ಹಣದುಬ್ಬರದ ಹತೋಟಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ತೆರಿಗೆ ಮತ್ತು ಸುಂಕವನ್ನು ಕಡಿತಗೊಳಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಶುಕ್ರವಾರ ಕರೆ ನೀಡಿದೆ.
ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿರುವ ಹೆಚ್ಚಿನ ತೆರಿಗೆಯಿಂದಾಗಿ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ಗಳನ್ನು ದಾಟಿರುವ ಸಮಯದಲ್ಲಿ ಈ ಹೇಳಿಕೆ ಬಂದಿದೆ. ತೆರಿಗೆಗಳು ಪ್ರಸ್ತುತ ಪೆಟ್ರೋಲ್‌ನ ಚಿಲ್ಲರೆ ಮಾರಾಟದ ಬೆಲೆಯಲ್ಲಿ ಶೇ. 58 ಮತ್ತು ಡಿಸೇಲ್‌ನ ಚಿಲ್ಲರೆ ಮಾರಾಟದ ಬೆಲೆಯ ಶೇ. 52 ರಷ್ಟಿವೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದ ಹೊರಹೊಮ್ಮುವ ಇನ್ಪುಟ್ ವೆಚ್ಚದ ಒತ್ತಡಗಳನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯಗಳು ವಿಧಿಸಿರುವ ಅಬಕಾರಿ ಸುಂಕ, ಸೆಸ್ ಮತ್ತು ತೆರಿಗೆಗಳನ್ನು ಸಂಘಟಿತ ರೀತಿಯಲ್ಲಿ ಹೊಂದಿಸಬೇಕಾಗಿದೆ ಎಂದು ಎಂಪಿಸಿ ಹೇಳಿದೆ.
ಮೋದಿ ಸರ್ಕಾರವು ಅಬಕಾರಿ ಸುಂಕ ಮತ್ತು ಇಂಧನದ ಮೇಲೆ ಸೆಸ್ ವಿಧಿಸಿದರೆ, ರಾಜ್ಯಗಳು ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ವಿಧಿಸುತ್ತವೆ. ಈ ತೆರಿಗೆಗಳು ಆದಾಯದ ಪ್ರಮುಖ ಮೂಲವಾಗಿರುವುದರಿಂದ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಬೆಲೆಗಳ ನಡುವೆಯೂ ದರಗಳನ್ನು ಕಡಿತಗೊಳಿಸಲು ಎರಡೂ ಕಡೆಯವರು ಹಿಂದೇಟು ಹಾಕುತ್ತಿದ್ದಾರೆ.
ಪ್ರಮುಖ ನೀತಿ ದರಗಳನ್ನು ಬದಲಾಗದೆ ಇಟ್ಟುಕೊಂಡರೆ, ಪೂರ್ಣ ವರ್ಷದ ಹಣದುಬ್ಬರವು ಶೇಕಡಾ 5.1 ರಷ್ಟಾಗುತ್ತದೆ ಎಂದು ಎಂಪಿಸಿ ಮುನ್ಸೂಚನೆ ನೀಡಿದೆ.
ಇಂಧನ ಬೆಲೆಗಳು ಮತ್ತು ಅವುಗಳ ಹಣದುಬ್ಬರ ಪರಿಣಾಮದ ಕುರಿತ ಪ್ರಶ್ನೆಗೆ ಉತ್ತರಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಸಂಘಟಿತ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು. “ಕೇಂದ್ರ ಮತ್ತು ರಾಜ್ಯಗಳು ನಿರ್ಧಾರ ತೆಗೆದುಕೊಳ್ಳಬೇಕು. ತಮ್ಮ ಹಣಕಾಸಿನ ಕೊರತೆಯ ವಿಷಯದಲ್ಲಿ ಅವರು ತಮ್ಮದೇ ಆದ ನಿರ್ಬಂಧಗಳನ್ನು ಹೊಂದಿದ್ದಾರೆ. ಹಣದುಬ್ಬರ ಸನ್ನಿವೇಶದ ಬಗ್ಗೆ ಸರ್ಕಾರವು ನಿಗಾ ವಹಿಸುತ್ತಿದೆ ಮತ್ತು ಗಮನಿಸುತ್ತಿದೆ ಎಂದು ನನಗೆ ಖಾತ್ರಿಯಿದೆ” ಎಂದು ಅವರು ಹೇಳಿದರು.
ಗ್ರಾಮೀಣ ಕೋವಿಡ್ ಪ್ರಕರಣಗಳಲ್ಲಿನ ಏರಿಕೆ ಅಪಾಯಗಳನ್ನು ಹೆಚ್ಚಿಸುತ್ತದೆ, ಬೆಳವಣಿಗೆಯ ಮುನ್ಸೂಚನೆಯನ್ನು 9.5% ಕ್ಕೆ ಇಳಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ವೇಗವಾಗಿ ಹರಡುವುದು ಬೆಳವಣಿಗೆಗೆ ಅಪಾಯವ ಉಂಟು ಮಾಡುತ್ತದೆ ಎಂದು ದಾಸ್ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಎರಡು ತಿಂಗಳುಗಳಲ್ಲಿ ನಗರ ಮತ್ತು ಗ್ರಾಮೀಣ ಬೇಡಿಕೆ ಕಡಿಮೆಯಾಗಿದ್ದರೂ, ಇದರ ಪರಿಣಾಮ ಸೀಮಿತವಾಗಿದೆ ಎಂದು ಅವರು ಹೇಳಿದರು.
ಆದರೂ, ಎಂಪಿಸಿ 2021-22ರ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಒಂದು ಶೇಕಡಾವಾರು ಬಿಂದುವಿನಿಂದ ಶೇಕಡಾ 10.5 ರಿಂದ 9.5 ಕ್ಕೆ ಇಳಿಸಿತು.
ವಿಮಾನಯಾನ, ಪ್ರವಾಸೋದ್ಯಮ ಮತ್ತು ಇತರ ಕ್ಷೇತ್ರಗಳಿಗೆ ಹೊಸ ಸಾಲ ನೀಡುವ ಬೆಂಬಲವನ್ನು ಪ್ರಕಟಿಸಿದೆ.
ಇದನ್ನೂ ಓದಿ; 4 ದಶಕಗಳಲ್ಲಿ ಕರಾಳ ಆರ್ಥಿಕ ವರ್ಷ: ಜಿಡಿಪಿ ಕುಸಿತಕ್ಕೆ ಚಿದಂಬರಂ ಕಿಡಿ


