ಕಳೆದ 50 ವರ್ಷಗಳಿಂದ ದೆಹಲಿಯ ಇಂಡಿಯಾ ಗೇಟ್ ಬಳಿ ಉರಿಯುತ್ತಿರುವ ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿನ ಜ್ಯೋತಿಯೊಂದಿಗೆ ವಿಲೀನಗೊಳಿಸುವ ಒಕ್ಕೂಟ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಮರ್ ಜವಾನ್ ಜ್ಯೋತಿಯನ್ನು ಕೇಂದ್ರ ಸರ್ಕಾರ ನಂದಿಸುತ್ತಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ‘ಕೆಲವರಿಗೆ ದೇಶಭಕ್ತಿ ಮತ್ತು ತ್ಯಾಗ ಅರ್ಥವಾಗುವುದಿಲ್ಲ’ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.
ಅಮರ್ ಜವಾನ್ ಜ್ಯೋತಿಯನ್ನು ನಂದಿಸುವುದಿಲ್ಲ. ಇಂಡಿಯಾ ಗೇಟ್‌ನಿಂದ 400 ಮೀಟರ್ ದೂರದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿನ ಜ್ಯೋತಿಯೊಂದಿಗೆ ಇಂದು ನಡೆಯುವ ಸಮಾರಂಭದಲ್ಲಿ ವಿಲೀನಗೊಳಿಸಲಾಗುತ್ತದೆ. ಜ್ವಾಲೆಯ ಒಂದು ಭಾಗವನ್ನು ಇಂದು (ಜ.21) ಮಧ್ಯಾಹ್ನ ಯುದ್ಧ ಸ್ಮಾರಕಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ಒಕ್ಕೂಟ ಸರ್ಕಾರ ತಿಳಿಸಿದೆ.
ಸರ್ಕಾರದ ಈ ಕ್ರಮಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ತಪ್ಪು ಮಾಹಿತಿ ಪ್ರಸಾರವಾಗುತ್ತಿದೆ ಎಂದು ಸರ್ಕಾರ ಆರೋಪಿಸಿದೆ.
ಇದನ್ನೂ ಓದಿ: ಹೊಸ ಸಂಸತ್ತು ‘ಸೆಂಟ್ರಲ್ ವಿಸ್ಟಾ’ ನಿರ್ಮಾಣ ವೆಚ್ಚ ಯೋಜನೆಗಿಂತ 282 ಕೋಟಿ ರೂ. ಹೆಚ್ಚಳ
“ನಮ್ಮ ವೀರ ಸೈನಿಕರಿಗಾಗಿ ಉರಿಯುತ್ತಿದ್ದ ಅಮರ ಜ್ಯೋತಿಯನ್ನು ಇಂದು ನಂದಿಸಿರುವುದು ಅತೀವ ದುಃಖದ ಸಂಗತಿ. ಕೆಲವರಿಗೆ ದೇಶಭಕ್ತಿ ಮತ್ತು ತ್ಯಾಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪರವಾಗಿಲ್ಲ. ನಾವು ಮತ್ತೊಮ್ಮೆ ನಮ್ಮ ಸೈನಿಕರಿಗೆ ಅಮರ್ ಜವಾನ್ ಜ್ಯೋತಿಯನ್ನು ಬೆಳಗಿಸುತ್ತೇವೆ” ಎಂದು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಇಂದು ಮಧ್ಯಾಹ್ನ 3:30ಕ್ಕೆ ಇಂಡಿಯಾ ಗೇಟ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜ್ಯೋತಿಗಳ ವಿಲೀನ ಮಾಡಲಾಗುತ್ತದೆ. ಜ್ವಾಲೆಯನ್ನು ಗಾರ್ಡ್ ಕಾಂಟಿಜೆಂಟ್ ಜೊತೆಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಟಾರ್ಚ್‌ನಲ್ಲಿ ಸ್ಥಳಾಂತರಿಸಲಾಗುತ್ತದೆ. ಬಳಿಕ ಎರಡು ಜ್ವಾಲೆಗಳನ್ನು ವಿಲೀನಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲನೆಯ ಮಹಾಯುದ್ಧದಲ್ಲಿ ಮಡಿದ ಬ್ರಿಟಿಷ್ ಭಾರತೀಯ ಸೇನೆಯ ಸೈನಿಕರ ನೆನಪಿಗಾಗಿ ಇಂಡಿಯಾ ಗೇಟ್ ಸ್ಮಾರಕವನ್ನು ಬ್ರಿಟಿಷರು ನಿರ್ಮಿಸಿದರು. 1971 ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪಾಕಿಸ್ತಾನದ ವಿರುದ್ಧ ಭಾರತದ ಬೃಹತ್ ವಿಜಯದ ನಂತರ ಅಮರ್ ಜವಾನ್ ಜ್ಯೋತಿಯನ್ನು ಇಂಡಿಯಾ ಗೇಟ್ ಅಡಿಯಲ್ಲಿ ಇರಿಸಲಾಗಿತ್ತು.
ಇನ್ನು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ಸ್ಮಾರಕ ಸ್ವತಂತ್ರ ಭಾರತದ ಸಶಸ್ತ್ರ ಸಂಘರ್ಷಗಳಲ್ಲಿ ಹೋರಾಡಿದ ಭಾರತೀಯ ಮಿಲಿಟರಿ ಸೈನಿಕರನ್ನು ಗೌರವಿಸುತ್ತದೆ. ಇದರಲ್ಲಿ ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಸಶಸ್ತ್ರ ಸಂಘರ್ಷಗಳು ಮತ್ತು 1961 ರ ಗೋವಾ ಯುದ್ಧ, ಶ್ರೀಲಂಕಾದಲ್ಲಿ ಆಪರೇಷನ್ ಪವನ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿನ ರಕ್ಷಕ್ ಸೇರಿದಂತೆ ಇತರ ಕಾರ್ಯಾಚರಣೆಗಳಲ್ಲಿ ಹೋರಾಡಿದ ಸೈನಿಕರ ನೆನಪಿನಲ್ಲಿ ನಿರ್ಮಿಸಲಾಗಿದೆ.
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.