ಕೊರೊನಾ ಕಾರಣದಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿ ಮನೆಯಲ್ಲಿ ಫ್ಯಾನಿಗೆ ಮಗಳನ್ನು ನೇಣು ಹಾಕಿ, ಅದೇ ಫ್ಯಾನಿನ ಕುಣಿಕೆಗೆ ತಾಯಿಯೂ ಕೊರಳೊಡ್ಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಹೊರ ವಲಯದ ರಾಜಾನುಕುಂಟೆ ಬಳಿಯ ದಿಬ್ಬೂರಿನಲ್ಲಿ ನಡೆದಿದೆ.
ದುರಂತದಲ್ಲಿ 12 ವರ್ಷದ ಮಗಳು ದಿವ್ಯಶ್ರೀ ಸಾವನ್ನಪ್ಪಿದ್ದರೆ, ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರೋ ವಿಕಲಾಂಗ ಚೇತನರಾಗಿರುವ 38 ವರ್ಷದ ವರಲಕ್ಷ್ಮಿ ಜೀವಾಪಾಯದಿಂದ ಪಾರಾಗಿದ್ದಾರೆ. ತಾಯಿ ಮತ್ತು ಅಕ್ಕ ನೇಣಿನ ಕುಣಿಕೆಯಲ್ಲಿರೋದನ್ನ ನೋಡಿದ್ದ 8 ವರ್ಷದ ಇನ್ನೊಂದು ಮಗು ಜೋರಾಗಿ ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದೆ. ಮಗು ಕಿರುಚಾಟ ಕಂಡ ಸ್ಥಳೀಯರು ಮನೆಗೆ ತೆರಳಿ ತಾಯಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೆ 12 ವರ್ಷದ ಮಗಳು ದಿವ್ಯಶ್ರೀ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವಿಕಲಾಂಗ ಚೇತನರಾಗಿರುವ ವರಲಕ್ಷ್ಮಿ ಅವರ ಗಂಡ ತಿಮ್ಮರಾಜು ಇತ್ತೀಚಿಗೆ ಕೊರೊನಾ ವೈರಸ್ಗೆ ಬಲಿಯಾಗಿದ್ದರು. ಹೀಗಾಗಿ ಸಂಸಾರದ ಜೀವನ ನಿರ್ವಹಣೆಗೆ ಕಷ್ಟವಾಗಿತ್ತು. ಇದೇ ಕಾರಣಕ್ಕೆ ವರಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಲಾಕ್‌ಡೌನ್‌ನಿಂದ ಆರ್ಥಿಕ ನಷ್ಟ ತಾಳಲಾರದೇ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ
ಕಳೆದ ಜೂನ್ 2ರಂದು ಚಾಮರಾಜನಗರ ಜಿಲ್ಲೆಯ ಎಚ್. ಮೂಕನಹಳ್ಳಿಯಲ್ಲಿ ಕೃಷಿ ಚಟುವಟಿಕೆ ಕಡಿಮೆ ಆಗಿರುವುದು ಹಾಗೂ ಕೊರೊನಾ ಲಾಕ್‌ಡೌನ್ ತಂದಿಟ್ಟಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ನಡೆದಿತ್ತು.
ಮಹದೇವಪ್ಪ, ಮಂಗಳಮ್ಮ, ಮಕ್ಕಳಾದ ಜ್ಯೋತಿ ಹಾಗೂ ಶ್ರುತಿ (12) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಮೃತರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸರ್ಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದವು.
ಇನ್ನು ಸೆ.20 ರಂದು ಕೊರೊನಾ ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದರು. ಕೊರೊನಾ ಲಾಕ್‌ಡೌನ್ ಮತ್ತು ಆರ್ಥಿಕ ಕಾರಣದಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ.
2015-2019ರ ನಡುವೆ ರಾಜ್ಯದಲ್ಲಿ 5 ವರ್ಷದಲ್ಲಿ 54,038 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೊರೊನಾ ಬಳಿಕ ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾಗುವುದೂ ಸೇರಿದಂತೆ ಪ್ರಾಣ ತೆಗೆದುಕೊಳ್ಳುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸುತ್ತವೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ದೈಹಿಕ, ಮಾನಸಿಕವಾಗಿ ನಲುಗಿದ ಮಹಿಳೆಯರು


