ಕೊರೊನಾ ಸೋಂಕಿತರ ಪಟ್ಟಿಯಲ್ಲಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣಗಳು ದಿನೇ ದಿನೇ ಕಡಿಮೆಯಾಗುತ್ತಿದ್ದು, 2021ರ ಫೆಬ್ರವರಿ ಒಳಗೆ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಕನಿಷ್ಠ ಕೆಳ ಮಟ್ಟಕ್ಕೆ ತಲುಪಲಿದೆ ಎಂದು ಕೇಂದ್ರ ಸರ್ಕಾರದ ಸಮಿತಿ ತಿಳಿಸಿದೆ.
ಸೆಪ್ಟೆಂಬರ್ ಮಧ್ಯದಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗುತ್ತಿದ್ದವು. ನಂತರ ಕೊವೀಡ್ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿದ್ದು, ಪ್ರತಿದಿನ ಸರಾಸರಿ 61,390 ಹೊಸ ಪ್ರಕರಣಗಳು ವರದಿಯಾಗುತ್ತಿವೆ ಎಂದು ರಾಯಿಟರ್ಸ್ ಲೆಕ್ಕಾಚಾರ ಹಾಕಿದೆ.
“ನಮ್ಮ ಪ್ರಕಾರ ಪ್ರಸ್ತುತ ಜನಸಂಖ್ಯೆಯ ಸುಮಾರು 30% ರಷ್ಟು ಜನ ಸೋಂಕಿಗೆ ಒಳಗಾಗಿದ್ದಾರೆ. ಇದು ಫೆಬ್ರವರಿ ವೇಳೆಗೆ ಇದು 50% ವರೆಗೆ ಹೋಗಬಹುದು” ಎಂದು ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಟೆಕ್ನಾಲಜಿಯ ಪ್ರಾಧ್ಯಾಪಕ ಮತ್ತು ಸಮಿತಿಯ ಸದಸ್ಯ ಮನೀಂದ್ರ ಅಗ್ರವಾಲ್ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ನಂತರ 1.10 ಕೋಟಿ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ- ಯುನೆಸ್ಕೋ
ಐಐಟಿ ಹೈದರಬಾದ್ನ ಪ್ರಾಧ್ಯಾಪಕ ಎಂ. ವಿದ್ಯಾಸಾಗರ್ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು 10 ಸದಸ್ಯರ ಸಮಿತಿಯನ್ನು ಕೊರೊನಾ ಹರಡುವಿಕೆಯ ಅಧ್ಯಯನಕ್ಕೆ ನೇಮಿಸಿತ್ತು.
ಕೊರೊನಾ ಮುನ್ನೆಚ್ಚರಿಕೆಗಳನ್ನು ಅನುಸರಿಸದಿದ್ದರೆ, ಸಾಮಾಜಿಕ ಅಂತರ, ಮಾಸ್ಕ್‌ಗಳ ಬಳಕೆ ನಿಲ್ಲಿಸಿದರೆ, ಒಂದೇ ತಿಂಗಳಲ್ಲಿ ಕೊರೊನಾ ಪ್ರಕರಣಗಳು 2.6 ದಶಲಕ್ಷ ಸೋಂಕುಗಳವರೆಗೆ ಹೆಚ್ಚಾಗಬಹುದು ಎಂದು ಸಮಿತಿ ಎಚ್ಚರಿಸಿದೆ.
ರಜಾದಿನಗಳು ಹತ್ತಿರವಾಗುತ್ತಿದ್ದಂತೆ ದೇಶದಲ್ಲಿ ಸೋಂಕುಗಳ ಪ್ರಮಾಣ ಕೂಡ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ದಸರಾ, ದುರ್ಗಾ ಪೂಜೆ ಮತ್ತು ದೀಪಾವಳಿ ಹಬ್ಬಗಳ ಆಚರಣೆಗಳು ಆರಂಭವಾಗಿದ್ದು, ಕೊರೊನಾ ನಿಯಮಾವಳಿಗಳನ್ನು ಮರೆಯಬಾರದು ಎಂದಿದ್ದಾರೆ.
ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷಕ್ಕಿಂತಲೂ ಅಧಿಕವಿತ್ತು. ಅಕ್ಟೋಬರ್ ಎರಡನೇ ವಾರದ ವೇಳೆಗೆ ಸರಾಸರಿ ಸಂಖ್ಯೆ 9 ಲಕ್ಷಕ್ಕಿಂತಲೂ ಕಡಿಮೆಗೆ ಇಳಿದಿತ್ತು. ಈಗ ಎರಡು ದಿನಗಳಿಂದ 8 ಲಕ್ಷಕ್ಕಿಂತಲೂ ಕಡಿಮೆ ಸಕ್ರಿಯ ಪ್ರಕರಣಗಳು ವರದಿಯಾಗಿವೆ.


