ಬಿಹಾರ ಮತ್ತು ಉತ್ತರ ಪ್ರದೇಶದ ಗಂಗಾ ನದಿ ತಟದಲ್ಲಿ ಮೃತದೇಹಗಳು ಹರಿದು ಬಂದು ಆತಂಕಕ್ಕೆ ಕಾರಣವಾಗಿದ್ದವು. ಇವುಗಳನ್ನು ಹೊರ ತೆಗೆಯಲಾಗುತ್ತಿದ್ದು, ಉತ್ತರ ಪ್ರದೇಶ ಮತ್ತು ಬಿಹಾರದ ಗಡಿಯಲ್ಲಿರುವ ರಾಣಿಘಾಟ್ ಬಳಿ ಗಂಗಾ ನದಿಗೆ ಅಡ್ಡಲಾಗಿ ಬಲೆಯನ್ನು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೃತದೇಹಗಳು ಕೊರೊನಾ ಸೋಂಕಿತರದ್ದು ಎಂದು ಸ್ಥಳೀಯರು ಮತ್ತು ಅಧಿಕಾರಿಗಳು ಶಂಕಿಸಿ ಆತಂಕಕ್ಕೆ ಒಳಗಾಗಿದ್ದರು. ನೂರಕ್ಕೂ ಹೆಚ್ಚು ಮೃತದೇಹಗಳು ತೇಲುತ್ತಾ ಬಂದಿವೆ ಎಂದು ಬಿಹಾರದ ಅಧಿಕಾರಿಗಳು ತಿಳಿಸಿದ್ದರು. ಸದ್ಯ 73 ಕ್ಕೂ ಅಧಿಕ ಶವಗಳನ್ನು ನದಿಯಿಂದ ತೆಗೆಯಲಾಗಿದ್ದು, ನಂತರ ಗಂಗಾ ನದಿಗೆ ಅಡ್ಡಲಾಗಿ ಬಲೆಯನ್ನು ಸ್ಥಾಪಿಸಲಾಗಿದೆ ಎಂದು ಉತ್ತರ ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಬಿಹಾರದ ಬಕ್ಸಾರ್‌ನ ಗಂಗಾ ನದಿ ತಟದಲ್ಲಿ ನೂರಕ್ಕೂ ಹೆಚ್ಚು ಮೃತದೇಹಗಳು ಕಂಡು ಬಂದಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು. ಮಂಗಳವಾರ ಬಕ್ಸಾರ್‌ನಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಘಾಜಿಪುರದಲ್ಲಿಯೂ ಗಂಗೆಯಲ್ಲಿ ಮೃತದೇಹಗಳು ಪತ್ತೆಯಾಗಿದ್ದವು.
ಇದನ್ನೂ ಓದಿ: ಬಿಹಾರದ ಗಂಗಾ ನದಿ ತೀರದಲ್ಲಿ ತೇಲಿ ಬಂದ ಮೃತ ದೇಹಗಳು; ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಉತ್ತರ ಪ್ರದೇಶದಲ್ಲಿ ಕೊರೊನಾ ಹೆಚ್ಚಾಗಿದ್ದು, ಸಾಂಪ್ರದಾಯಿಕ ಹಿಂದೂ ಶವಸಂಸ್ಕಾರಗಳಿಗೆ ಕಟ್ಟಿಗೆ ಸಿಗದ ಕಾರಣ ಅಥವಾ ಅಂತ್ಯಕ್ರಿಯೆಗಳಿಂದ ಚಿತಾಗಾರಗಳು ತುಂಬಿರುವ ಕಾರಣ ಮೃತರ ಸಂಬಂಧಿಕರು ಶವಗಳನ್ನು ನದಿಯಲ್ಲಿ ತೇಲಿಬಿಟ್ಟಿರಬೇಕೆಂದು ಸ್ಥಳೀಯರು ಶಂಕಿಸಿದ್ದಾರೆ.
ಅಂತಿಮ ವಿಧಿ-ವಿಧಾನಗಳನ್ನು ನಡೆಸದೆಯೇ ಈ ಶವಗಳನ್ನು ಗಂಗಾ ನದಿಗೆ ಎಸೆದಿರುವ ಸಾಧ್ಯತೆಯಿದೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದು, ಬಿಹಾರದ ಬಕ್ಸಾರ್‌ನ ಚೌಸಾ ಗ್ರಾಮದ ಮಹಾದೇವ್ ಘಾಟ್‌ನಲ್ಲಿ ನದಿಯಿಂದ ಹೊರ ತೆಗೆಯಲಾದ ಮೃತದೇಹಗಳನ್ನು ಜೆಸಿಬಿ ಬಳಸಿ ಹೂಳಲಾಗುತ್ತಿದೆ.
ಬಿಹಾರ ಜಲಸಂಪನ್ಮೂಲ ಸಚಿವ ಸಂಜಯ್ ಕುಮಾರ್ ಜಾ, ಟ್ವೀಟ್ ಮಾಡಿ ಬಕ್ಸಾರ್ ಜಿಲ್ಲೆಯ ಚೌಸಾ ಗ್ರಾಮದ ಬಳಿಯ ಗಂಗಾ ನದಿಯಲ್ಲಿ ಪತ್ತೆಯಾದ ಮೃತದೇಹಗಳು, 4 ರಿಂದ 5 ದಿನಗಳ ಹಿಂದೆ ಮರಣ ಹೊಂದಿರುವವರ ದೇಹಗಳು ಎಂದು ಮರಣೋತ್ತರ ಪರೀಕ್ಷೆಗಳು ದೃಢಪಡಿಸಿವೆ ಎಂದಿದ್ದಾರೆ.
ಕೊಳೆತಿರುವ ಈ ದೇಹಗಳು ನೆರೆಯ ರಾಜ್ಯವಾದ ಉತ್ತರ ಪ್ರದೇಶದಿಂದ ಕೊಚ್ಚಿಕೊಂಡು ಬಂದಿವೆ. ಉತ್ತರ ಪ್ರದೇಶದ ಗಡಿಯಲ್ಲಿ ನದಿಯಲ್ಲಿ ಬಲೆಯನ್ನು ಇರಿಸಲಾಗಿದೆ ಮತ್ತು ಗಸ್ತು ಹೆಚ್ಚಿಸಲಾಗಿದೆ ಎಂದು ಬಿಹಾರದ ಜಲಸಂಪನ್ಮೂಲ ಸಚಿವ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಮೃತ ಪಟ್ಟಿರುವವರಲ್ಲಿ ಯಾರೊಬ್ಬರೂ ಬಕ್ಸಾರ್ ಜಿಲ್ಲೆಯ ನಿವಾಸಿಗಳಲ್ಲ ಎಂದು ಚೌಸಾದ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಅಶೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬುಧವಾರವೂ ಕೂಡ ಉತ್ತರ ಪ್ರದೇಶದ ಗಹ್ಮರ್ ಜಿಲ್ಲೆಯಲ್ಲಿಯೂ 25 ಮೃತದೇಹಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ವರದಿಗಳು ತಿಳಿಸಿವೆ.
ಇದನ್ನೂ ಓದಿ: ದೇಶದಲ್ಲಿ ಹೆಚ್ಚುತ್ತಿರುವ ಬ್ಲಾಕ್ ಫಂಗಸ್ ಸೋಂಕು: ಮಹಾರಾಷ್ಟ್ರದಲ್ಲೇ 2000 ಮಂದಿ ಸೋಂಕಿತರು


