ಲೆಸ್ಬಿಯನ್ ಜೋಡಿಯೊಂದು ‘ಕರ್ವಾ ಚೌತ್’ ಹಬ್ಬವನ್ನು ಆಚರಿಸುವ ‘ಫೆಮ್ ಸ್ಕಿನ್‌ಕೇರ್’ ಕಂಪೆನಿಯ ಜಾಹಿರಾತಿನ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಕಂಪೆನಿಯು ತನ್ನ ಜಾಹಿರಾತನ್ನು ವಾಪಾಸು ಪಡೆದಿದೆ. ಈ ಮೂಲಕ ತನ್ನ ಉತ್ಪನ್ನಗಳ ಜಾಹಿರಾತನ್ನು ಆಕ್ರೋಶಕ್ಕೆ ಮಣಿದು ವಾಪಾಸು ಪಡೆಯುತ್ತಿರುವ ಕಂಪೆನಿಗಳ ಪಟ್ಟಿಗೆ ಡಾಬರ್ ಮಾಲಿಕತ್ವದ ಫೆಮ್ ಸ್ಕಿನ್‌ಕೇರ್ ಸೇರಿಕೊಂಡಿತು.
ನವ ವಿವಾಹಿತ ಲೆಸ್ಬಿಯನ್ ಜೋಡಿ ತಮ್ಮ ಮೊದಲ ‘ಕರ್ವಾ ಚೌತ್’ ಹಬ್ಬವನ್ನು ಆಚರಿಸುವ ಜಾಹಿರಾತನ್ನು ಡಾಬರ್ ಒಡೆತನದ ಖ್ಯಾತ ಸೌಂದರ್ಯ ವರ್ಧಕ ‘ಫೆಮ್ ಸ್ಕಿನ್‌ಕೇರ್’ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿತ್ತು. ಇದರ ವಿರುದ್ದ ನರೋತ್ತಮ್ ಮಿಶ್ರಾ ಆಕ್ರೊಶ ವ್ಯಕ್ತಪಡಿಸಿದ್ದಾರೆ.
“ಇಂದು ಅವರು ಲೆಸ್ಬಿಯನ್ನರು ತಮ್ಮ ಕರ್ವಾ ಚೌತ್ ಉಪವಾಸವನ್ನು ಮುರಿಯುವುದನ್ನು ತೋರಿಸುತ್ತಿದ್ದಾರೆ …ನಾಳೆ ಅವರು ಇಬ್ಬರು ಹುಡುಗರು ಮದುವೆಯಾಗುವುದನ್ನು ತೋರಿಸಬಹುದು. ಇದು ಅಪಾಯಕಾರಿ ಆಗಿದೆ. ಜಾಹೀರಾತನ್ನು ಪರಿಶೀಲಿಸಲು ನಾನು ಡಿಜಿಪಿಗೆ ನಿರ್ದೇಶನ ನೀಡಿದ್ದೇನೆ. ಅದನ್ನು ತೆಗೆದುಹಾಕಲು ಕಂಪನಿಯನ್ನು ಕೇಳುತ್ತೇನೆ” ಎಂದು ನರೋತ್ತಮ್ ಹೇಳಿದ್ದಾರೆ.
ಇದನ್ನೂ ಓದಿ: ಲೆಸ್ಬಿಯನ್ ಜೋಡಿಯ ‘ಕರ್ವಾ ಚೌತ್’ ಜಾಹೀರಾತು! – ಮಿಶ್ರ ಪ್ರತಿಕ್ರಿಯೆ
‘ಕರ್ವಾ ಚೌತ್’ ಉತ್ತರ ಭಾರತ ಮೂಲದ ಹಿಂದೂಗಳು ಆಚರಿಸುವ ಹಬ್ಬವಾಗಿದೆ. ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘ ಆಯಸ್ಸು ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತಾ ಇಡೀ ದಿನ ಉಪವಾಸ ಹಿಡಿದು ಈ ಹಬ್ಬವನ್ನು ಆಚರಿಸುತ್ತಾರೆ. ಉಪವಾಸ ತೊರೆಯುವಾಗ ಚಂದ್ರನನ್ನು ಜರಡಿಯಲ್ಲಿ ನೋಡಿ, ತಕ್ಷಣವೆ ತನ್ನ ಗಂಡನನ್ನು ನೋಡುತ್ತಾರೆ. ಈ ವೇಳೆ ಗಂಡ ತನ್ನ ಪತ್ನಿಗೆ ನೀರು ಮತ್ತು ಸಿಹಿ ತಿನಿಸಿ ವೃತವನ್ನು ತೊರೆಯುವಂತೆ ಮಾಡುತ್ತಾನೆ.
ನರೋತ್ತಮ್ ಅವರ ಎಚ್ಚರಿಕೆಯ ನಂತರ ಡಾಬರ್ ಜಾಹೀರಾತನ್ನು ಹಿಂತೆಗೆದುಕೊಳ್ಳುವ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅದು “ಜನರ ಭಾವನೆಗಳನ್ನು ಘಾಸಿಗೊಳಿಸುವ ಯಾವುದೆ ಉದ್ದೇಶ ಇರಲಿಲ್ಲ” ಎಂದು ಹೇಳಿದ್ದು, ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿ ಹೇಳಿದೆ.
Fem's Karwachauth campaign has been withdrawn from all social media handles and we unconditionally apologise for unintentionally hurting people’s sentiments. pic.twitter.com/GHXzkgavEg
— Dabur India Ltd (@DaburIndia) October 25, 2021
ಜೊತೆಗೆ ಕಂಪೆನಿ ತನ್ನ ಮತ್ತೊಂದು ಹೇಳಿಕೆಯಲ್ಲಿ, “ಡಾಬರ್ ಮತ್ತು ಫೆಮ್ ಒಂದು ಬ್ರ್ಯಾಂಡ್ ಆಗಿ ವೈವಿಧ್ಯತೆ, ಒಳಗೊಳ್ಳುವಿಕೆ ಮತ್ತು ಸಮಾನತೆಗಾಗಿ ಶ್ರಮಿಸುತ್ತದೆ. ನಮ್ಮ ಸಂಸ್ಥೆಯಲ್ಲಿ ಮತ್ತು ನಮ್ಮ ಸಮುದಾಯಗಳಲ್ಲಿ ಈ ಮೌಲ್ಯಗಳನ್ನು ನಾವು ಹೆಮ್ಮೆಯಿಂದ ಬೆಂಬಲಿಸುತ್ತೇವೆ. ನಮ್ಮ ಅಭಿಯಾನಗಳು ಕೂಡ ಅದನ್ನೇ ಪ್ರತಿಬಿಂಬಿಸುತ್ತವೆ. ಎಲ್ಲರೂ ನಮ್ಮ ನಿಲುವನ್ನು ಒಪ್ಪುವುದಿಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಜೊತೆಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದುವ ಅವರ ಹಕ್ಕನ್ನು ನಾವು ಗೌರವಿಸುತ್ತೇವೆ. ನಮ್ಮ ಉದ್ದೇಶವು ಯಾವುದೇ ನಂಬಿಕೆಗಳು, ಆಚಾರಗಳು ಮತ್ತು ಸಂಪ್ರದಾಯಗಳನ್ನು, ಧಾರ್ಮಿಕತೆ ಅಥವಾ ಇನ್ಯಾವುದೇ ರೀತಿಯ ವಿಷಯಗಳಲ್ಲಿ ನೋಯಿಸುವುದಲ್ಲ” ಎಂದು ಹೇಳಿದೆ.
— Dabur India Ltd (@DaburIndia) October 24, 2021
ಇದನ್ನೂ ಓದಿ: ಕನ್ನಡದ ಮೊದಲ ಲೆಸ್ಬಿಯನ್ ಚಿತ್ರ ’ನಾನು ಲೇಡಿಸ್’ ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೆ ಆಯ್ಕೆ
ಇಷ್ಟೆ ಅಲ್ಲದೆ ಕಂಪನಿಯು ತನ್ನ ಹೇಳಿಕೆಯಲ್ಲಿ “ಬ್ರ್ಯಾಂಡ್ ಮತ್ತು ಪ್ರಚಾರಕ್ಕಾಗಿ ತಮ್ಮ ಬೆಂಬಲವನ್ನು ನೀಡಿದ ಪ್ರತಿಯೊಬ್ಬರಿಂದ ವಿನಮ್ರರಾಗಿದ್ದೇವೆ” ಎಂದು ಹೇಳಿದೆ.
‘ಕರ್ವಾ ಚೌತ್’ ಹಬ್ಬವನ್ನೇ ಮುಖ್ಯ ವಿಷಯವನ್ನಾಗಿ ನಿರ್ಮಿಸಿರುವ ‘ಫೆಮ್ ಸ್ಕಿನ್‌ಕ್ರೀಮ್’ನ ಜಾಹಿರಾತಿನಲ್ಲಿ, ಇಬ್ಬರು ಮಹಿಳೆಯರು ತಮ್ಮ ಮೊದಲ ಕರ್ವಾ ಚೌತ್ ಆಚರಣೆಗೆ ತಯಾರಿ ನಡೆಸುತ್ತಾ, ಒಬ್ಬರು ಇನ್ನೊಬ್ಬರ ಮುಖಕ್ಕೆ ಬ್ಲೀಚ್ ಹಾಕುತ್ತಾರೆ. ಅದರ ಸಂಭಾಷಣೆಯಲ್ಲಿ ಅವರು ಹಬ್ಬದ ಮಹತ್ವವನ್ನು ಚರ್ಚಿಸುತ್ತಾರೆ ಮತ್ತು ತಾವು ಯಾಕೆ ಉಪವಾಸ ಆಚರಿಸುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.
ಜಾಹಿರಾತಿನ ಕೊನೆಯಲ್ಲಿ ಇಬ್ಬರು ಮಹಿಳೆಯರು ಚಂದ್ರನನ್ನು ಜರಡಿಯಲ್ಲಿ ನೋಡಿಕೊಂಡು, ಅದೇ ಜರಡಿಯಲ್ಲಿ ಒಬ್ಬರಿಗೊಬ್ಬರು ಮುಖವನ್ನು ನೋಡುತ್ತಾರೆ. ನಂತರ ತಮ್ಮ ಉಪವಾಸವನ್ನು ತೊರೆಯಲು ಪರಸ್ಪರ ನೀರನ್ನು ಕುಡಿಸುತ್ತಾರೆ. ಈ ಮೂಲಕ ಕರ್ವಾ ಚೌತ್ ಉಪವಾಸ ಮುರಿದು ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ.
‘ಗ್ಲೋ ವಿಥ್ ಪ್ರೈಡ್’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಕಾಮನಬಿಲ್ಲು ಬಣ್ಣಗಳಲ್ಲಿ ಚಿತ್ರಿಸಲಾದ ಫೆಮ್‌ನ ಲಾಂಛನದೊಂದಿಗೆ ವಿಡಿಯೊ ಮುಕ್ತಾಯಗೊಳ್ಳುತ್ತದೆ. ಕಾಮನಬಿಲ್ಲು ಧ್ವಜವು LGBTQIA+ ಸಾಮಾಜಿಕ ಚಳುವಳಿಯ ಸಂಕೇತವಾಗಿದೆ.
Well done, Fem/Dabur!
A nice film for a traditional, often-criticized festival by an otherwise conservative brand. pic.twitter.com/gHBTca6jP8
— Abhishek Baxi (@baxiabhishek) October 22, 2021
ಇದನ್ನೂ ಓದಿ: ಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ
ಈ ಜಾಹಿರಾತನ್ನು ಕಂಪೆನಿಯು ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ, ಅದರ ಸಂದೇಶದ ಮೇಲೆ ಮಿಶ್ರ ಪ್ರತಿಕ್ರಿಯೆ ಉಂಟಾಗಿದೆ. ಕೆಲವರು ಬ್ರಾಂಡ್‌ನ ಪ್ರಯತ್ನವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಅದನ್ನು ಟೀಕಿಸಿದ್ದಾರೆ.
“ಜಾಹಿರಾತಿನ ಬಗ್ಗೆ ಬಗ್ಗೆ ಮಿಶ್ರ ಭಾವನೆಯಿದೆ. ಸಾಂಪ್ರದಾಯಿಕವಲ್ಲದ ಸಂಬಂಧಗಳನ್ನು ಒಪ್ಪಿಕೊಳ್ಳುವುದು ಒಳ್ಳೆಯದೇ ಆಗಿದೆ. ಆದರೆ ಸ್ತ್ರೀದ್ವೇಷಿ ಸಂಪ್ರದಾಯವನ್ನು ಪ್ರಚಾರ ಮಾಡುವುದು ಮತ್ತು ‘ಬಿಳಿ ಚರ್ಮವೆ ಸುಂದರ ನ್ಯಾಯವೇ’ ಎಂಬ ಸಂದೇಶ ಕೂಡಾ ಇದು ಹರಡುತ್ತದೆ” ಎಂದು ಕೆಲವು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು, ಸೌಂದರ್ಯ ವರ್ಧಕ ಉತ್ಪನ್ನಗಳು ‘ಅಂತರ್ಗತವಾಗಿ ಜಾತಿವಾದಿ ಮತ್ತು ಜನಾಂಗೀಯ’ ನೀತಿಯನ್ನು ಬೆಳೆಸುತ್ತದೆ. ಇದಕ್ಕೆ LGBTQI+ ದೃಷ್ಟಿಕೋನ ಸೇರಿಸುವುದರಿಂದ ಬದಲಾಗುವುದಿಲ್ಲ ಎಂದು ದೂರಿದ್ದಾರೆ.
Fairness products are inherently casteist and racist. Adding an LGBTQI angle doesn’t change that ??♂️ #Fem #Dabur #FairnessCreams https://t.co/iOlHFaMHlN
— There_is_no_try (@akanna_42) October 23, 2021
ಈ ತಿಂಗಳ ಆರಂಭದಲ್ಲಿ ಖ್ಯಾತ ಬಟ್ಟೆ ಬ್ರಾಂಡ್ ಫ್ಯಾಬ್‌ಇಂಡಿಯಾ ತನ್ನ ಜಾಹಿರಾತನ್ನು ವಾಪಾಸು ಪಡೆದುಕೊಂಡಿತ್ತು. ಅದು ದೀಪಾವಳಿ ಆಚರಣೆಯನ್ನು ಪರ್ಶಿಯನ್ ಭಾಷೆಯಲ್ಲಿ ‘ಜಶ್ನ್-ಎ-ರಿವಾಜ್’ ಎಂದು ಕರೆದಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಕಳೆದ ವರ್ಷ ಟಾಟಾ ಗ್ರೂಪ್‌ನ ಆಭರಣ ಬ್ರ್ಯಾಂಡ್ ‘ತನಿಷ್ಕ್’ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಗುರಿಯಾಗಿತ್ತು. ಅದರ ಜಾಹಿರಾತಿನಲ್ಲಿ ಮುಸ್ಲಿಂ ಕುಟುಂಬವು ತಮ್ಮ ಹಿಂದೂ ಸೊಸೆಗಾಗಿ ‘ಸೀಮಂತ’ ಮಾಡುವುದನ್ನು ತೋರಿಸಿತ್ತು. ನಂತರ ಟಾಟಾ ಈ ಜಾಹಿರಾತನ್ನು ವಾಪಾಸು ಪಡೆದಿತ್ತು.
ಅದಕ್ಕೂ ಮೊದಲು 2019 ರಲ್ಲಿ ಹಿಂದೂಸ್ತಾನ್ ಯೂನಿಲಿವರ್‌ನ ‘ಸರ್ಫ್ ಎಕ್ಸೆಲ್’ ಸಹ ಮಕ್ಕಳು ಹೋಳಿ ಆಡುವ ಜಾಹೀರಾತನ್ನು ಬಿಡುಗಡೆ ಮಾಡಿ ನಂತರ ಹಿಂಪಡೆಯಿತು. ಅದರಲ್ಲಿ, ಚಿಕ್ಕ ಹುಡುಗಿಯೊಬ್ಬರು, ತನ್ನ ಮುಸ್ಲಿಂ ಸ್ನೇಹಿತನಿಗೆ ಹೋಳಿಯ ಯಾವುದೆ ಬಣ್ಣಗಳು ತಾಗದಂತೆ ಮಸೀದಿಗೆ ತಲುಪಲು ಸಹಾಯ ಮಾಡುತ್ತಾರೆ.


