪಾರದರ್ಶಕವಾಗಿ ಮಾಡಿದ್ದೇನೆ” ಎಂದು ಅವರು ಚಂದ್ರಶೇಖರ್ ಹೇಳಿದ್ದಾರೆ.
ಈ ನಡುವೆ, ಬಿಜೆಪಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ, “ನಮ್ಮ ಆರೋಪವು ಸುಳ್ಳಾಗಿದ್ದರೆ, ನಾವು ಹಂಚಿಕೊಂಡಿರುವ ಆಸ್ತಿ ತೆರಿಗೆ ರಸೀದಿಯು ಖಂಡಿತವಾಗಿಯೂ ನಕಲಿಯಾಗಿರಬೇಕು” ಎಂದಿದೆ.
ಕಾಂಗ್ರೆಸ್ ಪಕ್ಷವು ತನ್ನ ವಾದವನ್ನು ಪುನರುಚ್ಚರಿಸಿದ್ದು, ಇದೇ ಆಸ್ತಿಯನ್ನು (ಕೋರಮಂಗಲದ ಮನೆ) ಚಂದ್ರಶೇಖರ್ ಅವರು 2024ರ ಅಫಿಡವಿಟ್‌ನಲ್ಲಿ ಘೋಷಿಸಿದ್ದರು ಎಂದು ತಿಳಿಸಿದೆ. ಅಲ್ಲದೆ, ಈ ಬಗ್ಗೆ ಬಿಜೆಪಿ ಸ್ವತಃ ಪರಿಶೀಲಿಸಿಕೊಳ್ಳಲಿ ಎಂದು ಸವಾಲು ಹಾಕಿದೆ.
“ಅವರು (ಚಂದ್ರಶೇಖರ್) ತಾವು ಮನೆ ಸಂಖ್ಯೆ 408ರಲ್ಲಿ ವಾಸಿಸುತ್ತಿರುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಹೆಸರಿನಲ್ಲಿ ಯಾವುದೇ ವಸತಿ ಆಸ್ತಿ ಇಲ್ಲ ಎಂದು ಘೋಷಿಸಿದ್ದಾರೆ. ಹಾಗಾದರೆ, ಯಾವುದು ನಿಜ? ಅವರು ತದ್ರೂಪಿ ಹೆಸರಿನ ಬೇರೆಯವರ ಮಾಲೀಕತ್ವದ 50,000 ಚದರ ಅಡಿಯ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆಯೇ ಅಥವಾ ಇದು ಸುಳ್ಳು ಅಫಿಡವಿಟ್ ಸಲ್ಲಿಸಿರುವ ಸ್ಪಷ್ಟ ಪ್ರಕರಣವೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ಲಾಟ್ ಸಂಖ್ಯೆ 419 ಕೇವಲ ಅವರ ಕಾರು ಶೆಡ್ ಆಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಇದರೊಂದಿಗೆ, 408 ಮತ್ತು 445 ಸಂಖ್ಯೆಯ ಆಸ್ತಿಗಳನ್ನು ಅವರು ಘೋಷಿಸಿಲ್ಲ ಎಂದು ಪಕ್ಷವು ಆರೋಪಿಸಿದೆ.
ಶಬರಿನಾಥನ್ ಅವರು ಈ ವಿಷಯದಲ್ಲಿ ಕಾಂಗ್ರೆಸ್ ಮತ್ತು ಅದರ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮುಂಬರುವ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.
ತಿರುವನಂತಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಬರಿನಾಥ್, “ನಮ್ಮ ಬಳಿ ಈ ಬಗ್ಗೆ ಸ್ಪಷ್ಟವಾದ ಪುರಾವೆಗಳಿವೆ. ಮಿಲಿಯನೇರ್ ಆಗಿರುವ ರಾಜೀವ್ ಚಂದ್ರಶೇಖರ್ ಅವರಿಗೆ ಚುನಾವಣೆ ಎದುರಿಸುವ ಹಕ್ಕಿದೆ, ಆದರೆ, ಅವರು ಉದ್ದೇಶಪೂರ್ವಕವಾಗಿಯೇ ಮಾಹಿತಿಯನ್ನು ಮರೆಮಾಚಿದ್ದಾರೆ. ತಾವೇ ಸುಮಾರು 5 ಲಕ್ಷ ರೂ. ಆಸ್ತಿ ತೆರಿಗೆ ಪಾವತಿಸಿರುವ ಆಸ್ತಿಯ ವಿವರವನ್ನು ಅವರು ಬಹಿರಂಗಪಡಿಸಿಲ್ಲ. ದುರದೃಷ್ಟವಶಾತ್, ಅವರ ವಕೀಲರು ಇದು ಅವರ ಕಡೆಯಿಂದಾದ ತಪ್ಪು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಕೇವಲ ಈ ಆಧಾರದ ಮೇಲೆ ಅಭ್ಯರ್ಥಿಯನ್ನು ಅನರ್ಹಗೊಳಿಸುವ ಕಾನೂನಾತ್ಮಕ ಅಧಿಕಾರ ಚುನಾವಣಾಧಿಕಾರಿಗೆ ಇಲ್ಲ. ಆದ್ದರಿಂದ, ನಾವು ಖಂಡಿತವಾಗಿಯೂ ಈ ಬಗ್ಗೆ ಚುನಾವಣಾ ಮೊಕದ್ದಮೆಯನ್ನು ಹೂಡಲಿದ್ದೇವೆ” ಎಂದು ಹೇಳಿದ್ದಾರೆ.
ಬಿಜೆಪಿ ಕೇರಳ ಘಟಕದ ಸೀಲ್ ಇರುವ ಚುನಾವಣಾ ಆಯೋಗದ ಪತ್ರದ ಕುರಿತಾದ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ಕೇರಳ ಪೊಲೀಸರು ಸೂಚಿಸಿದ ದಿನವೇ ಈ ಬೆಳವಣಿಗೆ ನಡೆದಿದೆ. ಚುನಾವಣಾ ಆಯೋಗದ ಪತ್ರದ ಕುರಿತಾದ ಪೋಸ್ಟ್‌ಗಳು ಆಯೋಗವನ್ನು ಬಹಿರಂಗವಾಗಿ ಅವಮಾನಿಸುತ್ತಿವೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ವಿಷಯಗಳನ್ನು ಹರಡುತ್ತಿವೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.


