ಬಾರಾಮತಿ ಕ್ಷೇತ್ರದ ಉಪಚುನಾವಣಾ ಕಣದಿಂದ ಕಾಂಗ್ರೆಸ್ ಪಕ್ಷ ಹಿಂದೆ ಸರಿದ ಕಾರಣ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರ ಗೆಲುವು ಖಚಿತವಾಗಿದೆ.
ಬಾರಾಮತಿ ವಿಮಾನ ದುರಂತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರಿಗೆ ‘ಗೌರವ ಸೂಚಕ’ ವಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇದರಿಂದ ಸುನೇತ್ರಾ ಪವಾರ್ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಎಪ್ರಿಲ್ 23ರಂದು ನಡೆಯಲಿರುವ ಬಾರಾಮತಿ ಉಪಚುನಾವಣೆಯಿಂದ ಹಿಂದೆ ಸರಿಯುವಂತೆ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಸೇರಿದಂತೆ ಹಿರಿಯ ಎನ್‌ಸಿಪಿ (ಎಸ್‌ಪಿ) ನಾಯಕರು ಒತ್ತಾಯಿಸಿದ ನಂತರ ಕಾಂಗ್ರೆಸ್ ಕಣದಿಂದ ಹಿಂದೆ ಸರಿದಿದೆ ಎಂದು ವರದಿಯಾಗಿದೆ.
ಜನವರಿಯಲ್ಲಿ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಮೃತಪಟ್ಟಿದ್ದರು. ಆಗ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಬಾರಾಮತಿಯ ಶಾಸಕರಾಗಿದ್ದರು. ಅವರ ನಿಧನದ ಬಳಿಕ ಸುನೇತ್ರ ಪವಾರ್ ಅವರನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಆಗಿ ನೇಮಕ ಮಾಡಲಾಗಿದೆ. ಉಪ ಚುನಾವಣೆಯಲ್ಲಿ ಗೆದ್ದು ತಮ್ಮ ಸ್ಥಾನ ಉಳಿಸಿಕೊಳ್ಳುವ ಸವಾಲು ಸುನೇತ್ರಾ ಪವಾರ್ ಅವರಿಗೆ ಎದುರಾಗಿತ್ತು.


