ಇತ್ತೀಚೆಗೆ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ತೆಲಂಗಾಣದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ತಮ್ಮ ಸಂಸದರಿಂದ ಅಡ್ಡ ಮತದಾನ ಮಾಡಿಸಿದ್ದಾರೆ ಎಂದು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಶಾಸಕ ಪಡಿ ಕೌಶಿಕ್ ರೆಡ್ಡಿ ಆರೋಪಿಸಿದ್ದಾರೆ.
ರಾಜ್ಯದ ಎಂಟು ಕಾಂಗ್ರೆಸ್ ಸಂಸದರು ಬಿಜೆಪಿ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ಅವರಿಗೆ ಮತ ಹಾಕಿದ್ದಾರೆ ಎಂದು ಕೌಶಿಕ್ ರೆಡ್ಡಿ ಹೇಳಿದ್ದಾರೆ. ಈ ನಡೆಯು ತೆಲಂಗಾಣದ ಜನರು ಮತ್ತು ಇಂಡಿಯಾ ಒಕ್ಕೂಟದ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರಿಗೆ ಬಗೆದಿರುವ ದ್ರೋಹ ಎಂದಿದ್ದಾರೆ.
ಮಂಗಳವಾರ (ಸೆ.16) ಹೈದರಾಬಾದ್‌ನ ತೆಲಂಗಾಣ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಕೌಶಿಕ್ ರೆಡ್ಡಿ, “ಉಪರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಾಗ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ 315 ಮತಗಳು ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ಪರ ಬಿದ್ದಿವೆ ಎಂದಿದ್ದರು. ಈ ಮೂಲಕ ಇಂಡಿಯಾ ಒಕ್ಕೂಟ ಒಗ್ಗಟ್ಟು ಪ್ರದರ್ಶಿಸಿವೆ ಎಂದು ಹೇಳಿದ್ದರು. ಆದರೆ, ಚುನಾವಣಾ ಆಯೋಗದ ಅಧಿಕೃತ ಪ್ರಕಟನೆ ಮತ್ತು ಮಾಧ್ಯಮ ವರದಿಗಳು 300 ಮತಗಳು ಮಾತ್ರ ಸುದರ್ಶನ್ ರೆಡ್ಡಿ ಪರ ಚಲಾವಣೆಯಾಗಿವೆ ಎಂದಿವೆ. ಹಾಗಾದರೆ, 15 ಮತಗಳು ಎಲ್ಲಿಗೆ ಹೋಯಿತು?…15 ಅಡ್ಡ ಮತದಾನವಾಗಿದೆ. ಈ ಪೈಕಿ 8 ತೆಲಂಗಾಣದ ಕಾಂಗ್ರೆಸ್ ಸಂಸದರದ್ದು” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಡ್ಡ ಮತದಾನದ ನಂತರ ತೆಲಂಗಾಣದ ಕಾಂಗ್ರೆಸ್ ಸಂಸದರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಚಿವರು ಕಾಂಗ್ರೆಸ್ ಸಂಸದರಿಗೆ ಕೃತಜ್ಞತೆ ತಿಳಿಸಿದ್ದಾರೆ ಎಂದು ಕೌಶಿಕ್ ರೆಡ್ಡಿ ಹೇಳಿದ್ದಾರೆ.
“ರಾಹುಲ್ ಗಾಂಧಿ ರಾಷ್ಟ್ರಮಟ್ಟದಲ್ಲಿ ಮತಗಳ್ಳತನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ತೆಲಂಗಾಣದ ಅವರ ಸ್ವಂತ ಮುಖ್ಯಮಂತ್ರಿ ಮತಗಳನ್ನು ಕದಿಯುತ್ತಿದ್ದಾರೆ. ಮೂವರು ಕಾಂಗ್ರೆಸ್ ಸಂಸದರು ರೇವಂತ್ ರೆಡ್ಡಿ ಅವರ ಆಜ್ಞೆಯ ಮೇರೆಗೆ ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂದು ವೈಯಕ್ತಿಕವಾಗಿ ನಮ್ಮ ಬಳಿ ಒಪ್ಪಿಕೊಂಡಿದ್ದಾರೆ” ಎಂದು ಕೌಶಿಕ್ ರೆಡ್ಡಿ ತಿಳಿಸಿದ್ದಾರೆ.
ತಮ್ಮ ಮಾರ್ಗದರ್ಶಕರಾದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ವರ್ತಿಸುವ ಮೂಲಕ ರೇವಂತ್ ರೆಡ್ಡಿ ತಮ್ಮ ‘ಗುರುದಕ್ಷಿಣೆ’ಯನ್ನು ಪಾವತಿಸುತ್ತಿದ್ದಾರೆ. ಮುಖ್ಯಮಂತ್ರಿಯ ಕಾರ್ಯಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜಾಗರೂಕರಾಗಿರಬೇಕು ಎಂದು ಕೌಶಿ ರೆಡ್ಡಿ ಹೇಳಿದ್ದಾರೆ.
ಒಂದೇ ಮನೆಯಲ್ಲಿ 4271 ಮತದಾರರು!..ಮಹದೇವಪುರ ಬಳಿಕ ಮತ್ತೊಂದು ಭಾರೀ ಮತಗಳ್ಳತನ ಆರೋಪ


